ಪುತ್ತೂರು: ಕೋವಿಡ್ ಲಸಿಕೆ ಪಡೆಯುವ ವಿಚಾರಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲೆ ಹಿಂದಿದೆ ಎಂಬ ಜಿಲ್ಲಾ ವರದಿಗೆ ಸಂಬಂಧಿಸಿ ಪುತ್ತೂರು ತಾಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಮತ್ತು ಇತರ ಅಧಿಕಾರಿಗಳ ಸಹಕಾರದೊಂದಿಗೆ ಪುತ್ತೂರು ತಾ.ಪಂ ಕಿರು ಸಭಾಂಗಣದಲ್ಲಿ ಲಸಿಕೆ ಪಡೆದವರ ದಾಖಲೆ ಮರುಪರಿಶೀಲನೆ ಕಾರ್ಯ ಬರದಿಂದ ನಡೆಯುತ್ತಿದ್ದು, ಕೇವಲ ಮೂರು ದಿನದಲ್ಲಿ ಶೇ.36 ರಷ್ಟು ಲಸಿಕೆ ಪಡೆದವರ ಹೆಸರು ಬಿಟ್ಟು ಹೋದವರನ್ನು ಸೇರ್ಪಡೆಗೊಳಿಸಲಾಗಿದೆ.
ಪ್ರಥಮ ಡೋಸ್ ತೆಗೆದು ಕೊಳ್ಳದವರು ಮತ್ತು ೨ನೇ ಡೋಸ್ ಲಸಿಕೆ ಪಡೆಯದವರು ಬಾಕಿ ಇದ್ದಾರೆಂಬ ಜಿಲ್ಲಾ ವರದಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಹಿಂದಿದೆ ಎಂದು ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಆಯಾ ತಾಲೂಕು ಅಧಿಕಾರಿಗಳೊಂದಿಗೆ ಮಾತನಾಡಿ ವಾರದೊಳಗೆ ಶೇ.೧೦೦ ಲಸಿಕೆ ನೀಡುವ ಗುರಿ ಸಾಧಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಎಲ್ಲರಿಗೂ ಲಸಿಕೆ ಪಡೆದಾಗಿದೆ. ಇನ್ನು ಬೂಸ್ಟಾರ್ ಡೋಸ್ ಮಾತ್ರ ಬಾಕಿ ಇರುವುದು. ಆದರೆ ದಾಖಲೆಯಲ್ಲಿ ಮಾತ್ರ ಲಸಿಕೆ ಪಡೆಯದವರ ಪಟ್ಟಿ ಬಂದಿರುವುದು ಆರೋಗ್ಯಾಧಿಕಾರಿಗಳನ್ನು ಗೊಂದಲಕ್ಕೀಡು ಮಾಡಿತ್ತು. ಈ ನಿಟ್ಟಿನಲ್ಲಿ ದಾಖಲೆ ಪರಿಶೀಲನೆ ಕಾರ್ಯ ನಡೆಸಿದ್ದಾರೆ.
ಲಸಿಕೆ ನೀಡುವ ಸಂದರ್ಭ ಸರ್ವರ್ ಬ್ರೇಕ್ ಡೌನ್, ಆಪ್ ಸಮಸ್ಯೆ:
ಕೆಲವೊಬ್ಬರಿಗೆ ವ್ಯಾಕ್ಸಿನೇಷನ್ ಆಗಿದ್ದರೂ ಕೋವಿಡ್ ಆಪ್ ಸಮಸ್ಯೆ ಅಥವಾ ಸರ್ವರ್ ಬ್ರೇಕ್ ಡೌನ್ ನಿಂದಾಗಿ ನೋಂದಣಿಯಾಗಿರುವುದಿಲ್ಲ. ಅಂತಹ ವ್ಯಕ್ತಿಗಳ ದಾಖಲೆಯಲ್ಲಿ ವ್ಯಾಕ್ಸಿನೇಷನ್ ಆಗಿಲ್ಲವೆಂದು ಕಾಣಸಿಗುತ್ತಿದೆ. ಹೀಗಾಗಿ ಕಳೆದ ವರ್ಷ ಆಗಿರುವ ಸಮಸ್ಯೆಯನ್ನು ಈಗ ಸರಿ ಪಡಿಸುತ್ತಿದ್ದೇವೆ. ಪಂಚಾಯತ್ ಪಿ.ಡಿ.ಒ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗಳ ನೇತೃತ್ವದಲ್ಲಿ ವೋಟರ್ ಲಿಸ್ಟ್ ನೋಡಿ ನೋಂದಣಿಯಾಗದವರಿಗೆ ಕರೆ ಮಾಡಿ ದಾಖಲೆಯನ್ನು ಸರಿ ಪಡಿಸುವ ಕಾರ್ಯ ನಡೆಸುತ್ತಿದ್ದೇವೆ. ಎಲ್ಲಾ ಇಲಾಖೆಯ ಸಹಕಾರದಿಂದ ವ್ಯಾಕ್ಸಿನೇಷನ್ ನಲ್ಲಿ ಉತ್ತಮ ಸಾಧನೆಯನ್ನು ನಾವು ಮಾಡಿದ್ದೇವೆ. ಡಿ.ಸಿಯವರು ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ 16,000 ಮೊದಲ ಡೋಸ್ ವ್ಯಾಕ್ಸಿನೇಷನ್ ಗುರಿ ನೀಡಿದ್ದು ಆ ಕಾರ್ಯವೂ ಪ್ರಗತಿಯಲ್ಲಿದೆ. ಇದೆಲ್ಲದರ ಜೊತೆಗೆ ಪುತ್ತೂರು ತಾಲೂಕು ವ್ಯಾಕ್ಸಿನೇಷನ್ ನಲ್ಲಿ ಜಿಲ್ಲೆಯಲ್ಲಿ ಮೇಲ್ಪಂಕ್ತಿಯಲ್ಲಿರುವುದು ಖುಷಿಯ ವಿಚಾರ’ಎಂದು ಹೇಳಿದರು. ಈ ಸಂದರ್ಭದಲ್ಲಿ ತಾ.ಪಂ ಇ.ಒ ನವೀನ್ ಭಂಡಾರಿ,ಆರೋಗ್ಯ ಇಲಾಖೆ ಹಾಗೂ ತಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.