ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ

0

  • ಪೊಲೀಸರ ಸಹಕಾರ ಪಡೆದುಕೊಂಡು ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲು ಕ್ರಮ-ನಿರ್ಣಯ

ಉಪ್ಪಿನಂಗಡಿ: ಇಲ್ಲಿನ ಬೇಂಕ್ ರಸ್ತೆಯಲ್ಲಿ, ಬಸ್ ನಿಲ್ದಾಣದ ಬಳಿಯಲ್ಲಿ ಸಂಚಾರಿ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಪೊಲೀಸರ ಸಹಕಾರ ಪಡೆದುಕೊಂಡು ಈ ಹಿಂದೆ ನಿರ್ಣಯಿಸಿದಂತೆ ಕ್ರಮಜರಗಿಸುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಅಧ್ಯಕ್ಷತೆಯಲ್ಲಿ ಮಾ. ೧೫ರಂದು ನಡೆದ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು ಪೇಟೆಯ ಒಳಗಡೆ ವಾಹನಗಳವರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದು, ಸರಕು ಹೇರುವುದು, ಇಳಿಸುವುದು ನಡೆಯುತ್ತಿರುತ್ತದೆ, ಅದಾಗ್ಯೂ ಬಸ್ ನಿಲ್ದಾಣದ ಬಳಿ ಸರ್ಕಲ್ ಬಳಿಯಲ್ಲಿಯೂ ವಾಹನಗಳು ಎಲ್ಲೆಂದರಲ್ಲಿ ನುಗ್ಗಿಸುವುದು ನಡೆಯುತ್ತಿರುತ್ತದೆ, ಒಟ್ಟಿನಲ್ಲಿ ಸಂಚಾರಿ ವ್ಯವಸ್ಥೆ

ಸಂಪೂರ್ಣ ಹದಗೆಟ್ಟಿದ್ದು, ಈ ಹಿಂದೆ ಹಿರಿಯ ಪೊಲೀಸ್ ಅಧಿಕಾರಿ, ಸಾರಿಗೆ ಇಲಾಖೆ ಅಧಿಕಾರಿ ಮೊದಲಾದವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ದಿನಕ್ಕೊಂದು ಬದಿಯಲ್ಲಿ ವಾಹನ ನಿಲುಗಡೆಗೆ ಸೂಚಿಸಲಾಗಿ ತೀರ್ಮಾಣ ತೆಗೆದುಕೊಳ್ಳಲಾಗಿದೆ. ಅದರಂತೆ ಮಾಡಿದರೆ ಸಮಸ್ಯೆ ಪರಿಹಾರ ಕಾಣಬಹುದಾಗಿದೆ ಎಂಬ ಅಭಿಪ್ರಾಯಕ್ಕೆ ಬರಲಾಗಿ ಇಲ್ಲಿನ ಪೊಲೀಸರ ಸಹಕಾರ ಪಡೆದುಕೊಂಡು ವ್ಯವಸ್ಥೆ ಸರಿಪಡಿಸುವುದಾಗಿ ನಿರ್ಣಯ ಅಂಗೀಕರಿಸಲಾಯಿತು.

ಪೇಟೆಯ ಒಳಗಡೆ ಹಣ್ಣು ಮಾರಾಟದ ಗಾಡಿಗಳು ಬಂದು ನಿಂತು ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದು, ಇದರಿಂದಾಗಿಯೂ ಸಮಸ್ಯೆ ಉಂಟಾಗಿದೆ, ಇದಕ್ಕೂ ಅವಕಾಶ ನೀಡದೆ, ಅಂತಹ ವಾಹನಗಳು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ನಿನ್ನಿಕಲ್, ದುರ್ಗಾಗಿರಿ ಮೊದಲಾದ ಕಡೆಯಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಸಂಪೂರ್ಣವಾಗಿ ಕುಸಿದು ಹೋಗಿದೆ, ಸಮಸ್ಯೆ ಜಠಿಲವಾಗುವ ಮುನ್ನ ಪರ್‍ಯಾಯ ವ್ಯವಸ್ಥೆ ಕಂಡುಕೊಳ್ಳುವ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ೩ ವರ್ಷಗಳಿಂದ ಬಸವ ವಸತಿ ಯೋಜನೆಯ ಮನೆಗಳು ಮಂಜೂರು ಆಗಿರುವುದಿಲ್ಲ, ಇದೀಗ ೪೦ ಮನೆಗಳು ಮಂಜೂರು ಆಗಿರುತ್ತದೆ, ಆದರೆ ಅದರಲ್ಲಿ ೧೩ ಮಂದಿಯ ದಾಖಲೆ ಪತ್ರಗಳು ಸರಿಯಾಗಿ ಇದ್ದು, ಮನೆ ನಿರ್ಮಿಸಲು ಮುಂದಾಗಿದ್ದಾರೆ, ಆದರೆ ಉಳಿದ ೨೭ ಮಂದಿಯೂ ದಾಖಲೆ ಸರಿಪಡಿಸುವ ತನಕ ಈ ೧೩

ಮಂದಿಯ ಮನೆಯವರು ಕಾಯುವಂತಾಗಿದೆ. ಇದು ಸರಿಯಾದ ಕ್ರಮ ಅಲ್ಲ ಎಂದು ಪ್ರತಿಪಾದಿಸಿದ ಸದಸ್ಯರುಗಳು ಈಗಾಗಲೇ ಮನೆ ನಿರ್ಮಿಸಲು ಸಿದ್ಧವಾಗಿರುವವರಿಗೆ ಅನುಮತಿ ನೀಡಬೇಕು ಎಂದು ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಕೆ. ಅಬ್ದುಲ್ ರಹಿಮಾನ್, ಸುರೇಶ್ ಅತ್ರಮಜಲು, ಲೋಕೇಶ್ ಬೆತ್ತೋಡಿ, ಯು.ಟಿ. ತೌಸೀಫ್, ಯು.ಕೆ. ಇಬ್ರಾಹಿಂ, ಅಬ್ದುಲ್ ರಶೀದ್, ಸಣ್ಣಣ್ಣ ಯಾ ಸಂಜೀವ ಮಡಿವಾಳ, ಧನಂಜಯ ಕುಮಾರ್, ವಿದ್ಯಾಲಕ್ಷ್ಮೀ ಪ್ರಭು ಮಾತನಾಡಿ ಸಲಹೆ ಸೂಚನೆ ನೀಡಿದರು. ಸದಸ್ಯರಾದ ಮೈಸಿದಿ ಇಬ್ರಾಹಿಂ, ಲಲಿತಾ, ಉಷಾ ನಾಯ್ಕ್, ರುಕ್ಮಿಣಿ, ಶೋಭಾ, ಜಯಂತಿ, ವನಿತಾ, ನೆಬಿಸಾ, ಸೌಧ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲಾರೆನ್ಸ್ ವಿಲ್ಫ್ರೆಡ್ ರೋಡ್ರಿಗಸ್ ಸ್ವಾಗತಿಸಿ, ಕಾರ್‍ಯದರ್ಶಿ ದಿನೇಶ್ ವಂದಿಸಿದರು.

LEAVE A REPLY

Please enter your comment!
Please enter your name here