ಕೆಪಿಎಸ್ ಕೆಯ್ಯೂರಿನ ಪ್ರಾಂಶುಪಾಲರಿಗೆ ವಿದಾಯ ಸಮಾರಂಭ

0

ಕೆಯ್ಯೂರು: ಕಳೆದ ಹದಿನೈದು ತಿಂಗಳುಗಳ ಹಿಂದೆ ಉಪನ್ಯಾಸಕ ಹುದ್ದೆಯಿಂದ ಪದೋನ್ನತಿಗೊಂಡು ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರಿನ ಪ್ರಾಂಶುಪಾಲರಾಗಿ ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಆನಂದ ಪಿ ಯವರು ಕರ್ನಾಟಕ ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹನಿರ್ದೇಶಕರಾಗಿ ನಿಯುಕ್ತಿಗೊಂಡು  ಕರ್ತವ್ಯಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಸಂಸ್ಥೆಯ ವತಿಯಿಂದ ವಿದಾಯಕೂಟವನ್ನು ಏರ್ಪಡಿಸಲಾಗಿತ್ತು.  ಶಿಕ್ಷಕರು, ಉಪನ್ಯಾಸಕರು ಹಾಗೂ ಕಛೇರಿ ಸಿಬ್ಬಂದಿಗಳ ಸಮ್ಮುಖದಲ್ಲಿ ಪ್ರಾಂಶುಪಾಲ ಆನಂದ ಪಿ ಯವರು ಉಪನ್ಯಾಸಕ ಇಸ್ಮಾಯಿಲ್ ಪಿ ಯವರಿಗೆ ಪ್ರಾಂಶುಪಾಲ ಹುದ್ದೆಯ ಪ್ರಭಾರವನ್ನು ಹಸ್ತಾಂತರಿಸಿ ಶುಭ ಹಾರೈಸಿದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ  ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ಉಮಾಶಂಕರಿಯವರು ಸ್ವಾಗತ ಭಾಷಣ ಮಾಡಿದರು. ಹಿರಿಯ ಉಪನ್ಯಾಸಕಿ ಗೀತಾರವರು ಪ್ರಾಸ್ತಾವಿಕ ಮಾತುಗಳನ್ನಾಡುವ ಜೊತೆಗೆ ಪ್ರಾಂಶುಪಾಲರು ಕಡಿಮೆ ಅವಧಿಯಲ್ಲಿ ನಿರ್ವಹಿಸಿದ ಹಿರಿಯ ಸೇವೆಯನ್ನು ನೆನಪಿಸಿಕೊಂಡರು. 
ವಿದ್ಯಾರ್ಥಿಗಳಾದ ನಿಶ್ಮಾ ಹಾಗೂ ಪ್ರಣಮ್ಯ ಪ್ರಾಂಶುಪಾಲರ ಕುರಿತು ಹೃದಯತುಂಬಿದ ಕೃತಜ್ಞತೆಯ ಮಾತುಗಳನ್ನಾಡಿದರು. ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಅಭಿವೃದ್ಧಿಗಾಗಿ ಅವರು ಕೈಗೊಂಡ ವಿಶಿಷ್ಟ ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು. ಕೆಯ್ಯೂರು ಗ್ರಾಮಪಂಚಾಯತಿ ಸದಸ್ಯರಾದ ಜಯಂತ ಪೂಜಾರಿ ಕೆಂಗುಡೇಲು ಕೆಪಿಎಸ್ ಕೆಯ್ಯೂರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಅವಿರತ ಶ್ರಮಿಸಿ ಬಹಳಷ್ಟು ಕೆಲಸ ಮಾಡಿದ ಪ್ರಾಂಶುಪಾಲರು ಇಷ್ಟು ಬೇಗನೇ ಇಲ್ಲಿಂದ ನಿರ್ಗಮಿಸುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಪೋಷಕ ಪ್ರತಿನಿಧಿಗಳಾಗಿ ಮಾತನಾಡಿದ ಭವಾನಿ ಚಿದಾನಂದ ಹಾಗೂ ಮೀನಾಕ್ಷಿ ವಿ ರೈಯವರು ಕೂಡಾ ಪ್ರಾಂಶುಪಾಲರ ಸೇವೆಯನ್ನು ಶ್ಲಾಘಿಸಿದರು. 
ಉಪನ್ಯಾಸಕರಾದ ಕಮಲಾಕ್ಷ,  ಗುಣಶೀಲ ಹಾಗೂ ಪ್ರಸನ್ನ ಪ್ರಾಂಶುಪಾಲರು ಸಂಸ್ಥೆಯ ಸಿಬ್ಬಂದಿಗಳೊಂದಿಗೆ ಸ್ನೇಹಪರತೆಯಿಂದ ವರ್ತಿಸಿ ತಮ್ಮ ಹುದ್ದೆಯ ಜಂಭವಿಲ್ಲದೇ ಸಣ್ಣ-ದೊಡ್ಡ ಕೆಲಸಗಳಲ್ಲಿ ತಾವೇ ಮೊದಲು ತೊಡಗಿಕೊಂಡು, ಉಳಿದವರನ್ನೂ ತೊಡಗಿಸಿಕೊಳ್ಳುತ್ತಿದ್ದುದನ್ನು ನೆನಪಿಸಿಕೊಂಡರು. ಪ್ರೌಢಶಾಲಾ ಶಿಕ್ಷಕಿಯರಾದ ಜೆಸ್ಸಿ ಪಿ ವಿ ಹಾಗೂ ಮೋಲಿ ವಿಲ್ಮಾ ಪಿಂಟೋ ಪ್ರಾಂಶುಪಾಲರ ಅನುಕರಣೀಯ ನಡೆನುಡಿ, ಪಾದರಸದಂತಹ ಚುರುಕು ವ್ಯಕ್ತಿತ್ವ, ಹದಿನೈದು ತಿಂಗಳ ಅವಧಿಯಲ್ಲಿ ಕೈಗೊಂಡ ಅಸಾಧ್ಯವೆನಿಸುವ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಂಡರು. 
ಕೆ.ಪಿ.ಎಸ್ ಕೆಯ್ಯೂರು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಬಾಬುರವರು ಪ್ರಾಂಶುಪಾಲರೊಂದಿಗಿನ ತಮ್ಮ ಒಡನಾಟದ ಕುರಿತ ನೆನಪುಗಳನ್ನು ಹಂಚಿಕೊಂಡರು. ಉಪಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ರವರು  ಪ್ರತಿಯೊಂದು ಕೆಲಸವನ್ನೂ  ಸೂಕ್ತ ಹಾಗೂ ಸುವ್ಯಕ್ತವಾದ ಯೋಜನೆಯೊಂದಿಗೆ ಪ್ರಾರಂಭಿಸುವುದು ಪ್ರಾಂಶುಪಾಲರ ಸ್ವಭಾವ. ಅದೇ ಅವರ ಯಶಸ್ಸಿನ ಗುಟ್ಟು ಎಂದರು. ಸಭಾಧ್ಯಕ್ಷತೆ ವಹಿಸಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಧರ್ ರಾವ್  ಬೊಳಿಕ್ಕಳರವರು ಸಂಸ್ಥೆಯ ಅಭಿವೃದ್ಧಿಗೆ ಇಷ್ಟೊಂದು ಶ್ರಮಿಸಿದ  ಪ್ರಾಂಶುಪಾಲರು ಇಷ್ಟು ಬೇಗ ತೆರಳುವುದರ ಬಗ್ಗೆ ಊರವರೆಲ್ಲರಿಗೂ ಬೇಸರವಿದೆ. ಉನ್ನತ ಹುದ್ದೆಗೆ ಅವರು ತೆರಳುವುದು ಸಂತಸ ಹಾಗೂ ಹೆಮ್ಮೆಯ ವಿಚಾರ. ಆದರೆ ಸಂಸ್ಥೆಯ ಅಭಿವೃದ್ಧಿ ಕೆಲಸಗಳು ಪೂರ್ತಿಯಾಗಲು ಅವರು ಇಲ್ಲಿ ಇರಬೇಕಿತ್ತು ಎಂಬ ಮನತುಂಬಿದ ಮಾತುಗಳನ್ನಾಡಿದರು.
ಹದಿನೈದು ಎಕರೆಯಷ್ಟು ವಿಸ್ತಾರವಾದ ಸಂಸ್ಥೆಯ ಗಡಿಗುರುತು ಮಾಡಿ, ಅತಿಕ್ರಮಿತ ಜಮೀನನ್ನು ಮರಳಿ ಪಡೆಯುವ ವ್ಯವಸ್ಥೆ ಮಾಡಿದ, ತೆಂಗಿನ ಮಡಲಿನ ಛಾವಣಿಯ ಎರಡು ಕೊಠಡಿ ನಿರ್ಮಿಸಿ ಪಾಠ ಮಾಡಿ ಎರಡು ಕೋಟಿ ರೂಪಾಯಿಗಳ ಕೆಪಿಎಸ್ ಅನುದಾನವನ್ನು ಶೀಘ್ರವಾಗಿ ದೊರೆಯುವಂತೆ ಮಾಡಿದ, ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕಾಗಿ ನಾಲ್ಕೂವರೆ ಲಕ್ಷ ಅನುದಾನ ದೊರಕಿಸಿಕೊಟ್ಟ, ಸಂಸ್ಥೆಯ ಆವರಣದಲ್ಲಿ ಫಲವೃಕ್ಷಗಳ ತೋಟ ನಿರ್ಮಿಸಿದ, ಬಾಳೆಯ ತೋಟ ಮಾಡಿದ, ಹೊಸತೊಂದು ಕೊಠಡಿ ನಿರ್ಮಾಣ ಮಾಡಿಸಿದ ಪ್ರಾಂಶುಪಾಲರ ಬಿಡುವಿಲ್ಲದ ಕೆಲಸಗಳನ್ನು ಸ್ಮರಿಸಿಕೊಂಡ ಎಲ್ಲರೂ ಸಾಧ್ಯತೆಗಳಿದ್ದರೆ ಇದೇ ಸಂಸ್ಥೆಗೆ ಮರಳಿ ಬರುವಂತೆ ಅವರಿಗೆ ಮನವಿ ಮಾಡಿದರು. ಪ್ರಾಂಶುಪಾಲರ ಪ್ರಭಾರವನ್ನು ವಹಿಸಿಕೊಂಡ ಇಸ್ಮಾಯಿಲ್ ಪಿ ಯವರು ಪ್ರಾಂಶುಪಾಲರಿಗೆ ಶುಭ ಹಾರೈಸಿ, ಸಂಸ್ಥೆಯನ್ನು ಮುನ್ನಡೆಸಲು ಎಲ್ಲರ ಸಹಕಾರವನ್ನು ಕೋರಿದರು. ಕೆಪಿಎಸ್ ಸಂಸ್ಥೆಯ ಸಿಬ್ಬಂದಿಗಳು ಪೋಷಕರು ಹಾಗೂ ವಿದ್ಯಾರ್ಥಿಗಳು ಒಟ್ಟಾಗಿ ಆನಂದ ಪಿಯವರನ್ನು ಗೌರವಯುತವಾಗಿ ಸನ್ಮಾನಿಸಿದರು. ಆನಂದ ಪಿಯವರು ಸಂಸ್ಥೆಯ ಅಭಿವೃದ್ಧಿಗೆ ತಾನು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವಂತೆ ಅರ್ಧದಲ್ಲಿರುವ ಕೆಲಸಗಳನ್ನು ಮುಂದುವರಿಸುವಂತೆ ಕರೆಕೊಟ್ಟರು. ಸಹನಿರ್ದೇಶಕರ ನೆಲೆಯಲ್ಲಿ ತನ್ನಿಂದ ಸಾಧ್ಯವಿರುವ ಎಲ್ಲಾ ಸಹಾಯ ಸಹಕಾರಗಳನ್ನೂ ಸಂಸ್ಥೆಗೆ ಒದಗಿಸುವುದಾಗಿ ಭರವಸೆಕೊಟ್ಟರು. ಶಿಕ್ಷಕಿ ನಳಿನಿ ಡಿಯವರು ಧನ್ಯವಾದ ಅರ್ಪಿಸಿದರು.

LEAVE A REPLY

Please enter your comment!
Please enter your name here