ಗುಂಡ್ಯ: ಭಿನ್ನ ಕೋಮಿನ ಜೋಡಿ ಪತ್ತೆ ಪ್ರಕರಣ – ಹಲ್ಲೆ ಆರೋಪದಲ್ಲಿ ಹಿಂದೂ ಸಂಘಟನೆಯ ಇಬ್ಬರ ಬಂಧನ

0

  • ಆಕ್ರೋಶಿತ ಸಂಘಟನೆ ಕಾರ್ಯಕರ್ತರಿಂದ ಉಪ್ಪಿನಂಡಿಯಲ್ಲಿ ಶಾಸಕ ಸಂಜೀವ ಮಠಂದೂರುಗೆ ಘೇರಾವ್

ಪುತ್ತೂರು: ಗುಂಡ್ಯದಲ್ಲಿ ಹಿಂದೂ ಯುವತಿಯ ಜೊತೆಗಿದ್ದ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇಬ್ಬರು ಯುವಕರ ಬಂಧನದ ಬೆನ್ನಲ್ಲೇ ಆಕ್ರೋಶಿತ ಹಿಂದೂ ಸಂಘಟನೆಯ ಯುವಕರ ಗುಂಪೊಂದು ಪುತ್ತೂರು ಶಾಸಕ ಸಂಜೀವ ಮಠಂದೂರುರವರಿಗೆ ಘೇರಾವ್ ಹಾಕಿದ ಘಟನೆ ಎ.5ರಂದು ತಡರಾತ್ರಿ ಉಪ್ಪಿನಂಗಡಿಯಲ್ಲಿ ನಡೆದಿದೆ. ಇದೀಗ ಇದರ ವಿಡಿಯೋ ವೈರಲ್ ಆಗುತ್ತಿದೆ.

ನಾನು ಪ್ರೀತಿಸುತ್ತಿದ್ದ ಯುವತಿಯ ಜೊತೆ ಎ.4ರಂದು ಮಧ್ಯಾಹ್ನ ಆಟೋ ರಿಕ್ಷಾದಲ್ಲಿ ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಮತ್ತು ಇತರರು ಅಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಆರ್ಯಾಪು ಗ್ರಾಮದ ಸಂಪ್ಯ ನಿವಾಸಿ ಇಲಿಯಾಸ್ ಎಂಬವರ ಪುತ್ರ ನಝೀರ್ (21ವ.) ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಗುಂಡ್ಯದಲ್ಲಿನ ದಿನಸಿ ಅಂಗಡಿಯ ಬಾಲಚಂದ್ರ ಹಾಗೂ ಕೋಳಿ ಅಂಗಡಿಯ ರಂಜಿತ್ ಎಂಬವರನ್ನು ಉಪ್ಪಿನಂಗಡಿ ಪೊಲೀಸರು ಎ.೫ರಂದು ರಾತ್ರಿ ಬಂಧಿಸಿದ್ದರು. ಇದರ ಬೆನ್ನಲ್ಲೇ ರಾತ್ರಿ ಗುಂಡ್ಯ, ನೆಲ್ಯಾಡಿ, ಕೊಕ್ಕಡ ಭಾಗದ ಹಿಂದೂ ಸಂಘಟನೆಗಳ ನೂರಾರು ಮಂದಿ ಉಪ್ಪಿನಂಗಡಿಗೆ ಬಂದು ಠಾಣೆಯ ಮುಂದೆ ಜಮಾಯಿಸಿದ್ದರು. ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಯುವಕರಿಬ್ಬರು ಯಾವುದೇ ಕೃತ್ಯದಲ್ಲಿ ಭಾಗಿಯಾಗಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸಬಾರದೆಂದು ಹಿಂದೂ ಸಂಘಟನೆಯ ಮುಖಂಡರು ಮನವಿ ಮಾಡಿದರೂ ಎಸ್.ಐ.ಯವರು ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡಿಲ್ಲ ಎಂದು ಹೇಳಲಾಗಿದೆ.

ಶಾಸಕ ಮಠಂದೂರುಗೆ ಘೇರಾವ್:
ಈ ಎಲ್ಲಾ ಬೆಳವಣಿಗೆ ಮಧ್ಯೆ ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಬೆಂಗಳೂರಿಗೆ ತೆರಳಲೆಂದು ಹೋಟೆಲ್ ಆದಿತ್ಯದ ಮುಂಭಾಗದಲ್ಲಿ ನಿಂತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಹಿಂದೂ ಮುಖಂಡರು ವಿಚಾರವನ್ನು ಶಾಸಕರ ಗಮನಕ್ಕೆ ತರಲೆಂದು ಅಲ್ಲಿಗೆ ಬಂದಿದ್ದರು. ಇವರ ಜೊತೆಗೆ ಆಗಮಿಸಿದ ನೂರಾರು ಮಂದಿ ಕಾರ್ಯಕರ್ತರೂ ಶಾಸಕ ಸಂಜೀವ ಮಠಂದೂರುರವರಿಗೆ ಘೇರಾವ್ ಹಾಕಿ ಉಪ್ಪಿನಂಗಡಿ ಎಸ್.ಐ.ಯವರನ್ನು ಕೂಡಲೇ ವರ್ಗಾವಣೆಗೊಳಿಸಬೇಕೆಂದು ಒತ್ತಾಯಿಸಿದ್ದರು ಎಂದು ವರದಿಯಾಗಿದೆ. ಘಟನೆಯ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಘಟನೆಯ ಕುರಿತು ಪ್ರತಿಕ್ರಿಯೆ ಕೇಳಲು ಶಾಸಕ ಸಂಜೀವ ಮಠಂದೂರು ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲಾಯಿತಾದರೂ ಅವರು ಸಂಪರ್ಕಕ್ಕೆ ಲಭ್ಯರಾಗಿಲ್ಲ. ಅವರು ಬೆಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿಯ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗಿಯಾಗಿರುವುದಾಗಿ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here