ಕುಡಿಯುವ ನೀರನ್ನು ಅನ್ಯಬಳಕೆಗೆ ಉಪಯೋಗಿಸಿದರೆ 2 ಸಾವಿರ ದಂಡ

0

  • ಗ್ರಾಮ ವ್ಯಾಪ್ತಿಯಲ್ಲಿ ಬ್ಯಾನರ್ ಅಳವಡಿಕೆಗೆ ಪರವಾನಗೆ ಕಡ್ಡಾಯ
  • ಒಳಮೊಗ್ರು ಗ್ರಾಪಂ ಸಾಮಾನ್ಯ ಸಭೆ

ಪುತ್ತೂರು: ಗ್ರಾಮ ಪಂಚಾಯತ್‌ನಿಂದ ನಳ್ಳಿ ಸಂಪರ್ಕ ಪಡೆದುಕೊಂಡು ಕುಡಿಯುವ ನೀರು ಬಳಕೆ ಮಾಡುತ್ತಿರುವವರು ಕುಡಿಯುವ ನೀರನ್ನು ಅನ್ಯ ಬಳಕೆಗೆ ಉಪಯೋಗಿಸುತ್ತಿರುವುದು ಕಂಡು ಬಂದರೆ ಅಂತವರ ಮೇಲೆ 2 ಸಾವಿರ ರೂ. ದಂಡ ವಿಧಿಸುವುದು ಮತ್ತು ನಳ್ಳಿ ಸಂಪರ್ಕ ಕಡಿತಗೊಳಿಸುವುದು ಎಂಬ ಮಹತ್ವದ ನಿರ್ಣಯವನ್ನು ಒಳಮೊಗ್ರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಸಭೆಯು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಮಾ.29 ರಂದು ಗ್ರಾಪಂ ಸಭಾಂಗಣದಲ್ಲಿ ನಡೆಯಿತು.

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಷಯ ಪ್ರಸ್ತಾಪಿಸಿ ಸದಸ್ಯರುಗಳು, ಗ್ರಾಮದಲ್ಲಿ ಕೆಲವು ಮಂದಿ ಕುಡಿಯುವ ನೀರನ್ನು ತೋಟ, ಹೂವಿನ ಗಿಡಗಳಿಗೆ ಬಿಡುತ್ತಿದ್ದಾರೆ. ಕುಡಿಯುವ ನೀರನ್ನು ಅನ್ಯ ಬಳಕೆಗೆ ಉಪಯೋಗಿಸುತ್ತಿರುವುದು ಕಂಡು ಬಂದರೆ ಅಂತವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಕುಡಿಯುವ ನೀರನ್ನು ಅನ್ಯ ಬಳಕೆಗೆ ಉಪಯೋಗಿಸುತ್ತಿರುವುದು ಕಂಡು ಬಂದರೆ ಅಂತಹ ಫಲಾನುಭವಿಯ ಮೇಲೆ ರೂ. 2 ಸಾವಿರದವರೇಗೆ ದಂಡ ವಿಧಿಸುವುದು ಮತ್ತು ನಳ್ಳಿ ಸಂಪರ್ಕವನ್ನು ಕಡಿತ ಮಾಡುವುದು ಮತ್ತೆ ನಳ್ಳಿ ಸಂಪರ್ಕ ಬೇಕಾದರೆ ಫಲಾನುಭವಿಯಿಂದ ಅರ್ಜಿ ಪಡೆದುಕೊಂಡು ನಳ್ಳಿ ಸಂಪರ್ಕ ಕೊಡುವುದು ಎಂದು ನಿರ್ಣಯಿಸಲಾಯಿತು.

ಎಪ್ರಿಲ್ 30 ರೊಳಗೆ ಪರವಾನಗೆ ನವೀಕರಿಸಿ, ದಂಡನೆಯಿಂದ ತಪ್ಪಿಸಿಕೊಳ್ಳಿ:
ಗ್ರಾಮದಲ್ಲಿ ವ್ಯಾಪಾರ ನಡೆಸುತ್ತಿರುವ ಬಹಳಷ್ಟು ಮಂದಿ ವ್ಯಾಪಾರ ಪರವಾನಗೆ ನವೀಕರಿಸದೆ ಇರುವ ಬಗ್ಗೆ ಸದಸ್ಯರು ಮಾಹಿತಿ ನೀಡಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಪ್ರತಿ ವರ್ಷದ ಮಾರ್ಚ್ 30 ರೊಳಗೆ ಪರವಾನಗೆ ನವೀಕರಣ ಮಾಡಿಕೊಳ್ಳಬೇಕಿದ್ದರೂ ಕೆಲವು ಮಂದಿ ನವೀಕರಣ ಮಾಡಿಲ್ಲ ಆದ್ದರಿಂದ ಈ ವರ್ಷದ ಎಪ್ರಿಲ್ 30 ರೊಳಗೆ ತಮ್ಮ ವ್ಯಾಪಾರ ಪರವಾನಗೆಯನ್ನು ನವೀಕರಣ ಮಾಡಿಕೊಳ್ಳಬೇಕು, ನವೀಕರಣ ಮಾಡದೇ ಇರುವವರಿಗೆ ಪರವಾನಗೆ ಶುಲ್ಕದ ಶೇ.50 ದಂಡನೆ ವಿಧಿಸುವುದು ಎಂದು ನಿರ್ಣಯಿಸಲಾಯಿತು.

ಇನ್ನೂ ಮುಂದೆ ಸಿಕ್ಕಸಿಕ್ಕಲ್ಲಿ ಬ್ಯಾನರ್ ಹಾಕುವಂತಿಲ್ಲ…?!:
ಕುಂಬ್ರ ಜಂಕ್ಷನ್ ಸೇರಿದಂತೆ ಗ್ರಾಮದ ಹಲವು ಕಡೆಗಳಲ್ಲಿ ಬ್ಯಾನರ್‌ಗಳು ತುಂಬಿಹೋಗಿದ್ದು ಗ್ರಾಮದ ಅಂದವನ್ನು ಕೆಡಿಸುತ್ತಿವೆ. ಪರವಾನಗೆ ಪಡೆದುಕೊಳ್ಳದೇ ಸಿಕ್ಕಸಿಕ್ಕಲ್ಲಿ ಬ್ಯಾನರ್ ಹಾಕಲಾಗುತ್ತಿದೆ. ಪಂಚಾಯತ್ ಅಧ್ಯಕ್ಷರ ಫೋಟೋ ಹಾಕಿಯೇ ಹಲವು ಬ್ಯಾನರ್‌ಗಳನ್ನು ಹಾಕಲಾಗಿದೆ. ಪಂಚಾಯತ್‌ನಿಂದ ಯಾವುದೇ ಪರವಾನಗೆ ಪಡೆಯದೇ ಬ್ಯಾನರ್ ಹಾಕಿರುವ ಬಗ್ಗೆ ಕ್ರಮ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಶ್ರಪ್ ಉಜಿರೋಡಿ ತಿಳಿಸಿದರು.ಈ ಬಗ್ಗೆ ಚರ್ಚೆ ನಡೆಯಿತು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮಹೇಶ್ ರೈ ಕೇರಿಯವರು, ಗ್ರಾಮದಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಅಧ್ಯಕ್ಷರ ಫೋಟೋ ಹಾಕಿ ಬ್ಯಾನರ್ ಹಾಕಲಾಗಿದೆಯೇ ವಿನಹ ಬೇರೆ ಯಾವುದೇ ರೀತಿಯಲ್ಲ, ಹಾಗಾದರೆ ನಮ್ಮ ಗ್ರಾಮದ ಅಭಿವೃದ್ಧಿ ಬಗ್ಗೆ ಬ್ಯಾನರ್ ಹಾಕಲು ನಮಗೆ ಅನುಮತಿ ಇಲ್ಲವೆ? ಇದಕ್ಕೆ ಅಡ್ಡಿ ಪಡಿಸುವುದು ಸರಿಯಲ್ಲ, ಬ್ಯಾನರ್ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ ಎಂದರು. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಮಾತನಾಡಿ, ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಬ್ಯಾನರ್ ಹಾಕಲಾಗಿದೆ. ಯಾವುದೇ ವೈಯುಕ್ತಿಕ ವಿಷಯದ ಮೇಲೆ ಹಾಕಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಅಶ್ರಫ್‌ರವರು, ನಾವು ಅಡ್ಡಿ ಪಡಿಸುತ್ತಿಲ್ಲ, ಯಾರದೇ ಫೋಟೋ ಹಾಕಿ ಬ್ಯಾನರ್ ಹಾಕುವುದಾದರೂ ಪಂಚಾಯತ್‌ನಿಂದ ಪರವಾನಗೆ ಪಡೆದುಕೊಳ್ಳಬೇಕು, ಪರವಾನಗೆ ಇಲ್ಲದೆ ಬ್ಯಾನರ್ ಯಾರೂ ಹಾಕಿದರೂ ಅದು ತಪ್ಪು ಎಂದರು. ಈ ಬಗ್ಗೆ ಪರವಿರೋಧ ಚರ್ಚೆ ನಡೆಯಿತು. ಗ್ರಾಮ ವ್ಯಾಪ್ತಿಯ ಸಂಘಟನೆಗಳ ಕಾರ್ಯಕ್ರಮ ಮತ್ತು ಧಾರ್ಮಿಕ ಕಾರ್ಯಕ್ರಮದ ಬ್ಯಾನರ್‌ಗೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಇರುವ ಬ್ಯಾನರ್‌ಗಳಿಗೆ ಶುಲ್ಕು ವಿನಾಯಿತಿ ಮಾಡುವುದು ಹಾಗೂ ಯಾವುದೇ ಬ್ಯಾನರ್ ಹಾಕಬೇಕಿದ್ದರೂ ಪಂಚಾಯತ್‌ನಿಂದ ಪರವಾನಗೆ ಕಡ್ಡಾಯ ಪಡೆದುಕೊಳ್ಳುವುದು, ಪರವಾನಗೆ ಇಲ್ಲದೆ ಯಾವುದೇ ಬ್ಯಾನರ್ ಅಳವಡಿಸುವಂತಿಲ್ಲ ಮತ್ತು ಪರವಾನಗೆ ಪಡೆದುಕೊಂಡ ಬ್ಯಾನರ್‌ಗಳಿಗೆ 15 ದಿನಗಳ ಕಾಲಾವಕಾಶ ನೀಡುವುದು, ಜಾಹೀರಾತು ಬ್ಯಾನರ್‌ಗಳಿಗೆ 1 ವರ್ಷ ಕಾಲಾವಕಾಶ ನೀಡುವುದು ಎಂದು ನಿರ್ಣಯಿಸಲಾಯಿತು.

ವಸತಿ ರಹಿತರ ಪಟ್ಟಿಗೆ ಸೇರ್ಪಡೆಗೆ ಅವಕಾಶವಿದೆ:
ಗ್ರಾಮದಲ್ಲಿ ವಸತಿ ರಹಿತರು ಇದ್ದರೆ ಅವರನ್ನು ವಸತಿ ರಹಿತರ ಪಟ್ಟಿಗೆ ಸೇರ್ಪಡೆ ಮಾಡಲು ಅವಕಾಶವಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ವಸತಿ ರಹಿತರು ಈ ಕೂಡಲೇ ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯತ್ ಕಛೇರಿಯನ್ನು ಕೆಲಸದ ಸಮಯದಲ್ಲಿ ಭೇಟಿ ಮಾಡಿ ದಾಖಲೆಗಳನ್ನು ಸಲ್ಲಿಸಿ ತಮ್ಮ ಹೆಸರನ್ನು ವಸತಿ ರಹಿತರ ಪಟ್ಟಿಗೆ ಸೇರ್ಪಡೆಗೊಳಿಸಬಹುದು ಎಂದು ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್ ತಿಳಿಸಿದರು. ಎಸ್.ಸಿ, ಎಸ್.ಟಿ ಮತ್ತು ವಿಕಲಚೇತನರಿಗೆ ಮಾತ್ರ ವೈದ್ಯಕೀಯ ಚಿಕಿತ್ಸೆ ವೆಚ್ಚದ ಸಹಾಯಧನ ಕೊಡಲು ಅವಕಾಶ ಇದ್ದು ಇತರರಿಗೆ ಕೊಡಲು ಅವಕಾಶವಿರುವುದಿಲ್ಲ ಈ ಬಗ್ಗೆ ಗ್ರಾಮಸ್ಥರು ಮಾಹಿತಿ ತಿಳಿದುಕೊಳ್ಳುವುದು ಸೂಕ್ತ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು. ಕುಡಿಯುವ ನೀರು ಬಿಡುವವರನ್ನು ಪ್ರೋತ್ಸಾಹಿಸುವ ಸಲುವಾಗಿ ಬೇಸಿಗೆ ಕಾಲದ ೩ ತಿಂಗಳು ಅಂದರೆ ಮಾರ್ಚ್‌ನಿಂದ ಮೇ ತನಕ ತಿಂಗಳಿಗೆ ರೂ.500 ರಂತೆ ಹೆಚ್ಚುವರಿ ಗೌರವಧನ ನೀಡುವುದು ಎಂದು ನಿರ್ಣಯಿಸಲಾಯಿತು.
ಲೇ ಹೌಟ್ ಅನುಮೋದನೆಗೆ ಗ್ರಾಪಂಗೆ ಅವಕಾಶ ಕೊಡಿ

ಭೂಪರಿವರ್ತನೆಯಾದ ಜಾಗಕ್ಕೆ ಲೇಹೌಟ್ ಅನುಮೋದನೆಯನ್ನು ಈ ಹಿಂದೆ ಗ್ರಾಪಂ, ತಾಪಂ ನೀಡುತ್ತಿತ್ತು. 1 ಸಾವಿರ ಚದರಅಡಿ ವಿಸ್ತ್ರೀರ್ಣದ ಜಾಗಕ್ಕೆ ಗ್ರಾಪಂ ಅನುಮೋದನೆ ನೀಡುತ್ತಿತ್ತು ಆದರೆ ಪ್ರಸ್ತುತ ದಿನಗಳಲ್ಲಿ ಗ್ರಾಪಂ ಮತ್ತು ತಾಪಂಗೆ ಇದ್ದ ಅವಕಾಶವನ್ನು ರದ್ದು ಮಾಡಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದ ಗ್ರಾಮಾಂತರ ಭಾಗದ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಅಶ್ರಫ್ ಉಜಿರೋಡಿ ತಿಳಿಸಿದರು. ಈ ಹಿಂದಿನಂತೆ ಗ್ರಾಪಂಗೆ ಅನುಮೋದನೆ ನೀಡಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗೆ ಬರೆದುಕೊಳ್ಳಬೇಕು ಎಂದು ತಿಳಿಸಿದರು. ಅದರಂತೆನಿರ್ಣಯಿಸಲಾಯಿತು.

ಉಪಾಧ್ಯಕ್ಷೆ ಸುಂದರಿ, ಶೀನಪ್ಪ ನಾಯ್ಕ ಬೊಳ್ಳಾಡಿ, ವಿನೋದ್ ಶೆಟ್ಟಿ ಮುಡಾಲ, ಸಿರಾಜುದ್ದೀನ್, ಚಿತ್ರ ಬಿ.ಸಿ, ಲತೀಫ್ ಎಸ್, ಶಾರದಾ, ರೇಖಾ, ಪ್ರದೀಪ್ ಎಸ್, ನಳಿನಾಕ್ಷಿ, ನಿಮಿತಾ ಬಿ, ವನಿತಾ ಕುಮಾರಿರವರುಗಳು ವಿವಿಧ ವಿಷಯಗಳ ಬಗ್ಗೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡರು. ಅಭಿವೃದ್ಧಿ ಅಧಿಕಾರಿ ಅವಿನಾಶ್ ಬಿ.ಆರ್. ಅರ್ಜಿಗಳನ್ನು ಮತ್ತು ಸರಕಾರದ ಸುತ್ತೋಲೆಗಳನ್ನು ಓದಿದರು. ಕಾರ್ಯದರ್ಶಿ ಜಯಂತಿ ನಿರ್ಣಯಗಳನ್ನು ದಾಖಲಿಸಿಕೊಂಡರು. ಸಿಬ್ಬಂದಿಗಳಾದ ಜಾನಕಿ, ಗುಲಾಬಿ, ಕೇಶವ ಸಹಕರಿಸಿದ್ದರು.

LEAVE A REPLY

Please enter your comment!
Please enter your name here