ಅರಳುವ ಪುಷ್ಪ ಮುದುಡದಿರಲಿ.. ಅನುಕಂಪದ ಅಲೆ ಪಸರಿಸಲಿ….

0

@ಉಮೇಶ್ ಮಿತ್ತಡ್ಕ

  • ಈ ಹೆಣ್ಮಗಳ ಜೀವನದಲ್ಲಿ ಭಾಗ್ಯಲಕ್ಷ್ಮಿ ಯನ್ನು ತರುವ ಪುಣ್ಯದ ಕಾರ್ಯ ಮಾಡೋಣವೇ..!?

ಹೆಸರು ಭಾಗ್ಯಲಕ್ಷ್ಮಿ..‌ ಅವಳ‌ ಜೀವನದಲ್ಲಿ ಭಾಗ್ಯಲಕ್ಷ್ಮಿ ಪ್ರವೇಶಿಸುವ ಸಮಯಕ್ಕೆ ತಪ್ಪಿ ಶನಿ ಪ್ರವೇಶಿಸಿದ..‌ ಶನಿ ಹೇಗೆ ಕಾಲಿಟ್ಟ ಅಂದರೆ ನಾವು ನೀವು ಬಿಡಿ..‌ ಅವಳು ಕೂಡಾ ಯೋಚಿಸಿದ ರೀತಿಯಲ್ಲಿ ಆಕಸ್ಮಿಕವಾಗಿ ಪ್ರವೇಶಿಸಿದವನೇ ತನ್ನ ಪಾರಮ್ಯದ ಪರಾಕಾಷ್ಠೆಯನ್ನೇ ತೋರಿಸಿಬಿಟ್ಟ..‌ ಛೆ.. ದುರ್ವಿಧಿಯೇ.. ಛೆ.. ಗ್ರಹಚಾರವೇ..‌ ಅಯ್ಯೋ ಆ ಹುಡುಗಿಯ ಬಾಳೇ.. ಪಾಪ ದೇವರು ಹೀಗೆ ಮಾಡಬಾರದಿತ್ತು.. ಎಂಬಿತ್ಯಾದಿ ಸಾವಿರ ಸಾವಿರ ಮನಸ್ಸುಗಳು ಹೃದಯಂತರಾಳದಿಂದ ಮಿಡಿಯುವಷ್ಟು ಕ್ರೂರತನ ತೋರಿಸಿಬಿಟ್ಟ ಶನಿದೇವ

ಹುಡುಗನಾದರೂ ಅಂಗವೈಕಲ್ಯಕ್ಕೊಳಾದರೆ ಈ ಸಮಾಜದಲ್ಲಿ ಬದುಕುವುದು ಕಷ್ಟಕರವಲ್ಲ. ಹುಡುಗಿಯ ಬಾಳಿನಲ್ಲಿ ಈ ರೀತಿಯ ದುರ್ದೈವ ಒದಗಿದರೆ ಆಕೆಯ ಕಣ್ಣೀರಿನ ಕಥೆಗೆ ಮಿಡಿದ ಹೃದಯಗಳು ಮತ್ತೆ ಮತ್ತೆ ವೇದನೆಗೊಳಗಾಗುವುದಿಲ್ಲವೇ.

ಬೆಟ್ಟಂಪಾಡಿ ದೇವಾಲಯದಲ್ಲಿ ಅರ್ಚಕರ ಸಹಾಯಕರಾಗಿ ಕೆಲಸ‌ ನಿರ್ವಹಿಸಿಕೊಂಡು ಅಲ್ಪಸ್ವಲ್ಪ ಕೃಷಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ ಹರಿನಾರಾಯಣ ಭಟ್ ರವರಿಗೆ ಮೂರು ಜನ ಮಕ್ಕಳು. ಎರಡು ಗಂಡು. ಒಂದು ಹೆಣ್ಣು. ಪಿಯುಸಿ ಶಿಕ್ಷಣ ಮಾಡುತ್ತಿರುವ ಹೆಣ್ಣು ಮಗಳು ಭಾಗ್ಯಲಕ್ಷ್ಮಿ ಇನ್ನೂ ನಿಜ ಬದುಕಿನ ಬಾಗಿಲು ನೋಡಿಲ್ಲ. ತಾನು ಹುಟ್ಟಿದ ಮನೆಗೆ, ಕಾಲಿಟ್ಟ‌ ಮನೆಗೆ ಭಾಗ್ಯಲಕ್ಷ್ಮಿಯಾಗಿಯೇ ಇರಬೇಕಿತ್ತು. ಅಷ್ಟರಲ್ಲಿಯೇ ಆಕೆಯ ಬದುಕಿನ ಆಟ ಶುರುವಾಗಿಬಿಟ್ಟಿತು. ಆಕೆಯ ಆಟ ಪಾಠದಲ್ಲಿ ಖುಷಿಪಟ್ಟಿದ‌ ಕುಟುಂಬಕ್ಕೆ ಫೆ. .. ದಿನ ಆಘಾತ ಬರಸಿಡಿಲಿನಂತೆ ಅಪ್ಪಳಿಸಿತ್ತು. ತನ್ನ ಸಂಬಂಧಿಕನ ಸ್ಕೂಟರ್ ನಲ್ಲಿ ಪುತ್ತೂರಿನಿಂದ‌ ತನ್ನ ಮನೆಗೆ ಪ್ರಯಾಣಿಸುವ ವೇಳೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಸಂಪ್ಯ ಕಲ್ಲರ್ಪೆ ಎಂಬಲ್ಲಿ ಅಪಘಾತವಾಗಿ ಎದುರಿನಿಂದ ಬರುತ್ತಿದ್ದ ಲಾರಿಯ ಚಕ್ರದಡಿ ಭಾಗ್ಯಲಕ್ಷ್ಮಿಯ ಕಾಲು ಸಿಲುಕಿ ದೇಹವೆಂಬ ಗುಡಿಗೆ ಕಂಬಗಳಂತೆ ಆಧಾರವಾಗಿದ್ದ ಕಾಲುಗಳಲ್ಲಿ ಒಂದು ಕಾಲು ಸಂಪೂರ್ಣ ತುಂಡಾಗಿ ಹೋಯಿತು. ಇನ್ನೊಂದು ಕಾಲಿನ ಮೇಲೆಯೂ ಲಾರಿಯ ಚಕ್ರ ತಿರುಗಿ ಆಕೆಯ ಜೀವನ‌ ಚಕ್ರವೇ ನಿಂತು ಹೋದಂತಾಯಿತು. ಸಂಜೆಯ ವೇಳೆಗೆ ಮನೆಯ ಬೆಳಕು ಕಾಣಲಿದ್ದವಳು ಆಸ್ಪತ್ರೆಯ ಕದ ತಟ್ಟಿದಳು.‌ ಏನಾಯ್ತು ಏನಾಯ್ತು ಎಂದು ಊರಿಡಿ ಸುದ್ದಿ ಪಸರಿಸುವಷ್ಟರಲ್ಲಿ ಆಕೆಯ ತುಂಡಾಗಿ ಬಿದ್ದಿದ್ದ ಕಾಲನ್ನು ಮರುಜೋಡಿಸಲಾಗದೆಂಬ ವೈದ್ಯರ ಮಾತುಗಳು ಊರಿನಲ್ಲಿ ಪ್ರತಿಧ್ವನಿಸಿದಾಗ ನಾಗರಿಕ‌ ಮನಸ್ಸುಗಳು ಮಮ್ಮುಲ‌ ಮರುಗಿದವು. ಉಳಿದ ಇನ್ನೊಂದು ಕಾಲನ್ನಾದರೂ ಸರಿಪಡಿಸಿ ಆಕೆಯ ಜೀವನಕ್ಕೆ ಭಾಗಶಃ ಭಾಗ್ಯಲಕ್ಷ್ಮಿಯನ್ನಾದರೂ ಕರುಣಿಸಬಹುದೇ ಎಂಬ ಹರಸಾಹಸದಲ್ಲಿ ತೊಡಗಿದೆ ಮಂಗಳೂರಿನ ಎ.ಜೆ. ಆಸ್ಪತ್ರೆಯ ವೈದ್ಯ ಸಮೂಹ.. ಆದರೆ..!!?

ಆದರೆ ಈಕೆಗೆ ಮತ್ತೊಂದೋ‌ ಮಗದೊಂದೋ‌ ಜೀವನ ಕಲ್ಪಿಸಬೇಕಾದರೆ 10 ರಿಂದ 15 ಲಕ್ಷ ರೂಪಾಯಿಯಷ್ಟು ಖರ್ಚು ಮಾಡಬೇಕಾಗಿದೆ. ಒಂದು ಕಾಲಂತೂ ಸಂಪೂರ್ಣ ಕಳೆದುಕೊಂಡು ಜೀವನಪೂರ್ತಿ ಅಂಗವೈಕಲ್ಯಕ್ಕೊಳಗಾಗಬೇಕಿದೆ. ಒಂದು ಕಾಲಿನಲ್ಲಿಯಾದರೂ ಜೀವ ಚೈತನ್ಯ ತುಂಬಿ ನಡೆಯುವಷ್ಟರಮಟ್ಟಿಗೆ ಆಗಬೇಕಾದಲ್ಲಿ ಇಷ್ಟು ಖರ್ಚು ಮಾಡಲೇಬೇಕಿದೆ. ಇದು ಆಸ್ಪತ್ರೆಯಿಂದ ಹೊರಬರುವಷ್ಟರಮಟ್ಟಿಗೆ.. ಇನ್ನು ಆಕೆಯ ಭವಿಷ್ಯ..!? ದಿನದಿನದ ಜೀವನ ಸಾಗಿಸುತ್ತಿದ್ದ ಹರಿನಾರಾಯಣ ಭಟ್ ರವರು ಮೇಲ್ನೋಟಕರಾಗಿ ಕಣ್ಣಂಚಿನಲ್ಲಿ ಅಸಹಾಯಕತೆಯ ಕಣ್ಣೀರು ಬಿಟ್ಟರೆ ಬೇರೇನೂ ಕಾಣುತ್ತಿಲ್ಲ. ಇಲ್ಲದ ಆರೋಗ್ಯವನ್ನು ಬದಿಗಿರಿಸಿ ಇದ್ದ ಆರೋಗ್ಯದಲ್ಲಿ ಆಸ್ಪತ್ರೆಯಲ್ಲಿ ಮಗಳ ಆರೈಕೆಯಲ್ಲಿ ದಿನ‌ ಎಣಿಸುತ್ತಿದೆ ಹರಿನಾರಾಯಣ ಭಟ್ ದಂಪತಿ. ಮುದುಡುವ ಪ್ರಾಯಕ್ಕೆ ಆಸರೆಯಾಗಿ ಬದುಕಿನ ಅರಳುವಿಕೆಯನ್ನು ಕಾಣಿಸಬೇಕಿದ್ದ ಮಗಳ ಆಕ್ರಂದನ ಮತ್ತು ಭವಿಷ್ಯದ ಶೂನ್ಯತೆಯ ಕಲ್ಪನೆ ದಂಪತಿಯನ್ನು ದಿನ ದಿನ ವಿಲವಿಲನೆ ಒದ್ದಾಡಿಸುತ್ತಿದೆ.

ಶನಿಯ ಅಬ್ಬರ.. ಮಾನವೀಯತೆಯ ಕಂಪನ
ಒಂದೆಡೆ ಹೆಣ್ಣುಮಗಳ ಬಾಳಿನಲ್ಲಿ ಶನಿ ಅಬ್ಬರಿಸುತ್ತಿದ್ದರೆ ಇತ್ತ ಮಮ್ಮುಲ ಮರುಗಿದ ಸಮಾಜದಲ್ಲಿ ಮಾನವೀಯತೆ ಕಂಪಿಸಿ ಅನುಕಂಪದ ಅಲೆ ಸೃಜಿಸಿದೆ. ಭಾಗ್ಯಲಕ್ಷ್ಮಿಯ ಬಾಳು ಬೆಳಗುವಲ್ಲಿ ಜಾತಿ ವರ್ಣ ಬೇಧ ಮರೆತು ಸಮಾಜ ಒಟ್ಟಾಗುತ್ತಿದೆ.‌

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಅರ್ಚಕರ ಸಹಾಯಕರಾಗಿದ್ದ ಹರಿನಾರಾಯಣ ಭಟ್ ಕುಟುಂಬಕ್ಕೆ ನೆರವಾಗಲು ದೇವಾಲಯದ ಆಡಳಿತ ಮಂಡಳಿ ಕರೆ ನೀಡಿದೆ. ಮಾನವೀಯತೆ‌ ಎಲ್ಲೂ ಕುಂದಿಲ್ಲ. ಮುದುಡಿದ ಪುಷ್ಪವ ಅರಳಿಸಲು ಬರುವ ಸೂರ್ಯನ ಕಿರಣಗಳಂತೆ ಕಾಣುವ ಕಾಣದ ಕೈಗಳು ಸಹಾಯ ಹಸ್ತ ಚಾಚುತ್ತಿವೆ.. ಇನ್ನೊಬ್ಬರ ಬದುಕಿನಲ್ಲಿ ನಮ್ಮ ಬದುಕನ್ನೂ ಕಾಣುವ ಮನದ ಭಾವ ರಾರಾಜಿಸಲಿ.. ಅಸಹಾಯಕ ಬದುಕೆಂಬ ಸಿಂಧುವಿನ ಬಿಂದುವಾಗಿ ನಾವೂ ಬದುಕೋಣ ಎಂಬ ಆಶಯ ಈ ಲೇಖನದೊಂದಿಗೆ. ಚಿಕಿತ್ಸಾ ವೆಚ್ಚ ಮತ್ತು ಆಕೆಯ ಜೀವನಕ್ಕಾಗಿ ಆರ್ಥಿಕ ಸಹಾಯ ಕೋರಿ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಹೊರಡಿಸಲಾದ ಪ್ರಕಟಣೆಯನ್ನು ಈ ಕೆಳಗೆ ನೀಡಲಾಗಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ಕ್ಷೇತ್ರ ಬೆಟ್ಟಂಪಾಡಿ
ಚಿಕಿತ್ಸಾ ವೆಚ್ಚಕ್ಕೆ ಧನಸಹಾಯ ಕೋರಿಕೆ ಸಹೃದಯಿ ಬಂಧುಗಳೇ,
ಶ್ರೀ ಹರಿನಾರಾಯಣ ಭಟ್ ಇವರು ಶ್ರೀ ಕ್ಷೇತ್ರದಲ್ಲಿ ಅರ್ಚಕರ ಸಹಾಯಕರಾಗಿದ್ದು ಇವರ ಮಗಳು ಭಾಗ್ಯಲಕ್ಷ್ಮಿ ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿನಿ ಫೆಬ್ರವರಿ 3 ರಂದು ರಸ್ತೆ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡು ಮಂಗಳೂರಿನ AJ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮನೆಯವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ದಾನಿಗಳು ತಮ್ಮಿಂದ ಸಾಧ್ಯವಾದ ಧನಸಹಾಯವನ್ನು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಿ ವಿದ್ಯಾರ್ಥಿನಿಯ ಚಿಕಿತ್ಸೆಗೆ ಸಹಕರಿಸಬೇಕಾಗಿ ವಿನಂತಿಸುವ

ಅನುವಂಶಿಕ ಆಡಳಿತ ಮೊಕ್ತೇಸರರು
ಮೊಕ್ತೇಸರರು, ಆಡಳಿತ ಸಮಿತಿ
ಶ್ರೀ ಕ್ಷೇತ್ರ ಬೆಟ್ಟಂಪಾಡಿ.

 

ಬ್ಯಾಂಕ್ ಖಾತೆಯ ವಿವರ :
KRISHNA KUMAR B.K.
Bank of Baroda
Branch: Bettampady
A.C.NO : 70750100006156
IFSC Code : BARBOVJBEPA MICR Code 575012020
Google Pay or Phone pay 7022950749

ವಿ.ಸೂ. ಬ್ಯಾಂಕ್ ಖಾತೆಗೆ ಜಮಾ ಮಾಡಿದ ಮಾಹಿತಿಯನ್ನು ಶಿವಪ್ರಸಾದ್ ತಲೆಪ್ಪಾಡಿ 9449178231 ಇವರ ವಾಟ್ಸಪ್ ಗೆ ನೀಡಲು ಕೋರಿಕೆ.

LEAVE A REPLY

Please enter your comment!
Please enter your name here