ಭ್ರಷ್ಟಾಚಾರದ ವಿರುದ್ಧದ ಸುದ್ದಿ ಜನಾಂದೋಲನಕ್ಕೆ `ನಮ್ಮೂರು- ನೆಕ್ಕಿಲಾಡಿ’ ಸಾಥ್

0

  • ಶಾಲೆಗಳಿಗೆ ಕರಪತ್ರ ಹಂಚಿಕೆ: ಭ್ರಷ್ಟಾಚಾರದ ಪ್ರತಿಕೃತಿ ದಹನ

ಉಪ್ಪಿನಂಗಡಿ: ಭ್ರಷ್ಟಾಚಾರದ ವಿರುದ್ಧ `ಸುದ್ದಿ’ಯ ಜನಾಂದೋಲನವನ್ನು `ನಮ್ಮೂರು- ನೆಕ್ಕಿಲಾಡಿ’ ಬೆಂಬಲಿಸಿದ್ದು, ನೆಕ್ಕಿಲಾಡಿಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭ್ರಷ್ಟಾಚಾರ ವಿರುದ್ಧದ ಜಾಗೃತಿ ಕರಪತ್ರಗಳನ್ನು ಹಂಚಿ, ಭ್ರಷ್ಟಾಚಾರದ ಪ್ರತಿಕೃತಿಗಳನ್ನು ದಹಿಸಿತು.


ಈ ಸಂದರ್ಭ ಮಾತನಾಡಿದ `ನಮ್ಮೂರು- ನೆಕ್ಕಿಲಾಡಿ’ ಅಧ್ಯಕ್ಷ ಜತೀಂದ್ರ ಶೆಟ್ಟಿ, ಭ್ರಷ್ಟಾಚಾರವೆನ್ನುವುದು ನಮ್ಮ ದೇಶದ ಮಾರಕ ಪಿಡುಗಾಗಿದೆ. ಸುದ್ದಿ ಬಿಡುಗಡೆಯ ಪ್ರಧಾನ ಸಂಪಾದಕರಾದ ಡಾ.ಯು.ಪಿ. ಶಿವಾನಂದರವರು ಲಂಚ ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗಬೇಕು ಎನ್ನುವ ಆಶಯದಿಂದ `ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ. ಉತ್ತಮ ಸೇವೆಗೆ ಪುರಸ್ಕಾರ’ ಎಂಬ ಘೋಷ ವಾಕ್ಯದಡಿ ಈಗಾಗಲೇ ಭ್ರಷ್ಟಾಚಾರ ವಿರುದ್ಧದ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ. ಅದನ್ನು ಬೆಂಬಲಿಸುವುದು ಹಾಗೂ ಅದನ್ನು ಯಶಸ್ಸುಗೊಳಿಸುವುದು ಪ್ರಜ್ಞಾವಂತ ನಾಗರಿಕರಾದ ನಮ್ಮೆಲ್ಲರ ಕರ್ತವ್ಯ. ಇಂದಿನ ಮಕ್ಕಳೇ ಮುಂದಿನ ಈ ದೇಶದ ಭವಿಷ್ಯ. ನಾಳೆ ನೀವು ಓದಿ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಬಹುದು. ಆಗ ಮಾತ್ರ ಭ್ರಷ್ಟಾಚಾರವನ್ನು ನುಸುಳದಂತೆ ಮಾಡುವ ಜವಾಬ್ದಾರಿ ನಿಮ್ಮದಾಗಿದೆ. ಭ್ರಷ್ಟಾಚಾರ ಮುಕ್ತ ದೇಶ ಕಟ್ಟುವ ಕನಸು ಪ್ರಜಾಪ್ರಭುತ್ವ ಜಾರಿಗೆ ಬಂದ ದಿನವಾದ ಇಂದಿನಿಂದಲೇ ನಿಮ್ಮಲ್ಲಿ ಮೊಳಕೆಯೊಡಯಲಿ. ಭ್ರಷ್ಟಾಚಾರವೆಂಬ ಪಿಡುಗನ್ನು ಒಂದೇ ದಿನದಲ್ಲಿ ತೊಲಗಿಸಲು ಸಾಧ್ಯವಿಲ್ಲದಿದ್ದರೂ, ಎಲ್ಲರೂ ಭ್ರಷ್ಟಾಚಾರಕ್ಕೆ ಬೆಂಬಲವಿಲ್ಲ ಎಂದು ಪಣ ತೊಟ್ಟರೆ ಹಂತ ಹಂತವಾಗಿ ಅದನ್ನು ಸಂಪೂರ್ಣ ನಿರ್ಮೂಲನೆ ಸಾಧ್ಯವಿದೆ. ಅದಕ್ಕೆ ಎಲ್ಲರ ಸಹಕಾರನೂ ಅತ್ಯಗತ್ಯ ಎಂದರು.


`ನಮ್ಮೂರು- ನೆಕ್ಕಿಲಾಡಿ’ಯ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಕರಪತ್ರಗಳನ್ನು ಮುದ್ರಿಸಿ, ಎರಡು ಶಾಲೆಗಳಿಗೆ ಪ್ರಜಾಪ್ರಭುತ್ವದ ದಿನವಾದ ಇಂದು ಹಂಚಲಾಗಿದೆ. ಮುಂದಿನ ದಿನಗಳಲ್ಲಿಯೂ ಭ್ರಷ್ಟಾಚಾರದ ವಿರುದ್ಧದ ಆಂದೋಲನದಲ್ಲಿ ತೊಡಗಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಮ್ಮ ಸಂಘಟನೆ ನಡೆಸಲಿದೆ ಎಂದರು.

ನೆಕ್ಕಿಲಾಡಿ ಶಾಲೆಯಲ್ಲಿ ಭ್ರಷ್ಟಾಚಾರದ ವಿರುದ್ಧದ ಘೋಷಣೆಯೊಂದಿಗೆ ಭ್ರಷ್ಟಾಚಾರದ ಪ್ರತಿಕೃತಿಯನ್ನು ದಹಿಸಲಾಯಿತು. ಈ ಸಂದರ್ಭ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಧರ್ನಪ್ಪ ಗೌಡ, ಮುಖ್ಯಗುರು ಕಾವೇರಿ ಸೇರಿದಂತೆ ಮತ್ತಿತರ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.


ಉಪ್ಪಿನಂಗಡಿ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶಾಂತಿ ಮಾತನಾಡಿ, ಎಲ್ಲಾ ಕ್ಷೇತ್ರದಲ್ಲೂ ಇಂದು ಭ್ರಷ್ಟಾಚಾರ ಬೀಡು ಬಿಟ್ಟಿದೆ. ನಾವು ನನ್ನದು ಎನ್ನುವ ಸ್ವಾರ್ಥದ ಬದುಕು ನಮ್ಮದಾಗಿದೆ. ಆದ್ದರಿಂದ ಇನ್ನೊಬ್ಬನಲ್ಲಿ ಏನು ಸಿಗಬಹುದು ಎಂಬ ಯೋಚನೆ ನಮ್ಮದಾಗುತ್ತಿದೆ. ಆದ್ದರಿಂದ ಅದನ್ನು ಬಿಟ್ಟು ಎಲ್ಲರೂ ನಮ್ಮವರೆನ್ನುವ ಪ್ರೀತಿಯಲ್ಲಿ ಬದುಕಬೇಕು. ಇನ್ನೊಬ್ಬರಿಗಾಗಿ ತನ್ನಿಂದೇನು ಸಹಾಯ ಮಾಡಬಹುದು ಎಂದು ಯೋಚಿಸಿ ಬದುಕಿದಾಗ ಭ್ರಷ್ಟಾಚಾರದ ನಿರ್ಮೂಲನೆ ಸಾಧ್ಯ. ಆದ್ದರಿಂದ ನಮ್ಮ ಮಕ್ಕಳನ್ನು ಉತ್ತಮ ದಾರಿಯಲ್ಲಿ ಬೆಳೆಸುವ ಕಾರ್ಯ ನಮ್ಮಿಂದಾಗಬೇಕು ಎಂದರು.


ಇಲ್ಲಿಯೂ ಭ್ರಷ್ಟಾಚಾರದ ವಿರುದ್ಧದ ಘೋಷಣೆಗಳೊಂದಿಗೆ ಭ್ರಷ್ಟಾಚಾರದ ಪ್ರತಿಕೃತಿಯನ್ನು ದಹಿಸಲಾಯಿತು. ಈ ಸಂದರ್ಭ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯೆ ವಿದ್ಯಾಲಕ್ಷ್ಮೀ ಪ್ರಭು, ಶಾಲಾ ಎಸ್‌ಡಿಎಂಸಿ ಸದಸ್ಯರಾದ ಮಜೀದ್ ಕುದ್ಲೂರು, ಫಾರೂಕ್ ಜಿಂದಗಿ, ಶೀನಪ್ಪ ಪೂಜಾರಿ, ರಝೀಯಾ, ಕೈರುನ್ನಿಸಾ, ಪ್ರೇಮ, ಹೇಮ, ಪೋಷಕರಾದ ವಸಂತ ಕುಕ್ಕುಜೆ, ಶಾಲಾ ಮುಖ್ಯಗುರು ದೇವಕಿ, ಶಿಕ್ಷಕ ವೃಂದದವರು ಹಾಗೂ ನಮ್ಮೂರು- ನೆಕ್ಕಿಲಾಡಿಯ ಉಪಾಧ್ಯಕ್ಷರಾದ ಅನಿ ಮಿನೇಜಸ್, ಸತ್ಯವತಿ ಪೂಂಜಾ, ಜೊತೆ ಕಾರ್ಯದರ್ಶಿ ಶಬೀರ್ ಅಹಮ್ಮದ್, ಮತ್ತಿತರರು ಉಪಸ್ಥಿತರಿದ್ದರು. ನಮ್ಮೂರು- ನೆಕ್ಕಿಲಾಡಿಯ ಕಾರ್ಯದರ್ಶಿ ಕಲಂದರ್ ಶಾಫಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here