ಅಮರಮುಡ್ನೂರು ಪಂಚಾಯತ್ ಗ್ರಾಮಸಭೆ

0

 

 

ಪಂಚಾಯತ್ ರಾಜ್ ಅಧಿ ನಿಯಮ ಉಲ್ಲಂಘಿಸಿ ಕೆಲಸ ಮಾಡಿದ್ದೀರಿ- ಬೊಳ್ಳೂರು ಆರೋಪ

ಅಮರಮುಡ್ನೂರು ಗ್ರಾಮ ಪಂಚಾಯತ್ ನ ಪ್ರಥಮ ಹಂತದ ಗ್ರಾಮ ಸಭೆಯು ಪಂಚಾಯತ್ ಅಧ್ಯಕ್ಷೆ ಪದ್ಮ ಪ್ರಿಯಾ ಮೇಲ್ತೋಟ ರವರ ಅಧ್ಯಕ್ಷತೆಯಲ್ಲಿ ಅ‌.7 ರಂದು ಪಂಚಾಯತ್ ನ ಕೊರಗ ಸಭಾಭವನದಲ್ಲಿ ನಡೆಯಿತು.

 

 

ನೋಡೆಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ನಾಗರಾಜ್ ಸಭೆಯ ಕಲಾಪ ನಡೆಸಿದರು.
ಕಳೆದ ಮುಂದೂಡಲ್ಪಟ್ಟ ಗ್ರಾಮ ಸಭೆಯ ಗತ ವರದಿ ಮಂಡಿಸಿ ಮುಂದಿನ ವರದಿ ನೀಡಬೇಕು.
ಪಂಚಾಯತ್ ಆಡಳಿತ ಮಂಡಳಿಯು ಅಧಿಕಾರಕ್ಕೆ ಬಂದು 1 ವರ್ಷ 8 ತಿಂಗಳ ಅವಧಿ ಕಳೆದಿದೆ. ಹಿಂದಿನ ಪ್ರಥಮ ಹಂತದ ಗ್ರಾಮಸಭೆಯನ್ನು ಮುಂದೂಡಲ್ಟಟ್ಟಿದ್ದು 5 ತಿಂಗಳು ಕಳೆದಿದೆ. ಎಲ್ಲಾ ಪಂಚಾಯತ್ ನಲ್ಲಿ ಎರಡು ಹಂತದ ಗ್ರಾಮಸಭೆ ಮುಗಿದಿದೆ. ನಿಮ್ಮ ಅವಧಿಯಲ್ಲಿ ಯಾವುದೇ ಕಾಮಗಾರಿ ಅಭಿವೃದ್ಧಿ ಕೆಲಸ ಕಾರ್ಯ ನಡೆದಿಲ್ಲವೇ ? ಅಧ್ಯಕ್ಷ ರು ಉತ್ತರಿಸಬೇಕು ಎಂದು ರಾಧಾಕೃಷ್ಣ ಬೊಳ್ಳೂರು ರವರು ಸಭೆಯ ಆರಂಭದಲ್ಲಿ ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ನಾನು ಹೊಸದಾಗಿ ಆಯ್ಕೆ ಗೊಂಡಿರುತ್ತೇನೆ. ವರದಿಯ ಬಗ್ಗೆ ಪಿಡಿಒ ರವರು ತಿಳಿಸಬೇಕು ಎಂದು ಹೇಳಿದರು.
ಆಡಳಿತ ಮಂಡಳಿಯ ವರು ಪಂಚಾಯತ್ ರಾಜ್ ಅಧಿನಿಯಮ ಉಲ್ಲಂಘಿಸಿ ಕೆಲಸ ಮಾಡಿದ್ದೀರಿ.
ಗ್ರಾಮದ ಅಭಿವೃದ್ಧಿ ಕಾರ್ಯಗಳನ್ನು ಪಂಚಾಯತ್ ನಿರ್ವಹಣೆ ಮಾಡುವಂತಿರಬೇಕು. ಇಲ್ಲಿ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಪಂಚಾಯತ್ ಬೇಜವಬ್ದಾರಿಯಿಂದ ವರ್ತಿಸುತ್ತಿದೆ. ರಸ್ತೆ ಮತ್ತು ಚರಂಡಿ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆದಿಲ್ಲ ಎಂದು ರಾಧಾಕೃಷ್ಣ ಬೊಳ್ಳೂರು ನೇರವಾಗಿ ಆರೋಪಿಸಿದರು.
ಸಿಬ್ಬಂದಿ ಶಶಿಧರ ‌ರವರು ವರದಿ ವಾಚಿಸತೊಡಗಿದರು. ಈ ವೇಳೆ ಆಕ್ಷೇಪಿಸಿದ ಬೊಳ್ಳೂರು ರವರು ನಮಗೆ ಈ ಅವಧಿಯ ಜಮಾ ಖರ್ಚಿನ ಪ್ರತ್ಯೇಕ ವರದಿ‌ ನೀಡಬೇಕು.ಹೊರತು ಎರಡು ಅವಧಿಯ ಜಮಾ ಖರ್ಚಿನ ವಿವರವನ್ನು ಒಟ್ಟು ಸೇರಿಸಿಕೊಂಡು ಮಾಡಿದ್ದೀರಿ. ಇದು ನಮಗೆ ಅವಶ್ಯಕತೆ ಇಲ್ಲ. ಪ್ರತ್ಯೇಕ ವರದಿ ನೀಡಬೇಕು ಎಂದು ಹೇಳಿದರು .ಇದಕ್ಕೆ ಸಭೆಯಲ್ಲಿದ್ದ ಗ್ರಾಮಸ್ಥರು ಒಕ್ಕೊರಲ ಬೆಂಬಲ ಸೂಚಿಸಿದರು.
ಸಾಮಾನ್ಯ ಸಭೆಯಲ್ಲಿ ಸದಸ್ಯರು ತಮಗೆ ಬೇಕಾದ ಹಾಗೆ ಅನುದಾನವಿರಿಸಿಕೊಂಡು ಕ್ರಿಯಾಯೋಜನೆ ತಯಾರಿಸಿಕೊಂಡಿದ್ದೀರಾ. ಜನರನ್ನು ಮಂಗ ಮಾಡುವ ಕೆಲಸ ಮಾಡಬೇಡಿ‌. ಇದು ಬುದ್ದಿವಂತ ಜನರಿರುವ ಗ್ರಾಮ. ಪಂಚಾಯತ್ ಅನುದಾನವನ್ನು ನಿರ್ವಹಣೆಗೆ ಇಟ್ಟು ಕೊಳ್ಳಬೇಕು . ಜನಪ್ರತಿನಿಧಿಗಳು ಜನರ ಸೇವಕರಾಗಿರಬೇಕು. ನಿಜವಾದ ಫಲಾನುಭವಿಗಳಿಗೆ ಅನುದಾನ ನೀಡಬೇಕು. ಕುಡಿಯುವ ನೀರಿನ ವ್ಯವಸ್ಥೆ ‌ಅಸರ್ಮಪಕವಾಗಿದೆ‌ ಎಂದು ರಾಧಾಕೃಷ್ಣ ಬೊಳ್ಳೂರು ಆರೋಪಿಸಿದರು.

ಶೇಣಿ ಎಂಬಲ್ಲಿ ರಸ್ತೆ ದುರಸ್ತಿ ‌ಮಾಬೇಕೆಂದು ಹಲವು ಬಾರಿ ಬೇಡಿಕೆ ಇರಿಸಿದ್ದೇವೆ ಪ್ರಯೋಜನವಾಗಿಲ್ಲ. ಕ್ರಿಯಾ ಯೋಜನೆಯಲ್ಲಿ ಅನುದಾನ 20 ಸಾವಿರ ಇಡಲಾಗುವುದಿಲ್ಲ ಎಂದು ಅಧ್ಯಕ್ಷರು ಹೇಳಿದ್ದಾರೆ ಎಂದು ನಾರಾಯಣ ಆಚಾರ್ಯ ‌ ತಿಳಿಸಿದರು.
ಈ ರಸ್ತೆಯ ದುರಸ್ತಿ ಕಾರ್ಯಕ್ಕೆ ಸಾಮಾನ್ಯ ಸಭೆಯಲ್ಲಿ ಕ್ರಿಯಾ ಯೋಜನೆಯಲ್ಲಿ ಅನುದಾನ ಇರಿಸಲಾಗಿದೆ. ವಿಪರೀತ ಮಳೆಯಿಂದಾಗಿ ಕೆಲಸ ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ ದುರಸ್ತಿ ಕಾಮಗಾರಿ ನಡೆಸುವುದಾಗಿ ಅಶೋಕ ಚೂಂತಾರು ತಿಳಿಸಿದರು.

ಕಳೆದ ಗ್ರಾಮ ಸಭೆಯಲ್ಲಿ ಚಿಕ್ಕಿನಡ್ಕ ರಸ್ತೆಯ ಬಗ್ಗೆ ಬೇಡಿಕೆ ಇಡಲಾಗಿದೆ ಇದುವರೆಗೆ ದುರಸ್ತಿ ಮಾಡಿದ್ದೀರಾ .? ಒಂದು ವರುಷ ಕಳೆದರೂ ನೀರಿನ ಟ್ಯಾಂಕಿಗೆ ನೀರಿನ ಸರಬರಾಜು ವ್ಯವಸ್ಥೆ ಮಾಡಿಲ್ಲ ಯಾಕೆ‌ ? ಎಲ್ಲಾ ಇಲಾಖೆಯ ಅಧಿಕಾರಿಗಳು ಬಂದಿಲ್ಲ ಯಾಕೆ? ಕೃಷಿಕರು ಅಡಿಕೆಗೆ ಹಳದಿ ರೋಗ ಬಾಧಿಸಿದ ಪರಿಣಾಮ ಕಂಗೆಟ್ಟಿದ್ದಾರೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬಂದು ಪ್ರಶ್ನೆ ಗಳಿಗೆ ಉತ್ತರಿಸಬೇಕಿತ್ತು ಎಂದು ಗಣೇಶ್ ಪಿಲಿಕಜೆ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಯ ತನಕ ಕ್ರಿಯಾಯೋಜನೆಯಲ್ಲಿ ತಯಾರಿಸಿದ ಎಲ್ಲವನ್ನೂ ರದ್ದು ಪಡಿಸಿ ಹೊಸದಾಗಿ‌ ತಯಾರಿಸಬೇಕು.ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ
ಮುಂದಿನ 15 ದಿನಗಳಲ್ಲಿ ಅನುಷ್ಠಾನ ಪಡಿಸಬೇಕು. ಇಲ್ಲದಿದ್ದರೆ ಪಂಚಾಯತ್ ಮುಂದೆ ಗ್ರಾಮದ ಜನರನ್ನು ಸೇರಿಸಿ ಪ್ರತಿಭಟಿಸುತ್ತೇವೆ ಎಂದು ಬೊಳ್ಳೂರು ರವರು ಆಕ್ರೋಶ ಭರಿತರಾಗಿ ಏರು ಧ್ವನಿಯಲ್ಲಿ ಹೇಳಿದರು.

ಚೊಕ್ಕಾಡಿ ಉಳ್ಳಾಕುಲು ಮಜಲಿಗೆ ಹೋಗುವ ರಸ್ತೆಯಲ್ಲಿ ಮೋರಿ ಅಳವಡಿಸಲಾಗಿದೆ ಎಂದು ಉಲ್ಲೇಖಿಸಿದ್ದೀರಿ. ಅದು ನೇಣಾರು ಎಂಬಲ್ಲಿ ಹಾಕಿರುವುದು. ನಮ್ಮ ರಸ್ತೆಗೆ ಹಾಕಲಿಲ್ಲ. ಸ್ಪಷ್ಟತೆ ನೀಡಬೇಕು. ನಾವು ಹಲವು ಬಾರಿ ಬೇಡಿಕೆ ಇರಿಸಿದ್ದೇವೆ ಎಂದು ಕೇಶವ ಕರ್ಮಾಜೆ ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯತ್ ಸದಸ್ಯರು ತಮ್ಮ ವಾರ್ಡಿನಲ್ಲಿರುವ ರಸ್ತೆಯ ವಿವರ ಅವರೇ ನೀಡಬೇಕು ಎಂದು ಪದ್ಮನಾಭ ಬೊಳ್ಳೂರು ‌ತಿಳಿಸಿದರು.
ಘನತ್ಯಾಜ್ಯ ಘಟಕದ ನಿರ್ವಹಣೆಗೆ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಉದ್ಯೋಗಿ ಹರೀಶ್ ರವರನ್ನು ಚಾಲಕರಾಗಿ ಮುಂದುವರಿಸಿಕೊಂಡು ಹೋಗುವಂತೆ ಸಭೆಯಲ್ಲಿ ನಿರ್ಣಯ ಮಾಡುವಂತೆ ಬೊಳ್ಳೂರು ಸೂಚಿಸಿದರು.

ಕುಕ್ಕುಜಡ್ಕ ಕೇಂದ್ರದಲ್ಲಿ ಒಂದೇ ಒಂದು ಸೋಲಾರ್ ಬೀದಿ ದೀಪ ಅಳವಡಿಸಿಲ್ಲ ಯಾಕೆ ? ಎಂದು ಗಣೇಶ್ ಪ್ರಶ್ನಿಸಿದರು.
ಕುಕ್ಕುಜಡ್ಕ ಕೇಂದ್ರದಲ್ಲಿ ಹೈಮಾಸ್ಟ್ ದೀಪದ ಅಳವಡಿಕೆಗೆ ಪ್ರಸ್ತಾವನೆ ಕಳುಹಿಸಲಾಗಿತ್ತು ಆದ್ದರಿಂದ ಸೋಲಾರ್ ದೀಪ ಅಳವಡಿಸಿಲ್ಲ. ಮುಂದಿನ‌ ದಿನಗಳಲ್ಲಿ ಬೀದಿ ದೀಪ ಹಾಕುವ ವ್ಯವಸ್ಥೆ ಮಾಡುವುದಾಗಿ ಪಿ.ಡಿ.ಒ ತಿಳಿಸಿದರು.

ನಾಡಗೀತೆಯೊಂದಿಗೆ ಸಭೆಯು ಆರಂಭಗೊಂಡಿತು. ಪಿ.ಡಿ.ಒ.ಆಕಾಶ್ ಸ್ವಾಗತಿಸಿ, ವಂದಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶಶಿಕಲಾ ಕೇನಡ್ಕ, ಪಂ.ಸದಸ್ಯರಾದ ಜಯಪ್ರಕಾಶ್ ದೊಡ್ಡಿಹಿತ್ಲು, ವೆಂಕಟ್ರಮಣ ಇಟ್ಟಿಗುಂಡಿ, ಅಶೋಕ ಚೂಂತಾರು, ಹೂವಪ್ಪ ಗೌಡ ಅರ್ನೋಜಿ, ರಾಧಾಕೃಷ್ಣ ಕೊರತ್ಯಡ್ಕ, ದಿವಾಕರ ಪೈಲಾರು, ಕೃಷ್ಣ ಪ್ರಸಾದ್ ಮಾಡಬಾಕಿಲು, ಜನಾರ್ದನ ಪೈಲೂರು,
ದಿವ್ಯ ಮಡಪ್ಪಾಡಿ, ಯಮುನಾ, ಪಿ.ಭುವನೇಶ್ವರಿ, ಮೀನಾಕ್ಷಿ, ಸೀತಾ ಹೆಚ್, ತೇಜಾವತಿ, ಜಾನಕಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಆರೋಗ್ಯ ಸಹಾಯಕಿಯರು,
ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಸಹಾಯಕಿಯರು,ಶಾಲಾ ಶಿಕ್ಷಕರು ಮತ್ತು ಗ್ರಾಮಸ್ಥರು‌ ಭಾಗವಹಿಸಿದರು. ಪಂಚಾಯತ್ ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here