ಅಪಘಾತದಲ್ಲಿ ಅಸುನೀಗಿದ ಅಣ್ಣ ತಂಗಿಗೆ ಅಶ್ರುಪೂರ್ಣ ವಿದಾಯ

0

ನೂರಾರು ಮಂದಿಯಿಂದ ಅಂತಿಮ ದರ್ಶನ, ಊರಿನಲ್ಲಿ ದುಃಖದ ಕಾರ್ಮೋಡ

ನಿನ್ನೆ ಮಧ್ಯಾಹ್ನ ಎಲಿಮಲೆ ಮತ್ತು ಜಬಳೆ ಮಧ್ಯೆ ಸಂಭವಿಸಿದ ಸ್ಕೂಟಿ, ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ದುರ್ಮರಣಕ್ಕೀಡಾಗಿದ್ದ ನಿಶಾಂತ್ ಮತ್ತು ಮೋಕ್ಷಾ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರವು ನಿನ್ನೆ ತಡರಾತ್ರಿ ಕಡಪಾಲ ಬಾಜಿನಡ್ಕದಲ್ಲಿ ನೆರವೇರಿತು.

ಸ್ಕೂಟಿ ಹಾಗೂ ಮಾರುತಿ ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಕಡಪಾಲ ಬಾಜಿನಡ್ಕ ದೇವಿದಾಸ್ ಅವರ ಮಕ್ಕಳಾದ ನಿಶಾಂತ್ ಹಾಗೂ ಮೋಕ್ಷಾ ಗಂಭೀರವಾಗಿ ಗಾಯಗೊಂಡಿದ್ದರು. ನಿಶಾಂತ್ ಸುಳ್ಯ ಆಸ್ಪತ್ರೆಗೆ ತಲುಪುವ ದಾರಿ ಮಧ್ಯೆಯೇ ಅಸುನಿಘಿದ್ದರು. ಆತನ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಮೋಕ್ಷಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಬಿ.ಸಿ. ರೋಡ್ ಸಮೀಪ ಆಕೆಯೂ ಕೊನೆಯುಸಿರೆಳೆದಿದ್ದಳು. ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಮರಣ ದೃಢೀಕರಣದ ಬಳಿಕ ಸೇವಾ ಭಾರತಿಯ ಅಂಬ್ಯುಲೆನ್ಸ್‌ನಲ್ಲಿ ಆಕೆಯ ಮೃತದೇಹವನ್ನು ಸುಳ್ಯಕ್ಕೆ ತರಲಾಯಿತು.

 


ಬಳಿಕ ಇಬ್ಬರ ಶವದ ಮಹಜರು ಹಾಗೂ ಪೋಸ್ಟ್‌ಮಾರ್ಟಂ ನೆರವೇರಿತು. ಸಚಿವ ಎಸ್.ಅಂಗಾರ, ಮಾಜಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ ಮೊದಲಾದವರು ಅಲ್ಲಿಗೆ ಭೇಟಿ ನೀಡಿದರು. ರಾತ್ರಿ ವೇಳೆಗೆ ಇಬ್ಬರ ಮೃತದೇಹವನ್ನು ಅಂಬ್ಯುಲೆನ್ಸ್‌ನಲ್ಲಿ ದೇವಿದಾಸ್‌ರವರ ಮನೆಗೆ ಕೊಂಡೊಯ್ಯಲಾಯಿತು. ಅದಾಗಲೇ ಅಲ್ಲಿ ನೂರಾರು ಮಂದಿ ಸೇರಿದ್ದರು.
ಮಕ್ಕಳಿಬ್ಬರ ಪಾರ್ಥಿವ ಶರೀರಗಳು ಮನೆ ತಲುಪುತ್ತಿದ್ದಂತೆ ಸೇರಿದವರ ದುಃಖದ ಕಟ್ಟೆಯೊಡೆದು ಎಲ್ಲೆಡೆ ಆವರಿಸಿತು. ಹೆತ್ತವರ ರೋದನವಂತೂ ಕರುಳು ಕಿವುಚುವಂತಿತ್ತು. ಅಂತಿಮ ದರ್ಶನದ ಬಳಿಕ ಅಂತಿಮ ವಿಧಿವಿಧಾನಗಳು ನೆರವೇರಿತು. ಬಳಿಕ ಅಂತಿಮ ಸಂಸ್ಕಾರ ನಡೆಯಿತು.


ಅಪಘಾತದಲ್ಲಿ ಅಸುನೀಗಿದ ಇಬ್ಬರು ವಿದ್ಯಾರ್ಥಿಗಳು ಕೂಡಾ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಗಳಾಗಿದ್ದರಲ್ಲದೆ ಶಾಲೆಗಳಲ್ಲೂ, ಊರಿನಲ್ಲೂ ತಮ್ಮ ಗುಣನಡತೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಹೀಗಾಗಿ ಊರಿಗೆ ಊರೇ ದುಃಖದ ಮಡುವಿನಲ್ಲಿ ಮುಳುಗಿತ್ತು.
ಮನೆಯಲ್ಲಿ ತಂದೆ ತಾಯಿಗೆ ಅತ್ಯಂತ ಪ್ರೀತಿಪಾತ್ರವಾದ ಮಕ್ಕಳಾದ ನಿಶಾಂತ್ ಮತ್ತು ಮೋಕ್ಷಾ ಕೂಡಾ ಎಲ್ಲೇ ಹೋದರೂ ಜೊತೆಯಾಗಿಯೇ ಹೋಗುತ್ತಿದ್ದರು. ನಿನ್ನೆ ಅಪಘಾತ ಸಂಭವಿಸುವ ಕೆಲವೇ ಕ್ಷಣ ಮುಂಚೆ ಎಲಿಮಲೆ ಪೇಟೆಯಲ್ಲಿದ್ದ ಮಕ್ಕಳಿಬ್ಬರನ್ನು ಕಂಡ ಅವರ ಚಿಕ್ಕಪ್ಪ ಮೋಕ್ಷಾಳನ್ನು ತಮ್ಮ ಕಾರಿನಲ್ಲಿ ಬರುವಂತೆ ಹೇಳಿದ್ದರು. ಆದರೆ ತಾನು ಅಣ್ಣನ ಜೊತೆಯೇ ಹೋಗುವುದಾಗಿ ಸ್ಕೂಟಿಯಲ್ಲಿ ಹೋದ ಮೋಕ್ಷಾ ಅಣ್ಣನೊಂದಿಗೇ ಇಹಲೋಕ ತ್ಯಜಿಸಿದ್ದಾಳೆ.

LEAVE A REPLY

Please enter your comment!
Please enter your name here