ಅನಂತಪುರ ಕ್ಷೇತ್ರದ ಸರೋವರದಲ್ಲಿದ್ದ ಮೊಸಳೆ ಬಬಿಯಾ ಇನ್ನಿಲ್ಲ

0

 

ಸರೋವರ ಕ್ಷೇತ್ರವೆಂದೇ ಪ್ರಸಿದ್ದಿಪಡೆದ ಕಾಸರಗೋಡು ಕುಂಬ್ಳೆ ಸಮೀಪದ ಅನಂತಪುರ ಅನಂತಪದ್ಮನಾಭ ದೇವಾಲಯದ ಭಕ್ತರ ಆಕರ್ಷಣಾ ಬಿಂದುವಾಗಿದ್ದ ಬಬಿಯಾ ಎಂಬ ಮೊಸಳೆ ಕೊನೆಯುಸಿರೆಳೆದಿದೆ.


ನಿನ್ನೆ ರಾತ್ರಿ ಕ್ಷೇತ್ರದ ಸರೋವರದಲ್ಲಿ ಅದು ಮೃತಪಟ್ಟು ತೇಲಿತು. ಅದಕ್ಕೆ 80ಕ್ಕೂ ಹೆಚ್ಚು ವರ್ಷ ಪ್ರಾಯವಾಗಿದೆಯೆಂದು ಅಂದಾಜಿಸಲಾಗಿದೆ.
ದೇವಳದ ನೈವೇದ್ಯವನ್ನಷ್ಟೇ ಸೇವಿಸಿ, ಸಾಧುವಾಗಿ ಜೀವಿಸುತ್ತಿದ್ದ ಮೊಸಳೆಯನ್ನು ಜನರು ಗೌರವದಿಂದ ಆರಾಧಿಸುತ್ತಿದ್ದರು. ಈ ಮೊಸಳೆ ಇರುವುದರಿಂದಲೇ ಅನಂತಪುರ ಕ್ಷೇತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಮೂಡಿಸಿ ಜನಪ್ರಿಯತೆ ಪಡೆದಿತ್ತು.

ಸ್ವಾತಂತ್ರ್ಯ ಪೂರ್ವದಲ್ಲೇ ಕ್ಷೇತ್ರದಲ್ಲಿ ಮೊಸಳೆ ಇತ್ತು. ಅದನ್ನ ಈ ಪ್ರದೇಶದಲ್ಲಿ ಮಿಲಿಟರಿ ಕ್ಯಾಂಪ್ ಹಾಕಿದ್ದ ಬ್ರಿಟಿಷರು ಗುಂಡಿಕ್ಕಿ ಕೊಂದಿದ್ದರಂತೆ. ತದನಂತರ ಮತ್ತೊಂದು ಮೊಸಳೆ ಮರಿ ತಾನಾಗಿಯೇ ಕೆರೆಯಲ್ಲಿ ಪ್ರತ್ಯಕ್ಷಗೊಂಡಿತ್ತು. ಅದಕ್ಕೆ ಬಬಿಯಾ ಎಂದು ಹೆಸರಿಸಲಾಗಿತ್ತು. ಈ ವರೆಗೆ ಯಾರೊಬ್ಬರಿಗೂ ಉಪಟಳ ಮಾಡದ ದೇವರ ಮೊಸಳೆ ಎಂದೇ ಜನಾನುರಾಗಿಯಾಗಿದ್ದ ಈ ಮೊಸಳೆಯು ಇತ್ತೀಚಿನ ದಿನದಲ್ಲಿ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿತ್ತು. ಅದಕ್ಕೆ ಚಿಕಿತ್ಸೆ ಯೂ ನಡೆಯುತಿತ್ತು. ನಿನ್ನೆ ರಾತ್ರಿ ಅದು ಕೊನೆಯುಸಿರೆಳೆದು ನೀರಲ್ಲಿ ತೇಲಿದೆ.
ಪರಿಸರದ ಭಕ್ತರು ಸೇರಿ ಮೊಸಳೆಯನ್ನು ನೀರಿಂದ ಮೇಲೆತ್ತಿ ಕ್ಷೇತ್ರದ ಮುಂಭಾಗಕ್ಕೆ ತಂದಿದ್ದಾರೆ.
ಇಂದು ಬೆಳಿಗ್ಗೆ ತಂತ್ರಿಗಳ ಆಗಮನದ ಬಳಿಕ ಅದರ ಅಂತ್ಯಸಂಸ್ಕಾರ ವಿಧಿವಿಧಾನಗಳು ನಡೆಯಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here