ಮುಕ್ರಂಪಾಡಿ ಸತ್ಯನಾರಾಯಣ ಪೂಜಾ ಸುವರ್ಣ ಸಂಭ್ರಮದ ಧನ್ಯತಾ ಸಭೆ

0

ಪುತ್ತೂರು;ಮುಕ್ರಂಪಾಡಿ ಸುಭದ್ರ ಸಭಾ ಮಂದಿರದ ಬಳಿಯ ಅಶ್ವತ್ಥ ಕಟ್ಟೆಯ ಸತ್ಯನಾರಾಯಣ ಪೂಜಾ ಸಮಿತಿಯ ಸುವರ್ಣ ಸಂಭ್ರಮದ ಸತ್ಯನಾರಾಯಣ ಪೂಜೆಯ ಧನ್ಯತಾ ಸಭೆಯು ಫೆ.13ರಂದು ಸಂಜೆ ಸುಭದ್ರ ಸಭಾಮಂದಿರದಲ್ಲಿ‌ ನಡೆಯಿತು.

ಸುವರ್ಣ ಸಂಭ್ರಮ ಸಮಿತಿ‌ ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಕಾರ್ಯಕ್ರಮದಲ್ಲಿ ನೀಡಿದ ಜವಾಬ್ದಾರಿಗಳನ್ನು ಪ್ರತಿಯೊಬ್ಬರು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಿ ನಡೆಸುವಲ್ಲಿ ಸಹಕಾರಿಯಾಗಿದೆ. ಇಲ್ಲಿನ ಸುವರ್ಣ ಸಂಭ್ರಮದ ಕಾರ್ಯಕ್ರಮವು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತೆ ನೆರೆವೇರಿರುತ್ತದೆ. ಪ್ರತಿಯೊಬ್ಬ ಕಾರ್ಯಕರ್ತರ ಶ್ರಮದ ಫಲವಾಗಿ ಯಾವುದೇ ಲೋಪವಿಲ್ಲದಂತೆ ನ ಭೂತೋ ಎನ್ನುವ ರೀತಿಯಲ್ಲಿ ನೆರವೇರಿದ್ದು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

 

ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾರ್ತ ಮಾತನಾಡಿ, ಸತ್ಯನಾರಾಯಣ ಪೂಜೆಯ ಸುವರ್ಣ ಸಂಭ್ರಮ ಕಾರ್ಯಕ್ರಮಗಳು ಎಲ್ಲಾ ರೀತಿಯಲ್ಲಿಯು ಯಶಸ್ವಿ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಾಗಿದೆ. ಎರಡು‌ ದಿನಗಳ ಕಾಲ ಬಹಳಷ್ಟು ವಿಜ್ರಂಭನೆಯಿಂದ ನಡೆದಿದ್ದು ಬ್ರಹ್ಮಕಲಶೋತ್ಸವದ ಮಾದರಿಯಲ್ಲಿ ನಡೆದಿರುವುದಾಗಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದಿದೆ. ಒಂದು ಪೈಸೆಯು ದುರುಪಯೋಗವಾಗದಂತೆ ಬಹಳಷ್ಟು ಶಿಸ್ತು ಬದ್ದವಾಗಿ ಕಾರ್ಯಕ್ರ‌ಮ ನೆರವೇರಿರುತ್ತದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಪೂಜಾ ಸಮಿತಿ ಅಧ್ಯಕ್ಷ ಸೋಮಶೇಖರ ರೈ ಇಳಂತಾಜೆ ಮಾತನಾಡಿ, ದಾನಿಗಳು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಹಕಾರದಿಂದ ಕಾರ್ಯಕ್ರಮವು ಜನರಿಂದ ಮೆಚ್ಚುಗೆ ಪಡೆಯುವ ರೀತಿಯಲ್ಲಿ ಸಂಪನ್ನಗೊಂಡಿದೆ. 49 ವರ್ಷಗಳಲ್ಲಿ ಸಮಿತಿಯ ಖಾತೆಯಲ್ಲಿ ರೂ.7ಲಕ್ಷವಿದ್ದು, ರೂ.2.13 ಲಕ್ಷ ಸುವರ್ಣ ಸಂಭ್ರಮದ ಉಳಿತಾಯ ಸೇರಿದಂತೆ ಒಟ್ಟು ರೂ.10ಲಕ್ಷವನ್ನು ಬ್ಯಾಂಕ್ ನಲ್ಲಿ ಠೇವಣಿಯಿಟ್ಟು ಮುಂದಿನ ದಿನಗಳಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಅವಕಾಶ ಮಾಡಿಕೊಡಲಾಗುವುದು ಎಂದರು.

ರೂ.2.13 ಲಕ್ಷ ಉಳಿತಾಯ
ಲೆಕ್ಕ ಪತ್ರ ಮಂಡಿಸಿದ ಪ್ರಧಾನ‌ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾರ್ತರವರು, ಸುವರ್ಣ ಸಂಭ್ರಮ ಕಾರ್ಯಕ್ರಮಗಳಲ್ಲಿ ಒಟ್ಟು ರೂ.11,46,695 ಸಂಗ್ರಹವಾಗಿದೆ. ಕಾರ್ಯಕ್ರಮಗಳಿಗೆ ಒಟ್ಟು ರೂ.9,33,126 ಖರ್ಚಾಗಿದ್ದು ರೂ.2,13,569 ಉಳಿತಾಯವಾಗಿದೆ ಎಂದು ಹೇಳಿ ಉಳಿಕೆ ಮೊತ್ತದ ಚೆಕ್ ನ್ನು ಸಮಿತಿ ಅಧ್ಯಕ್ಷ ಸೋಮಶೇಖರ ರೈಯವರಿಗೆ ಹಸ್ತಾಂತರಿಸಿದರು.

ಸುವರ್ಣ ಸಮಿತಿ ಗೌರವ ಸಲಹೆಗಾರ ರಮೇಶ್ ರೈ ಮೊಟ್ಟೆತ್ತಡ್ಕ, ಉಮೇಶ್ ಎಸ್.ಕೆ., ಕಾರ್ಯಕ್ರ‌ಮದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಸುವರ್ಣ ಸಂಭ್ರಮ ಸಮಿತಿ ಗೌರವಾಧ್ಯಕ್ಷ ಗಿರೀಶ್ ಪಿ.ಎಸ್., ಕೋಶಾಧಿಕಾರಿಗಳಾದ ಶ್ರೀಪಾದ ಮುಕ್ರಂಪಾಡಿ ಹಾಗೂ ಶ್ರೀಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸೃಜನ್, ಜಿತನ್ ಹಾಗೂ ಶಿಯಾ ಪ್ರಾರ್ಥಿಸಿದರು. ಕಾರ್ಯದರ್ಶಿ ಸಂತೋಷ್ ಮುಕ್ರಂಪಾಡಿ ಸ್ವಾಗತಿಸಿದರು. ಗೌರವ ಸಲಹೆಗಾರ ಉದಯಕುಮಾರ್ ರೈ ಎಸ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷೆ ಪ್ರಮೀತಾ ಸಿ. ಹಾಸ್ ವಂದಿಸಿದರು. ಪೂಜಾ ಸಮಿತಿ,‌ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಭಕ್ತಾದಿಗಳು ಸಭೆಯಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here