ಗುಡ್ಡ ಸಮತಟ್ಟುಗೊಳಿಸಿ 13ಎಕ್ರೆ ಜಾಗದಲ್ಲಿ ಅಡಿಕೆ ಗಿಡ ನಾಟಿ – ಯುವ ಇಂಜಿನಿಯರ್ ಹೈಟೆಕ್ ತೋಟ ಸೃಷ್ಟಿ

0

ರಾಮಕುಂಜ: ಕಳೆದ ಒಂದು ವರ್ಷದಿಂದ ಅಡಿಕೆ ಧಾರಣೆ ಏರಿಕೆಯಾಗುತ್ತಿರುವುದರಿಂದ ಬಹುತೇಕ ಕೃಷಿಕರು ಕಾರ್ಮಿಕರ ಕೊರತೆ ಎದುರಿಸುತ್ತಿದ್ದರೂ ಅಡಿಕೆ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಯುವಕರು ಊರಿನಲ್ಲಿ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆಲ್ಲಾ ಪುಷ್ಠಿ ಎಂಬಂತೆ ಹಳೆನೇರೆಂಕಿಯ ಯುವ ಇಂಜಿನಿಯರ್ ಒಬ್ಬರು ಗುಡ್ಡ ಅಗೆದು 13 ಎಕ್ರೆ ಜಾಗದಲ್ಲಿ ೪ ಸಾವಿರ ಅಡಿಕೆ ಗಿಡ ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ರಾಮಕುಂಜ ಸಮೀಪದ ಹಳೆನೇರೆಂಕಿ ಗ್ರಾಮದ ಇಜ್ಜಾವು ನಿವಾಸಿ, ಮೆಕ್ಯಾನಿಕಲ್ ಇಂಜಿನಿಯರ್ ಶಿವಪ್ರಸಾದ್ ಹೈಟೆಕ್ ಅಡಿಕೆ ತೋಟದ ಸೃಷ್ಟಿಕರ್ತರಾಗಿದ್ದಾರೆ. ಇವರು ತನ್ನ ಮನೆಯ ಹಿಂಬದಿಯ ಗುಡ್ಡದ ಮೇಲೆ ಸುಮಾರು ಹದಿಮೂರು ಎಕರೆ ಜಾಗದಲ್ಲಿ ತನ್ನದೆ ಕಲ್ಪನೆ ಮೂಲಕ ವಿಶಿಷ್ಠ ರೀತಿಯಲ್ಲಿ ಗುಂಡಿ ತೋಡಿ ಅಡಿಕೆ ಸಸಿ ನಾಟಿ ಮಾಡಿದ್ದಾರೆ. ಗುಡ್ಡವನ್ನು ಇಳಿಜಾರು ರೀತಿಯಲ್ಲಿ ಸಮತಟ್ಟುಗೊಳಿಸಿ ಮಧ್ಯೆ ಮಧ್ಯೆ ರಸ್ತೆ ನಿರ್ಮಾಣಗೊಳಿಸಿದ್ದಾರೆ. ಎತ್ತರದ ಪ್ರದೇಶದಲ್ಲಿ ಭಾರೀ ಗಾತ್ರದ ಟ್ಯಾಂಕ್ ನಿರ್ಮಾಣ ಮಾಡಿ ಹನಿ ನೀರಾವರಿ ಕಲ್ಪಿಸಿಕೊಂಡಿದ್ದಾರೆ.


ಇಜ್ಯಾವು ಮನೆತನದ ನಿವೃತ್ತ ಉಪನ್ಯಾಸಕ, ಖ್ಯಾತ ಜ್ಯೋತಿಷಿಯೂ ಆಗಿರುವ ಮಾಧವ ಆಚಾರ್ಯರವರ ಪುತ್ರರಾಗಿರುವ ಮೆಕ್ಯಾನಿಕಲ್ ಇಂಜಿನಿಯರ್ ಶಿವಪ್ರಸಾದ್ ಆಚಾರ್ಯರವರು ಕಟ್ಟಡ ನಿರ್ಮಾಣ ಕಾರ್ಯ ಮಾಡುವ ವೃತ್ತಿಯನ್ನು ಮಾಡುತ್ತಿದ್ದಾರೆ. ಇದರೊಂದಿಗೆ ಹಿರಿಯರಿಂದ ಬಂದ ಭೂಮಿಯಲ್ಲಿರುವ ಕೃಷಿಯ ಅಭಿವೃದ್ಧಿಯೊಂದಿಗೆ ಖಾಲಿ ಇರುವ ಗುಡ್ಡದ ಜಾಗದಲ್ಲಿ ಅಡಿಕೆ ಕೃಷಿ ಮಾಡಿ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಇವರು ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿರುವುದರಿಂದ ಹಿಟಾಚಿ, ಜೆಸಿಬಿ ಇವರಲ್ಲೇ ಇದೆ. ಕೋವಿಡ್ ಸಂದರ್ಭದಲ್ಲಿ ಇವರ ವೃತ್ತಿಗೆ ಸ್ವಲ್ಪ ಸಂಕಷ್ಟ ಬಂದಿತ್ತು. ಆಗ ಹಿಟಾಚಿ ಕೆಲಸವಿಲ್ಲದೆ ಖಾಲಿ ಹೊಡೆಯುತ್ತಿತ್ತು. ಕೃಷಿ ಕಾರ್ಯಕ್ಕೆ ಹಿಟಾಚಿ ಬಳಸಿಕೊಳ್ಳಲು ನಿರ್ಧಾರ ಮಾಡಿ ಗುಡ್ಡ ಅಗೆಯುವ ಕೆಲಸ ಆರಂಭಿಸಿದರು. ಸುಮಾರು ಆರು ತಿಂಗಳು ಗುಡ್ಡ ಅಗೆಯುವ ಕಾರ್ಯ ಮಾಡಿ ಸುಂದರ ತೋಟ ನಿರ್ಮಾಣಕ್ಕೆ ಅಣಿ ಮಾಡಲಾಯಿತು. ಸುಮಾರು ೨.೫ ಫೀಟ್ ಅಗಲ, ಎರಡು ಫೀಟ್ ಆಳದ ಗುಂಡಿ ತೋಡಿ ಆರು ಗಿಡಗಳ ಮಧ್ಯೆ ಒಂದು ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ. ಈ ರಸ್ತೆ ಈಗ ಅಷ್ಟೊಂದು ಪ್ರಯೋಜನಕ್ಕೆ ಬರುವುದಿಲ್ಲ ಆದರೆ ಭವಿಷ್ಯದಲ್ಲಿ ಅಡಕೆ ತೋಟಕ್ಕೆ ಮದ್ದು ಸಿಂಪಡನೆ ಮಾಡಲು, ಅಡಕೆ ಫಸಲು ಕೊಯ್ಯಲು ಹಾಗೂ ಸಾಗಾಟ ಮಾಡಲು ಈ ರಸ್ತೆ ತುಂಬಾ ಉಪಯುಕ್ತವಾಗಲಿದೆ ಎಂಬ ಮುಂದಾಲೋಚನೆಯಿಂದ ರಸ್ತೆ ನಿರ್ಮಾಣ ಮಾಡಲಾಗಿದೆ.

ವ್ಯವಸ್ಥಿತವಾಗಿ ಮಾಡಲಾದ ತೋಟದಲ್ಲಿ ಅರ್ಧದಷ್ಟು ಮಂಗಳ ಹಾಗೂ ಇನ್ನರ್ಧದಷ್ಟು ರತ್ನಗಿರಿ ತಳಿಯ ಸುಮಾರು ನಾಲ್ಕು ಸಾವಿರ ಅಡಿಕೆ ಸಸಿಗಳನ್ನು ನಾಟಿ ಮಾಡಲಾಗಿದೆ. ಇದಕ್ಕೆ ಹನಿ ನೀರಾವರಿ ಯೋಜನೆಯನ್ನು ಬಳಸಲಾಗಿದೆ.

ಬೃಹತ್ ಟ್ಯಾಂಕ್ ನಿರ್ಮಾಣ:
ಗುಡ್ಡದಲ್ಲಿನ ಎತ್ತರ ಭಾಗದಲ್ಲಿ ಭಾರೀ ಗಾತ್ರದ ಟ್ಯಾಂಕ್ ನಿರ್ಮಾಣ ಮಾಡಲಾಗಿದೆ. ೩೦ ಫೀಟ್ ಸುತ್ತಲತೆ ಹಾಗೂ ೨೫ ಫೀಟ್ ಆಳದ ಟ್ಯಾಂಟ್ ನಿರ್ಮಾಣ ಮಾಡಿ ಟ್ಯಾಂಕ್‌ನ ಸುತ್ತ ೧೪ ಫೀಟ್‌ನಷ್ಟು ಮಣ್ಣು ಹಾಕಲಾಗಿದೆ. ಎರಡು ಕೊಳವೆ ಬಾವಿಯಿಂದ ಟ್ಯಾಂಕ್‌ಗೆ ನೀರು ತುಂಬುವ ಕಾರ್ಯ ಮಾಡಲಾಗುತ್ತಿದೆ. ಪಿವಿಸಿ ಪೈಪಿನಲ್ಲಿ ಟ್ಯಾಂಕ್‌ನಿಂದ ಕೆಳಗೆ ಬರುವ ನೀರಿನ ಫಿಲ್ಟರ್‌ಗಾಗಿ ಎರಡು ಫಿಲ್ಟರ್ ಇಟ್ಟು ಶುದ್ಧ ನೀರನ್ನು ಅಡಕೆ ಗಿಡಗಳಿಗೆ ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಂದು ಗಿಡಕ್ಕೆ ಎರಡು ಡ್ರಿಪ್ ಅಳವಡಿಸಲಾಗಿದ್ದು ಒಂದು ಗಂಟೆಯಲ್ಲಿ ಎಂಟು ಲೀಟರ್ ನೀರು ಗಿಡಕ್ಕೆ ಬೀಳುತ್ತದೆ. ಅಷ್ಟೂ ನಾಲ್ಕು ಸಾವಿರ ಗಿಡಕ್ಕೆ ಕೇವಲ ಒಂದು ಗಂಟೆಯಲ್ಲಿ ನೀರು ಉಣಿಸಲಾಗುತ್ತದೆ. ವಿಶೇಷವೆಂದರೆ ಇದೇ ಹನಿ ನೀರಿನ ವ್ಯವಸ್ಥೆಯಲ್ಲಿ ೨೦ ಸಾವಿರ ಗಿಡಕ್ಕೆ ಏಕ ಕಾಲದಲ್ಲಿ ನೀರುಣಿಸಬಹುದು. ಮಾತ್ರವಲ್ಲಿ ಈ ಹನಿ ನೀರಾವರಿ ಯೋಜನೆಯಲ್ಲಿ ವೆಂಚರ್ ಅಳವಡಿಸಲಾಗಿದ್ದು. ಅದರಲ್ಲಿ ಗಿಡಗಳಿಗೆ ರಸಗೊಬ್ಬರವನ್ನು ಲಿಕ್ವಿಡ್ ರೂಪದಲ್ಲಿ ಪೂರೈಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟು ಸುಮಾರು ೨೦ ಲಕ್ಷ ರೂ.,ಖರ್ಚು ಮಾಡಲಾಗಿದೆ. ಈ ವ್ಯವಸ್ಥಿತ ತೋಟದ ಬಳಿಕ ಇನ್ನಷ್ಟು ಅಡಕೆ ತೋಟ ಮಾಡುವ ಯೋಜನೆ ಕೂಡಾ ಈ ಇವರಲ್ಲಿದೆ. ಶಿವಪ್ರಸಾದ್‌ರವರ ಕಾರ್ಯಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಕೋವಿಡ್‌ನಿಂದಾಗಿ ಲಾಕ್ ಡೌನ್ ಆದಾಗ ಗುಡ್ಡದಲ್ಲಿ ಅಡಿಕೆ ಕೃಷಿ ಮಾಡಿ ಸಾಧನೆ ಮಾಡಬೇಕೆನ್ನುವ ಕಾಯಕಕ್ಕೆ ಇಳಿದಿದ್ದೇನೆ. ಎಲ್ಲಾ ಕಡೆ ಅಡಿಕೆ ಕೃಷಿ ತೋಟಗಳು ನಿರ್ಮಾಣವಾಗುತ್ತಿರುವಾಗ ವಿಶೇಷ ಯೋಜನೆಯೊಂದಿಗೆ ಭವಿಷ್ಯದಲ್ಲಿ ನಾಲ್ಕೇ ವರ್ಷದಲ್ಲಿ ಉತ್ತಮ ಫಸಲು ಪಡೆಯುವ ಉದ್ದೇಶದಿಂದ ಗುಡ್ಡದಲ್ಲಿ ತೋಟ ಮಾಡುವ ಸಂಕಲ್ಪವನ್ನು ಅನುಷ್ಠಾನ ಮಾಡಲಾಗಿದೆ. ಈ ತೋಟಕ್ಕೆ ಮಾಡಿರುವ ಯೋಜನೆಗಳು ಮುಂದಕ್ಕೆ ನಿರ್ವಹಣೆ ವೆಚ್ಚ ಕಡಿಮೆಯಾಗಲಿದೆ. ಕೃಷಿ ಕ್ಷೇತ್ರದಲ್ಲಿ ಯುವಜನತೆ ಹೆಚ್ಚು ಹೆಚ್ಚು ತೊಡಗಿಸಿಕೊಂಡಾಗ ಸ್ವಾವಲಂಬಿ ಬದುಕಿನೊಂದಿಗೆ ಸದೃಢ ಭಾರತ ನಿರ್ಮಾಣಕ್ಕೂ ಸಹಕಾರಿಯಾಗಲಿದೆಶಿವಪ್ರಸಾದ್ ಆಚಾರ್ಯ ಇಜ್ಜಾವು, ಯುವ ಇಂಜಿನಿಯರ್

LEAVE A REPLY

Please enter your comment!
Please enter your name here