ಮುಂಡೂರು ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನದಲ್ಲಿ ರೂ.40 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

0

 

ಪುತ್ತೂರು: ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅಂಗವಾಗಿ ದೇವಸ್ಥಾನದ ಹೊರಾಂಗಣದಲ್ಲಿ ಮೇಲ್ಛಾವಣಿ, ಉಳ್ಳಾಕುಲು ದೈವಸ್ಥಾನದಲ್ಲಿ ಮೇಲ್ಛಾವಣಿ ಹಾಗೂ ಹೊರಾಂಗಣಕ್ಕೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯಕ್ರಮ ಫೆ.೧೪ರಂದು ನಡೆಯಿತು.

ಶಿಲಾನ್ಯಾಸ ನೆರವೇರಿಸಿದ ಅಮ್ಟಾಡಿ ಶ್ರೀ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿರುವ ರವಿ ಶಂಕರ ಶೆಟ್ಟಿ ಮಾತನಾಡಿ ನಾನು ದೇವರ ಭಕ್ತ, ದೇವರ ಆಶೀರ್ವಾದದಿಂದ ನನಗೆ ಈ ದೇವಸ್ಥಾನದಲ್ಲಿ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡುವ ಯೋಗ ಒದಗಿ ಬಂದಿದೆ ಎಂದು ಹೇಳಿದರು. ಧಾರ್ಮಿಕ ಕ್ಷೇತ್ರ ಪಾವಿತ್ರ್ಯತೆಯಿಂದ ಕೂಡಿರಬೇಕು ಮತ್ತು ರಾಜಕೀಯ ರಹಿತವಾಗಿರಬೇಕು, ದೇವಸ್ಥಾನಕ್ಕಾಗಿ ಸೇವೆ ಸಲ್ಲಿಸುವುದು, ಕಾರ್ಯನಿರ್ವಹಿಸುವುದು ಶ್ರೇಷ್ಠತೆಯ ಮತ್ತು ಪುಣ್ಯದ ಕಾರ್ಯವಾಗಿದ್ದು ದೇವರ ಆಶೀರ್ವಾದವೂ ನಮಗೆ ಲಭಿಸುತ್ತದೆ ಎಂದು ಅವರು ಹೇಳಿದರು.

ವಿವಿಧ ಕಾಮಗಾರಿಗಳಿಗೆ ಸಂಕಲ್ಪ-ಅರುಣ್ ಪುತ್ತಿಲ
ಕುಕ್ಕಿನಡ್ಕ ದೇವಸ್ಥಾನದ ಉತ್ಸವ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮನಾತನಾಡಿ ದೇವಸ್ಥಾನದಲ್ಲಿ ಸಕಲ ವ್ಯವಸ್ಥೆಗಳು ಸರಿಯಾಗಿರಬೇಕು ಎನ್ನುವ ದೃಷ್ಟಿಕೋನದಿಂದ ಎರಡು ವರ್ಷಗಳ ಹಿಂದೆ ಭೋಜನಗೃಹ ಮತ್ತು ಪಾಕಶಾಲೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಮಾಡಿದ್ದೇವೆ. ಈ ಬಾರಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲುರವರ ಅಪೇಕ್ಷೆಯಂತೆ ಮತ್ತು ಭಕ್ತಾದಿಗಳ ಸಹಕಾರದೊಂದಿಗೆ ಮಾರ್ಚ್ ತಿಂಗಳಿನಲ್ಲಿ ನಡೆಯುವ ಜಾತ್ರೋತ್ಸವಕ್ಕೆ ಮೊದಲು ಅವಶ್ಯವಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಮುಗಿಸಬೇಕು ಎನ್ನುವ ಸಂಕಲ್ಪ ಮಾಡಿಕೊಂಡಿದ್ದು ಜಾತ್ರೋತ್ಸವ ಸಂದರ್ಭದಲ್ಲಿ ಅದನ್ನು ಲೋಕಾರ್ಪಣೆಗೊಳಿಸಬೇಕೆಂಬ ಯೋಚನೆಯಲ್ಲಿದ್ದೇವೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಹೇಳಿದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷ ಶ್ರೀರಂಗ ಶಾಸ್ತ್ರಿ ಸಮಯೋಚಿತವಾಗಿ ಮಾತನಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಕುಕ್ಕಿನಡ್ಕ ದೇವಸ್ಥಾನದ ಗೌರವ ಸಲಹೆಗಾರರಾದ ಭಾಸ್ಕರ ಆಚಾರ್ ಹಿಂದಾರು, ಸುಧೀರ್ ಶೆಟ್ಟಿ ನೇಸರಕಂಪ, ಪ್ರಸನ್ನ ಭಟ್ ಪಂಚವಟಿ, ಅಶೋಕ್ ಕುಮಾರ್ ಪುತ್ತಿಲ, ರಘುನಾಥ ಶೆಟ್ಟಿ ಪೊನೋಣಿ, ಶ್ರೀಕಾಂತ್ ಆಚಾರ್ ಹಿಂದಾರು, ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಸದಾಶಿವ ಶೆಟ್ಟಿ ಪಟ್ಟೆ ಸದಸ್ಯರಾದ ರಾಮಣ್ಣ ಗೌಡ ತೌಡಿಂಜ, ರಜನಿ ಕಡ್ಯ, ಪ್ರಧಾನ ಅರ್ಚಕ ನಾಗೇಶ್ ಕುದ್ರೆತ್ತಾಯ, ಪವಿತ್ರಪಾಣಿ ಮೋಹನ್ ರಾವ್ ಪಜಿಮಣ್ಣು, ಪ್ರಬಂಧಕ ಪ್ರಸಾದ್ ಬೈಪಡಿತ್ತಾಯ ಉತ್ಸವ ಸಮಿತಿಯ ಉಪಾಧ್ಯಕ್ಷ ಅನಿಲ್ ಕುಮಾರ್ ಕಣ್ಣರ್ನೂಜಿ, ಕೋಶಾಧಿಕಾರಿ ಜಯಾನಂದ ಗೌಡ ಅಂಬಟ, ಸದಸ್ಯರಾದ ಬಾಲಚಂದ್ರ ಗೌಡ ಕಡ್ಯ, ಧನಂಜಯ ಕುಲಾಲ್, ಶೇಷಪ್ಪ ಶೆಟ್ಟಿ ಪೊನೋಣಿ, ಧನಂಜಯ ನಾಯ್ಕ ಕಲ್ಲಮ, ಗಣೇಶ್ ಗೌಡ ಪಜಿಮಣ್ಣು, ಮೋಹನ್ ನಾಯ್ಕ ಪುತ್ತಿಲ, ರಾಮಣ್ಣ ಗೌಡ ಪಜಿಮಣ್ಣು ಮತ್ತಿತರರು ಉಪಸ್ಥಿತರಿದ್ದರು.

ಮನವಿ ಪತ್ರ ಬಿಡುಗಡೆ:
ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಮನವಿ ಪತ್ರ ಹಾಗೂ ನೀಲ ನಕಾಶೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

LEAVE A REPLY

Please enter your comment!
Please enter your name here