‘ದೊಡ್ಡಡ್ಕದಲ್ಲಿ ನಡೆದ ಕೊಲೆಯತ್ನ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’

0

  • ವಿಶ್ವಕರ್ಮ ಯುವ ಮಿಲನ ಕರ್ನಾಟಕದ ಸ್ಥಾಪಕ ರಾಜ್ಯಾಧ್ಯಕ್ಷ ವಿಕ್ರಮ್ ಆಚಾರ್ಯ ಆಗ್ರಹ

ಪುತ್ತೂರು: ಆರ್ಯಾಪು ಗ್ರಾಮದ ದೊಡ್ಡಡ್ಕದಲ್ಲಿ ಮಾ.13ರಂದು ಕೊಗ್ಗು ಆಚಾರ್ಯರ ಪತ್ನಿ ಸರೋಜಿನಿ ಆಚಾರ್ಯ, ಮಗ ನಾರಾಯಣ ಆಚಾರ್ಯ, ಸೊಸೆ ಪೂಜಾರವರ ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಯತ್ನ ನಡೆದಿದೆ. ಘಟನೆ ಕುರಿತು ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ, ಆರೋಪಿಗಳ ಬಂಧನವಾಗಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಇಲ್ಲದೇ ಇದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ವಿಶ್ವಕರ್ಮ ಸಮಾಜದ ಎಲ್ಲಾ ಸಂಘಸಂಸ್ಥೆಗಳು ಸೇರಿಕೊಂಡು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ನಿಶ್ಚಯಿಸಿದ್ದೇವೆ ಎಂದು ವಿಶ್ವಕರ್ಮ ಯುವ ಮಿಲನ ಕರ್ನಾಟಕದ ಸ್ಥಾಪಕ ರಾಜ್ಯಾಧ್ಯಕ್ಷ ವಿಕ್ರಮ್ ಐ. ಆಚಾರ್ಯ ಹೇಳಿದ್ದಾರೆ.

ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಮಾ.16ರಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗರಾಜ ಆಚಾರ್ಯರ ತಂದೆ ಕೊಗ್ಗು ಆಚಾರ್ಯ ಅವರು ಮನೆಯ ಮುಂದೆ ಒಂದು ಗುಡಿ ನಿರ್ಮಿಸಿದ್ದರು. ಆ ಗುಡಿಯಲ್ಲಿ ನೆರೆಕರೆಯವರು ಸೇರಿಕೊಂಡು ದೀಪ ಉರಿಸುವುದು, ಆರತಿ ತೆಗೆದುಕೊಳ್ಳುವುದು, ಪ್ರಸಾದ ತೆಗೆದುಕೊಳ್ಳುತ್ತಿದ್ದರು. ಆದರೆ ಅವರ ಉದ್ದೇಶ ಬೇರೆ ಇತ್ತು. ಅವರು ಪೂರ್ವಯೋಜಿತವಾಗಿ ಆ ಜಾಗವನ್ನು ಒಳಗೆ ಹಾಕಬೇಕು ಎಂಬ ಉದ್ದೇಶಕ್ಕೋಸ್ಕರ ಆ ಜಾಗಕ್ಕೆ ಬಂದು ಇದೆಲ್ಲವನ್ನು ಮಾಡುತ್ತಿದ್ದರು. ಸೇಸಪ್ಪ ನಾಯ್ಕರು ಈ ಜಾಗವನ್ನು ಕಬಳಿಸಬೇಕೆನ್ನುವ ಉದ್ದೇಶದಿಂದ ಸೇರಿಕೊಂಡರು ಎಂದು ಆರೋಪಿಸಿದ್ದಾರೆ.

ಕೃತ್ಯ ಮಾಡಿದವರ ಜೊತೆಗೆ ಮಾಡಿಸಿದವರಿಗೂ ಶಿಕ್ಷೆಯಾಗಬೇಕು. ಇದು ಮಾರಣಾಂತಿಕ ಹಲ್ಲೆಯಲ್ಲ, ಕೊಲೆ ಯತ್ನ ಪ್ರಕರಣ. ಪೊಲೀಸರು ಕ್ರಮಬದ್ಧ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದಲ್ಲಿ ಜಿಲ್ಲಾಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ವಿಶ್ವಕರ್ಮ ಸಮಾಜದ ಎಲ್ಲಾ ಸಂಘಸಂಸ್ಥೆಗಳು ಸೇರಿಕೊಂಡು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ನಿಶ್ಚಯಿಸಿದ್ದೇವೆ ಎಂದು ಅವರು ಹೇಳಿದರು.

ಕೊಗ್ಗು ಆಚಾರ್ಯರ ಜಾಗವು ದಾಖಲೆಬದ್ಧವಾಗಿದೆ. ಇವರ ಜಾಗದಲ್ಲಿ ಬೇರೊಬ್ಬರು ಬಂದು ಅತಿಕ್ರಮಣ ಮಾಡುವುದು ಹೇಗೆ ಸಾಧ್ಯ? ವಿಶ್ವಕರ್ಮ ಸಮುದಾಯಕ್ಕೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂದು ವಿಕ್ರಮ್ ಐ ಆಚಾರ್ಯ ಎಚ್ಚರಿಸಿದರು.

ಸರೋಜಿನಿ ಆಚಾರ್ಯರ ಪುತ್ರ ನಾಗರಾಜ ಆಚಾರ್ಯ ಮಾತನಾಡಿ, ಮಾ.೧೩ರಂದು ಸಂಜೆ ೪ ಗಂಟೆಗೆ ನನ್ನ ತಾಯಿಗೆ ಹಲ್ಲೆ ಮಾಡಿದರು. ನಮ್ಮ ಜಾಗದಲ್ಲಿ ತಕರಾರು ಮಾಡಿದರು. ನಮ್ಮ ತಂದೆ ಆ ಜಾಗಕ್ಕೆ ೧೯೫೦ರಲ್ಲಿ ಬಂದು ಮನೆಕಟ್ಟಿದ್ದರು. ಆ ಜಾಗದಲ್ಲಿ ೧೯೯೪ರಲ್ಲಿ ಭಜನಾ ಮಂದಿರ ಕಟ್ಟಿದ್ದರು. ಅದಕ್ಕೆ ಊರವರು ಸೇರುತ್ತಿದ್ದರು. ಈಗ ನಮ್ಮ ತಾಯಿಗೆ ಹಲ್ಲೆಯಾಗಿದೆ. ವೆಂಕಟಕೃಷ ಭಟ್, ಪೂವಪ್ಪ ನಾಯ್ಕ, ಜಗದೀಶ್ ಭಂಡಾರಿ, ರುಕ್ಮಯ ಮೂಲ್ಯ ಇವರೆಲ್ಲಾ ಸೇರಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿದರು.

ದ.ಕ. ಚಿನ್ನದ ಕೆಲಸಗಾರರ ಸಂಘದ ಪುತ್ತೂರು ತಾಲೂಕು ಪ್ರತಿನಿಽ ಮತ್ತು ವಿಶ್ವಬ್ರಾಹ್ಮಣ ಸೇವಾ ಸಂಘದ ಉಪಾಧ್ಯಕ್ಷ ಭುಜಂಗ ಆಚಾರ್ಯ ಮಾತನಾಡಿ, ಜಾಗದ ಬಗ್ಗೆ ಏನೇ ತಕರಾರು ಇದ್ದರೂ ಅದನ್ನು ಅವರೇ ನೋಡಿಕೊಳ್ಳುತ್ತಾರೆ. ಒಂದು ವೃದ್ಧ ಹೆಂಗಸಿಗೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

ಮಂಗಳೂರು ಕಾಳಿಕಾಂಬ ವಿನಾಯಕ ದೇವಸ್ಥಾನದ ಕಮಿಟಿ ಸದಸ್ಯ, ಗುರು ಸೇವಾ ಪರಿಷತ್‌ನ ಪುತ್ತೂರು ವಲಯದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಮಾತನಾಡಿ, ಭಜನಾ ಮಂದಿರ ಇರುವುದು ಹಿಂದೂ ಸಮಾಜ ಒಟ್ಟಾಗಿ ಇರುವುದಕ್ಕೆ. ಇಲ್ಲಿ ಹಿಂದೂ ಹಿಂದೂಗಳೇ ಗಲಾಟೆ ಮಾಡಿದರೆ ಒಗ್ಗಟ್ಟು ಎಲ್ಲಿರುತ್ತದೆ? ಈ ಪ್ರಕರಣ ಒಂದು ಷಡ್ಯಂತ್ರ. ನಮ್ಮ ಸಮಾಜದ ಬಡ ಕುಟುಂಬದ ಹಿರಿಯ ಮಹಿಳೆಗೆ ಹಲ್ಲೆಯಾಗಿರುವುದು ಖಂಡನೀಯ. ಇದನ್ನು ವಿಶ್ವಕರ್ಮ ಸಮಾಜದ ಎಲ್ಲಾ ಸಂಘಟನೆಗಳು ಒಟ್ಟಾಗಿ ಖಂಡಿಸುತ್ತೇವೆ ಎಂದರು.

LEAVE A REPLY

Please enter your comment!
Please enter your name here