ನಗರಸಭೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಸೈಕಲ್‌ಗಳು ಪತ್ತೆ

0

ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಕಳವಾಗಿದ್ದ ಹಲವು ಸೈಕಲ್‌ಗಳ ಪೈಕಿ ಕೆಲವು ಸೈಕಲ್‌ಗಳು ಪತ್ತೆಯಾಗಿವೆ. ಸೈಕಲ್‌ಗಳನ್ನು ಕಳವು ಮಾಡಿರುವ ಕೃತ್ಯದಲ್ಲಿ ಅಪ್ರಾಪ್ತರ ಕೈಚಳಕ ಇರುವುದು ತನಿಖೆಯಲ್ಲಿ ಗೊತ್ತಾಗಿದೆ.


ನಗರಸಭೆ ವ್ಯಾಪ್ತಿಯ ಸೂತ್ರಬೆಟ್ಟು, ಕೊಂಬೆಟ್ಟು, ಪರ್ಲಡ್ಕ ಸೇರಿದಂತೆ ಹಲವು ಕಡೆ ಬೆಲೆ ಬಾಳುವ ಸೈಕಲ್‌ಗಳು ಕಳವಾಗಿತ್ತು. ಈ ಕುರಿತು ಪೊಲೀಸರಿಗೆ ಮೌಖಿಕ ದೂರನ್ನು ನೀಡಲಾಗಿತ್ತು. ಆದರೆ ಇದೀಗ ಕಳವಾದ ಸೈಕಲ್‌ನಲ್ಲಿ ಶಾಲಾ ಬಾಲಕನೋರ್ವ ಹೋಗುತ್ತಿರುವುದನ್ನು ಗಮನಿಸಿದ ಸೈಕಲ್ ಮಾಲಕ ವಿಚಾರಿಸಿದಾಗ ತಕ್ಷಣ ಇದು ನಿಮ್ಮ ಸೈಕಲ್ ಆಗಿದ್ದಲ್ಲಿ ನೀವು ಕೊಂಡು ಹೋಗಿ ಎಂದು ಹೇಳಿದ್ದಲ್ಲದೆ ನನಗೆ ಸ್ನೇಹಿತನೊಬ್ಬ ರೂ. ೧ ಸಾವಿರಕ್ಕೆ ಸೈಕಲ್ ಕೊಟ್ಟದ್ದು ಎಂದು ಹೇಳಿದ್ದ. ಅದೇ ರೀತಿ ಸೈಕಲ್ ಕೊಟ್ಟ ಬಾಲಕನನ್ನು ಸಂಪರ್ಕಿಸಿ ಆತನಲ್ಲಿದ್ದ ಕೆಲವು ಕಳವಾದ ಸೈಕಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದು ಕೊಂಡು ಆತನ ಪೋಷಕರನ್ನು ಠಾಣೆಗೆ ಬರಲು ಹೇಳಿ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬೊಳುವಾರಿನ ಆಟೋ ಮೊಬೈಲ್ ಸಂಸ್ಥೆಯೊಂದರ ಮನೋಹರ್ ರಾಜ್ ಪುರೊಹಿತ್ ಅವರು ಕಳವಾದ ಸೈಕಲ್ ಪತ್ತೆ ಮಾಡಿದ್ದು, ಕೊಂಬೆಟ್ಟು ನಿವಾಸಿ ಪದಂ ಸಿಂಗ್ ರಾಜ್ ಪುರೋಹಿತ್, ವಾರ್ಡ್‌ನ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಅವರು ಸಹಕಾರ ನೀಡಿದ್ದಾರೆ.

ಅಪ್ರಾಪ್ತರ ಕೈಚಳಕ

ಅಪ್ರಾಪ್ತರು ಸೈಕಲ್ ಕಳವಿನಲ್ಲಿ ಭಾಗಿಯಾಗಿರುವುದು ದುರಂತದ ವಿಚಾರವಾಗಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಶಾಲೆಗಳು ಬಹುತೇಕ ಮುಚ್ಚಲ್ಪಟ್ಟು, ಕೊನೆಗೂ ತೆರೆದು ಕೊಂಡರೂ ಮಕ್ಕಳು ಶಾಲಾ ಚಟುವಟಿಕೆಯಲ್ಲಿ ಬಹಳ ಹಿಂದೆ ಇದ್ದಾರೆ. ಇದರ ಜೊತೆಗೆ ಬಡತನದ ಬೇಗೆಯಲ್ಲಿರುವ ಮಕ್ಕಳಿಗೆ ಇತ್ತೀಚಿಗಿನ ಅತ್ಯಾಧುನಿಕ ಬೆಲೆ ಬಾಳುವ ಗೇರ್, ಶಾಕ್‌ಅಬ್ಸರ್ ಇರುವ ಸೈಕಲ್‌ಗಳು ಟ್ರೆಂಡ್ ಆಗಿದ್ದು, ಇದನ್ನು ಖರೀದಿಸಲು ಆಗದ ಸಂದರ್ಭ ಕಳ್ಳತನಕ್ಕೆ ದಾರಿಯಾಗಿದೆ. ಅದರೂ ಮನೆಯಲ್ಲಿ ಪೋಷಕರ ಭಯವಿದ್ದರೆ ಈ ರೀತಿಯ ಕಳ್ಳತನಕ್ಕೆ ಮಕ್ಕಳು ಕೈ ಹಾಕುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

LEAVE A REPLY

Please enter your comment!
Please enter your name here