ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಉಪ್ಪಿನಂಗಡಿಯ ಹರಿಪ್ರಸಾದ್

0

ಉಪ್ಪಿನಂಗಡಿ: ದ.ಕ. ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಹೆಡ್ ಕಾನ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಇಲ್ಲಿನ ನಟ್ಟಿಬೈಲ್ ನಿವಾಸಿ ಹರಿಪ್ರಸಾದ್ ಅವರು 2022ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ.


1996ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೊಂಡಿರುವ ಹರಿಪ್ರಸಾದ್ ಅವರಿಗೆ ಈಗ 49ರ ಹರೆಯ. ಪುತ್ತೂರು ಗ್ರಾಮಾಂತರ, ಮಂಗಳೂರು ದಕ್ಷಿಣ, ಕಡಬ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆ ಹಾಗೂ ಉಪ್ಪಿನಂಗಡಿಯಲ್ಲಿರುವ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿ, ಬಂಟ್ವಾಳ ವೃತ್ತ ನಿರೀಕ್ಷಕರ ಕಚೇರಿ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಕಳೆದ ಐದು ವರ್ಷಗಳಿಂದ ದ.ಕ. ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಕರ್ತವ್ಯದಲ್ಲಿದ್ದಾರೆ. ಕಾನ್‌ಸ್ಟೇಬಲ್ ಆಗಿದ್ದ ಇವರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೆಡ್‌ಕಾನ್‌ಸ್ಟೇಬಲ್ ಆಗಿ ಪದೋನ್ನತಿ ಹೊಂದಿದ್ದರು. ಪೊಲೀಸ್ ಠಾಣೆಗಳಲ್ಲಿ ಇವರು ಕರ್ತವ್ಯದಲ್ಲಿದ್ದಾಗ ಗಂಭೀರ ಅಪರಾಧ ಪ್ರಕರಣಗಳ ತನಿಖಾ ಸಹಾಯಕನಾಗಿ ಕೆಲಸ ಮಾಡಿದ್ದು, ಹಲವು ಕ್ಲಿಷ್ಟಕರ ಪ್ರಕರಣವನ್ನು ಪತ್ತೆ ಹಚ್ಚಲು ಇವರು ಇಲಾಖೆಗೆ ನೆರವಾಗಿದ್ದರಲ್ಲದೆ, ಅಪರಾಧಿಗಳಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಸಿಬಿಯಲ್ಲಿ ಕೂಡಾ ಭ್ರಷ್ಟರನ್ನು ಹೆಡೆಮುರಿ ಕಟ್ಟಲು ನೆರವಾಗಿದ್ದರು. ಇದನ್ನೆಲ್ಲಾ ಪರಿಗಣಿಸಿ ಇವರಿಗೆ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. ಪದಕ ಪ್ರಧಾನ ಸಮಾರಂಭವು ಎ.೨ರಂದು ನಡೆಯಲಿದೆ.

ಮೂಲತಃ ಮಂಗಳೂರು ಕೆಪಿಟಿ ಬಳಿಯ ಉದಯನಗರ ಎರಡನೇ ಕ್ರಾಸ್ ನಿವಾಸಿಯಾಗಿರುವ ಇವರು ಅಬಕಾರಿ ಇಲಾಖೆಯಲ್ಲಿ ಹೆಡ್ ಗಾರ್ಡ್ ಆಗಿ ನಿವೃತ್ತರಾಗಿರುವ ಕೆ. ವೆಂಕಟಾಚಲ ಮತ್ತು ಕಸ್ತೂರಿ ದಂಪತಿಯ ಪುತ್ರನಾಗಿದ್ದು, ಆರು ವರ್ಷದಿಂದ ಪತ್ನಿ ಸ್ವಪ್ನಾ ಹಾಗೂ ಪುತ್ರರಾದ ಎಂಜಿನಿಯರಿಂಗ್ ವಿದ್ಯಾರ್ಥಿ ವರುಣ್ ಹಾಗೂ ಏಳನೇ ತರಗತಿ ವಿದ್ಯಾರ್ಥಿ ಹೃತಿನ್ ಅವರೊಂದಿಗೆ ಉಪ್ಪಿನಂಗಡಿಯ ನಟ್ಟಿಬೈಲ್‌ನಲ್ಲಿ ಮನೆ ಮಾಡಿಕೊಂಡು ವಾಸ್ತವ್ಯದಲ್ಲಿದ್ದಾರೆ.

LEAVE A REPLY

Please enter your comment!
Please enter your name here