ಹುಮನಾಬಾದ್ ತಹಸೀಲ್ದಾರ್‌ಗೆ ಹಲ್ಲೆ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಯವರಿಗೆ ಕಡಬದಲ್ಲಿ ಮನವಿ

0

ಕಡಬ: ಬೀದರ್ ಜಿಲ್ಲೆಯ ಹುಮುನಾಬಾದ್ ತಾಲೂಕಿನ ತಹಸೀಲ್ದಾರ್ ಹಾಗೂ ದಂಡಾಧಿಕಾರಿ ಡಾ| ಪ್ರದೀಪ್ ಹಿರೇಮಠ್ ಅವರ ಮೇಲಾದ ಹಲ್ಲೆಯ ಕುರಿತು ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕೆಂದು ಅಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಡಬ ತಾಲೂಕು ಶಾಖೆಯ ವತಿಯಿಂದ ಕಡಬ ತಹಸಿಲ್ದಾರ್ ಮುಖಾಂತರ ರಾಜ್ಯದ ಮುಖ್ಯಮಂತ್ರಿಯವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಡಬ ತಾಲೂಕು ಶಾಖೆಯ ಅಧ್ಯಕ್ಷ ವಿಮಲ್ ನೆಲ್ಯಾಡಿ ಹಾಗೂ ರಾಜ್ಯ ಸಮಿತಿ ಸದಸ್ಯ ಮಾಮಚ್ಚನ್ ಮಾತನಾಡಿ ಪ್ರದೀಪ್ ಹಿರೇಮಠ್ ಅವರ ಮೇಲೆ ನಡೆದಿರುವ ಹಲ್ಲೆ ಅಮಾನವೀಯ ಹಾಗೂ ಖಂಡನೀಯ, ಹಲ್ಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು, ಯಾವುದೇ ಒತ್ತಡಕ್ಕೆ ಮಣಿಯದೆ ಮುಖ್ಯಮಂತ್ರಿಯವರು ನಿರ್ಧಾಕ್ಷಿಣ್ಯ ಕ್ರಮ ಜರಗಿಸಬೇಕು, ರಾಜ್ಯದಲ್ಲಿ ಸರಕಾರಿ ನೌಕರರು ಭಯಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅನುವುಮಾಡಿಕೊಡಬೇಕು ಎಂದು ಅಗ್ರಹಿಸಿ ಆರೋಪಿಗಳ ವಿರುದ್ಧ ಕಠಿಣ ಖಾನೂನು ಕ್ರಮ ಜರಗಿಸದೇ ಹೋದಲ್ಲಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಡಬ ತಹಸೀಲ್ದಾರ್ ಅನಂತಶಂಕರ್ ಮನವಿ ಸ್ವೀಕರಿಸಿ ಮನವಿಯನ್ನು ಶೀಘ್ರ ಮುಖ್ಯಮಂತ್ರಿಯವರಿಗೆ ಕಳುಹಿಸಿಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ಕಂದಾಯ ಇಲಾಖಾ ರಾಜ್ಯ ಸರಕಾರಿ ನೌಕಕರ ಸಂಘದ ಅಧ್ಯಕ್ಷ ಕಡಬ ಉಪತಹಶಿಲ್ದಾರ್ ಕೆ.ಟಿ.ಮನೋಹರ್, ಕಡಬ ಉಪ ತಹಸೀಲ್ದಾರ್ ನವ್ಯಾ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಡಬ ತಾಲೂಕು ಶಾಖೆಯ ಕೋಶಾಧಿಕಾರಿ ಶೇಷಾದ್ರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಕೃಷ್ಣ ಕೆ, ಗ್ರಾಮ ಸಹಾಯಕರ ಸಂಘದ ಕಡಬ ತಾಲೂಕು ಅಧ್ಯಕ್ಷ ಭಾಸ್ಕರ ಚಾರ್ವಾಕ ಮತ್ತಿತರರು ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಡಬ ಶಾಖಾ ಪ್ರಧಾನ ಕಾರ್ಯದರ್ಶಿ ರವಿಚಂದ್ರ ಪಡುಬೆಟ್ಟು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಡಬ ತಾಲೂಕು ಶಾಖಾ ಗೌರವಾಧ್ಯಕ್ಷ ರಾಮಕೃಷ್ಣ ಮಲ್ಲಾರ ವಂದಿಸಿದರು.

LEAVE A REPLY

Please enter your comment!
Please enter your name here