‘ಕೋಕಾ’ ಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ ಪುತ್ತೂರಿನ ಕೆ. ಶಿವಪ್ರಸಾದ್ ಆಳ್ವ: ಭೂಗತ ಪಾತಕಿ ಬನ್ನಂಜೆ ರಾಜಾ ಮೇಲಿನ ಕೊಲೆ ಆರೋಪ ಸಾಬೀತು: ಎ.೪ರಂದು ಶಿಕ್ಷೆ ಪ್ರಕಟ

0

ಕೆ. ಶಿವಪ್ರಸಾದ್ ಆಳ್ವ

ಬನ್ನಂಜೆ ರಾಜಾ

ಪುತ್ತೂರು: ಬೆಳಗಾವಿ ಅಂಕೋಲಾದ ಉದ್ಯಮಿ ಆರ್.ಎನ್.ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಉಡುಪಿ ಮೂಲದ ಬನ್ನಂಜೆ ರಾಜಾ ಸಹಿತ ೯ ಮಂದಿ ಅಪರಾಧಿಗಳು ಎಂದು ‘ಕೋಕಾ’ ನ್ಯಾಯಾಲಯ ಘೋಷಿಸಿದೆ. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಎಪ್ರಿಲ್ ೪ರಂದು ಪ್ರಕಟಿಸುವುದಾಗಿ ಬೆಳಗಾವಿಯ ಕರ್ನಾಟಕ ಸಂಘಟಿತ ಅಪರಾಧ ತಡೆ ನ್ಯಾಯಾಲಯದ ನ್ಯಾಯಾಧೀಶ ಸಿ.ಎಂ.ಜೋಶಿ ಪ್ರಕಟಿಸಿದ್ದಾರೆ. ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಬಿಜೆಪಿಯ ಪ್ರಭಾವಿ ನಾಯಕರೂ ಆಗಿದ್ದ ಆರ್.ಎನ್. ನಾಯ್ಕ್‌ರವರ ಕೊಲೆ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರವಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಪುತ್ತೂರು ದರ್ಬೆ ಕಾವೇರಿಕಟ್ಟೆಯ ಕೆ. ಶಿವಪ್ರಸಾದ್ ಆಳ್ವ ವಾದಿಸಿದ್ದರು.

ವಿಶೇಷ ಅಭಿಯೋಜಕರಾಗಿ ಶಿವಪ್ರಸಾದ್ ಆಳ್ವ ನೇಮಕಗೊಂಡಿದ್ದರು;
ಬೆಳಗಾವಿಯ ಅಂಕೋಲಾದಲ್ಲಿ ಉದ್ಯಮಿಯಾಗಿದ್ದ ಬಿಜೆಪಿ ನಾಯಕ ಆರ್.ಎನ್.ನಾಯ್ಕ್‌ರವರನ್ನು ೨೦೧೩ರ ಡಿಸೆಂಬರ್ ೨೧ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಕೊಲೆ ಕೇಸು ದಾಖಲಿಸಿಕೊಂಡಿದ್ದ ಅಂಕೋಲಾ ಠಾಣಾ ಪೊಲೀಸರು ಹತ್ಯೆಯಲ್ಲಿ ಭಾಗಿಯಾಗಿರುವವರು ಸಂಘಟಿತರಾಗಿ, ಅಪರಾಧ ಕೃತ್ಯ ಎಸಗುತ್ತಿರುವುದನ್ನು ಪತ್ತೆ ಹಚ್ಚಿದ್ದರು. ಬಳಿಕ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಉಡುಪಿ ಮೂಲದ ಭೂಗತ ಪಾತಕಿ ಬನ್ನಂಜೆ ರಾಜಾ ಮತ್ತು ಆತನ ಸಹಚರರ ವಿರುದ್ಧ ಕೋಕಾ ಕಾಯ್ದೆಯಡಿ ಮಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಕಲಿ ಪಾಸ್‌ಪೋರ್ಟ್ ಹೊಂದಿರುವುದು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ೨೦೧೫ರ ಫೆಬ್ರವರಿ ೧೨ರಂದು ಮೊರಕ್ಕೋ ದೇಶದಲ್ಲಿ ಬನ್ನಂಜೆ ರಾಜಾನನ್ನು ಬಂಧಿಸಲಾಗಿತ್ತು. ೨೦೧೫ರ ಆಗಸ್ಟ್ ೧೪ರಂದು ಆತನನ್ನು ಕರ್ನಾಟಕಕ್ಕೆ ಕರೆ ತರಲಾಗಿತ್ತು. ಅಂದಿನಿಂದ ಸುದೀರ್ಘವಾಗಿ ೭ ವರ್ಷಗಳ ಕಾಲ ಕೊಲೆ ಪ್ರಕರಣದ ವಿಚಾರಣೆ ನಡೆಸಲಾಗಿದೆ. ಈ ಹತ್ಯೆ ಪ್ರಕರಣದಲ್ಲಿ ಬನ್ನಂಜೆ ರಾಜಾ ಒಂಬತ್ತನೇ ಆರೋಪಿಯಾಗಿದ್ದು ಉತ್ತರ ಪ್ರದೇಶದ ಜಗದೀಶ್ ಪಟೇಲ್, ವಿಜಯಪುರದ ಅಂಬಾಜಿ ಬಂಡುಗೋರ, ಕಾರ್ಕಳದ ಮಂಜುನಾಥ ನಾರಾಯಣ ಭಟ್, ಕೇರಳದ ಕೆ.ಎಂ. ಇಸ್ಮಾಯಿಲ್, ಅಚ್ಚಂಗಿ ಮಹೇಶ, ಸುಳ್ಯ ಸಂತೋಷ, ಜಗದೀಶ್ ಚಂದ್ರರಾಜ್ ಅರಸ್ ಮತ್ತು ಅಂಕಿತ್ ಕುಮಾರ್ ಕಶ್ಯಪ್‌ರವರು ಆರೋಪಿಗಳಾಗಿದ್ದು ಅವರ ಮೇಲಿನ ಆರೋಪವೂ ಸಾಬೀತಾಗಿದೆ. ಪ್ರಕರಣದಲ್ಲಿ ಆರೋಪಿಗಳಾಗಿದ್ದ ಅಬ್ದಿಲ್ ಸಲೀಮ್, ಮಹಮ್ಮದ್ ಅರ್ಚದ ಶಾಬಂದರಿ ಹಾಗೂ ಆನಂದ ನಾಯಕ್ ದೋಷಮುಕ್ತಗೊಂಡಿದ್ದಾರೆ. ಭಟ್ಕಳದ ನಾಜೀಮ್ ನಿಲಾವರ್, ಮಂಗಳೂರಿನ ಹಾಜಿ ಅಮಿನ್ ಬಾಷಾ ಹಾಗೂ ಸಕಲೇಶಪುರದ ಸುಲೇಮಾನ್ ಜೈನುದ್ದೀನ್ ತಲೆ ಮರೆಸಿಕೊಂಡಿದ್ದು ವಿದೇಶದಲ್ಲಿ ಅಡಗಿ ಕುಳಿತಿರುವ ಸಾಧ್ಯತೆ ಇದೆ. ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಆರ್.ಎನ್. ನಾಯ್ಕ್ ಹತ್ಯೆ ಪ್ರಕರಣದ ತನಿಖೆಗಾಗಿ ಸರಕಾರದ ಪರ ವಾದ ಮಂಡಿಸಲು ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಕೆ. ಶಿವಪ್ರಸಾದ್ ಆಳ್ವರವರನ್ನು ಸರಕಾರ ನೇಮಿಸಿತ್ತು. ಈ ಕೊಲೆ ಕೇಸ್‌ನಲ್ಲಿ ೨೧೦ ಸಾಕ್ಷಿ, ೧೦೨೭ ದಾಖಲೆ ಹಾಗೂ ೧೩೭ ಮುದ್ದೆ ಮಾಲುಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಕಾರವಾರ ಎಎಸ್ಪಿಯಾಗಿದ್ದ ಮೇಘನ್ನವರ ೨೦೧೪ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅನಂತರ ಉಡುಪಿ ಎಸ್ಪಿಯಾಗಿದ್ದ ಕೆ.ಅಣ್ಣಾಮಲೈ ೨೦೧೫ರಲ್ಲಿ ತನಿಖಾಧಿಕಾರಿಯಾಗಿದ್ದರು. ಇದೀಗ ವಿಚಾರಣೆ ಪೂರ್ಣಗೊಳಿಸಿದ ಕೋಕಾ ನ್ಯಾಯಾಲಯ ೭೦೦ ಪುಟಗಳ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಲು ಸರಕಾರದಿಂದ ನೇಮಕಗೊಂಡಿದ್ದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಗಳನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಮತ್ತು ಪುತ್ತೂರು ಸೇರಿದಂತೆ ವಿವಿಧ ನ್ಯಾಯಾಲಯದಲ್ಲಿ ಸಹಾಯಕ ಸರಕಾರಿ ಅಭಿಯೋಜಕರಾಗಿ, ಅಭಿಯೋಜಕರಾಗಿ, ವಿಶೇಷ ಅಭಿಯೋಜಕರಾಗಿ ಕಾರ್ಯ ನಿರ್ವಹಿಸಿ ಹಲವು ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿರುವ ಪುತ್ತೂರು ದರ್ಬೆ ಕಾವೇರಿಕಟ್ಟೆಯ ಕೆ. ಶಿವಪ್ರಸಾದ್ ಆಳ್ವರವರು ಸಮರ್ಥವಾಗಿ ವಾದ ಮಂಡಿಸಿ ಗಮನ ಸೆಳೆದಿದ್ದಾರೆ. ಬನ್ನಂಜೆ ರಾಜಾ ಮತ್ತು ಆತನ ಸಹಚರರಿಗೆ ಮರಣ ದಂಡನೆ ವಿಧಿಸಬೇಕು ಎಂದು ಶಿವಪ್ರಸಾದ್ ಆಳ್ವರವರು ತೀರ್ಪು ಪ್ರಕಟಣೆಯ ವೇಳೆ ನ್ಯಾಯಪೀಠವನ್ನು ಒತ್ತಾಯಿಸಿದ್ದಾರೆ. ಅಪರಾಧಿಗಳಿಗೆ ಎ.೪ರಂದು ಶಿಕ್ಷೆ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶರು ಪ್ರಕಟಿಸಿದ್ದಾರೆ. ಬನ್ನಂಜೆ ರಾಜಾನ ವಿರುದ್ಧ ಆರ್.ಎನ್. ನಾಯ್ಕ ಹತ್ಯೆ ಪ್ರಕರಣ ಮಾತ್ರವಲ್ಲದೆ ಇನ್ನೂ ಹಲವು ಕೊಲೆ, ಕೊಲೆ ಯತ್ನ, ಕೊಲೆ ಬೆದರಿಕೆ, ದಬ್ಬಾಳಿಕೆ, ಹಫ್ತಾ ವಸೂಲಿ ಸೇರಿದಂತೆ ಹಲವು ಠಾಣೆಯಲ್ಲಿ ಕೇಸು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ. ಸದ್ಯ ಆತ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ.

LEAVE A REPLY

Please enter your comment!
Please enter your name here