ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರಿಗೆ ಅಗೌರವ -ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

0

  • ಸೇವೆಯಿಂದ ಅಮಾನತು ಮಾಡುವ ತನಕ ಹೋರಾಟ ಮುಂದುವರಿಯಲಿದೆ – ಸೇಸಪ್ಪ ನೆಕ್ಕಿಲು
  • ಗೋಡ್ಸೆ ಆರಾಧಕರು, ಸಂಘ ಪರಿವಾರ ಅವಮಾನದ ದುರುದ್ದೇಶ ಹೊಂದಿದವರು – ಬಿ.ಎಮ್ ಭಟ್
  • ಬಿಜೆಪಿ, ಸಂಘಪರಿವಾರದ ಷಡ್ಯಂತ್ರ – ಮಜೀದ್ ಖಾನ್
  • ಅಂಬೇಡ್ಕರ್‌ಗೆ ಅಪಮಾನ ಮಾಡಿದರೆ ಜೀವಂತ ಬಿಡುವುದಿಲ್ಲ – ಗಿರಿಧರ ನಾಯ್ಕ
  • ಸಂವಿಧಾನದ ಬಗ್ಗೆ ಗೌರವವಿದ್ದರೆ ನ್ಯಾಯಾಧೀಶರನ್ನು ಜೈಲಿಗೆ ಹಾಕಿ – ಹೇಮನಾಥ ಶೆಟ್ಟಿ ಕಾವು
  • ಧ್ವಜಾರೋಹಣದ ಧ್ವಜ ಮಾಡಿಕೊಟ್ಟವರು ಅಂಬೇಡ್ಕರ್ ತಿಳಿದಿರಲಿ- ಈಶ್ವರಿ
  • ಅವಮಾನಿಸಿದವರಿಗೆ ಶಿಕ್ಷೆ ಆಗದಿದ್ದರೆ ದೊಡ್ಡ ಮಟ್ಟದ ಹೋರಾಟ – ಶ್ರೀಪ್ರಸಾದ್
  • ದೇಶ ದ್ರೋಹದ ಮಾತನ್ನಾಡಿದ ನ್ಯಾಯಾಧೀಶರ ಕೆಲಸ ವಜಾಗೊಳಿಸಬೇಕು – ಜಗದೀಶ್ ಕಜೆ

ಪುತ್ತೂರು: ರಾಯಚೂರಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರವನ್ನು ತೆಗೆಯಲು ತಾಕೀತು ಮಾಡಿ ಅವಮಾನ ಮಾಡಿದ ರಾಯಚೂರು ಜಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡರವರನ್ನು ಕೂಡಲೇ ಹುದ್ದೆಯಿಂದ ವಜಾಗೊಳಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಅಪತ್ಪಾಂಧವ ಟ್ರಸ್ಟ್, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಮತ್ತು ಋಣಮುಕ್ತ ಹೋರಾಟ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಫೆ. 3ರಂದು ಇಲ್ಲಿನ ತಾಲೂಕು ಅಡಿಳಿತ ಸೌಧದ ಬಳಿಯ ಅಮರ್‌ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.

ಅಂಬೇಡ್ಕರ್ ಆಪತ್ಬಾಂದವ ಟ್ರಸ್ಟ್‌ನ ಮುಖ್ಯಸ್ಥ ಜಗದೀಶ್ ಕಜೆ, ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ, ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಮ್ ಭಟ್, ದಲಿತ ಹಕ್ಕು ಹೋರಾಟ ಸಮಿತಿ ಕಾರ್ಯದರ್ಶಿ ಈಶ್ವರಿ, ಋನಮುಕ್ತ ಹೋರಾಟ ಸಮಿತಿಯ ನೆಬಿಸ್ಸಾ, ಜಿ.ಪಮ ಮಾಜಿ ಅಧ್ಯಕ್ಷ ಸೋಮನಾಥ ಅವರು ಅಂಬೇಡ್ಕರ್ ಅವರ ಭಾವ ಚಿತ್ರದ ಎದುರು ದೀಪ ಪ್ರಜ್ವಲಿಸಿ, ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಯನ್ನು ಉದ್ಘಾಟಿಸಿದರು. ಪ್ರತಿಭಟನೆಯ ಕೊನೆಯಲ್ಲಿ ಸಹಾಯಕ ಕಮೀಷನರ್ ಡಾ. ಯತೀಶ್ ಉಳ್ಳಾಲ್ ಅವರು ಪ್ರತಿಭಟನಾ ನಿರತರ ಬಳಿಗೆ ಬಂದು ಮನವಿ ಸ್ವೀಕರಿಸಿದರು.

ಸೇವೆಯಿಂದ ಅಮಾನತು ಮಾಡುವ ತನಕ ಹೋರಾಟ ಮುಂದುವರಿಯಲಿದೆ:
ದಲಿತ ಸಂಘರ್ಷ ಸಮಿತಿ ಮುಖಂಡ ಸೇಸಪ್ಪ ನೆಕ್ಕಿಲು ಅವರು ಪ್ರಧಾನ ಭಾಷಣದಲ್ಲಿ ಮಾತನಾಡಿ ತಂದೆಯ ಸ್ಥಾನದಲ್ಲಿ ಒಬ್ಬ ನ್ಯಾಯಾಧೀಶರಾಗಿ ಇವತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವ ಚಿತ್ರವಿರುವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಅದನ್ನು ತೆಗೆಸುವ ಕುರಿತು ತಾಕೀತು ಮಾಡುವುದಾದರೆ ಬಹುಶಃ ಈ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡವರು ನ್ಯಾಯಾಧೀಶರಾಗಿ ಮುಂದುವರಿಯಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ ನ್ಯಾಯಾಧೀಶರನ್ನು ವಜಾಗೊಳಿಸಿ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ದೇಶದಲ್ಲಿ ಯಾವುದೇ ಪ್ರಕರಣದ ನಡೆದಾಗ ಅದಕ್ಕೆ ದೇಶ ದ್ರೋಹದ ಸೆಕ್ಷನ್ ಹಾಕುವಂತೆ ಒತ್ತಾಯಿಸುತ್ತಾರೆ. ಆದರೆ ನ್ಯಾಯಾಧೀಶರ ಈ ವಿಚಾರಕ್ಕೆ ಯಾಕೆ ದೇಶ ದ್ರೋಹದ ಸೆಕ್ಷನ್ ಆಗುವುದಿಲ್ಲ ಎಂದು ಪ್ರಶ್ನಿಸಿದ ಅವರು ಸುಪ್ರೀಮ್ ಕೋರ್ಟ್ ಮಧ್ಯೆ ಪ್ರವೇಶಿಸಿ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಿ, ಅವರನ್ನು ಸೇವೆಯಿಂದ ವಜಾಗೊಳಿಸಬೇಕು. ಮತ್ತು ಅವರು ಇಲ್ಲಿನ ತನಕ ನ್ಯಾಯಾಧೀಶಯಾಗಿ ಸಂಪಾದಿಸಿದ ಸಂಪತ್ತನ್ನು ಮುಟ್ಟುಗೋಲು ಹಾಕಬೇಕು ಎಂದರು. ನ್ಯಾಯಾಧೀಶರನ್ನು ಅಮಾನತು ಮಾಡುವ ತನಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಗೋಡ್ಸೆ ಆರಾಧಕರು, ಸಂಘ ಪರಿವಾರ ಅವಮಾನದ ದುರುದ್ದೇಶ ಹೊಂದಿದವರು:
ಋಣಮುಕ್ತ ಹೋರಾಟ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಿ.ಎಮ್ ಭಟ್ ಅವರು ಮಾತನಾಡಿ ಇವತ್ತು ನ್ಯಾಯಾಧೀಶರನ್ನೇ ಟೀಕೆ ಮಾಡುವಂತಹ ದುಸ್ಥಿತಿ ಯಾಕೆ ಬಂತು ಎಂಬುದು ನಮಗೆ ಗೊತ್ತಿರಬೇಕು. ಅಂಬೇಡ್ಕರ್ ಅವರು ಸೃಷ್ಟಿ ಮಾಡಿದ ಸಂವಿಧಾನದ ಮೇಲೆ ಬಹಳ ದೊಡ್ಡ ರೀತಿಯಲ್ಲಿ ದ್ವೇಷ ಕಾರುವ ಹುನ್ನಾರ ನಡೆಯುತ್ತಿದೆ. ಅನಂತಕುಮಾರ್ ಹೆಗ್ಡೆ ಅವರು ನಾವು ಸಂವಿಧಾನವನ್ನು ಬದಲಾಯಿಸಲು ಬಂದವರು ಎಂದು ಹೇಳಿಕೆ ನೀಡಿದ ಸಂದರ್ಭದಲ್ಲೇ ಬಂಧಿಸಿ ಜೈಲಿಗೆ ಹಾಕುತ್ತಿದ್ದರೆ ಇವತ್ತು ಇಂತಹ ದುಸ್ಥಿತಿ ಬರುತ್ತಿಲಿಲ್ಲ. ಅಂಬೆಡ್ಕರ್‌ಗೆ ಅವಮಾನ ಮಾಡುವ ದುರದ್ದೇಶ ಹೊಂದಿದವರು ಗಾಂಧಿಯನ್ನು ಕೊಂದಂತಹ ಕೊಲೆಗಟುಕ ಗೋಡ್ಸೆ ಆರಾಧಕರು. ಸಂಘ ಪರಿವಾರದವರು ಮತ್ತು ಮನುವಾದಿ ಸಿದ್ಧಾಂತಿಗಳು ಎಂದ ಅವರು ಅನಾದಿಕಾಲದಿಂದ ಬಂದಿರುವ ಪರಂಪರೆಯನ್ನು ಉಳಿಸಲು ಅದಕ್ಕೆ ತಡೆಗೋಡೆ ಆಗಿರುವುದು ಅಂಬೇಡ್ಕರ್‌ನ ಸಿದ್ದಾಂತ ಮಾತ್ರ. ಹಾಗಾಗಿ ಅಂಬೇಡ್ಕರ್‌ನ್ನು ದೂರಿಕರಿಸುವ ಹುನ್ನಾರ ನಡೆಯುತ್ತಿದೆ ಎಂದರು.

ಬಿಜೆಪಿ, ಸಂಘಪರಿವಾರದ ಷಡ್ಯಂತ್ರ್ಯ:
ನ್ಯಾಯವಾದಿ ಮಜೀದ್ ಖಾನ್ ಅವರು ಮಾತನಾಡಿ ಬಿಜೆಪಿ ಮತ್ತು ಸಂಘಪರಿವಾರದ ಸರಕಾರ ಬಂದ ಬಳಿಕ ಅಂಬೇಡ್ಕರ್ ತಂದಂತಹ ಸಮುದಾಯವನ್ನು ಅವಮಾನಿಸುವ ವ್ಯವಸ್ಥೆ ಬಹಳಷ್ಟು ಜಾಸ್ತಿಯಾಗಿದೆ. ಕೇವಲ ದಲಿತರನ್ನು, ಅಲ್ಪಸಂಖ್ಯಾತರನ್ನು ಮತ್ತು ಶೋಷಿತ ವರ್ಗದವರನ್ನು ಗುರಿಯಾಗಿಸಿಕೊಂಡು ಈ ಎಲ್ಲಾ ಕೃತ್ಯ ನಡೆಸಲಾಗುತ್ತಿದೆ. ಇವತ್ತು ಕೇವಲ ಅಂಬೇಡ್ಕರ್ ಭಾವ ಚಿತ್ರದ ವಿಚಾರ ಮಾತ್ರವಲ್ಲ ಬೆಂಗಳೂರಿನ ಶಾಲೆಯೊಂದರಲ್ಲಿ ಈ ದೇಶಕ್ಕೆ ಸಂವಿಧಾನ ಅಪ್ರಸ್ತುತವಾಗಿದೆಯೇ ಎಂದು ಮಕ್ಕಳ ಮೇಲೆ ಪ್ರಶ್ನೆ ಹೇರುವ ಮೂಲಕ ಮಕ್ಕಳ ಬುದ್ದಿಯ ಮನಸ್ಥಿತಿಯ ಮೇಲೆ ಪರಿಣಾಮ ಬೀರುವ ದುಸ್ತಿತಿಯನ್ನು ಮಾಡಲಾಗಿದೆ. ಆ ಮೂಲಕ ದಲಿತ ಸಮುದಾಯಕ್ಕೆ ಅಪಮಾನ ಮಾಡಲಾಗುತ್ತಿದೆ ಎಂದ ಅವರು ಇವತ್ತು ಅಂಬೇಡ್ಕರ್ ಅವರಿಗೆ ಆದ ಅಪಮಾನದಿಂದಾಗಿ ಮುಂದೆ ಕೋರ್ಟುಗಳಿಗೆ ಬರುವ ಸಾಮಾನ್ಯ ದೂರುಗಳಿಗೂ ಅಪಮಾನ ಎಸಗಿದ ನ್ಯಾಯಾಧೀಶರು ಜೀವಾವಧಿ ಶಿಕ್ಷೆ ಕೊಡುತ್ತಾರೆಂಬ ಭಯವಿದೆ.

ಅಂಬೇಡ್ಕರ್‌ಗೆ ಅಪಮಾನ ಮಾಡಿದರೆ ಜೀವಂತ ಬಿಡುವುದಿಲ್ಲ:
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಗಿರಿಧರ ನಾಯ್ಕ ಅವರು ಮಾತನಾಡಿ ನ್ಯಾಯಾಧೀಶರೆ ಆಗಲಿ ಪ್ರಧಾನ ಮಂತ್ರಿಯೇ ಆಗಲಿ ನಮ್ಮ ಅಂಬೇಡ್ಕರ್‌ಗೆ ಅಪಮಾನ ಮಾಡಿದರೆ ನಾವು ಜೀವಂತವಾಗಿ ಅವರನ್ನು ಬಿಡುವುದಿಲ್ಲ. ಸಂವಿಧಾನ ಬರೆದ ಒಬ್ಬ ವ್ಯಕ್ತಿಗೆ ನಮ್ಮ ನ್ಯಾಯಾಧೀಶರು ಇಂತಹ ಅವಮಾನ ಮಾಡಿದ್ದಾರೆ ಎಂದಾದರೆ ಅವರಿಗೆ ನ್ಯಾಯಾಧೀಶರಾಗಲು ಯೋಗ್ಯತೆ ಇಲ್ಲ ಎಂದು ಹೇಳಬಹುದು. ನ್ಯಾಯ ಕೊಡುವ ನ್ಯಾಯಾಧೀಶರು ಮೂರ್ಖತನ ಕೆಲಸ ಮಾಡುತ್ತಾರೆ ಎಂದಾದರೆ ಅವರನ್ನು ಕೂಡಲೆ ಅಮಾನತು ಮಾಡಬೇಕು. ಅಂಬೇಡ್ಕರ್ ಎಂದರೆ ಅವರು ನಮಗೆ ದೇವರಿದ್ದಂತೆ ಅವರನ್ನು ಪ್ರತಿ ನಿತ್ಯ ಪೂಜೆ ಮಾಡುತ್ತೇವೆ. ಅಂತಹ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವ ಗೌಡರನ್ನು ಇಲ್ಲಿ ನೆಲಸಮ ಮಾಡುವ ಶಕ್ತಿ ಬೇಕು. ನಾವು ಪರಿಶಿಷ್ಟ, ಜಾತಿ ಪರಿಶಿಷ್ಟ ಪಂಗಡ ಎಂದು ಹೇಳಿದರೆ ನಮ್ಮನ್ನು ದೂಷಣೆ ಮಾಡಬೇಕಾಗಿಲ್ಲ ಎಂದರು.

ಸಂವಿಧಾನದ ಬಗ್ಗೆ ಗೌರವವಿದ್ದರೆ ನ್ಯಾಯಾಧೀಶರನ್ನು ಜೈಲಿಗೆ ಹಾಕಿ:
ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ ಅಂಬೇಡ್ಕರ್‌ರವರನ್ನು ತಿಳಿಯದಿದ್ದರೆ ದೇಶದ ಪ್ರಜೆಯಾಗಿ ಬದುಕುವ ಹಕ್ಕು ಯಾರಿಗೂ ಇರುವುದಿಲ್ಲ. ಡಾ. ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದಾಗಿ ಇವತ್ತು ನಾವು ದೇಶದ ಪ್ರಸಕ್ತ ಪರಿಸ್ಥಿತಿಯಲ್ಲಿ ನಾವೊಂದು ಮನುಷ್ಯರಾಗಿ ಬದುಕುತ್ತಿದ್ದೇವೆ. ಬಿ.ಆರ್ ಅಂಬೇಡ್ಕರ್ ಅವರ ಮೂಲಕ ನಾವು ದೇವರನ್ನು ನೇರವಾಗಿ ಕಾಣುತ್ತಿದ್ದೇವೆ ಎಂದ ಅವರು ಆದರೆ ಇವತ್ತು ದೇವತಾ ಸ್ವರೂಪದ ಅಂಬೇಡ್ಕರ್ ಅವರ ಪರಿಚಯ ಇಲ್ಲದ ವ್ಯಕ್ತಿ ನ್ಯಾಯದೀಶ ಆಗಿರುವುದು ದುರಂತ. ಅವರಿಗೆ ತನ್ನ ತಂದೆಯ ಪರಿಚಯವೂ ಇರಲು ಸಾಧ್ಯವಿಲ್ಲ. ಸಂವಿಧಾನ ಬದಲಾಯಿಸುವ ವಿಚಾರಕ್ಕೆ ಕೈ ಹಾಕುವವರನ್ನು ಜೈಲಿಗೆ ಅಥವ ಕಾಡಿನಲ್ಲಿ ಬಿಡಬೇಕು. ಸರಕಾರಕ್ಕೆ ಸಂವಿಧಾನದ ಬಗ್ಗೆ ಗೌರವ ಇರುತ್ತಿದ್ದರೆ ನಮ್ಮ ಹೋರಾಟಕ್ಕೂ ಮುಂದೆ ನ್ಯಾಯಾಧೀಶರನ್ನು ಜೈಲಿಗೆ ಹಾಕಬೇಕಾಗಿತ್ತು ಎಂದರು.

ಧ್ವಜಾರೋಹಣದ ಧ್ವಜ ಮಾಡಿಕೊಟ್ಟವರು ಅಂಬೇಡ್ಕರ್ ತಿಳಿದಿರಲಿ:
ದಲಿತ ಹಕ್ಕು ಸಮಿತಿ ಜಿಲ್ಲಾ ಕಾರ್ಯದರ್ಶಿ ಈಶ್ವರಿ ಅವರು ಮಾತನಾಡಿ ಅಂಬೇಡ್ಕರ್ ಅವರ ಆಚಾರ, ನಡೆ,ನುಡಿ ನಮಗೆ ಅದರ್ಶವಾಗಿರಬೇಕು. ಇವತ್ತು ಅಂಬೇಡ್ಕರ್ ಹೆಸರಿನಲ್ಲಿ ಅನೇಕ ಸಂಘಟನೆಗಳು ಹುಟ್ಟಿ ಕೊಳ್ಳುತ್ತವೆ. ಆದರೆ ಮೊದಲು ಅಂಬೇಡ್ಕರ್ ಅವರು ನಮಗೆ ತೋರಿಸಿದ ದಾರಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಇವತ್ತು ಬ್ರಾಹ್ಮಣ ವಿದ್ಯಾರ್ಥಿಗೆ ಸೀಟ್ ಸಿಗಲಿಲ್ಲ ಎಂದಾಗ ಅಂಬೆಡ್ಕರ್ ಬರೆದ ಮೀಸಲಾತಿಯಿಂದ ನನಗೆ ಕಲಿಯಲು ಅವಕಾಶ ಸಿಗಲಿಲ್ಲ ಎಂದು ಆತ ಸ್ಪಷ್ಟವಾಗಿ ಬುಟ್ಟು ಮಾಡಿ ತೋರಿಸುತ್ತಾನೆ. ಆದರೆ ಅದೇ ನಮ್ಮ ಸಮುದಾಯ ಸೀಟ್‌ಗಾಗಿ ದೈವ, ದೇವರ ಮೊರೆ ಹೋಗುತ್ತಾರೆ. ಇಲ್ಲಿ ಹೋಗುವುದು ಬೇಡ ಎಂದು ಹೇಳುವುದಿಲ್ಲ. ಆದರೆ ಸಂವಿಧಾನ ಇಲ್ಲದೇ ಇರುತ್ತಿದ್ದರೆ ನಮಗೆ ಯಾವುದೇ ಸೀಟು ಸಿಗುತ್ತಿರಲಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಾವು ದೈವ ದೇವರಿಗೆ ಹರಕೆ ಮಾಡುವ ಬದಲು ನಮಗೆ ಸಂವಿಧಾನ ಕೊಟ್ಟ ಹಕ್ಕನ್ನು ಚಲಾಯಿಸಬೇಕೆಂದ ಅವರು ರಾಯಚೂರಿನಲ್ಲಿ ಧ್ವಜಾರೋಹಣ ಮಾಡಬೇಕಾದರೆ ಅಲ್ಲಿ ಅಂಬೇಡ್ಕರ್ ಭಾವ ಚಿತ್ರ ತೆಗೆಯಲು ಹೇಳಿರುವ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರಿಗೆ ಧ್ವಜರೋಹಣ ಮಾಡುವ ಧ್ವಜವನ್ನು ಮಾಡಿ ಕೊಟ್ಟವರು ಅಂಬೇಡ್ಕರ್ ಎಂದು ತಿಳಿದಿರಲಿ ಎಂದ ಅವರು ಇವತ್ತು ಶೋಷಿತ ಸಮಾಜ ಮೇಲೆ ಬರಬಾರದು ಎಂಬ ಮನಸ್ಥಿತಿ ಉಳ್ಳವರು ಈ ಆಟವನ್ನು ಆಡಿಸುತ್ತಿದ್ದಾರೆ ಎಂದರು.

ಅಮಾನಿಸಿದವರಿಗೆ ಶಿಕ್ಷೆ ಆಗದಿದ್ದರೆ ದೊಡ್ಡ ಮಟ್ಟದ ಹೋರಾಟ:
ಯುವ ಕಾಂಗ್ರೆಸ್ ನಾಯಕ ಶ್ರೀಪ್ರಸಾದ್ ಅವರು ಮಾತನಾಡಿ ಈ ಸಮಾಜದಲ್ಲಿ ಎಲ್ಲಾ ರೀತಿಯಿಂದ ತುಳಿತಕ್ಕೊಳಗಾದ ಅಂಬೇಡ್ಕರ್ ಅವರು ಸಮಾಜದಲ್ಲಿ ಬದಲಾವಣೆಯನ್ನು ತಂದು ದೇಶಕ್ಕೆ ಸಂವಿಧಾನ ಕೊಟ್ಟು ಶಕ್ತಿಯಾಗಿ ಸಮಾಜದಲ್ಲಿ ಬೆಳಗಿದ್ದಾರೆ. ಇವತ್ತು ಒಬ್ಬ ದೇಶದ ಪ್ರಜೆ ಅಂಬೇಡ್ಕರ್‌ಗೆ ಅವಮಾನ ಮಾಡುತ್ತಾನೆ ಎಂದಾದರೆ ಅವನಷ್ಟು ದೊಡ್ಡ ದೇಶದ್ರೋಹಿ ಸಮಾಜದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ನ್ಯಾಯಾಧೀಶರಿಗೆ ಕೊಡುವಂತಹ ಶಿಕ್ಷೆ ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ಈ ಸಮಾಜದಲ್ಲಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುವವರಿಗೆ ಪಾಠವಾಗಬೇಕು ಎಂದು ಹೇಳಿದ ಅವರು ಇವತ್ತು ಬೇಲಿಯೇ ಎದ್ದು ಹೊಲ ಮೇಯುತ್ತದೆ ಎಂದಾರೆ ಮುಂದೆ ಜನಸಾಮಾನ್ಯರ ಪಾಡೇನು ಆಗಬೇಕೆಂದು ಪ್ರಶ್ನಿಸಿದರು. ಅಂಬೇಡ್ಕರ್‌ಗೆ ಅವಮಾನ ಮಾಡಿದವರಿಗೆ ಶಿಕ್ಷೆ ಆಗದಿದ್ದರೆ ಅವರನ್ನು ರಕ್ಷಣೆ ಮಾಡುವವರ ವಿರುದ್ದ ದೊಡ್ಡ ಮಟ್ಟದ ಹೋರಾಟ ಮಾಡೋಣ. ಅದಕ್ಕೆ ನಾವು ಬೆಂಬಲ ಕೊಡುತ್ತೇವೆ ಎಂದರು.

ದೇಶ ದ್ರೋಹದ ಮಾತನ್ನಾಡಿದ ನ್ಯಾಯಾಧೀಶರ ಕೆಲಸ ವಜಾಗೊಳಿಸಬೇಕು:
ಪ್ರತಿಭಟನೆಯ ಸಂಯೋಜಕ ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್‌ನ ಮುಖ್ಯಸ್ಥ ಜಗದೀಶ್ ಕಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂವಿಧಾನದಡಿಯಲ್ಲಿ ಶಿಕ್ಷಣ ಪಡೆದು ಸಂವಿಧಾನದಡಿಯಲ್ಲೇ ನ್ಯಾಯಾಧೀಶರಾಗಿ ಸಂವಿಧಾನದಡಿಯಲ್ಲೇ ನೊಂದವರಿಗೆ ನ್ಯಾಯ ಒದಗಿಸುವ ನ್ಯಾಯಾಧೀಶರು, ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ರವರಿಗೆ ಅಗೌರವ ತೋರಿದ್ದಾರೆ ಎಂದರೆ ಇದು ಅಕ್ಷಮ್ಯ ಅಪರಾಧ. ಆದ್ದರಿಂದ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರ ಕೂಡಲೇ ಅವರನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಅಂಬೇಡ್ಕರ್ ಆಪತ್ಭಾಂದವ ಟ್ರಸ್ಟ್‌ನ ಅಧ್ಯಕ್ಷ ರಾಜು ಹೊಸ್ಮಠ ಅವರು ಸಹಾಯಕ ಕಮಿಷನರ್ ಅವರಿಗೆ ನೀಡುವ ಮನವಿಯ ಪ್ರತಿಯನ್ನು ಸಭೆಯಲ್ಲಿ ಮಂಡಿಸಿದರು. ಸಹಾಯಕ ಕಮೀಷನರ್ ಅವರು ಮನವಿಯನ್ನು ಸ್ವೀಕರಿಸಿದರು. ಕೆ ಪಿ ಆನಂದ ಪಡುಬೆಟ್ಟು ಅವರು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ಸೋಮನಾಥ, ಋಣಮುಕ್ತ ಹೋರಾಟ ಸಮಿತಿ ಮಂಜುನಾಥ, ಹಮೀದ್, ನೆಬ್ಬಿಸ, ರಾಮಣ್ಣ ವಿಟ್ಲ, ಕೃಷ್ಣಪ್ಪ, ಬಾಬು ಸವಣೂರು, ವಸಂತ, ರಾಜು, ಸಂಜೀವ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here