ಮಣ್ಣಾಪು ಕೊರಗಜ್ಜ ದೈವಸ್ಥಾನದ ನೇಮೋತ್ಸವ ಸಂಪನ್ನ

0

  • ಈ ಬಾರಿಯೂ ಭಕ್ತಸಾಗರ ಕ್ಷೇತ್ರಕ್ಕೆ ಆಗಮಿಸಿದ್ದು ಖುಶಿಯಾಗಿದೆ-ರವೀಂದ್ರ ಶೆಟ್ಟಿ ನುಳಿಯಾಲು

 

ಪುತ್ತೂರು: ಮೊಟ್ಟೆತ್ತಡ್ಕ ಕೆಮ್ಮಿಂಜೆ-ಮಣ್ಣಾಪು ಎಂಬಲ್ಲಿ ೩೮೦ ವರ್ಷಗಳ ಇತಿಹಾಸವಿರುವ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.೨೫ ರಂದು ನಡೆದಿದ್ದು ಯಶಸ್ವಿ ಸಂಪನ್ನ ಕಂಡಿದೆ.

ರಾತ್ರಿ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ದೈವಕ್ಕೆ ಎಣ್ಣೆ ಕೊಡುವುದು ಬಳಿಕ ಶ್ರೀ ಕೊರಗಜ್ಜ ದೈವದ ವಾರ್ಷಿಕ ನೇಮೋತ್ಸವ ಯಶಸ್ವಿಯಾಗಿ ನಡೆಯಿತು. ಜ.೨೩ ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದೇವರ ಅರ್ಚಕರ ನೇತೃತ್ವದಲ್ಲಿ ಜರಗಿದ್ದು, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು ಜ.೨೪ ರಂದು ಮಧ್ಯಾಹ್ನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ನಡೆಯಿತು. ಮಧ್ಯಾಹ್ನ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ, ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಿಷನ್‌ಮೂಲೆ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ, ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ, ಮರಾಠಿ ಯುವ ವೇದಿಕೆ ಭಜನಾ ತಂಡ, ಶ್ರೀ ವಜ್ರಮಾತಾ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಕಾರ್ಯಕ್ರಮ ಜರಗಿತ್ತು.


ಈ ಬಾರಿಯೂ ಭಕ್ತಸಾಗರವೇ ಕ್ಷೇತ್ರಕ್ಕೆ ಆಗಮಿಸಿದ್ದು ಖುಶಿ ತಂದಿದೆ-ರವೀಂದ್ರ ಶೆಟ್ಟಿ ನುಳಿಯಾಲು:
ಅವಿಭಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಕ್ತರ ಬೇಡಿಕೆಯನ್ನು ಪೂರೈಸುವ ಕಾರಣಿಕರೆಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಕೊರಗಜ್ಜರ ದೈವಸ್ಥಾನವು ಇಲ್ಲಿನ ಮಣ್ಣಾಪು ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಹೊಂದಿದೆ. ಕಳೆದ ಹಲವು ದಿನಗಳಿಂದ ಇಲ್ಲಿನ ಶ್ರೀ ಕೊರಗಜ್ಜ ದೈವಸ್ಥಾನದ ವಿಜ್ರಂಭಣೆಯ ನೇಮೋತ್ಸವಕ್ಕೆ ಸ್ಥಳೀಯರು ಅಲ್ಲದೆ ಹಲವರು ಬಹಳಷ್ಟು ದುಡಿದಿದ್ದಾರೆ. ಕಳೆದ ವರ್ಷ ಶ್ರೀ ಕ್ಷೇತ್ರದಲ್ಲಿ ಜೀರ್ಣೋದ್ಧಾರ, ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವವು ನಿರೀಕ್ಷೆಗೂ ಮೀರಿದ ಭಕ್ತಸಾಗರದಿಂದ ಯಶಸ್ವಿಯಾಗಿ ನಡೆದಿತ್ತು. ಈ ಬಾರಿ ನಡೆದ ನೇಮೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದು ಮಾತ್ರವಲ್ಲದೆ ನೂತನ ನರ್ತನ ಚಾವಡಿ, ಪಾಕಶಾಲೆಯನ್ನು ಲೋಕಾರ್ಪಣೆಗೊಳಿಸಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸಹಿತ ಹಲವರು ಗಣ್ಯರು ಶ್ರೀ ಕ್ಷೇತ್ರಕ್ಕೆ ಆಗಮಿಸಿರುವುದು ಖುಶಿ ತಂದಿದೆ. ಅಲ್ಲದೆ ವಿವಿಧ ಭಾಗಗಳಿಂದ ನಮ್ಮ ನಿರೀಕ್ಷೆಗೂ ಮೀರಿ ಭಕ್ತಸಾಗರ ತಮ್ಮ ಕುಟುಂಬದೊಂದಿಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ್ದು ನಮ್ಮೆಲ್ಲರಿಗೆ ಮತ್ತೂ ಖುಶಿ ತಂದಿದೆ ಎಂದು ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು `ಸುದ್ದಿ’ಗೆ ಪ್ರತಿಕ್ರಿಯಿಸಿದ್ದಾರೆ.

ರವೀಂದ್ರ ಶೆಟ್ಟಿರವರ ಮುಂದಾಳತ್ವದಲ್ಲಿ ಯಶಸ್ವಿ ಕಾರ್ಯಕ್ರಮ-ವಿಶ್ವನಾಥ ಮಣ್ಣಾಪು:
ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ವಾರ್ಷಿಕ ನೇಮೋತ್ಸವ ಕಾರ್ಯಕ್ರಮವು ಅದ್ದೂರಿಯಿಂದ ನಡೆಯಲು ಹಾಗೂ ಯಶಸ್ವಿಯಾಗಿ ಸಂಪನ್ನಗೊಳ್ಳಲು ಶ್ರೀ ಕ್ಷೇತ್ರದ ಗೌರವಾಧ್ಯಕ್ಷರಾದ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರೇ ಪ್ರಮುಖ ಕಾರಣರಾಗಿದ್ದಾರೆ. ಕಾಲಕಾಲಕ್ಕೆ ಅವರು ನಮಗೆ ನೀಡಿರುವ ಸೂಕ್ತ ಮಾರ್ಗದರ್ಶನ, ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಹೃದಯಾಂತರಾಳದ ಮಾತುಗಳು ನಮ್ಮನ್ನು ಬಹಳ ಪ್ರೇರೇಪಿಸಿತ್ತು. ರವೀಂದ್ರ ಶೆಟ್ಟಿಯವರ ಪ್ರೇರೇಪಣೆಯ ಮಾತುಗಳಿಂದ ಇಂದು ಈ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮ ಎಲ್ಲರ ಸಹಕಾರದೊಂದಿಗೆ ಯಶಸ್ವಿಯಾಗಿ ಮುಗಿದಿದೆ. ಕಾರ್ಯಕ್ರಮಕ್ಕೆ ನೀಡಿದ ಸಹಕಾರಕ್ಕೆ ಎಲ್ಲರಿಗೂ ನಾನು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಕೆಮ್ಮಿಂಜೆ-ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು-ಕೆಮ್ಮಿಂಜೆರವರು ಹೇಳಿದರು.

ಯಾವುದೇ ಬೇಡಿಕೆಯಿಲ್ಲ, ಇಚ್ಚೆಯನುಸಾರ ಕಾಣಿಕೆ ಸ್ವೀಕಾರ:
ಹರಕೆಯನ್ನು ಒಪ್ಪಿಸುವವರು ಅದೇ ದಿನ ಸಮಿತಿಯವರಲ್ಲಿ ತಿಳಿಸತಕ್ಕದ್ದು. ಪ್ರತೀ ಸಂಕ್ರಮಣದಂದು ಅಗೇಲು ಸೇವೆ ನಡೆಯಲಿರುವುದು. ಅಕ್ಕಿ, ಹೂ, ಹಿಂಗಾರ, ಬೀಡ, ಚಕ್ಕುಲಿ, ಶೇಂದಿ ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುತ್ತದೆ. ಭಕ್ತಾಧಿಗಳಿಂದ ಅನ್ನದಾನಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸಧಾನ್ಯಗಳು, ತರಕಾರಿಗಳು, ಬಾಳೆಎಲೆ ಮೊದಲಾದುವುಗಳನ್ನು ಕೃತಜ್ಞತಾಪೂರ್ವಕವಾಗಿ ಶ್ರೀ ಕ್ಷೇತ್ರದಲ್ಲಿ ಸ್ವೀಕರಿಸಲಾಗುತ್ತದೆ. ಹರಕೆಯನ್ನು ಸಲ್ಲಿಸಲು ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ಬೇಡಿಕೆಗಳನ್ನು ಶ್ರೀ ಕ್ಷೇತ್ರದಲ್ಲಿ ಕೇಳಲಾಗುವುದಿಲ್ಲ. ಭಕ್ತರ ಇಚ್ಚೆಯನುಸಾರ ಕಾಣಿಕೆಯನ್ನು ನೀಡಿದ್ದಲ್ಲಿ ಮಾತ್ರ ಸ್ವೀಕರಿಸಲಾಗುವುದು ಎಂದು ಶ್ರೀ ಕ್ಷೇತ್ರವು ಪ್ರಕಟಣೆಯಲ್ಲಿ ತಿಳಿಸಿದೆ.

೩ ಸಾವಿರಕ್ಕೂ ಮಿಕ್ಕಿ ಭಕ್ತಸಾಗರ….
೩೮೦ ವರ್ಷಗಳ ಇತಿಹಾಸವಿರುವ ಇಲ್ಲಿನ ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ನಡೆಯುವ ನೇಮೋತ್ಸವ ಕಾರ್ಯಕ್ರಮವು ವಿಜ್ರಂಭಣೆಯಿಂದ ಸಾಗುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರವನ್ನು ಲೈಟಿಂಗ್ಸ್ ಹಾಗೂ ಬಂಟಿಂಗ್ಸ್‌ಗಳಿಂದ ಅಲಂಕೃತಗೊಳಿಸಲಾಗಿತ್ತು. ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಆಡಳಿತ ಸಮಿತಿ ಹೊಂದಲಾಗಿತ್ತು. ಆದರೆ ಶ್ರೀ ಕೊರಗಜ್ಜನ ಮಹಿಮೆಯೇ ಅಂತಹುದು ಹಾಗೂ ಕೊರಗಜ್ಜನನ್ನು ನಂಬಿದರೆ ನಮಗೆ ಶ್ರೇಯ ಲಭಿಸುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಶ್ರೀ ಕ್ಷೇತ್ರಕ್ಕೆ ವಿವಿಧ ಭಾಗಗಳಿಂದ ಸುಮಾರು ೩ ಸಾವಿರಕ್ಕೂ ಮಿಕ್ಕಿ ಭಕ್ತಸಾಗರದ ಪ್ರವಾಹವೇ ಹರಿದು ಬಂದಿರುವುದು ವಿಶೇಷವೇ ಸರಿ. ಆಗಮಿಸಿದ ಭಕ್ತಸಾಗರ ಶ್ರೀ ಕ್ಷೇತ್ರದಲ್ಲಿ ಪೂಜೆ ನಡೆಸಿ, ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ತೃಪ್ತಿಪಟ್ಟುಕೊಂಡಿದ್ದಾರೆ.

 

ಹರಕೆ ನೇಮ..
ಜ.೨೬ ರಂದು ಶ್ರೀ ಕ್ಷೇತ್ರದಲ್ಲಿ ರಾತ್ರಿ ತಂಟೆಪ್ಪಾಡಿ ಹರಿಶ್ಚಂದ್ರ ಮನೆಯವರು ಹಾಗೂ ಈಶ್ವರ ನಾಯ್ಕ ಮನೆಯವರು ಹರಕೆಯ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ದೈವಸ್ಥಾನದ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು ಸಹಿತ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಸಾವಿರಕ್ಕೂ ಮಿಕ್ಕಿ ಭಕ್ತರು ಕಾರ್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು.

LEAVE A REPLY

Please enter your comment!
Please enter your name here