ಕನ್ನಡ ಗೊತ್ತಿಲ್ಲದ ಬ್ಯಾಂಕ್ ಉದ್ಯೋಗಿಗಳಿಗೆ ‘ಕನ್ನಡ ಮಾತಾಡು’ ಚಳುವಳಿ

0

  • ಕ.ಸಾ.ಪ. ಪುತ್ತೂರು ತಾ| ಘಟಕದ ನೇತೃತ್ವ
  • ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ, 7 ರೋಟರಿ ಕ್ಲಬ್‌ಗಳ ಸಾಥ್

ಪುತ್ತೂರು: ಕನ್ನಡ ಭಾಷೆ ಉಳಿಸುವ ಹಾಗೂ ಬೆಳೆಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಳೆದ ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ.ಹೊರ ರಾಜ್ಯಗಳಿಂದ ನಮ್ಮೂರಿಗೆ ಬಂದ ಅನೇಕ ಅಧಿಕಾರಿಗಳು ಕನ್ನಡ ಅಥವಾ ಸ್ಥಳೀಯ ಭಾಷೆಯಾದ ತುಳುವನ್ನು ಕಲಿತು ಕನ್ನಡಿಗರಾಗಿ ಬೆರೆತಿದ್ದಾರೆ. ಆದರೆ ಪುತ್ತೂರಿನ ಅನೇಕ ಬ್ಯಾಂಕ್‌ಗಳಲ್ಲಿ ಹೊರರಾಜ್ಯದಿಂದ ಬಂದ ಕೆಲವು ಬ್ಯಾಂಕ್ ಉದ್ಯೋಗಿಗಳು ತಪ್ಪಿಯೂ ಕನ್ನಡ ಕಲಿಯುವ ಅಥವಾ ಮಾತನಾಡುವ ಪ್ರಯತ್ನ ಮಾಡುವುದಿಲ್ಲ.ಇದರಿಂದಾಗಿ ಗ್ರಾಮೀಣ ಪ್ರದೇಶದ ಜನರಿಗೆ ವ್ಯವಹಾರ ನಡೆಸಲು ಅನಾನುಕೂಲವಾಗುತ್ತಿದೆ.ಇದನ್ನು ಮನಗಂಡು ಕ.ಸಾ.ಪ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಹಾಗೂ ಪುತ್ತೂರಿನ ಏಳು ರೋಟರಿ ಕ್ಲಬ್‌ಗಳ ನೇತೃತ್ವದಲ್ಲಿ ‘ಕನ್ನಡ ಮಾತಾಡು’ ಚಳುವಳಿಯನ್ನು ಪುತ್ತೂರಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ನಡೆಸುತ್ತಿದ್ದೇವೆ ಎಂದು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ಹೇಳಿದರು. ಅವರು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಎ.5ರಂದು ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ‘ಕನ್ನಡ ಮಾತಾಡು’ ಚಳುವಳಿಯನ್ನು ಎ. 8 ರಂದು ಬೆಳಗ್ಗೆ 10 ಗಂಟೆಗೆ ದರ್ಬೆ ವೃತ್ತದ ಬಳಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಬಳಿಕ ಕನ್ನಡ ಪರ ಘೋಷಣೆಯೊಂದಿಗೆ ಹಾಗೂ ಕನ್ನಡ ಧ್ವಜದೊಂದಿಗೆ ಕಾಲ್ನಡಿಗೆಯಲ್ಲಿ ಮುಖ್ಯ ರಸ್ತೆಯಾಗಿ ಸಂಚರಿಸಿ ಮಿನಿವಿಧಾನ ಸೌಧದ ಬಳಿ ಸಹಾಯಕ ಆಯುಕ್ತರು ಹಾಗೂ ನಗರಸಭೆಯ ಆಯುಕ್ತರಿಗೆ ‘ಬ್ಯಾಂಕ್‌ನಲ್ಲಿ ಕನ್ನಡ ಮಾತನಾಡುವುದನ್ನು ಕಡ್ಡಾಯಗೊಳಿಸಿ’ ನಿಯಮ ತರುವಂತೆ ಮನವಿ ನೀಡುವ ಮೂಲಕ ಒತ್ತಾಯಿಸಲಿದ್ದೇವೆ.ಸರ್ವಸದಸ್ಯರು,ಕನ್ನಡಪರ ಸಂಘಟನೆಗಳು ಈ ಜಾಥಾದಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ಸುಗೊಳಿಸಿ ಎಂದು ಉಮೇಶ್ ನಾಯಕ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟಿನ್ಹಾ, ರೋಟರಿ ಜಿಲ್ಲೆ 3181ರ ವಲಯ ೫ರ ಕಾರ್ಯದರ್ಶಿ ಅಬ್ಬಾಸ್.ಕೆ ಮುರ,ಜೆ.ಸಿ.ಐ ಪುತ್ತೂರಿನ ಅಧ್ಯಕ್ಷ ಜೆ.ಸಿ ಶಶಿರಾಜ್.ರೈ ಉಪಸ್ಥಿತರಿದ್ದರು.

ಕನ್ನಡ ಕಲಿಯಲು ಇಚ್ಛಿಸುವವರಿಗೆ ಕನ್ನಡದ ಕೋರ್ಸ್
ಪುತ್ತೂರಿನ ವರ್ತಕರು,ಕನ್ನಡ ಉಪನ್ಯಾಸಕರು,ಜೆ.ಸಿ.ಐ ಹಾಗೂ 7 ರೋಟರಿಗಳು ಸೇರಿಕೊಂಡು ಕನ್ನಡ ಕಲಿಯಲು ಇಚ್ಛಿಸುವ ಬ್ಯಾಂಕ್ ನೌಕರರಿಗೆ ವ್ಯವಹಾರಕ್ಕೆ ಬೇಕಾದ ಸರಳ ಕನ್ನಡವನ್ನು ಪ್ರತಿನಿತ್ಯ ಆದಿತ್ಯವಾರ ಬೆಳಗ್ಗೆ 10 ರಿಂದ ಕಲಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಪುತ್ತೂರಿನ ರೋಟರಿ ಮನಿಷಾ ಹಾಲ್,ಮುಳಿಯ ಜೆ.ಸಿ.ಐ ಹಾಲ್ ಮುಂತಾದೆಡೆ ಈ ತರಗತಿ ನಡೆಯಲಿದೆ. ಆಸಕ್ತರು 9844401295 ನಂಬರ್ ಗೆ ಕರೆ ಮಾಡಿ ನೋಂದಾವಣೆ ಮಾಡಿಕೊಳ್ಳಬೇಕು ಎಂದು ದ.ಕ ಜಿಲ್ಲಾ ಕ.ಸಾ.ಪ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ತಿಳಿಸಿದರು.

LEAVE A REPLY

Please enter your comment!
Please enter your name here