ಫೆ.11: ನೆಲ್ಯಾಡಿಯಲ್ಲಿ ಪುತ್ತೂರು ತಾ| ರಬ್ಬರ್ ಬೆಳೆಗಾರರ ಮಾರಾಟ, ಸಂಸ್ಕರಣ ಸಹಕಾರಿ ಸಂಘದ ಉಪಖರೀದಿ ಕೇಂದ್ರ ಉದ್ಘಾಟನೆ

0

ನೆಲ್ಯಾಡಿ: ರಬ್ಬರ್ ಬೆಳೆಗಾರರ ಪಾಲಿನ ಆಶಾ ಕಿರಣವಾಗಿರುವ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ತನ್ನ ಸದಸ್ಯರ ಅನುಕೂಲಕ್ಕಾಗಿ ನೆಲ್ಯಾಡಿ ಪೇಟೆಯಲ್ಲಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸೈಂಟ್ ಮೇರಿಸ್ ವಾಣಿಜ್ಯ ಸಂಕೀರ್ಣದಲ್ಲಿ ಆರಂಭಿಸಿರುವ ಉಪಖರೀದಿ ಕೇಂದ್ರ ಫೆ.11ರಂದು ಬೆಳಿಗ್ಗೆ ಶುಭಾರಂಭಗೊಳ್ಳಲಿದೆ.

1989ರಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಂಡಿರುವ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ನೆಲ್ಯಾಡಿಯಲ್ಲಿ ಮುಖ್ಯ ಕಚೇರಿ ಹೊಂದಿದ್ದು ಕಡಬ, ಪುತ್ತೂರು ಹಾಗೂ ಈಶ್ವರಮಂಗಲದಲ್ಲಿ ಶಾಖೆ ಹೊಂದಿದೆ. ಅಲ್ಲದೇ ಕೆಯ್ಯೂರು ಹಾಗೂ ಇಚ್ಲಂಪಾಡಿಯಲ್ಲಿ ರಬ್ಬರ್ ಖರೀದಿ ಕೇಂದ್ರ ಹೊಂದಿದೆ. ಇದೀಗ ತನ್ನ ಸದಸ್ಯ ರಬ್ಬರ್ ಬೆಳೆಗಾರರ ಅನುಕೂಲಕ್ಕಾಗಿ ನೆಲ್ಯಾಡಿ ಪೇಟೆಗೆ ಹೊಂದಿಕೊಂಡಿರುವ, ನೆಲ್ಯಾಡಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸೈಂಟ್ ಮೇರೀಸ್ ಕಾಂಪ್ಲೆಕ್ಸ್‌ನಲ್ಲಿ ನೆಲ್ಯಾಡಿ ಉಪಖರೀದಿ ಕೇಂದ್ರ ಆರಂಭಿಸುತ್ತಿದೆ.

1989ರಲ್ಲಿ ಸ್ಥಾಪನೆ:
ನೆಲ್ಯಾಡಿ ಭಾಗದಲ್ಲಿ ಅತೀ ಹೆಚ್ಚು ರಬ್ಬರ್ ಬೆಳೆಗಾರರಿದ್ದಾರೆ. ರಬ್ಬರ್ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಹಾಗೂ ರಬ್ಬರ್ ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ 1989ರಲ್ಲಿ ನೆಲ್ಯಾಡಿಯನ್ನು ಕೇಂದ್ರವಾಗಿಟ್ಟುಕೊಂಡು ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಆರಂಭಿಸಲಾಯಿತು. ಹಿರಿಯ ಸಹಕಾರಿ ಡಾ.ಕೆ.ಎನ್.ವಿ.ಪಿಳ್ಳೈಯವರು ಇದರ ಸ್ಥಾಪಕ ಅಧ್ಯಕ್ಷರು. 1989ರಿಂದ 1995ರ ತನಕ ಸಂಘದ ಅಧ್ಯಕ್ಷರಾಗಿದ್ದ ಪಿಳ್ಳೈಯವರು ಪುತ್ತೂರು ಹಾಗೂ ಕಡಬದಲ್ಲಿ ಸಂಘದ ಶಾಖೆ ಆರಂಭಿಸಿದ್ದರು. ಆ ಬಳಿಕ ಪಾಂಡುರಂಗ ಹೆಗ್ಡೆ, ಮತ್ತೆ ಡಾ.ಕೆ.ಎನ್.ವಿ.ಪಿಳ್ಳೈ, ನಂತರ ಕೆ.ಅಜಿತ್‌ಕುಮಾರ್‌ರವರು ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2010ರಿಂದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಅಧ್ಯಕ್ಷರಾಗಿದ್ದು ಇವರ ಅವಧಿಯಲ್ಲಿ ಈಶ್ವರಮಂಗಲದಲ್ಲಿ ಶಾಖೆ ಹಾಗೂ ಇಚ್ಲಂಪಾಡಿ, ಕೆಯ್ಯೂರಿನಲ್ಲಿ ರಬ್ಬರ್ ಖರೀದಿ ಕೇಂದ್ರ ಆರಂಭಗೊಂಡಿದೆ. ಸಂಘವು ಕಳೆದ 33 ವರ್ಷಗಳಿಂದ ರಬ್ಬರ್ ಬೆಳೆಗಾರರ ಸಂಕಟ ಹಾಗೂ ಸಂತಸದ ಸಂದರ್ಭದಲ್ಲಿ ರಬ್ಬರ್ ಬೆಳೆಗಾರರಿಗೆ ಆಧಾರವಾಗಿದೆ. ಬೆಳೆಗಾರರಿಂದ ರಬ್ಬರ್ ಖರೀದಿಸಿ ಅದನ್ನು ಎಂಆರ್‌ಎಫ್ ಸೇರಿದಂತೆ ಇತರೇ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ. ಕಚ್ಚಾ ರಬ್ಬರ್ ಖರೀದಿ ಜೊತೆಗೆ ರಬ್ಬರ್ ಕೃಷಿ ಸಾಮಾಗ್ರಿಗಳ, ರಾಸಾಯನಿಕಗಳ ಮಾರಾಟ, ಕಡಿಮೆ ಬಡ್ಡಿಯಲ್ಲಿ ಚಿನ್ನಾಭರಣ ಈಡಿನ ಸಾಲ ಸೌಲಭ್ಯ, ರಬ್ಬರ್ ರೋಲರ್ ಖರೀದಿಗೆ ಸಾಲ, ಆಕರ್ಷಕ ಬಡ್ಡಿದರದಲ್ಲಿ ಅವಧಿ ಠೇವಣಿ ಸ್ವೀಕಾರ, ಎಲ್ಲಾ ರೀತಿಯ ಬ್ಯಾಂಕಿಂಗ್ ವ್ಯವಹಾರಗಳನ್ನೂ ತನ್ನ ಸದಸ್ಯರಿಗೆ ನೀಡುತ್ತಿದೆ. ಸಂಘವು ಈಗ ಆರ್ಥಿಕವಾಗಿ ಬಲಿಷ್ಠವಾಗಿ ಬೆಳೆದಿದ್ದು ರಬ್ಬರ್ ಬೆಳೆಗಾರರ ಪಾಲಿನ ಆಶಾಕಿರಣವಾಗಿದೆ. ಕೋವಿಡ್ ಸಂಕಷ್ಟ ಕಾಲದಲ್ಲೂ ರಬ್ಬರ್ ಖರೀದಿಸಿ ತನ್ನ ಸದಸ್ಯ ಬೆಳೆಗಾರರ ಹಿತ ಕಾಪಾಡಿರುವುದು ಸಂಘದ ವಿಶೇಷತೆಯಾಗಿದೆ. ಇದೀಗ ತನ್ನ ರಬ್ಬರ್ ಬೆಳೆಗಾರರ ಅನುಕೂಲಕ್ಕಾಗಿ ನೆಲ್ಯಾಡಿ ಪೇಟೆಯಲ್ಲಿ ಉಪಖರೀದಿ ಕೇಂದ್ರ ಆರಂಭಿಸಿದೆ. ಇಲ್ಲಿ ಕಚ್ಚಾ ರಬ್ಬರ್ ಖರೀದಿಯ ಜೊತೆಗೆ ಮೈಲುತುತ್ತು, ಗಮ್, ಪ್ಲಾಸ್ಟಿಕ್ ಸೇರಿದಂತೆ ರಬ್ಬರ್ ಬೆಳೆಗಾರರಿಗೆ ಬೇಕಾದ ಎಲ್ಲಾ ರೀತಿಯ ಸಲಕರಣೆ, ರಾಸಾಯನಿಕ ಗೊಬ್ಬರ ಸಿಗಲಿದೆ.

ಆಡಳಿತ ಮಂಡಳಿ:
ತಲಾ 5 ವರ್ಷದಂತೆ 2 ಅವಧಿಯಲ್ಲಿ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಜಿಲ್ಲೆಯ ಪ್ರಮುಖ ಸಹಕಾರಿ ಧುರೀಣರಲ್ಲಿ ಒಬ್ಬರು, ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರೂ ಆಗಿರುವ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಇದೀಗ 3ನೇ ಅವಧಿಯಲ್ಲೂ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಅವಧಿಯಲ್ಲಿ ಈಶ್ವರಮಂಗಲದಲ್ಲಿ ಶಾಖೆ, ಕೆಯ್ಯೂರು, ಇಚ್ಲಂಪಾಡಿಯಲ್ಲಿ ರಬ್ಬರ್ ಖರೀದಿ ಕೇಂದ್ರ ಆರಂಭಗೊಂಡಿದ್ದು ಇದೀಗ ನೆಲ್ಯಾಡಿಯಲ್ಲಿ ಉಪ ಖರೀದಿ ಕೇಂದ್ರ ಆರಂಭಗೊಳ್ಳುತ್ತಿದೆ. ಕಳೆದ 12 ವರ್ಷಗಳಿಂದ ಇವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು ಸಂಘ ಆರ್ಥಿಕವಾಗಿ ಬಲಿಷ್ಠಗೊಳ್ಳುವಂತೆ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ರಾಯ್ ಅಬ್ರಹಾಂ, ನಿರ್ದೇಶಕರುಗಳಾಗಿ ಜಾರ್ಜ್‌ಕುಟ್ಟಿ ಉಪದೇಶಿ, ಎನ್.ವಿ.ವ್ಯಾಸ, ರಮೇಶ್ ಕಲ್ಪುರೆ, ಸುಭಾಷ್ ನಾಯಕ್, ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲ್ಯಾನ್, ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಬೈರ ಮುಗೇರರವರು ಸೇವೆ ಸಲ್ಲಿಸುತ್ತಿದ್ದಾರೆ. ಶಶಿಪ್ರಭಾ ಕೆ.,ರವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.

ಪ್ರಸಾದ್‌ ಕೌಶಲ್‌ ಶೆಟ್ಟ

ರಬ್ಬರ್ ಬೆಳೆಗಾರರ ಅನುಕೂಲಕ್ಕೆ ಉಪ ಖರೀದಿ ಕೇಂದ್ರ;
ಸಂಘ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ. ಇದಕ್ಕೆಲ್ಲಾ ಸಂಘದ ಸದಸ್ಯರೇ ಪ್ರಮುಖ ಕಾರಣರಾಗಿದ್ದಾರೆ. ಸಂಘವು ರಬ್ಬರ್ ಬೆಳೆಗಾರರಿಂದ ಕಚ್ಚಾ ರಬ್ಬರ್ ಖರೀದಿಯ ಜೊತೆಗೆ ಬೆಳೆಗಾರರಿಗೆ ಬೇಕಾದ ರಬ್ಬರ್ ಕೃಷಿ ಸಾಮಾಗ್ರಿ, ರಾಸಾಯನಿಕಗಳ ಪೂರೈಕೆಯೂ ಮಾಡುತ್ತಿದೆ. ಇದೀಗ ರಬ್ಬರ್ ಬೆಳೆಗಾರರ ಅನುಕೂಲಕ್ಕಾಗಿ ನೆಲ್ಯಾಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸೈಂಟ್ ಮೇರೀಸ್ ಕಾಂಪ್ಲೆಕ್ಸ್‌ನಲ್ಲಿ ಉಪಖರೀದಿ ಕೇಂದ್ರ ಆರಂಭಿಸುತ್ತಿದ್ದೇವೆ. ಸದಸ್ಯರು ಇಲ್ಲಿ ಕಚ್ಚಾ ರಬ್ಬರ್ ಮಾರಾಟ ಮಾಡಬಹುದಾಗಿದೆ. ಅದೇ ರೀತಿ ರಬ್ಬರ್ ಬೆಳೆಗಾರರಿಗೆ ಬೇಕಾದ ರಬ್ಬರ್ ಕೃಷಿ ಸಾಮಾಗ್ರಿಗಳು, ರಾಸಾಯನಿಕಗಳು ಇಲ್ಲಿ ಸಿಗಲಿದೆ – ಬಿ.ಪ್ರಸಾದ್ ಕೌಶಲ್ ಶೆಟ್ಟಿ ಅಧ್ಯಕ್ಷರು ಪುತ್ತೂರು ತಾ| ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ

LEAVE A REPLY

Please enter your comment!
Please enter your name here