ಮತ್ತೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್!

0

  • ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬಿಇಒ ಪತ್ರ
  • ಅಂಚೆಯಣ್ಣನ ಮೂಲಕ ಮನೆಬಾಗಿಲಿಗೆ ಬರಲಿದೆ ಇನ್‌ಲ್ಯಾಂಡ್ ಲೆಟರ್..!!

 


ಪುತ್ತೂರು: ಸರ್ಕಾರಿ ಶಿಕ್ಷಣ ವ್ಯವಸ್ಥೆಗೆ ಅನೇಕ ಹೊಸತನಗಳನ್ನು ಪರಿಚಯಿಸಿ, ರಾಜ್ಯದ ಶಿಕ್ಷಣ ಸಚಿವರಿಂದ ಪ್ರಶಂಸೆ ಪಡೆದಿರುವ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರ ಮೂಲಕ ಈ ಬಾರಿ ಮತ್ತೊಂದು ವಿನೂತನ ಪರಿಕಲ್ಪನೆ ಸಾಕಾರಗೊಂಡಿದೆ. ಕಳೆದ ಬಾರಿ, ಕೋವಿಡ್ ಸಂದರ್ಭದ ಎಸೆಸೆಲ್ಸಿ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪತ್ರ ಬರೆದು ಶಿಕ್ಷಕರ ಮೂಲಕ ಅದನ್ನು ವಿದ್ಯಾರ್ಥಿಗಳಿಗೆ ತಲುಪಿಸಿ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದ್ದ ಪುತ್ತೂರು ಬಿಇಒ ಸಿ.ಲೋಕೇಶ್ ಅವರು ಈ ಬಾರಿ ಹಿಂದೆ ಅಂಚೆಯಣ್ಣನ ಮೂಲಕ ಮನೆಮನೆ ತಲುಪುತ್ತಿದ್ದ `ಇನ್‌ಲ್ಯಾಂಡ್ ಲೆಟರ್’ನಲ್ಲಿ ವಿದ್ಯಾರ್ಥಿಗಳಿಗೆ ಪತ್ರ ಬರೆದು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮತ್ತೊಂದು ವಿನೂತನ ಪ್ರಯತ್ನದ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆ ಎದುರಿಸಲು ಧೈರ್ಯ ತುಂಬಿದ್ದಾರೆ.


ಇದೇ ಮಾ.೨೮ರಿಂದ ಎಸೆಸೆಲ್ಸಿ ಪರೀಕ್ಷೆ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಪ್ರತೀ ವಿದ್ಯಾರ್ಥಿಯನ್ನೂ ತಲುಪಿ ಅವರಲ್ಲಿ ಪರೀಕ್ಷೆ ಎದುರಿಸುವ ಕುರಿತು ಆತ್ಮಸ್ಥೈರ್ಯ ಹೆಚ್ಚಿಸಬೇಕೆಂಬ ಉದ್ದೇಶದಿಂದ ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ಪ್ರತೀ ವಿದ್ಯಾರ್ಥಿಯ ಮನೆಗೆ ತಲುಪುವಂತೆ ಇನ್‌ಲ್ಯಾಂಡ್ ಲೆಟರ್‌ನಲ್ಲಿ ಪತ್ರವನ್ನು ಬರೆದು ಪೋಸ್ಟ್ ಮಾಡಲಾಗಿದೆ. `ಉತ್ತುಂಗ – ೨೦೨೨’ ಎನ್ನುವ ಶೀರ್ಷಿಕೆಯಲ್ಲಿ ಮಾ.೭ರ ದಿನಾಂಕದಲ್ಲಿ ಬಿಇಒ ಅವರು ಪತ್ರವನ್ನು ಬರೆದಿದ್ದು, ವಿದ್ಯಾರ್ಥಿಗಳಿಗೆ ಉತ್ತೇಜಕ ಮಾತುಗಳೊಂದಿಗೆ ತಮ್ಮ ಮನದಾಳದ ಮಾತುಗಳನ್ನು ಬರೆದು ಸಹಿ ಹಾಕಿದ್ದಾರೆ.

ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಗೆ ಬರುವಂತೆ ಒಟ್ಟು ೪,೮೦೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು, ಅಷ್ಟೂ ಲೆಟರ್‌ಗಳನ್ನು ಪೋಸ್ಟ್ ಮಾಡಲಾಗಿದೆ. ಇದಕ್ಕಾಗಿ ಸುಮಾರು ೧೨ ಸಾವಿರ ರೂ. ವೆಚ್ಚ ತಗುಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಇದನ್ನು ಭರಿಸಿದ್ದಾರೆ. ಇನ್‌ಲ್ಯಾಂಡ್ ಲೆಟರ್‌ಗೆ ಪುನಶ್ಚೇತನ: ಇನ್‌ಲ್ಯಾಂಡ್ ಲೆಟರ್‌ಗೆ ಸುಮಾರು ೨೦-೨೫ ವರ್ಷಗಳ ಹಿಂದೆ ಬಹಳ ಮಹತ್ವವಿತ್ತು. ಅಂಚೆಯಣ್ಣ ಮನೆಗೆ ತಂದು ಕೊಡುವ ಕಾಗದವನ್ನು ನಾವೆಲ್ಲ ಬಹಳ ಕುತೂಹಲದಿಂದ ಕಾಯುತ್ತಿದ್ದೆವು. ಇದೀಗ ಅಂತಹ ಇನ್‌ಲ್ಯಾಂಡ್ ಲೆಟರ್‌ನ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿ ಮುಚ್ಚಿದ ಇನ್‌ಲ್ಯಾಂಡ್ ಲೆಟರ್‌ನ್ನು ಪ್ರತೀ ಎಸೆಸೆಲ್ಸಿ ವಿದ್ಯಾರ್ಥಿಯ ಮನೆಗೆ ತಲುಪಿಸಲಾಗುತ್ತಿದೆ.

ಸುದ್ದಿಯ `ಜನಮೆಚ್ಚಿದ ಅಽಕಾರಿ, ಇಲಾಖೆ’: ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಮೃತ ಮಹೋತ್ಸವದ ಪ್ರಯುಕ್ತ ಸುದ್ದಿ ಪುತ್ತೂರು ವತಿಯಿಂಧ ನಡೆದ ಪುತ್ತೂರು ತಾಲೂಕಿನ ಇಲಾಖೆಗಳ ಉತ್ತಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು `ಜನಮೆಚ್ಚಿದ ಅಧಿಕಾರಿ/ಸಿಬ್ಬಂದಿ` ಎಂದು ಆರಿಸುವ ಮತ್ತು ಒಟ್ಟು ೪೦ ಇಲಾಖೆಗಳ ಪೈಕಿ ಅತ್ಯುತ್ತಮ ಇಲಾಖೆಯನ್ನು ಆರಿಸುವ ನಿಟ್ಟಿನಲ್ಲಿ ಆನ್‌ಲೈನ್ ಓಟಿಂಗ್‌ನಲ್ಲಿ ತಾಲೂಕಿನ ಅತ್ಯುತ್ತಮ ಇಲಾಖೆಯಾಗಿ ಪುತ್ತೂರು ಸಾರ್ವಜನಿಕ ಶಿಕ್ಷಣ ಇಲಾಖೆ ಆರಿಸಲ್ಪಟ್ಟಿದೆ. ಜೊತೆಗೆ ಶಿಕ್ಷಣ ಇಲಾಖೆಯಲ್ಲಿ ಜನಮೆಚ್ಚಿದ ಅಽಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ಲೋಕೇಶ್ ಆಯ್ಕೆಯಾಗಿದ್ದರು.

ಪತ್ರದಲ್ಲೇನಿದೆ? :
`ಉತ್ತುಂಗ-2022′:2021-2022ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುತ್ತಿರುವ ನನ್ನೊಲವಿನ ವಿದ್ಯಾರ್ಥಿಗಳೇ, ವಿದ್ಯಾರ್ಥಿ ಜೀವನದ ಜವಾಬ್ದಾರಿಯುತ, ಅತ್ಯಾವಶ್ಯಕ ಅನಿವಾರ್ಯ, ಅವಿಸ್ಮರಣೀಯ ಘಟ್ಟವೇ ಹತ್ತನೇ ತರಗತಿ. ಮುಂಬರುವ ಸುದೀರ್ಘ ಕಲಿಕಾ ಮಂದಿರದ, ವೃತ್ತಿ ಹಂದರದ, ಆದರ್ಶ ಜೀವನದ ಆಯ್ಕೆಗಿದು ಸ್ವರ್ಣದ್ವಾರ. ಆದ್ದರಿಂದ ಹೆಚ್ಚಿನ ಜವಾಬ್ದಾರಿಯುತ ಕಲಿಕೆಗೆ ನಿಮ್ಮನ್ನೊಡ್ಡಿಕೊಳ್ಳಬೇಕಾಗಿದೆ. ಸುಂದರವಾದ ಸ್ಪಷ ವೇಳಾಪಟ್ಟಿ ತಯಾರಿಸಿ, ಅದರಂತೆ ಕಲಿಕೆ ಸಾಗಲಿ. ಪ್ರತಿದಿನ 6 ರಿಂದ 8 ಗಂಟೆಗಳ ಅಧ್ಯಯನ ನಡೆಸಿ, 7 ಗಂಟೆಗಳ ಸಿಹಿ ನಿದ್ದೆ ನಿಮ್ಮದಾಗಲಿ, ಗುರಿ ತಲುಪುವವರೆಗೂ ವಿಶ್ರಮಿಸದ ಕಲಿಕೆ ನಿಮ್ಮದಾಗಲಿ, ಚಿಂತನೆ, ಚರ್ಚೆಗಳೊಂದಿಗೆ ಓದು ಮುಂದುವರೆಯಲಿ. ಮುಂಬರುವ ಪರೀಕ್ಷಾ ಯಜ್ಞದಲ್ಲಿ ತಾದಾತ್ಮ್ಯತೆಯಿಂದ ಪಾಲ್ಗೊಂಡು ಅತ್ಯಽಕ ಅಂಕಗಳಿಸಲು, ಗುರುಹಿರಿಯರ ಆರ್ಶೀವಾದಗಳೊಂದಿಗೆ ಭಗವದ್ದಯೆಯು ನಿಮಗಿರಲಿ. ನಿಮ್ಮ ಯಶದ ನಡಿಗೆಗೆ ನನ್ನ ಪ್ರೀತಿಯ ಶುಭ ನುಡಿ.

ಒಲವಿನಿಂದ, (ಲೋಕೇಶ ಸಿ.) ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು ತಾಲೂಕು

ಎಸೆಸೆಲ್ಸಿ ಪರೀಕ್ಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಮೂಡಿಸುವ ಜೊತೆಗೆ
ವಿದ್ಯಾರ್ಥಿಗಳಲ್ಲಿ ಇನ್‌ಲ್ಯಾಂಡ್ ಲೆಟರ್ ಬಗ್ಗೆ ಮಾಹಿತಿ ನೀಡಬೇಕೆನ್ನುವ ಉದ್ದೇಶದಿಂದ ಈ ಪ್ರಯತ್ನವನ್ನು ಮಾಡಿದ್ದೇವೆ. ಕಳೆದ ಎರಡು ವರ್ಷಗಳಲ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ನಾನಾ ಅಡ್ಡಿ ಎದುರಾಗಿತ್ತು. ನೆಲೆಯಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡಿ, ಧೈರ್ಯ ತುಂಬುವ ನೆಲೆಯಲ್ಲಿ ಪತ್ರ ಬರೆಯಲಾಗಿದೆ. ಈ ಪತ್ರದ ಮೂಲಕ ವಿದ್ಯಾರ್ಥಿಗಳು, ಪೋಷಕರ ಮನಮುಟ್ಟಬೇಕೆನ್ನುವುದು ನಮ್ಮ ಉದ್ದೇಶ. ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಉತ್ತಮ ಅಂಕಗಳಿಸಬೇಕು ಎನ್ನುವುದು ನಮ್ಮ ನೆಲೆ. ಸಿ. ಲೋಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು

2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಕ್ಷೇತ್ರ ಶಿಕ್ಷಣಾಽಕಾರಿಗಳು ಉತ್ತುಂಗ ೨೦೨೨ರ ಮುಖಾಂತರ, ವಿಶೇಷವಾದ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹೃದಯ ಸ್ಪರ್ಶಿ ನುಡಿಗಳೊಂದಿಗೆ ವಿದ್ಯಾರ್ಥಿಗಳ ಮನ ಮುಟ್ಟುವ, ಹೃದಯ ತಟ್ಟುವ ಕಾಯಕದಲ್ಲಿ ಸಫಲರಾಗಿದ್ದಾರೆ ಎಂದು ಹೇಳಲು ಹರ್ಷಿಸುತ್ತೇನೆ. ಅವಿರತ ಶ್ರಮಪಟ್ಟು ವಿದ್ಯಾಭಿಮಾನದಿಂದ ಪತ್ರ ಸಂದೇಶ ನೀಡಿದ ಮಾನ್ಯ ಶಿಕ್ಷಣಾಧಿಕಾರಿಗಳಿಗೆ ಧನ್ಯತಾ ಭಾವದಿಂದ ಕೃತಜ್ಞತೆ ಸಲ್ಲಿಸುತ್ತೇನೆ. ರೊಸಲಿನ್ ಎ-. ಲೋಬೋ, ಮುಖ್ಯೋಪಾಧ್ಯಾಯಿನಿ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆ, ಪುತ್ತೂರು

LEAVE A REPLY

Please enter your comment!
Please enter your name here