ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ ಧಾರ್ಮಿಕ ಸಭೆ-ಸನ್ಮಾನ

0

  • ನಾವು ಮಾಡಿದ ಪುಣ್ಯದ ಫಲ ನಮ್ಮನ್ನು ಕಾಪಾಡುತ್ತದೆ: ಶ್ರೀಕೃಷ್ಣ ಗುರೂಜಿ
  • ಕ್ಷೇತ್ರ ಬೆಳಗಲು ತಮ್ಮೆಲ್ಲರ ಸಹಕಾರ ಅಗತ್ಯವಿದೆ: ಎಂ.ಕೆ.ಕುಕ್ಕಾಜೆ
  • ಸನಾತನ ಹಿಂದೂ ಧರ್ಮ ಉಳಿಸಲು ನಾವು ಸುಸಂಸ್ಕೃತರಾಗಬೇಕು: ಕೇಶವ ಶಾಂತಿ


ವಿಟ್ಲ: ಮನುಷ್ಯನ ಜೀವನ ವಿಶಿಷ್ಠವಾದದ್ದು, ಅದನ್ನು ಸದುಪಯೋಗ ಪಡಿಸುವ ಮನಸ್ಸು ನಮ್ಮದಾಗಬೇಕು. ಹುಟ್ಟು ಸಾವು ನಿಶ್ಚಿತ ಅದರೊಳಗೆ ನಾವು ಮಾಡಿದ ಪುಣ್ಯದ ಫಲ ನಮ್ಮನ್ನು ಕಾಪಾಡುತ್ತದೆ. ಸಂಸ್ಕಾರ ಕಲಿಸುವ ಕೆಲಸ ಮನೆಯಿಂದಲೇ ಆಗಬೇಕು ಎಂದು ಕುಕ್ಕಾಜೆ ಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಹೇಳಿದರು.


ಅವರ ಫೆ.18ರಂದು ಜಾತ್ರೋತ್ಸವದ ಅಂಗವಾಗಿ ಕ್ಷೇತ್ರದ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಇತ್ತೀಚಿನ ಕಾಲಘಟ್ಟದಲ್ಲಿ ಸಂಸ್ಕಾರ, ಸಂಸ್ಕೃತಿ ಕಡಿಮೆಯಾಗುತ್ತಿದೆ. ಧರ್ಮವನ್ನು ತಿಳಿದು ಬದುಕುವ ಬದುಕು ನಮ್ಮದಾಗಬೇಕು. ನಮ್ಮ ಮಕ್ಕಳು ದಾರಿತಪ್ಪಲು ನಾವೇ ಕಾರಣಕರ್ತರು. ಆದ್ದರಿಂದ ಅವರನ್ನು ಸರಿದಾರಿಗೆ ತರುವ ಕೆಲಸ ಪ್ರತೀ ತಾಯಂದಿರಿಂದ ಆಗಬೇಕು ಎಂದ ಅವರು, ಮುಂದಿನ ವರುಷ ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆಸುವ ಬಗ್ಗೆ ತೀರ್ಮಾನಿಸಲಾಗಿದೆ. ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಬಡ ಕುಟುಂಬಗಳಿಗೆ ಐದು ಮನೆಕಟ್ಟಿ ಕೊಡುವ ಯೋಜನೆ ಕ್ಷೇತ್ರದಿಂದ ಆಗಲಿದೆ. ಕುಕ್ಕಾಜೆ ಹಾಗೂ ಮಾಣಿಲ ಕ್ಷೇತ್ರದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಧರ್ಮವಿದೆ. ಹಸಿದವರಿಗೆ ಅನ್ನ ನೀಡುವ ಹಾಗೂ ಸಮಾಜದ ಬಡವರ ಕಣ್ಣೀರೊರೆಸುವ ಕೆಲಸ ಸದಾ ಎರಡೂ ಕ್ಷೇತ್ರದಿಂದ ಆಗುತ್ತಿದೆ. ಧರ್ಮ ಉಳಿಯಲಿ ಎಂದವರು ಹೇಳಿದರು.

 

ಕ್ಷೇತ್ರದ ಮೊಕ್ತೇಸರರಾದ ಎಂ.ಕೆ.ಕುಕ್ಕಾಜೆರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕ್ಷೇತ್ರ ಸರಿಯಾಗಿ ಬೆಳಗಲು ಅಲ್ಲಿ ನಡೆಯುವ ಆರಾಧನೆ ಹಾಗೂ ಸಮಾಜ ಸೇವೆಗಳು ಕಾರಣ. ಮಕ್ಕಳು ದಾರಿ ತಪ್ಪಲು ನಾವೇ ಕಾರಣ. ಅವರನ್ನು ಸರಿದಾರಿಗೆ ತರುವಲ್ಲಿ ನಮ್ಮ ಪಾತ್ರ ಅಗತ್ಯ. ಸಮಾಜದಲ್ಲಿ ನಾವು ಹೇಗೆ ಇರಬೇಕೆಂಬುದು ಹಿಂದಿನಿಂದಲೇ ಬಂದ ರೂಢಿ. ಕ್ಷೇತ್ರ ಬೆಳಗಲು ತಮ್ಮೆಲ್ಲರ ಸಹಕಾರ ಅಗತ್ಯವಿದೆ. ಸಮಾಜಕ್ಕೆ ನಮ್ಮಿಂದಾಗುವ ಸಹಕಾರ ಮಾಡುವ ಮನಸ್ಸು ನಮ್ಮದಾಗಬೇಕು ಎಂದರು.

ಕೇಶವ ಶಾಂತಿ ನಾಟಿ ನರಿಕೊಂಬುರವರು ಧಾರ್ಮಿಕ ಉಪಸ್ಯಾಸ ನೀಡಿ ಮನುಷ್ಯ ಜನ್ಮ ಶ್ರೇಷ್ಠವಾದುದು. ಅದನ್ನು ಹಾಳು ಮಾಡದೆ. ಸಮಾಜದ ಒಳಿತಿಗಾಗಿ ಶ್ರಮಿಸುವ ಮನಸ್ಸು ನಮ್ಮದಾಗಬೇಕು. ಸನಾತನ ಹಿಂದೂ ಧರ್ಮ ಉಳಿಸಲು ನಾವು ಸುಸಂಸ್ಕೃತರಾಗಬೇಕು. ಸಂಸ್ಕೃತಿ ಸಂಸ್ಕಾರವನ್ನು ಸಂಸಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಮನುಷ್ಯ ಜೀವನವನ್ನು ಸಾರ್ಥಕ್ಯ ಪಡಿಸಬೇಕು.


ಭಾಸ್ಕರ ಕಾಸರಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿ ಕ್ಷೇತ್ರದ ಬೆಳವಣಿಗೆಯಲ್ಲಿ ಭಕ್ತಾದಿಗಳ ಪಾತ್ರ ಅಪಾರ. ಸಮಾಜದಲ್ಲಿರುವ ಬಡಬಗ್ಗರ ಕಣ್ಣೀರೊರೆಸುವ ಕಾರ್ಯ ನಿರಂತರವಾಗಿ ಕ್ಷೇತ್ರದಿಂದ ಆಗುತ್ತಿದೆ. ಸಮಾಜದ ಏಳಿಗೆಗಾಗಿ ಗುರೂಜಿಯವರು ನಡೆಸುತ್ತಿರುವ ಸೇವಾಕೈಂಕರ್ಯದಿಂದ ಕ್ಷೇತ್ರದ ಹೆಸರು ಕರ್ನಾಟಕ ಕೇರಳ ರಾಜ್ಯದ ಸಹಿತ ಹೊರದೇಶದಲ್ಲಿಯೂ ಪಸರಿಸಲು ಕಾರಣವಾಗಿದೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿಕಾರ್ಯಗಳು ನಡೆಯಲಿದ್ದು ಅದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಕಾಸರಗೋಡಿನ ಅಣಂಗೂರು ಶ್ರೀ ಕೊರಗತನಿಯ ಕ್ಷೇತ್ರದ ಧರ್ಮದರ್ಶಿ ಅನಿಲ್ ಕುಮಾರ್, ನ್ಯಾಯವಾದಿಗಳಾಗಿರುವ ಕಾಸರಗೋಡು ಕಾಳ್ಯಾಂಗಾಡು ಶ್ರೀ ಮೂಕಾಂಬಿಕ ಕ್ಷೇತ್ರದ ಹರ್ಷಿತಾ, ಸತೀಶ್ ಸಾಲ್ಯಾನ್ ನೆಲ್ಲಿಕುಂಜೆ ಕಾಸರಗೋಡು, ಕ್ಷೇತ್ರದ ಮಹಿಳಾ ಸಮಿತಿ ಅಧ್ಯಕ್ಷೆ ಮೋಹಿನಿ ತಾರಿದಳ, ಕಾಳಿಕಾ ಕಲಾ ಸಂಘದ ಅಧ್ಯಕ್ಷ ಸಂಜೀವ ಪಳನೀರು, ಕ್ಷೇತ್ರದ ಸೇವಾ ಸಮಿತಿ ಅಧ್ಯಕ್ಷ ರವಿ ಕುಟ್ಯಮಡ್ಕ ಮೊದಲಾದವರು ಉಪಸ್ಥಿತರಿದ್ದರು.

ಸನ್ಮಾನ: ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖೆಯ ಕನ್ಯಾನ ಶಾಖಾ ಕಿರಿಯ ಇಂಜಿನಿಯರ್ ಎಮ್.ಸತೀಶ್ ಸತ್ಯಗಾಲ ಚಾಮರಾಜನಗರ ಹಾಗೂ ವಿಟ್ಲ ಆರ್.ಕೆ.ಆರ್ಟ್ಸ್ ನ ನಿರ್ದೇಶಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜೇಶ್ ವಿಟ್ಲ ರವರನ್ನು ಸನ್ಮಾನಿಸಲಾಯಿತು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ರವಿ ಎಸ್. ಎಂ ಕುಕ್ಕಾಜೆ ಸ್ವಾಗತಿಸಿ, ರೇಖಾ ಎನ್. ಕೆ. ಕುಕ್ಕಾಜೆ ವಂದಿಸಿದರು.

ವರ್ಷಾವಧಿ ಜಾತ್ರೋತ್ಸವ ಸಂಪನ್ನ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರೋತ್ಸವವು ಫೆ.16ರಂದು ಆರಂಭಗೊಂಡು ಫೆ.18ರಂದು ಕೊನೆಗೊಂಡಿತು.

ಫೆ.16 ರಂದು ಬೆಳಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಶ್ರೀದೇವಿಯ ಕಲಶಪ್ರತಿಷ್ಠೆ, ಉದಯಪೂಜೆ ಬಳಿಕ ವಿವಿಧ ತಂಡದ ಭಜನಾ ಕಾರ್ಯಕ್ರಮ ನಡೆಯಿತು. ಫೆ.17ರಂದು ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಉದಯಪೂಜೆ, ಶ್ರೀ ನರಸಿಂಹ ಮಂಡಲ ಪೂಜೆ, ಕಲಶಸ್ನಾನ, ತುಲಾಭಾರ ಸೇವೆ, ಶ್ರೀದೇವಿಯ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಅಲಂಕಾರ ಪೂಜೆ, ಹೂವಿನಪೂಜೆ, ಪ್ರಸಾದ ವಿತರಣೆ ನಡೆದು ಅನ್ನ ಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಆಂಜನೇಯ ಮಹಾಪೂಜೆ. ನಾಗ ದರ್ಶನ, ಶ್ರೀ ದೇವಿಯ ಮಹಾಪೂಜೆ ಬಲಿ ಉತ್ಸವ ಪಲ್ಲಕ್ಕಿ ಉತ್ಸವ, ಸಿಡಿ ಮದ್ದು ಪ್ರದರ್ಶನ, ಶ್ರೀ ಸಿರಿಕುಮಾರ ಸ್ವಾಮೀಯ ಮಹಾಪೂಜೆ, ಕುಮಾರಸೇವೆ,ಪ್ರಸಾದ ವಿತರಣೆ, ಬಳಿಕ ರಕ್ತೇಶ್ವರಿ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ರಾತ್ರಿ ಲಯನ್ ಕಿಶೋರ್ ಡಿ. ಶೆಟ್ಟಿರವರ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ‘ಎನ್ನ ಬಂಗ ಎಂಕೇ ಗೊತ್ತು’ ಎಂಬ ತುಳು ಹಾಸ್ಯಮಯ ನಾಟಕ ನಡೆಯಿತು.

ಫೆ.18ರಂದು ಬೆಳಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಭಜನೆ, ಮಧ್ಯಾಹ್ನ ಶ್ರೀದೇವಿಯ ಮಹಾಪೂಜೆ, ದರ್ಶನಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ದೀಪಾರಾಧನೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8ರಿಂದ ಮಂತ್ರ ನಾಟ್ಯಾಲಯ ಗುರುಕುಲ ಉಳ್ಳಾಲ ಪ್ರಸ್ತುತ ಪಡಿಸುವ ‘ ಶ್ರೀ ದೇವಿ ನಮಸ್ತುಭ್ಯಂ’ ಹಾಗೂ ಶ್ರೀ ಕ್ಷೇತ್ರ ಕುಕ್ಕಾಜೆಯ ಮಕ್ಕಳಿಂದ ಭರತನಾಟ್ಯ ನಡೆಯಿತು. ಬಳಿಕ ಶ್ರೀ ವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ ಮಂಜಿನಾಡಿಯ ಬಾಲ ಕಲಾವಿದರಿಂದ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಜಗದೀಶ್ ಎಸ್.ಗಟ್ಟಿ ನಿರ್ದೇಶನದ ‘ಶಾಂಭವಿ ವಿಲಾಸ’ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here