ರಾಷ್ಟ್ರ ಧ್ವಜಕ್ಕೆ ಅಪಚಾರದ ಆರೋಪ -ಪುತ್ತೂರು ಬ್ಲಾಕ್ ಕಾಂಗ್ರೆಸ್‌ನಿಂದ ಸಚಿವ ಈಶ್ವರಪ್ಪರವರ ಭಾವಚಿತ್ರ ದಹನ

0

ಪುತ್ತೂರು: ರಾಷ್ಟ್ರ ಧ್ವಜಕ್ಕೆ ಅಪಚಾರ ಎಸಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ತಕ್ಷಣ ಸಚಿವ ಸಂಪುಟದಿಂದ ವಜಾಗೊಳಿಸಿ, ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ, ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ ಕೆಪಿಸಿಸಿಯ ಸೂಚನೆಯಂತೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೆ.ಎಸ್.ಈಶ್ವರಪ್ಪ ಅವರ ಪ್ರತಿಕೃತಿ (ಭಾವಚಿತ್ರ) ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಈಶ್ವರಪ್ಪ ಅವರು ದೇಶದ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ’ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ಕೊಡಬೇಕು. ಇಂತಹ ರಾಷ್ಟ್ರ ಧ್ವಜವನ್ನು ನೋಡಿದಾಗ ನಮಗೆಲ್ಲ ರೋಮಾಂಚನವಾಗುತ್ತೆ, ಹೋರಾಟದ ಕಿಚ್ಚು ಬರುತ್ತೆ, ಎದ್ದು ನಿಂತು ಗೌರವ ಕೊಡುತ್ತೇವೆ. ಇದು ನಮಗೆ ಸಂವಿಧಾನ ಕಲಿಸಿದೆ’. ಅದರೆ ಸಚಿವ ಈಶ್ವರಪ್ಪ ‘ದಿಲ್ಲಿಯ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದಾರೆ. ಕೆಂಪುಕೋಟೆಯಲ್ಲಿ ಸದಾ ಕಾಲ ರಾಷ್ಟ್ರಧ್ವಜ ಮಾತ್ರ ಹಾರಾಡುತ್ತದೆ, ಅದು ದೇಶದ ಗೌರವದ ಸಂಕೇತ. ಅದರ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವುದು ಸಂವಿಧಾನ ಮತ್ತು ದೇಶಕ್ಕೆ ಮಾಡಿದ ಅಪಮಾನ. ರಾಷ್ಟ್ರ ಗೌರವದ ಸಂಕೇತಗಳಿಗೆ ಅಗೌರವ ನಿರ್ಬಂಧಿಸುವ ಕಾಯ್ದೆ ಪ್ರಕಾರ ದೇಶದ್ರೋಹ ಪ್ರಕರಣದಡಿ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಬ್ಲಾಕ್ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್.ಬಿ.ಸದಾಶಿವ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ, ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ, ಭಾಸ್ಕರ್ ಗೌಡ ಕೋಡಿಂಬಾಳ, ಉಪಾಧ್ಯಕ್ಷ ಆಲಿಕುಂಞಿ, ಸಹಕಾರಿ ಯೂನಿಯನ್ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ರೋಶನ್ ರೈ, ಎ.ಕೆ.ಜಯರಾಮ ರೈ ಸೇರಿದಂತೆ ಹಲವಾರು ಮಂದಿ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here