ಮಾಣಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಿಲನ್ಯಾಸ, ಉದ್ಘಾಟನೆ

0

  • ಪ್ರತಿ ಗ್ರಾಮವನ್ನು  ಸಬಲೀಕರಣ ಮಾಡುವ ಕೆಲಸವಾಗುತ್ತಿದೆ: ಮಠಂದೂರು


ವಿಟ್ಲ: ಮಾಣಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ಎರಡು ಕೋಟಿ ಒಂಬತ್ತು ಲಕ್ಷ ರೂಪಾಯಿ ಅನುದಾನದಲ್ಲಿ ಅಭಿವೃದ್ದಿಗೊಳ್ಳಲಿರುವ ವಿವಿಧ ಕಾಮಗಾರಿಗಳಿಗೆ  ಮಾ.1ರಂದು ಶಾಸಕರಾದ ಸಂಜೀವ ಮಠಂದೂರುರವರು ಶಿಲನ್ಯಾಸ ನೆರವೇರಿಸಿ, ಪೂರ್ಣಗೊಂಡ ಕೆಲ ಕಾಮಗಾರಿಗಳನ್ನು ಉದ್ಘಾಟನೆ ನಡೆಸಿದರು.

ಬಳಿಕ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದೀಜಿಯವರ ಕನಸು‌ ಸಾಕಾರವಾಗುತ್ತಿದ್ದು, ಬಡಬಗ್ಗರನ್ನು ಮೇಲಕ್ಕೆತ್ತುವ ಕೆಲಸ ವಿವಿಧ ಯೋಜನೆಗಳ ಮೂಲಕ ಆಗುತ್ತಿದೆ. ಗ್ರಾಮಗಳ ಅಭಿವೃದ್ಧಿಯ ದೃಷ್ಠಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು  ಪಂಚಾಯತ್ ನ ಪ್ರತೀ ಬೂತ್ ಗಳಿಗೆ ರೂ. 20 ಲಕ್ಷ ಗಳ ಅನುದಾನವನ್ನು ನೀಡಿದ್ದಾರೆ. ಕಾಮಗಾರಿ ಗುಣಮಟ್ಟ ಹಾಗೂ ಕಾಲಮಿತಿಯಲ್ಲಿ ನಡೆಯುವುದು. ಕಾಮಗಾರಿ ಸುಧೀರ್ಘವಾಗಿ ಬಾಳ್ವಿಕೆ ಬರುವ ನಿಟ್ಟಿನಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಗ್ರಾಮಸ್ಥರು ಸಹಕರಿಸಬೇಕು. ಪ್ರತಿ ಗ್ರಾಮವನ್ನು  ಸಭಲೀಕರಣ ಮಾಡುವ ಕೆಲಸ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಆಗುತ್ತಿದೆ. ಬ್ರಷ್ಟಾಚಾರ ಮುಕ್ತ ರಾಷ್ಟ್ರ ನಿರ್ಮಾಣದತ್ತ  ಪ್ರಧಾನಿ ಮುಂದಡಿ ಇಟ್ಟಿದ್ದಾರೆ. ಬ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕೆಲಸವಾಗುತ್ತಿದ್ದು, ಪ್ರತಿಯೊಂದೂ ವ್ಯವಹಾರಗಳು ಡಿಜಿಟಲೀಕರಣದತ್ತ ಸಾಗುತ್ತಿದೆ.  ಪ್ರತಿಯೊಬ್ಬ ನಾಗರೀಕನ ಆರೋಗ್ಯದ‌ ಬಗ್ಗೆ‌ ಸರಕಾರ ಕಾಳಜಿ ವಹಿಸಿರುವುದರಿಂದ ಕರೋನ ಹತೋಟಿಗೆ ಬರಲು ಕಾರಣವಾಗಿದೆ. ಅಭಿವೃದ್ದಿ ನಿರಂತರವಾಗಿ ನಡೆಯುತ್ತಿದೆ. ನನ್ನ ಅವಧಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 800 ಕೋಟಿ ರೂಪಾಯಿ ಅನುದಾನ ಬಂದಿದೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಗ್ರಾಮೀಣ ಭಾಗದ ರಸ್ತೆಯನ್ನು ಕಾಂಕ್ರೀಟಿಕರಣ ಗೊಳಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಊರಿನಲ್ಲಿ  ಪ್ರತಿಯೊಂದು ಮೂಲಭೂತ ಸೌಕರ್ಯಗಳು ಅಭಿವೃದ್ಧಿಯಾದಾಗ ಜನರೂ ಬದಲಾಗಬೇಕು. ಉಳಿದಿರುವ ರಸ್ತೆಗಳನ್ನು ವಿಶೇಷ ಅನುಧಾನದ ಮೂಲಕ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಸೋಲಾರ್ ದೀಪ ಹಸ್ತಾಂತರ ಮಾಡಲಾಯಿತು.  ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಮಾಣಿಲ ಶಕ್ತಿ ಕೇಂದ್ರದ ಅಧ್ಯಕ್ಷ ಗೀತಾನಂದ ಶೆಟ್ಟಿ, ಬೂತ್ ಅಧ್ಯಕ್ಷ ರಾದ ಲವಕುಮಾರ್, ಚಂದ್ರ ಪಕಳಕುಂಜ, ಕಾರ್ಯದರ್ಶಿ ಮಹೇಶ್ ಕುಮಾರ್, ಶ್ರವಣ ಕುಮಾರ್ ಪಂಚಾಯತ್ ಸದಸ್ಯರಾದ ಚಂದ್ರಶೇಖರ ಕೆದುಮೂಲೆ, ಗೀತಾ,‌ಹಿರಿಯರಾದ ವಿಷ್ಣು ಕನ್ನಡಗುಳಿ, ಗೋಪಾಲಕೃಷ್ಣ ಭಟ್, ವೆಂಕಟಸುಬ್ಬರಾವ್ ಮೊದಲಾದವರು ಉಪಸ್ಥಿತರಿದ್ದರು. ರಾಮಚಂದ್ರ ಆಚಾರ್ಯ ಕಾರ್ಯಕ್ರಮ‌ ನಿರೂಪಿಸಿದರು. ಸುಬ್ರಮಣ್ಯ ವಂದಿಸಿದರು.

ವಿವಿಧ ಕಾಮಗಾರಿಗಳಿಗೆ ಶಿಲನ್ಯಾಸ:

ಏಳು ಲಕ್ಷ ರೂಪಾಯಿ ವೆಚ್ಚದ ದಂಡೆಪ್ಪಾಡಿ ಎಂಬಲ್ಲಿ ಪಕಳಕುಂಜ ಶಾಲಾ ಸಂಪರ್ಕ ಕಾಲುಸಂಕ ನಿರ್ಮಾಣ,  ಹದಿನೈದು ಲಕ್ಷ ರೂಪಾಯಿ‌ ವೆಚ್ಚದ ಬಾಳೆಕಾನ ಬಟ್ಯಡ್ಕ ರಸ್ತೆ ಕಾಂಕ್ರಿಟೀಕರಣ, ಏಳು ಲಕ್ಷ ರೂಪಾಯಿ‌ ವೆಚ್ಚದ ಮಾಣಿಲಗುತ್ತು ಎಂಬಲ್ಲಿ ಮುರುವ ಶಾಲಾ ಸಂಪರ್ಕ ಕಾಲುಸಂಕ ನಿರ್ಮಾಣ,  ಐವತ್ತೈದು ಲಕ್ಷ ರೂಪಾಯಿ ವೆಚ್ಚದ ಕೊಮ್ಮುಂಜೆ – ಓಟೆಪಡ್ಡು – ಮುರುವ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ,  ಎಪ್ಪತ್ತು ಲಕ್ಷ ರೂಪಾಯಿ ವೆಚ್ಚದ ಪೆರುವಾಯಿ – ಮಾಣಿಲ ನಾಯರ್‌ ಮೂಲೆ – ಪಕಳಕುಂಜ ರಸ್ತೆ ಅಭಿವೃದ್ಧಿ, ಮೂವತೈದು ಲಕ್ಷ ರೂಪಾಯಿ ವೆಚ್ಚದ  ಮುರುವ – ನೆಕ್ಕರೆ – ಬೊಳಿಂಜಡ್ಕ – ಓಟೆಪಡ್ಡು ರಸ್ತೆ ಕಾಂಕ್ರೀಟೀಕರಣ, ಹತ್ತು ಲಕ್ಷ ರೂಪಾಯಿ ವೆಚ್ಚದ ಓಟೆಪಡ್ಡು ರಸ್ತೆ ಅಭಿವೃದ್ಧಿ, ಹತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನೆಕ್ಕರೆ – ಬೊಳಿಂಜಡ್ಕ ಪರಿಶಿಷ್ಟ ಪಂಗಡ ಕಾಲೊನಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲಾಯಿತು.

 

 

LEAVE A REPLY

Please enter your comment!
Please enter your name here