ಉಬರಡ್ಕ ಗ್ರಾ.ಪಂ. ನಲ್ಲಿ ಅವ್ಯವಹಾರ ನಡೆದಿಲ್ಲ : ವಿಷಾದ ವ್ಯಕ್ತಪಡಿಸಿದ ಪಂಚಾಯತ್ ಸದಸ್ಯ

0

 

ಗ್ರಾಮ ಪಂಚಾಯತ್ ಸಾಮಾನ್ಯ ಸಭೆ : ಗೊಂದಲ ಇತ್ಯರ್ಥ

ಉಬರಡ್ಕ ಗ್ರಾಮ ಪಂಚಾಯತ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಪಂಚಾಯತ್ ಸದಸ್ಯ ಅನಿಲ್ ಬಳ್ಳಡ್ಕರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವಿಚಾರ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಗಿ, ಅನಿಲ್ ಬಳ್ಳಡ್ಕ‌ರು ವಿಷಾದ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಗೊಂದಲಕ್ಕೆ ತೆರೆ ಎಳೆಯಲಾಗಿರುವುದಾಗಿ ತಿಳಿದುಬಂದಿದೆ.

ಪಂಚಾಯತ್ ಸಾಮಾನ್ಯ ಸಭೆಯು ಅ.29 ರಂದು ಅಧ್ಯಕ್ಷೆ ಚಿತ್ರಕುಮಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.‌ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲ, ಸದಸ್ಯರುಗಳಾದ ಹರೀಶ್ ರೈ ಉಬರಡ್ಕ, ಅನಿಲ್ ಬಳ್ಳಡ್ಕ, ಸಂದೀಪ್, ಪೂರ್ಣಿಮಾ ಸೂಂತೋಡು, ಮಮತಾ ಕುದ್ಪಾಜೆ, ಭವಾನಿ, ಪಿಡಿಒ ವಿದ್ಯಾಧರ್ ಇದ್ದರು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಸದಸ್ಯ ಹರೀಶ್ ರೈ ಉಬರಡ್ಕರು, “ಪಂಚಾಯತ್ ನಲ್ಲಿ ಅವ್ಯವಹಾರ ನಡೆದಿದೆ, ಕ್ರಿಯಾ ಯೋಜನೆ ಬದಲಾಗಿದೆ ಎಂದು ಸಾಮಾಜಿಕ ಜಾಲತಾಣ, ಪತ್ರಿಕೆಯಲ್ಲಿ ಹೇಳಿಕೆ ನೀಡಿ ಊರವರಿಗೆ ನಮ್ಮ ಮೇಲೆ ತಪ್ಪು ಅಭಿಪ್ರಾಯ ಬರುವಂತಾಗಿದೆ. ಇಲ್ಲಸಲ್ಲದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ವಿಚಾರವಾಗಿ ಏನು ಕ್ರಮ ಕೈಗೊಂಡಿದ್ದೀರಿ? ಅವರು ತಪ್ಪೊಪ್ಪಿಕೊಂಡಿದ್ದಾರಾ?” ಎಂದು ಪ್ರಶ್ನಿಸಿದಾಗ, ಧ್ವನಿಗೂಡಿಸಿದ ಉಪಾಧ್ಯಕ್ಷ ಪ್ರಶಾಂತ್ ಪಾನತ್ತಿಲರು “ಪಂಚಾಯತ್ ನಲ್ಲಿ ಯಾವುದೇ ಅವ್ಯವಹಾರ ಆಗದಿದ್ದರೂ ಆ ರೀತಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವುದು ಸರಿಯಲ್ಲ. ಅವರು ತಪ್ಪು ಒಪ್ಪಿಕೊಳ್ಳದಿದ್ದರೆ, ನಾವು ಖಂಡನಾ ನಿರ್ಣಯ ಮಾಡುತ್ತೇವೆ” ಎಂದು ಹೇಳಿದರು. ಇತರ ಸದಸ್ಯರು ಪ್ರಶಾಂತರ ಮಾತನ್ನು ಬೆಂಬಲಿಸಿದರು. ಅಧ್ಯಕ್ಷರು ಈ ಬಗ್ಗೆ ಮಾತನಾಡಬೇಕೆಂದು ಸದಸ್ಯರು ಒತ್ತಾಯಿಸಿದಾಗ, ” ಕ್ರಿಯಾಯೋಜನೆ ಬದಲಾಯಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ಅದನ್ನು ಓದದೇ ಸಹಿ ಹಾಕಿದ್ದೆ. ಇಲ್ಲಿ ಅವ್ಯವಹಾರ ನಡೆದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ ” ಎಂದು ಅಧ್ಯಕ್ಷೆ ಚಿತ್ರಕುಮಾರಿ ಹೇಳಿದರು.
ಪಿಡಿಒ‌ ವಿದ್ಯಾಧರ್ ಮಾತನಾಡಿ ” ಸ್ವಚ್ಚತಾ ವೇತನಕ್ಕೆ ಕ್ರಿಯಾ ಯೋಜನೆಯಲ್ಲಿ ಅನುದಾನ ಇಡದಿದ್ದುದರಿಂದ ಬಳಿಕ ತೆಗೆದಿರಿಸಲಾಗಿದೆ. ಅದನ್ನು ನಿಮ್ಮ ಗಮನಕ್ಕೆ ತಾರದೇ ಆ ರೀತಿ ಮಾಡಿರುವುದರಿಂದ ನನ್ನಿಂದಾದ ತಪ್ಪನ್ನು ಒಪ್ಪಿಕೊಳ್ಳುವೆ” ಎಂದು ಹೇಳಿದರು. ‌ಈ ವೇಳೆ ಸದಸ್ಯ ಅನಿಲ್ ಬಳ್ಳಡ್ಕರು ” ಕ್ರಿಯಾಯೋಜನೆ ನಮ್ಮ ಗಮನಕ್ಕೆ ಬಾರದೇ ತೆಗೆದಿರುವುದನ್ನು ನಾನು ಪ್ರಶ್ನಿಸಿದೆ. ಆದರೆ ಅವ್ಯವಹಾರ ಆಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಾನು ಹರಿ ಬಿಟ್ಟಿದ್ದು ತಪ್ಪೆಂದು ನನಗನಿಸಿದೆ. ಆದ್ದರಿಂದ ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.
“ಮುಂದೆ ಈ ರೀತಿ ಆಗಬಾರದೆಂದು” ಸದಸ್ಯರು‌ ಸಭೆಯಲ್ಲಿ ಹೇಳಿದರಲ್ಲದೆ, ಈ ಕುರಿತು ನಿರ್ಣಯ ಪುಸ್ತಕದಲ್ಲಿ‌ ಬರೆಯುವಂತೆ ಹೇಳಿದರು.‌ ಬಳಿಕ ಸಭೆಯಲ್ಲಿ ಆದ ಚರ್ಚೆಯ ಕುರಿತು ನಿರ್ಣಯ ಬರೆಯಲಾಯಿತು.

*ನಿರ್ಣಯ* : ಸಾಮಾನ್ಯ ಸಭೆಯ ಗಮನಕ್ಕೆ ತಾರದೇ ಹಿಂದೆ ತಯಾರಿಸಲಾದ ಕ್ರಿಯಾಯೋಜನೆಯಲ್ಲಿ ಕಾಯ್ದಿರಿಸಿದ ಕಾಮಗಾರಿಗಳನ್ನು ಕೈಗೊಳ್ಳದೆ ಪಂಚಾಯತ್ ಅಧ್ಯಕ್ಷರು‌ ಮತ್ತು ಪಿಡಿಒ ಬದಲಾಯಿಸಿದ ಬಗ್ಗೆ ಪಂಚಾಯತ್ ಸದಸ್ಯರಾದ ಅನಿಲ್ ಬಳ್ಳಡ್ಕ ರವರು ಉಪಾಧ್ಯಕ್ಷ ರು ಹಾಗೂ ಸದಸ್ಯರನ್ನು ಗುರಿಯಾಗಿರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಮತ್ತು ಪತ್ರಿಕೆಯಲ್ಲಿ ವರದಿ ಮಾಡಿರುವಂತೆ ಉಪಾಧ್ಯಕ್ಷ ರಾಗಲೀ, ಇತರ ಸದಸ್ಯರಾಗಲೀ ಕ್ರಿಯಾಯೋಜನೆ ಬದಲಾವಣೆಗೆ ಕಾರಣ ಕರ್ತರಲ್ಲ. ಪಂಚಾಯತ್ ಅಧ್ಯಕ್ಷರು‌ ಮತ್ತು ಪಿಡಿಒ ಕಾರಣರೆಂದು ಒಪ್ಪಿಕೊಂಡಿರುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ವಿಚಾರವನ್ನು ಅನಿಲ್ ಬಳ್ಳಡ್ಕ ತಪ್ಪೆಂದು ಒಪ್ಪಿಕೊಂಡಿದ್ದು, ಪಂಚಾಯತ್ ನಲ್ಲಿ ಹಣಕಾಸಿನ ವ್ಯವಹಾರದಲ್ಲಿ‌ ಅವ್ಯವಹಾರ ನಡೆದಿಲ್ಲವೆಂದು ಸಭೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಲಾಯಿತೆಂದು ನಿರ್ಣಯ ಬರೆಯಲಾಗಿದೆ.

LEAVE A REPLY

Please enter your comment!
Please enter your name here