ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ

0

  • ಭಕ್ತಿ ಭಾವದ ಆರಾಧನೆಯಿಂದ ಮನಶಾಂತಿ ಸಾಧ್ಯ – ಸುಬ್ರಹ್ಮಣ್ಯ ಶ್ರೀ

ಕಾಣಿಯೂರು: ಧಾರ್ಮಿಕವಾಗಿ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಅನೇಕ ದೈವಿಕ ಕಾರ್ಯಕ್ರಮಗಳು, ನಮ್ಮ ಜೀವನದಲ್ಲಿ ಅಳವಡಿಸಿಕೊಂಡ ನಂಬಿಕೆಗಳು ನಮ್ಮ ಪೀಳಿಗೆಯ ಸುಸಂಸ್ಕೃತ ಜೀವನದ ಪುನರುತ್ಥಾನಕ್ಕೆ ನಾಂದಿಯಾಗಲಿದೆ. ನಮ್ಮ ಹಿರಿಯರ ಅನೇಕ ಸಾಂಪ್ರಾದಯಿಕ ಕಟ್ಟು ಪಾಡು, ರೀತಿ ನಿಯಮಗಳು ಇವತ್ತಿನ ವೈಜ್ಞಾನಿಕ ಜೀವನಕ್ಕೆ ಶ್ರೀರಕ್ಷೆಯಾಗಲಿದ್ದು, ಮನಪೂರ್ವಕ ನಂಬಿಕೆಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಳ್ಳಬೇಕು ಎಂದು ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಅವರು ಫೆ 3ರಂದು ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ವತಿಯಿಂದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದಲ್ಲಿ ನಡೆದ 46ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಆಶೀರ್ವಚನ ನೀಡಿದರು. ಸತ್ಯನಾರಾಯಣ ದೇವರ ಆರಾಧನೆ ಮಾಡುವುದರಿಂದ ಸಕಲ ಫಲಗಳು ಪ್ರಾಪ್ತಿಯಾಗಿ ಬದುಕಿನ ಉನ್ನತ್ತಿಯಾಗುತ್ತದೆ. ಸಾಮೂಹಿಕ ಭಜನೆಯಿಂದ, ಭಕ್ತಿ ಭಾವದ ಆರಾಧನೆಯಿಂದ ಮನಶಾಂತಿ ಸಿಗುತ್ತದೆ. ಧರ್ಮದ ಮೇಲೆ ನಂಬಿಕೆ ಇದ್ದಾಗ ಆಚಾರ ವಿಚಾರಗಳು ಉಳಿಯಲು ಸಾಧ್ಯ. ಧರ್ಮದ ಜೊತೆಗೆ ನಮ್ಮ ಜೀವನವನ್ನು ಶಾಸ್ವತವಾಗಿ ಜೋಡಿಸಿಕೊಂಡಾಗ ಜೀವನದಲ್ಲಿ ನೆಮ್ಮದಿಯನ್ನು ಕಾಣಲು ಸಾಧ್ಯ. ದೇವರ ಮೇಲೆ ಭಕ್ತಿಯಿದ್ದಾಗ, ದೇವರ ಆದೇಶವನ್ನು ಪಾಲನೆ ಮಾಡುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನ ದೊರೆಯಲು ಸಾಧ್ಯವಾಗುತ್ತದೆ ಎಂದರು. ಅರ್ಚಕರಾದ ಪದ್ಮನಾಭ ಭಟ್ ಕಟ್ಟತ್ತಾರು ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ ವಿಧಾನ ನೆರವೇರಿತು. ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಮಾಜಿ ಅಧ್ಯಕ್ಷ ಪರಮೇಶ್ವರ ಅನಿಲ ಸ್ವಾಗತಿಸಿ, ಗೌರವಾಧ್ಯಕ್ಷ ಚಿದಾನಂದ ಉಪಾಧ್ಯಾಯ ಕಲ್ಪಡ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಭಜನಾ ಮಂಡಳಿಯ ಪದಾಧಿಕಾರಿಗಳು ಸ್ವಾಮೀಜಿಯವರಿಗೆ ಫಲವಸ್ತು ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ಶ್ರಿ ಲಕ್ಷ್ಮೀನರಸಿಂಹ ದೇವರ ಪೀಠವನ್ನು ಕೊಡುಗೆಯಾಗಿ ನೀಡಿದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ಸದಸ್ಯರಾದ ಹರೀಶ್ ಮುಗರಂಜ ಇವರನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅಭಿನಂದಿಸಿದರು. ಭಜನಾ ಮಂಡಳಿಯ ಅಧ್ಯಕ್ಷರಾದ ವಾಸುದೇವ ನಾಯ್ಕ್ ತೋಟ, ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಲಕ್ಷ್ಮಣ ಗೌಡ ಮುಗರಂಜ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

LEAVE A REPLY

Please enter your comment!
Please enter your name here