ಕಡಬ:15ಕ್ಕೂ ಹೆಚ್ಚು ಸ್ನೇಹಿತರ ಮೊಬೈಲ್ ಪಡೆದು ಯುವತಿಗೆ ಕಿರಿಕ್ ಮೆಸೇಜ್ ಮಾಡಿದ ಯುವಕ

0

  • ಯುವತಿ ಠಾಣೆಗೆ ದೂರು ಕೊಟ್ಟಾಗಲೇ ಬಯಲಾಯ್ತು ಯುವಕನ  ಕೆಟ್ಟ ಚಾಳಿ
ಕಡಬ:ಯುವಕನೊಬ್ಬ ತನ್ನ ಹದಿನೈದಕ್ಕೂ ಹೆಚ್ಚು  ಸ್ನೇಹಿತರ ಮೊಬೈಲ್ ಪಡೆದು ಯುವತಿಯೊಬ್ಬಳಿಗೆ ಸಂದೇಶ ಮಾಡಿದ್ದು ಯುವತಿಯ ದೂರಿನ ಮೇರೆಗೆ  ಹಲವರನ್ನು  ಪೊಲೀಸರು ವಿಚಾರಣೆಗೆ  ಕರೆದಿರುವ ಬಗ್ಗೆ ತಡವಾಗಿ ತಿಳಿದು ಬಂದಿದೆ.
ಕೊಕ್ಕಡದ ಯುವಕ ಕಡಬದ ಯುವತಿಯೊಂದಿಗೆ ನಿತ್ಯ ಸಂಪರ್ಕದಲ್ಲಿದ್ದ ಎನ್ನಲಾಗಿದ್ದು ಬಳಿಕ ಮೈಮನಸು ಉಂಟಾಗಿ  ಆತನ   ಕರೆ ಮತ್ತು ಸಂದೇಶ ಬಾರದಂತೆ  ಯುವತಿ  ಬ್ಲಾಕ್ ಮಾಡಿದ್ದಳು. ಹೀಗಾಗಿ  ಯುವಕ  ಹೋದಲ್ಲೆಲ್ಲ  ಸಿಗುವ  ಸ್ನೇಹಿತರ ಬಳಿ   “ತುರ್ತು ಕರೆ ಮಾಡಲು ಇದೆ” , ಪೋನ್ ಜಾರ್ಜ್ ಖಾಲಿಯಾಗಿದೆ, ಎಂದು ಬೊಗಳೆ ಬಿಟ್ಟು    ಮೊಬೈಲ್  ಪಡೆದು   ಆಕೆಗೆ  ಸಂದೇಶ ಮಾಡಿ ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದ.  ಹೀಗೆ 15 ಕ್ಕೂ ಅಧಿಕ ತನ್ನ ಆಪ್ತರ ಪೋನ್ ಬಳಸಿ ಸಂದೇಶ ಮಾಡಿರುವುದು  ವಿಚಾರಣೆ ವೇಳೆ ತಿಳಿದು ಬಂದಿದೆ.
ಹೊಸ ಹೊಸ ನಂಬರ್ ಗಳಿಂದ ಮೆಸೆಜ್ ನಿರಂತರ ಮೆಸೆಜ್ ಬರುತ್ತಿರುವುದನ್ನು ಮನಗಂಡು ಯುವತಿಯು ಠಾಣೆಗೆ ದೂರು ನೀಡಿದ್ದಳು.  ಮೆಸೇಜ್ ಆಧಾರಿಸಿ   ಪೊಲೀಸರು  ಹಲವರಿಗೆ ಪೋನಾಯಿಸಿದ್ದು   ಪೊಲೀಸರ ಕರೆಗೆ ಹಲವರು ಗಾಬರಿಗೊಂಡಿದ್ದರು.
ಪೊಲೀಸರ ಪೋನ್ ಕರೆಗೆ ಭಯಗೊಂಡರೂ ಕೆಲವರು ಠಾಣೆಗೆ ವಿಚಾರ ತಿಳಿದುಕೊಳ್ಳಲು ಆಗಮಿಸಿದ್ದರು ಎನ್ನಲಾಗಿದೆ.  ಈ ವೇಳೆ   ಮಾಡದ ತಪ್ಪಿಗೆ ಠಾಣೆಗೆ ಹೋಗುವಂತೆ ಮಾಡಿದ  ಯುವಕನ ವಿರುದ್ದ ಕೆಲವರು ಗರಂ ಆಗಿದ್ದು ಠಾಣೆಯಲ್ಲೂ  ಮಾತಿನ ಚಕಮಕಿಗೆ ಕಾರಣವಾಗಿತ್ತು. ಯುವತಿಗೆ ಸಂದೇಶ ಮಾಡಿರುವ  ವಿಚಾರವನ್ನು ಕಿಲಾಡಿ ಯುವಕ ಒಪ್ಪಿಕೊಂಡ ಕಾರಣ ಇತರ ಸ್ನೇಹಿತರು ನಿಟ್ಟುಸಿರು ಬಿಟ್ಟಿದ್ದಾರೆ.
ಯುವತಿಯ ದೂರಿನ ಹಿನ್ನೆಲೆಯಲ್ಲಿ  ಸುಮಾರು 15  ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.ಮತ್ತೊಬ್ಬರಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರವಹಿಸುವಂತೆ  ಪೊಲೀಸರು ಸೂಚನೆಯನ್ನೂ ನೀಡಿದ್ದಾರೆ.

LEAVE A REPLY

Please enter your comment!
Please enter your name here