ಮಣ್ಣಾಪು ಕೊರಗಜ್ಜ ದೈವಸ್ಥಾನದ ನೇಮೋತ್ಸವ ಶಾಶ್ವತ ನರ್ತನ ಚಾವಡಿ,ಪಾಕಸಾಲೆ, ಶೌಚಾಲಯ ಲೋಕಾರ್ಪಣೆ

0

  • ಧಾರ್ಮಿಕ, ಸಾಂಸ್ಕೃತಿಕ, ದೈವದ ಕೇಂದ್ರ ವ್ಯಾಪಾರೀಕರಣವಾಗದಿರಲಿ-ಡಾ.ರಘು

ಪುತ್ತೂರು: ಕೊರಗಜ್ಜನಿಗೆ ಆಡಂಬರ ಬೇಡ, ಕೊರಗಜ್ಜನಿಗೆ ಸರಳತೆ ಇದ್ದರೂ ಸಾಕು. ಕೊರಗಜ್ಜ ಕೃಷಿಕರಿಗೆ ಭಾರೀ ಹತ್ತಿರ. ಆದರೆ ಇಂದಿನ ಆಧುನಿಕತೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ದೈವದ ಕೇಂದ್ರಗಳು ವ್ಯಾಪಾರೀಕರಣದ ದೃಷ್ಟಿಯಲ್ಲಿ ಹೋಗುತ್ತಿರುವುದು ದುರಂತವಾಗಿದ್ದು, ಇವುಗಳು ವ್ಯಾಪಾರೀಕರಣವಾದರೆ ಅದು ಹೆಚ್ಚು ಸಮಯ ಬಾಳಲ್ಲ ಮಾತ್ರವಲ್ಲದೆ ಕ್ರಮೇಣ ಶಕ್ತಿಯೂ ಕುಂದುತ್ತದೆ ಎಂದು ಕ್ಯಾನ್ಸರ್ ತಜ್ಞ ಡಾ.ರಘು ಬೆಳ್ಳಿಪ್ಪಾಡಿರವರು ಹೇಳಿದರು.

ಸರಿಸುಮಾರು ೩೮೦ ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.೨೫ ರಂದು ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ವಿಜ್ರಂಭಣೆಯಿಂದ ನಡೆದಿದ್ದು, ಶ್ರೀ ಕ್ಷೇತ್ರದಲ್ಲಿನ ಶಾಶ್ವತ ನರ್ತನ ಚಾವಡಿ,ಪಾಕಸಾಲೆ, ಶೌಚಾಲಯ ಲೋಕಾರ್ಪಣೆ ಇದರ ಧಾರ್ಮಿಕ ಸಭೆಯನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಮಾತನಾಡಿದರು. ಕೊರಗಜ್ಜನನ್ನು ಕೊರಗಜ್ಜ ಎಂದು ಯಾಕೆ ಕರೆಯುತ್ತಿದ್ದಾರೋ ಗೊತ್ತಿಲ್ಲ. ಯಾಕೆಂದರೆ ಕೊರಗ ತನಿಯರವರು ಸಣ್ಣ ಪ್ರಾಯದಲ್ಲಿಯೇ ಅಗಲಿದ್ದರು ಎಂದು ಇತಿಹಾಸ ಹೇಳುತ್ತದೆ. ಕೊರಗಜ್ಜನಿಗೆ ಆಡಂಬರದ ಗುಡಿ ಗೋಪುರ ಬೇಡ. ಕೊರಗಜ್ಜನನ್ನು ಮನಸಾರೆ ನಂಬಿದವರಿಗೆ ಖಂಡಿತಾ ಆಶೀರ್ವದಿಸುತ್ತಾರೆ. ಮಣ್ಣಾಪು ಎಂಬ ಶಬ್ದದಲ್ಲಿ `ಆಪ್’ ಶಬ್ದ ಕೂಡಿದೆ. ಹಿಂದಿನ ಹಿರಿಯರು ಸದುದ್ಧೇಶದಿಂದಲೇ ಈ ಪರಿಸರಕ್ಕೆ ಮಣ್ಣಾಪು ಎಂದು ಹೆಸರಿಟ್ಟಿರಬೇಕು. ಕಾಲ ಕಳೆದಂತೆ ಜನರು ಆಧುನಿಕತೆಯತ್ತ ಮಾರು ಹೋಗಿ ಈ ಹಿಂದಿನ ಹೆಸರನ್ನು ಬದಲಾಯಿಸಿ ಹೊಸ ಹೆಸರನ್ನು ಇಡುವುದು ಉತ್ತಮ ನಡೆಯಲ್ಲ ಎಂದ ಅವರು ಈ ಮಣ್ಣಾಪು ಕ್ಷೇತ್ರದ ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ಓರ್ವ ಕೊರಗಜ್ಜನ ಭಕ್ತರಾಗಿದ್ದು, ಈ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಉಲ್ಲೇಖನೀಯ ಎಂದು ಅವರು ಹೇಳಿದರು.

 

ನಾಸ್ತಿಕ ಮನುಷ್ಯರೂ ಕೊರಗಜ್ಜನ ಆರಾಧನೆ ಮಾಡುತ್ತಿದ್ದಾರೆ-ಶಶಿಕುಮಾರ್ ಬಾಲ್ಯೊಟ್ಟು:
ಅಧ್ಯಕ್ಷತೆ ವಹಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಶಾಶ್ವತ ನರ್ತನ ಚಾವಡಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಜಾತಿ-ಧರ್ಮದವರು ಕೊರಗಜ್ಜನನ್ನು ಆರಾಧಿಸುತ್ತಾರೆ. ಮನುಷ್ಯ ಯಾವುದೇ ವಸ್ತು ಕಳಕೊಂಡ ಸಂದರ್ಭದಲ್ಲಿ ಆತ ಕೊರಗಜ್ಜನನ್ನು ಮನಸಾರೆ ಪ್ರಾರ್ಥಿಸಿದಾಗ ಆತ ಕಳಕೊಂಡ ವಸ್ತು ಪ್ರಾಪ್ತಿಯಾಗುವಂತಹ ಅನೇಕ ಉದಾಹರಣೆಗಳು ಈ ಸಮಾಜದಲ್ಲಿ ಕಾಣ ಸಿಕ್ಕಿವೆ. ಕುತ್ತಾರುಪದವಿನಲ್ಲಿ ನೆಲೆ ಕಂಡ ಕೊರಗಜ್ಜ ಇಂದು ಅನೇಕ ಕಡೆಗಳಲ್ಲಿ ಆರಾಧನೆ ಕೇಂದ್ರವಾಗಿ ಭಕ್ತರ ಅಚ್ಚುಮೆಚ್ಚಿನವರಾಗಿದ್ದಾರೆ. ಭಕ್ತಿಪ್ರಧಾನವಾದ ಈ ಭೂಮಿಯಲ್ಲಿ ದೇವರಿಲ್ಲ ಎಂದು ಹೇಳುವ ನಾಸ್ತಿಕ ಜನರೂ ಕೂಡ ಕೊರಗಜ್ಜನ ಆರಾಧನೆ ಮಾಡುತ್ತಿದ್ದಾರೆ ಎಂದ ಅವರು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿಯವರು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಸಿಂಹವನ ಶ್ರೀ ಕೊರಗಜ್ಜ ದೈವಸ್ಥಾನ ಹಾಗೂ ಮಣ್ಣಾಪು ಶ್ರೀ ಕೊರಗಜ್ಜ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂದು ಅವರು ಹೇಳಿದರು.

ರವೀಂದ್ರ ಶೆಟ್ಟಿಯವರು ರಾಜಕೀಯ ಕ್ಷೇತ್ರಕ್ಕಿಂತ ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ-ಹೇಮನಾಥ ಶೆಟ್ಟಿ:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿರವರು ಪಾಕಸಾಲೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಒಂದು ಕಾಲದಲ್ಲಿ ಕೊರಗಜ್ಜನಿಗೆ ಯಾವುದೇ ಪ್ರಚಾರವಿರಲಿಲ್ಲ. ಸಮಾಜ ಬದಲಾವಣೆಯಾದಂತೆ ವ್ಯವಸ್ಥೆಯೂ ಬದಲಾವಣೆಯನ್ನು ಕಾಣುತ್ತದೆ ಎಂಬಂತೆ ಇಂದು ಅದೇ ಕೊರಗಜ್ಜನನ್ನು ಅಲ್ಲಲ್ಲಿ ಆರಾಧನೆ ಮಾಡುವ ಮೂಲಕ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪವಾಡಪುರುಷರಾಗಿರುವ ಕೊರಗಜ್ಜನನ್ನು ನಂಬಿದರೆ ಕಷ್ಟ ಕಾರ್ಪಣ್ಯಗಳೆಲ್ಲವೂ ನಿವಾರಣೆಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ ಎಂದ ಅವರು ಗೌರವಾಧ್ಯಕ್ಷ ರವೀಂದ್ರ ಶೆಟ್ಟಿಯವರು ರಾಜಕೀಯ ಕ್ಷೇತ್ರಕ್ಕಿಂತ ಧಾರ್ಮಿಕ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡು ಅದರಲ್ಲಿ ತೃಪ್ತಿಯನ್ನು ಪಡೆದವರಾಗಿದ್ದಾರೆ. ಕೋಟ್ಯಾಧಿಪತಿ ಎನಿಸಿಕೊಂಡವರು ತನ್ನ ಲಾಭಾಂಶದ ಒಂದಂಶವನ್ನು ಸಮಾಜದ ಅಭಿವೃದ್ಧಿಗೆ ವಿನಿಯೋಗಿಸಿದಾಗ ಸಮಾಜ ಬೆಳಗುವುದು ಎಂದು ಅವರು ಹೇಳಿದರು.


ಕ್ಷೇತ್ರದ ಅಭಿವೃದ್ಧಿಗೆ ಗಮನ ಕೊಡಿ-ಚಿತ್ತರಂಜನ್ ಶೆಟ್ಟಿ:
ಉದ್ಯಮಿ ಮಹಾರಾಷ್ಟ್ರ ರತ್ನಗಿರಿಯ ಚಿತ್ತರಂಜನ್ ಶೆಟ್ಟಿ ನುಳಿಯಾಲುರವರು ಪಾಕಸಾಲೆಯನ್ನು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಈ ಕ್ಷೇತ್ರದ ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿಯವರು ಸಿಂಹವನದಲ್ಲಿನ ಕೊರಗಜ್ಜನ ಕ್ಷೇತ್ರದಲ್ಲಿ `ನುಳಿಯಾಲು ಸಭಾಭವನ’ವನ್ನು ನಿರ್ಮಿಸಿ ಸ್ಥಳೀಯ ಬಡವರ ಕಾರ್ಯಕ್ರಮಕ್ಕೆ ಉಚಿತವಾಗಿ ನೀಡುವ ಮೂಲಕ ನುಳಿಯಾಲು ಮನೆತನದ ಗೌರವವನ್ನು ಪುತ್ತೂರಿನಲ್ಲಿಯೂ ಪಸರಿಸಿರುವುದು ಅಭಿನಂದನೀಯ. ಎಲ್ಲಿ ಭಕ್ತಿ ಇದೆ ಅಲ್ಲಿ ಶಕ್ತಿ ಇದೆ ಎಂಬಂತೆ ಈ ಕ್ಷೇತ್ರದಲ್ಲಿ ನೆರೆದಿರುವ ಜನಸಮೂಹ ನೋಡಿದಾಗ ಅರ್ಥ ಆಗುತ್ತದೆ. ಕೊರಗಜ್ಜನ ಕುರಿತು ವಾಟ್ಸಪ್‌ನಲ್ಲಿ ಬರುವ ಕೆಟ್ಟ ಸಂದೇಶಗಳ ಬಗ್ಗೆ ತಲೆಕೆಡಿಸದೆ, ಕ್ಷೇತ್ರದ ಅಭಿವೃದ್ಧಿಗೆ ಮಾತ್ರ ಗಮನ ಕೊಡುವಂತಾಗಲಿ ಎಂದರು.


ನಂಬಿದವರಿಗೆ ಕೊರಗಜ್ಜ ಆಶೀರ್ವದಿಸುತ್ತಾನೆ-ಶೈಲಾ ಪೈ:
ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ ಮಾತನಾಡಿ, ಎರಡು ವರ್ಷದ ಹಿಂದೆ ಇದೆ ಕ್ಷೇತ್ರದಲ್ಲಿ ನೀರಿಗಾಗಿ ಬೋರ್‌ವೆಲ್ ತೆಗೆಯುವ ಯೋಜನೆ ಇತ್ತು. ಆದರೆ ನೀರು ಮಾತ್ರ ಸಿಗಲಿಲ್ಲ. ಕೂಡಲೇ ತಾನು ಶ್ರೀ ಕ್ಷೇತ್ರದ ಕೊರಗಜ್ಜನಲ್ಲಿ `ನೀರು ಸಿಗುವಂತೆ ಮಾಡು’ ಎಂದು ಮನಸ್ಸಿನಲ್ಲಿಯೇ ಕೋರಿಕೆಯನ್ನಿಟ್ಟೆ. ಕೇವಲ ಐದೇ ನಿಮಿಷದಲ್ಲಿ ಕೊರಗಜ್ಜ ಸತ್ಯವನ್ನು ತೋರಿಸಿಯೇ ಬಿಟ್ಟರು. ಶ್ರೀ ಕ್ಷೇತ್ರದ ಹತ್ತಿರದಲ್ಲಿಯೇ ನೀರು ಸಿಗುವಂತೆ ಕೊರಗಜ್ಜ ಆಶೀರ್ವಾದ ಮಾಡಿರುತ್ತಾರೆ ಎಂದರು.

ಸಹಕರಿಸಿದವರಿಗೆ ಗೌರವ:
ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಸಹಕಾರವಿತ್ತ ದೈವ ನರ್ತಕ ಹರೀಶ್ ಕೇಪು, ಮೊಟ್ಟೆತ್ತಡ್ಕ ಆಶ್ರಯ ಕಾಲೋನಿಯ ಆಶ್ರಯ ಫ್ರೆಂಡ್ಸ್, ಪುತ್ತೂರು ಮಹಿಳಾ ಠಾಣೆಯ ಕಾನ್‌ಸ್ಟೇಬಲ್ ಶುಚಿನ್, ಪಾಲಿಂಜೆ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಣ್ಣ ನಾಯ್ಕ ಅಮ್ಮುಂಜ, ಯಶವಂತ ಪೆರಾಜೆ, ಆಶ್ರಯ ಕಾಲೋನಿಯ ಶ್ರೀನಿವಾಸ್, ನೈತಾಡಿ ಪಂಚಮಿ ಶಾಮಿಯಾನದ ವಿಶ್ವನಾಥ ನಾಕ್, ಸಹ್ಯಾದ್ರಿ ಲೈಟ್ಸ್ ಮತ್ತು ಸೌಂಡ್ಸ್‌ನ ಭವಿತ್, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಪತ್ರಕರ್ತ ಸುದ್ದಿ ಬಿಡುಗಡೆಯ ಸಂತೋಷ್ ಮೊಟ್ಟೆತ್ತಡ್ಕ, ಫೊಟೋಗ್ರಾಫರ್ ನವೀನ್ ರೈ ಪಂಜಳ, ಕಾರ್ಯಕ್ರಮ ನಿರೂಪಕ ರಾಜೇಶ್ ಬನ್ನೂರು, ಪುರುಷೋತ್ತಮ ಕುಂಡಡ್ಕ, ಕೊರಗಜ್ಜ ಸೇವಾ ಸಮಿತಿಯ ಸತೀಶ್ ಕೆ.ಮಣ್ಣಾಪು, ಸತೀಶ್ ಕೆಮ್ಮಿಂಜೆ, ಲೋಕೇಶ್ ಕೆಮ್ಮಿಂಜೆ, ರಾಧಾಕೃಷ್ಣ ಆಚಾರ್ಯ ಮೊಟ್ಟೆತ್ತಡ್ಕ, ಶರತ್ ಮಣ್ಣಾಪು, ಪುರುಷೋತ್ತಮ ಕೆಮ್ಮಿಂಜೆ, ಸುಹಾಸ್ ಮಣ್ಣಾಪು, ನಿತಿನ್ ಮಣ್ಣಾಪು, ಶ್ರೀನಿವಾಸ್ ಮಣ್ಣಾಪು, ಹೇಮಂತ್ ಮಣ್ಣಾಪು, ಆನಂದ ಮಣ್ಣಾಪು, ಮನೋಹರ ಮಣ್ಣಾಪು, ಅಣ್ಣು ಮಣ್ಣಾಪು, ಯೋಗೀಶ್ ಮಣ್ಣಾಪು, ಬಾಬು ಮಣ್ಣಾಪು, ಗುರುವ ಮಣ್ಣಾಪು, ಜಾನಕಿ ಮಣ್ಣಾಪು, ಯಮುನಾ ಮಣ್ಣಾಪು, ಲಕ್ಷ್ಮೀ ಮಣ್ಣಾಪು, ರಾಜೀವಿ ಮಣ್ಣಾಪು, ಪುಷ್ಪಾ ಮಣ್ಣಾಪುರವರುಗಳನ್ನು ಗೌರವಿಸಲಾಯಿತು.

ಸವಿತ ಪಂಜ ಪ್ರಾರ್ಥಿಸಿದರು. ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲುರವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀ ಕ್ಷೇತ್ರದ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಗಂಗಾಧರ್ ಮಣ್ಣಾಪು ವಂದಿಸಿದರು. ಪುತ್ತೂರು ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.

ಮಣ್ಣಾಪು ಕೊರಗಜ್ಜನ ಪವಾಡ ಕ್ಷೇತ್ರ…
ಶ್ರೀ ಕ್ಷೇತ್ರಕ್ಕೆ ಐದು ತಲೆಮಾರುಗಳ ಇತಿಹಾಸವಿದೆ. ಶ್ರೀ ಕ್ಷೇತ್ರದಲ್ಲಿನ ಭಕ್ತರು ಆರ್ಥಿಕವಾಗಿ ಶ್ರೀಮಂತರಲ್ಲ ಬದಲಾಗಿ ಹೃದಯ ಶ್ರೀಮಂತರು. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿನ ಯುವಸಮೂಹವಾಗಲಿ, ಹಿರಿಯರಾಗಲಿ ಬಹಳಷ್ಟು ದುಡಿದಿರುತ್ತಾರೆ. ಕಳೆದ ವರ್ಷ ಶ್ರೀ ಕ್ಷೇತ್ರದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮ, ನೇಮೋತ್ಸವ ಕಾರ್ಯಕ್ರಮಗಳು ವಿಜ್ರಂಭಣೆಯಿಂದ ಜರಗಿತ್ತು. ಶ್ರೀ ಕ್ಷೇತ್ರದಲ್ಲಿ ನರ್ತನ ಚಾವಡಿ, ಪಾಕಸಾಲೆ ಹಾಗೂ ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳ ಕೊರತೆ ಇತ್ತಾದರೂ ಅವನ್ನು ಕೊರಗಜ್ಜನ ದೈವೀ ಶಕ್ತಿಯಿಂದ ಇಂದು ಪೂರ್ಣಗೊಂಡಿದೆ. ಕಳೆದ ವರ್ಷ ಕ್ಷೇತ್ರದ ಕೊರಗಜ್ಜನ ಮೂಲಶಿಲೆಯನ್ನು ತರಲು ಮೂಲಸ್ಥಾನಕ್ಕೆ ಹೊರಡುವಷ್ಟರಲ್ಲಿ ಜನರೇಟರ್ ಯಥಾಸ್ಥಿತಿಯಲ್ಲಿರುವಾಗಲೇ ಹಠಾತ್ತನೆ ಕರೆಂಟ್ ಹೋಗಿ ಕತ್ತಲು ಆವರಿಸಿತ್ತು. ಜವಾಬ್ದಾರಿ ವಹಿಸಿಕೊಂಡವರು ತಾನು ಸ್ವಿಚ್ ಆಫ್ ಮಾಡಿಲ್ಲ ಎನ್ನುವ ವಿಷಯ ಬೆಳಕಿಗೆ ಬಂತು. ದೈವವು ಪ್ರವೇಶ ದ್ವಾರಕ್ಕೆ ಬಂದೊಡನೆಯೇ ಕರೆಂಟ್ ಆಗಮಿಸಿದ್ದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿತ್ತು. ನೆರೆದ ಭಕ್ತರೆಲ್ಲಾ ಇದು ನಿಜವಾಗಿಯೂ ಕೊರಗಜ್ಜನ ಪವಾಡವಾಗಿದೆ ಎಂದು ಆಡಿಕೊಳ್ಳುತ್ತಿದ್ದರು ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಶ್ರೀ ಮಣ್ಣಾಪು ಕ್ಷೇತ್ರ

ಸನ್ಮಾನ
ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಸಮಾಜಸೇವೆ ಮತ್ತು ಧಾರ್ಮಿಕ ಸೇವೆಯನ್ನು ಮಾಡುತ್ತಿರುವ ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಬನ್ನೂರು ಗ್ರಾಮದ ಆನೆಮಜಲು ನಿವಾಸಿ ೧೧೨ ವರ್ಷದ ಚನ್ನು ಎಂಬ ಅಜ್ಜಿ, ಶ್ರೀ ಕ್ಷೇತ್ರಕ್ಕೆ ದೇಣಿಗೆ ನೀಡಿದ ಸಂಪ್ಯ-ಆರ್ಯಾಪು ಗಿರಿಧರ್ ಆಮೆಮನೆರವರನ್ನು ಗುರುತಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here