ವಿಟ್ಲ: ಪಿಂಗಾರ ಕಂಪೆನಿಯಿಂದ ಅಡಿಕೆ ಕೊಯ್ಲು ತಂಡ ರಚನೆ

0

ವಿಟ್ಲ: ಐದು ವರ್ಷದಿಂದ ವಿಟ್ಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪೆನಿ  ಈಗ ಅಡಿಕೆ ಕೃಷಿಕರಿಗೆ ಹೊಸದೊಂದು ಸೇವೆ ಒದಗಿಸಲು ಸಜ್ಜಾಗುತ್ತಿದ್ದು, ಕಂಪೆನಿಯೇ ಯುವಕರಿಗೆ ತರಬೇತಿ ಕೊಟ್ಟು ಅಡಿಕೆಯ ಕೊಯ್ಲು ಮತ್ತು ಸಿಂಪಡಣೆ ನಡೆಸುವ ತಂಡ ರಚಿಸುವ ಯೋಜನೆ ರೂಪಿಸಿದೆ ಎಂದು ಪಿಂಗಾರ ತೋಟಗಾರಿಕಾ ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ರಾಮಕಿಶೋರ್ ಮಂಚಿ ರವರು ಹೇಳಿದರು.

ಜ.24ರಂದು  ವಿಟ್ಲದ ಪ್ರೆಸ್ ಕ್ಲಬ್ ನಲ್ಲಿ  ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿಯ ಚಟುವಟಿಕೆಗೆ ಒಂದು ಸಂಸ್ಥೆ ಮುಂದಾಗಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮವಾಗಿದ್ದು, ಈ ಉದ್ದೇಶಕ್ಕಾಗಿಯೇ ಪಿಂಗಾರ ನಿಕಟ ಭವಿಷ್ಯದಲ್ಲೇ ವಿಟ್ಲದ ಆಸುಪಾಸಿನಲ್ಲಿ ಫೈಬರ್ ದೋಟಿ ಮೂಲಕ ಕೊಯ್ಲು – ಸಿಂಪಡಣೆ ತರಬೇತಿ ಶಿಬಿರ ನಡೆಸಲಿದೆ. ಈ ತರಬೇತಿಗೆ ಕ್ಯಾಂಪ್ಕೋ ಅಡಿಕೆ ಕೌಶಲ್ಯ ಪಡೆ ಮತ್ತು ನುರಿತ ತರಬೇತಿಗಾರರ ಸಹಕಾರ ಸಿಗಲಿದೆ. ಸುಮಾರು 20ರಷ್ಟು ಆಸಕ್ತ ಸ್ಥಳೀಯ ಯುವಕರಿಗೆ ತರಬೇತಿ ಕೊಡುವುದು ಈ ಯೋಜನೆಯ ಮೊದಲ ಹಂತ. ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ ಆಯ್ಕೆ ನಡೆಸಿ ಎಂಟು ಮಂದಿಯ ತಂಡ ರಚನೆ ಅನಂತರದ ಹೆಜ್ಜೆಯಾಗಿರುತ್ತದೆ.

ಬಂಟ್ವಾಳ ತಾಲೂಕಿನಲ್ಲಿ ಅವಶ್ಯಕತೆ ಇರುವಲ್ಲಿಗೆ ಜಾಬ್ ವರ್ಕ್ ಆಧಾರದ ಮೇಲೆ ಈ ತಂಡವನ್ನು ಕೊಯ್ಲು – ಸಿಂಪಡಣೆಗೆ ಕಳಿಸಲಾಗುವುದು. ಈ ತಂಡದವರು ಅಡಿಕೆ ಕೊಯ್ದು, ಬಲೆಯಲ್ಲಿ ಹಿಡಿದು ಒಟ್ಟು ಮಾಡಿ ಕೊಡಲಿದ್ದಾರೆ. ಚದುರು ಅಡಕೆಯನ್ನು ಹೆಕ್ಕುವ ತಾಪತ್ರಯ ಇಲ್ಲ. ಸಿಂಪಡಣೆಯ ಕೆಲಸವೂ ಹೀಗೆಯೇ. ತಮ್ಮ ತಂಡದ ಸಿಬ್ಬಂದಿಗಳಿಗೆ ಬೇಕಾದ ಸಲಕರಣೆಗಳನ್ನು ಪಿಂಗಾರವೇ ಕೊಟ್ಟು ಕಳಿಸುತ್ತದೆ. ಜತೆಯಲ್ಲಿ ಒಬ್ಬರು ಮೇಲ್ವಿಚಾರಕರೂ ಇರುತ್ತಾರೆ. ಬಂಟ್ವಾಳ ತಾಲೂಕಿನ ಆಸಕ್ತ, 20ರಿಂದ 40 ವರ್ಷದ ಒಳಗಿನ ಯುವಕರು ತರಬೇತಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಫಾರ್ಮನ್ನು ಪಿಂಗಾರ ಕಚೇರಿಯಿಂದ ಪಡೆದುಕೊಳ್ಳಬಹುದು.  ತುಂಬಿಸಿದ ಅರ್ಜಿ ಫಾರ್ಮುಗಳನ್ನು ಆಧಾರ್ ಕಾರ್ಡು ಮತ್ತು ಎರಡು ಪ್ರತಿ ಭಾವಚಿತ್ರಗಳೊಂದಿಗೆ ಪಿಂಗಾರ ಕಚೇರಿಗೆ ತಲುಪಿಸಲು ಕೊನೆ ದಿನಾಂಕ ಫೆ. 1 ಆಗಿರುತ್ತದೆ.  ಪಿಂಗಾರ ಕಂಪೆನಿ ಕಳೆದ ಸಾಲಿನಲ್ಲಿ 3.5 ಕೋಟಿ ರೂ.ಗಳ ವ್ಯವಹಾರ ನಡೆಸಿದ್ದು 4 ಲಕ್ಷ ರೂ. ಲಾಭ ಗಳಿಸಿದೆ. ತರಬೇತಿಯಲ್ಲಿ ಯಶಸ್ಸು ಪಡೆದ ಅಭ್ಯರ್ಥಿಗಳಲ್ಲಿ ಆಯ್ದವರನ್ನು ಕಂಪೆನಿ ಉದ್ಯೋಗಿಗಳಾಗಿ ಸೇರಿಸುವ ಉದ್ದೇಶ ಹೊಂದಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ರಾಜಾರಾಮ ಸಿ.ಜಿ ಬಲಿಪಗುಳಿ, ಪುಷ್ಪ ಎಸ್ ಕಾಮತ್ ಮಂಚಿ, ರಮೇಶ್ ಎನ್ ಮಂಚಿ, ಕೃಷ್ಣ ಮೂರ್ತಿ ಕೆ ಕೇಪು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಎಸ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here