‘ಶಾಸಕ ಸಂಜೀವ ಮಠಂದೂರುರವರು ಸುಳ್ಳು ಹೇಳುವುದನ್ನು ನಿಲ್ಲಿಸಲಿ’ – ದ.ಕ ಜಿಲ್ಲಾ ಕಾಂಗ್ರೆಸ್ ಪತ್ರಿಕಾಗೋಷ್ಠಿ

0

ಪುತ್ತೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಽಕಾರದಲ್ಲಿ ಇರುವಾಗ ಸಚಿವರಾಗಿದ್ದ ರಮಾನಾಥ ರೈ ಹಾಗೂ ಪುತ್ತೂರು ಶಾಸಕರಾಗಿದ್ದ ಶಕುಂತಳಾ ಶೆಟ್ಟಿಯವರು ಬಿಳಿಯೂರು ಗ್ರಾಮದಲ್ಲಿ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ನೀರು ಒದಗಿಸಲು ಹಾಗೂ ಸಂಪರ್ಕ ರಸ್ತೆಗಾಗಿ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರಾತಿ ತಂದಿದ್ದರು. ಆದರೆ ಈಗಿನ ಶಾಸಕ ಸಂಜೀವ ಮಠಂದೂರುರವರು ಈ ಅಣೆಕಟ್ಟು ಯೋಜನೆ ಯಡಿಯೂರಪ್ಪರವರ ನೇತೃತ್ವದ ನಮ್ಮ ಸರಕಾರದ ಸಾಧನೆ ಎಂದು ಮಾಧ್ಯಮಗಳ ಮೂಲಕ ಹೇಳಿಕೆ ನೀಡಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಶಾಸಕ ಸಂಜೀವ ಮಠಂದೂರುರವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದು ಕಾಂಗ್ರೆಸ್ ಪಕ್ಷದ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ ರೈ ಮಠಂತಬೆಟ್ಟು ಮತ್ತು ಉಮಾನಾಥ ಶೆಟ್ಟಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭ ಮಾಡಿದ ಅನೇಕ ಯೋಜನೆಗಳನ್ನು ತಮ್ಮದೆಂದು ಬಿಂಬಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ರಾಜ್ಯದಲ್ಲಿ 2017-18ರಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಪಶ್ಚಿಮವಾಹಿನಿ ಯೋಜನೆ ಆಗಿನ ಸಿಎಂ ಸಿದ್ಧರಾಮಯ್ಯರವರ ಕನಸಿನ ಯೋಜನೆಯಾಗಿತ್ತು. ಅಲ್ಲಲ್ಲಿ ಸಣ್ಣ ಸಣ್ಣ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವ ಬದಲು ಬಿಳಿಯೂರಿನಲ್ಲಿ ಸಂಪರ್ಕ ರಸ್ತೆ ಜೊತೆ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ಸಿದ್ಧಪಡಿಸಲಾಗಿತ್ತು. ಅದಕ್ಕೆ ಅನುದಾನ ಮಂಜೂರು ಮಾಡಿ ಆಡಳಿತಾತ್ಮಕ ಅನುಮೋದನೆ ನೀಡಿದ್ದರು. ಈ ಯೋಜನೆಯಿಂದಾಗಿ ಪುತ್ತೂರು, ಬೆಳ್ತಂಗಡಿ, ಬಂಟ್ವಾಳಕ್ಕೆ ಸಂಪರ್ಕ ರಸ್ತೆ ಮತ್ತು ಹಲವು ಗ್ರಾಮಗಳಿಗೆ ಕೃಷಿಗೆ ಬೇಕಾದ ನೀರು ಬಳಸುವ ಯೋಜನೆಯೂ ಇದಾಗಿತ್ತು. ಆದರೆ ಈ ಯೋಜನೆಯನ್ನು ಇದೀಗ ಪುತ್ತೂರಿನ ಶಾಸಕ ಸಂಜೀವ ಮಠಂದೂರುರವರು ಬಿಜೆಪಿ ಸರಕಾರ ಮಾಡಿರುವಂತೆ ಬಿಂಬಿಸುತ್ತಿದ್ದಾರೆ. ಈ ಯೋಜನೆಯ ಉದ್ಘಾಟನೆ ಸಂದರ್ಭ ಕನಿಷ್ಠ ಸೌಜನ್ಯಕ್ಕಾದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ರಮನಾಥ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರನ್ನು ಜ್ಞಾಪಿಸಿಕೊಳ್ಳುವುದು ಉತ್ತಮ ಎಂದು ನಾವು ಮನವಿ ಮಾಡುತ್ತೇವೆ ಎಂದು ಮುರಳೀಧರ ರೈ ಮಠಂತಬೆಟ್ಟು ಹೇಳಿದರು.

ವಾಸ್ತವ ವಿಚಾರ ಮುಚ್ಚಿಟ್ಟಿದ್ದಾರೆ: ಮೂರು ತಾಲೂಕಿಗೆ ಕುಡಿಯಲು ನೀರು, ಕೃಷಿ ಮತ್ತು ಅಂತರ್‌ಜಲ ವೃದ್ಧಿಸುವ ನಿಟ್ಟಿನಲ್ಲಿ ಬಿಳಿಯೂರಿನಲ್ಲಿ ಅಣೆಕಟ್ಟು ನಿರ್ಮಾಣವಾಗಿದೆ ಎಂದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿಯವರು, ೨೦೧೭-೧೮ರಲ್ಲಿ ಶಾಸಕರ ಕ್ಷೇತ್ರಕ್ಕೆ ಎರಡು ಪಶ್ಚಿಮವಾಹಿನಿ ಯೋಜನೆ ಸಿದ್ಧಪಡಿಸಲು ತಿಳಿಸಿದ್ದರು. ಆಗಿನ ಶಾಸಕಿ ಶಕುಂತಳಾ ಶೆಟ್ಟಿಯವರು ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಽಸಿ ಪೆರ್ನೆ ಗ್ರಾ.ಪಂನ ಬಿಳಿಯೂರಿನ ಕಳೆಂಜದಲ್ಲಿ ಮತ್ತು ಬೆಳ್ಳಿಪ್ಪಾಡಿಯಿಂದ ಹಿರೇಬಂಡಾಡಿಗೆ ಸಂಪರ್ಕ ಮಾಡುವ ಕಟಾರ ಎಂಬ ಜಾಗದಲ್ಲಿ ಎರಡು ಯೋಜನೆಯ ಪ್ರಸ್ತಾವನೆ ಸಲ್ಲಿಸಿದ್ದರು. ಬಳಿಕ ಆಗಿನ ಉಸ್ತುವಾರಿ ಸಚಿವರಾಗಿದ್ದ ರಮಾನಾಥ ರೈಯವರು ತಮ್ಮ ಹುಟ್ಟೂರು ಪೆರ್ನೆಗೆ ಪ್ರಥಮ ಆದ್ಯತೆ ನೀಡಬೇಕೆಂಬ ಒತ್ತಾಯದ ಮೇರೆಗೆ ಬಿಳಿಯೂರಿನ ಯೋಜನೆಗೆ ಸರಕಾರದಿಂದ ಅನುಮೋದನೆ ಸಿಕ್ಕಿತ್ತು. 2018ರಲ್ಲಿ ಸರಕಾರ ಬದಲಾವಣೆ ಆಗುವ ಸಂದರ್ಭ ಕಾಮಗಾರಿಗೆ ರೂ.೨೮ ಕೋಟಿ ಅನುದಾನ ನೀಡಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು. ಆ ಬಳಿಕ ಬಂದ ಶಾಸಕರು ಮತ್ತು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯವರು ಗುದ್ದಲಿ ಪೂಜೆ ನೆರವೇರಿಸಿ ಕೆಲಸ ಆರಂಭಿಸಲು ಚಾಲನೆ ನೀಡಿದರು. ಆ ಸಂದರ್ಭ ಪಕ್ಷದ ನೆಲೆಯಲ್ಲಿ ಕಾರ್ಯಕ್ರಮ ಮಾಡಿದಂತಾಗಿದ್ದರೂ ಇತ್ತೀಚೆಗೆ ಕಾಮಗಾರಿ ಪರಿಶೀಲನೆಗೆ ಹೋದ ಶಾಸಕ ಸಂಜೀವ ಮಠಂದೂರುರವರು ಸಿದ್ದರಾಮಯ್ಯ ಅವರು ಮಾಡಿದ ಕಾರ್ಯವನ್ನು ಯಡಿಯೂರಪ್ಪ ಅವರು ಮಾಡಿರುವುದಾಗಿ ಹೇಳುವ ಮೂಲಕ ಸುಳ್ಳು ಹೇಳಿಕೆ ನೀಡಿದ್ದಾರೆ. ಶಾಸಕರಾದ ಮಠಂದೂರುರವರು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಪೆರ್ನೆ ಗ್ರಾ.ಪಂ ಅಧ್ಯಕ್ಷ ಸುನೀಲ್ ನೆಲ್ಸನ್ ಪಿಂಟೊ, ಕಾಂಗ್ರೆಸ್ ವಲಯ ಅಧ್ಯಕ್ಷ ಅಬ್ದುಲ್ ಶಾಫಿ, ಗ್ರಾ.ಪಂ ಸದಸ್ಯ ತನಿಯಪ್ಪ ಪೂಜಾರಿ ಉಪಸ್ಥಿತರಿದ್ದರು.

47 ಕೋಟಿ ರೂ., ಅನುದಾನ ನೀಡಿದ್ದು ಬಿಜೆಪಿ ಸರಕಾರ-ಮಠಂದೂರು

ಕಾಂಗ್ರೆಸ್ ಸರಕಾರ ಇದ್ದ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟೆಗೆ ರೂ.17 ಕೋಟಿಯ ಪ್ರಸ್ತಾವನೆ ಮಾತ್ರ ಮಾಡಿದ್ದರು. ಆದರೆ ಅವರು ಯಾವುದೇ ಅನುದಾನ ಒದಗಿಸಿಲ್ಲ. ಅವರ ಸರಕಾರದ ನಂತರ 1 ವರ್ಷ ನಾಲ್ಕು ತಿಂಗಳ ಬಳಿಕ ನಮ್ಮ ಸರಕಾರದ ಸಚಿವ ಮಾಧುಸ್ವಾಮಿಯವರು ದೊಡ್ಡ ಯೋಜನೆ ಮಾಡುವ ನಿಟ್ಟಿನಲ್ಲಿ ರೂ. 47ಕೋಟಿ ಅನುದಾನ ಬಿಡುಗಡೆ ಮಾಡಿದ್ದಲ್ಲದೆ ಶಿಲಾನ್ಯಾಸವನ್ನು ಮಾಡಿದ್ದಾರೆ. ಹಾಗಾಗಿ ಇದು ಕಾಂಗ್ರೆಸ್ ಮಾಡಿದ್ದಲ್ಲ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here