ಪುತ್ತೂರಿನಲ್ಲಿ ‘ಸುದ್ದಿಗ್ರಾಮೋತ್ಸವ’ ನಡೆಸಲು ನಿರ್ಧಾರ – ಪ್ರಥಮ ಹಂತದಲ್ಲಿ 12 ಗ್ರಾ. ಪಂ.ಗಳಲ್ಲಿ ಗ್ರಾಮೋತ್ಸವ

0

ಪುತ್ತೂರು: ನಿರಂತರವಾಗಿ ಜನಮುಖಿಯಾದ ಧೋರಣೆಯೊಂದಿಗೆ ಮತ್ತು ಜನಪರವಾದ ನಿಲುವಿನೊಂದಿಗೆ ಕಾರ್ಯಾಚರಿಸುತ್ತಿರುವ ಸುದ್ದಿ ಸಮೂಹ ಸಂಸ್ಥೆ ಕಾಲ ಕಾಲಕ್ಕೆ ಸಮಾಜಕ್ಕೆ ಬೆಳಕು ಚೆಲ್ಲುವಂತಹ ಅನೇಕ ಕಾರ್ಯಕ್ರಮ ಮತ್ತು ಆಂದೋಲನಗಳ ಮೂಲಕ ಜನರಿಗೆ ಹತ್ತಿರವಾಗಿದೆ.

ಸುದ್ದಿ ಬಳಗದ ನೇತೃತ್ವದಲ್ಲಿ ನಡೆದ ಎಲ್ಲಾ ಯೋಜನೆ ಮತ್ತು ಆಂದೋಲನಗಳಿಗೆ ಜನರಿಂದ ಅಭೂತಪೂರ್ವ ಸ್ವಾಗತ ಮತ್ತು ಬೆಂಬಲ ದೊರೆತಿದೆ. ಬಲಾತ್ಕಾರದ ಬಂದ್ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಹೋರಾಟ ರೂಪಿಸಿ ಯಶಸ್ವಿಯಾಗಿದ್ದ ಸುದ್ದಿ ಜನಾಂದೋಲನ ವೇದಿಕೆಯ ನೇತೃತ್ವದಲ್ಲಿ ಪ್ರಸ್ತುತ ನಡೆಯುತ್ತಿರುವ ಲಂಚ, ಭ್ರಷ್ಟಾಚಾರ ವಿರೋಧಿ ಆಂದೋಲನವಂತೂ ಸಮಾಜದಲ್ಲಿ ಕ್ರಾಂತಿಯ ಅಲೆಯನ್ನೇ ಎಬ್ಬಿಸಿದೆ.

ಇದೀಗ, ಸುದ್ದಿ ಸಮೂಹ ಸಂಸ್ಥೆ ’ಗ್ರಾಮೋತ್ಸವ’ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲು ಚಿಂತನೆ ನಡೆಸಿದ್ದು, ಅದಕ್ಕಾಗಿ ಸಿದ್ಧತೆ ಆರಂಭಿಸಿದೆ. ಬದಲಾದ ಬದುಕಿನಲ್ಲಿ ಅನಿವಾರ್ಯವಾದ ಕಾರ್ಯಕ್ರಮಗಳ ಅನುಷ್ಠಾನದೊಂದಿಗೆ ಈ ಕಾರ್ಯಕ್ರಮ ಮೂಡಿ ಬರಲಿದೆ.

ಎಲ್ಲಾ ಸಮುದಾಯದವರೂ ಒಟ್ಟು ಸೇರಿ ನಡೆಸುವ ಈ ಕಾರ್ಯಕ್ರಮ ಜನರ ಉತ್ಸವವಾಗಬೇಕೆಂಬುದು ಸುದ್ದಿ ಬಳಗದ ಬಯಕೆ. ಜನರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸುದ್ದಿ ಸಮೂಹ ಮಾಧ್ಯಮ ಸಂಪೂರ್ಣ ಸಹಕಾರ ನೀಡಲಿದೆ.

ಪ್ರಥಮ ಹಂತದಲ್ಲಿ ಕಡಬ ಸೇರಿದಂತೆ ಅವಿಭಜಿತ ಪುತ್ತೂರು ತಾಲೂಕಿನ ಅರಿಯಡ್ಕ, ಒಳಮೊಗ್ರು, ಆರ್ಯಾಪು, ಕೊಳ್ತಿಗೆ, ಕೆಯ್ಯೂರು, ಕೆದಂಬಾಡಿ, 34 ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ಆಲಂಕಾರು, ಸವಣೂರು ಮತ್ತು ನೆಲ್ಯಾಡಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೋತ್ಸವ ನಡೆಸಲು ಮತ್ತು ಕೊಂಬಾರು, ನಿಡ್ಪಳ್ಳಿ ಹಾಗೂ ಕೊಡಿಪ್ಪಾಡಿ ಗ್ರಾಮ ಪಂಚಾಯತಿಗಳನ್ನು ಸಂಘ ಸಂಸ್ಥೆಗಳ ಸಹಯೋಗದಲ್ಲಿ ದತ್ತು ಪಡೆಯಲು ನಿರ್ಣಯಿಸಲಾಗಿದೆ. ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಗರಸಭಾ ಅಧ್ಯಕ್ಷ ಕೆ. ಜೀವಂಧರ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್.ಗೌರಿ ಮತ್ತು ಸದಸ್ಯ ಸುಂದರ ಪೂಜಾರಿ ಬಡಾವು ಪ್ರತಿನಿಧಿಸುವ ವಾರ್ಡ್ ಗಳಲ್ಲಿ ನಗರೋತ್ಸವ ನಡೆಸಲು ಹಾಗೂ ಕೆ. ಬಾಲಚಂದ್ರ ಪ್ರತಿನಿಧಿಸುವ ಸಾಮೆತ್ತಡ್ಕ ವಾರ್ಡನ್ನು ದತ್ತು ಪಡೆದುಕೊಳ್ಳಲು ತೀರ್ಮಾನಿಸಲಾಗಿದೆ.

ಆಯಾ ಊರುಗಳಲ್ಲಿರುವ ಎಲ್ಲಾ ಸಂಘ-ಸಂಸ್ಥೆಗಳ ಭಾಗೀದಾರಿಕೆಯೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಈ ಮಧ್ಯೆ, ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಗ್ರಾಮಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಲಾಗುವುದು. ಉತ್ತಮ ಸೇವೆ ನೀಡಿದ ಇಲಾಖಾ ಸಿಬ್ಬಂದಿಗಳನ್ನು ಗೌರವಿಸಲಾಗುವುದು. ವಿವಿಧ ಡಿಜಿಟಲ್ ಯೋಜನೆಗಳ ಮಾಹಿತಿ ಮತ್ತು ಅನುಷ್ಠಾನ ಮಾಡಲಾಗುವುದು. ಜನರಿಗೆ ಬೇಕಾದ ವಿವಿಧ ಮಾಹಿತಿ ಪ್ರದರ್ಶನ ನಡೆಸಲಾಗುವುದು. ಗ್ರಾಮದ ಕೃಷಿ, ಉದ್ದಿಮೆ, ವಿವಿಧ ಕಸುಬು ಸೇರಿದಂತೆ ಧಾರ್ಮಿಕ, ಶೈಕ್ಷಣಿಕ, ಇತರ ಎಲ್ಲಾ ರಂಗಗಳ ಮಾಹಿತಿಯ ಪ್ರದರ್ಶನ ಮಾಡಲಾಗುವುದು. ಉಚಿತ ಆರೋಗ್ಯ ಶಿಬಿರ, ಸರ್ಕಾರಿ ಯೋಜನೆಗಳ ಮಾಹಿತಿ, ಖಾಸಗಿ ಕಂಪೆನಿಗಳ ಮಾಹಿತಿ ನೀಡಲಾಗುವುದು. ಪರವೂರಿನಲ್ಲಿರುವ ಗ್ರಾಮಸ್ಥರನ್ನು ಸಂಪರ್ಕಿಸಿ ಅವರನ್ನು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಲಾಗುವುದು. ಇದಲ್ಲದೇ, ಊರಿನ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸಲಾಗುವುದು. ದಿನಪೂರ್ತಿ ಗ್ರಾಮಸ್ಥರು ಎಲ್ಲ ಭೇದ ಮರೆತು ಉತ್ಸವದ ರೂಪದಲ್ಲಿ ಪಾಲ್ಗೊಂಡು ಖುಷಿ ಪಡೆಯಬೇಕೆಂಬುದು ಸುದ್ದಿಯ ಬಯಕೆ. ಗ್ರಾಮೋತ್ಸವಕ್ಕೆ ಪೂರ್ವಭಾವಿಯಾಗಿ ಗ್ರಾಮದ ಸಂಪೂರ್ಣ ಚಿತ್ರೀಕರಣ ನಡೆಸಿ, ದಾಖಲಿಸಿ ಅವುಗಳನ್ನು ಗ್ರಾಮೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುವುದು. ಮಾತ್ರವಲ್ಲದೇ ಲಂಚ, ಭ್ರಷ್ಟಾಚಾರ ವಿರೋಧಿ ಮನೋಭಾವನೆ ಮೂಡಿಸಲು ಮತ್ತು ಊರನ್ನು ಲಂಚ, ಭ್ರಷ್ಟಾಚಾರ ಮುಕ್ತಗೊಳಿಸಲು ಜನಜಾಗೃತಿ ಮತ್ತು ಪ್ರತಿಜ್ಞಾ ವಿಧಿ ಕಾರ್ಯಕ್ರಮ ನಡೆಸಲಾಗುವುದು. ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿಯೂ ಇದೇ ರೀತಿ ಗ್ರಾಮೋತ್ಸವ ನಡೆಸಲು ನಿರ್ಧರಿಸಲಾಗಿದೆ.

ಸರ್ಕಾರದ, ಸಚಿವರ, ಶಾಸಕರ, ಅಧಿಕಾರಿಗಳ ಸಹಕಾರ ಪಡೆದು ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಯೋಜನೆಗಳ ಮಾಹಿತಿ ಸಂಗ್ರಹಿಸಿ ಅದನ್ನು ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸುದ್ದಿ ಬಳಗ ಕೊಂಡಿಯಾಗಿ ಕಾರ್ಯ ನಿರ್ವಹಿಸಲಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧದ ಆಂದೋಲನ ಪ್ರಮುಖ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಗ್ರಾಮೋತ್ಸವ ಹಾಗೂ ದತ್ತು ಯೋಜನೆಗೆ ಜನರಿಂದ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿದೆ.

[box type=”error” bg=”#” color=”#” border=”#” radius=”5″]ಎಲ್ಲಾ ಸಮುದಾಯದವರೂ ಒಟ್ಟು ಸೇರಿ ನಡೆಸುವ ಈ ಕಾರ್ಯಕ್ರಮ ಜನರ ಉತ್ಸವವಾಗಬೇಕೆಂಬುದು ಸುದ್ದಿ ಬಳಗದ ಬಯಕೆ. ಜನರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸುದ್ದಿ ಸಮೂಹ ಮಾಧ್ಯಮ ಸಂಪೂರ್ಣ ಸಹಕಾರ ನೀಡಲಿದೆ.[/box]

[box type=”tip” bg=”#” color=”#” border=”#” radius=”6″]ಪ್ರಥಮ ಹಂತದಲ್ಲಿ ಕಡಬ ಸೇರಿದಂತೆ ಅವಿಭಜಿತ ಪುತ್ತೂರು ತಾಲೂಕಿನ ಅರಿಯಡ್ಕ, ಒಳಮೊಗ್ರು, ಆರ್ಯಾಪು, ಕೊಳ್ತಿಗೆ, ಕೆಯ್ಯೂರು, ಕೆದಂಬಾಡಿ, 34 ನೆಕ್ಕಿಲಾಡಿ, ಉಪ್ಪಿನಂಗಡಿ, ಬಜತ್ತೂರು, ಆಲಂಕಾರು, ಸವಣೂರು ಮತ್ತು ನೆಲ್ಯಾಡಿ ಗ್ರಾಮ ಪಂಚಾಯತಿಗಳಲ್ಲಿ ಗ್ರಾಮೋತ್ಸವ ನಡೆಸಲು ಮತ್ತು ಕೊಂಬಾರು, ನಿಡ್ಪಳ್ಳಿ ಹಾಗೂ ಕೊಡಿಪ್ಪಾಡಿ ಗ್ರಾಮ ಪಂಚಾಯತಿಗಳನ್ನು ಸಂಘ ಸಂಸ್ಥೆಗಳ ಸಹಯೋಗದಲ್ಲಿ ದತ್ತು ಪಡೆಯಲು ನಿರ್ಣಯಿಸಲಾಗಿದೆ.[/box]

LEAVE A REPLY

Please enter your comment!
Please enter your name here