ಲಂಚ, ಭ್ರಷ್ಟಾಚಾರ ನಿರ್ಮೂಲನೆ ಬೇಕೇ? ಮನಸ್ಸಿನಲ್ಲಿದ್ದರೆ ಸಾಲದು, ಅದರ ವಿರುದ್ಧ ಇದ್ದೀರಿ ಎಂದು ತೋರಿಸಿ ಕೊಡಿ

0

  • ಫಲಕ, ಬ್ಯಾನರ್ ಹಾಕಿ, ಘೋಷಣೆ ಕೂಗಿ, ಪ್ರತಿಜ್ಞೆ ಸ್ವೀಕರಿಸಿ.
  • ಸಾಮಾಜಿಕ ಜಾಲತಾಣದಲ್ಲಿ (ಸ್ಟೇಟಸ್) ಪ್ರಚಾರ ಮಾಡಿರಿ
  • ನಿಮ್ಮ ವಿರೋಧ ತೋರಿಸಲು ಹೆದರಿದರೆ ಗುಲಾಮರಾಗಿ, ಹೇಡಿಗಳಾಗಿ, ಊರು, ಮಕ್ಕಳ ಭವಿಷ್ಯತ್ ಹಾಳು ಮಾಡುತ್ತೀರಿ

ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳು ಲಂಚ, ಭ್ರಷ್ಟಾಚಾರ ಮುಕ್ತಗೊಂಡು ಅಧಿಕಾರಿಗಳು ಹಣ ಕೊಟ್ಟರೂ ತೆಗೆದುಕೊಳ್ಳದೆ ಉತ್ತಮ ಸೇವೆ ನೀಡುವಂತಹ ವಾತಾವರಣ ಸೃಷ್ಠಿಯಾಗುತ್ತದೆ. ಆ ಪರಿಣಾಮ ಬೀರಲು ಸುದ್ದಿ ಜನಾಂದೋಲನ ವೇದಿಕೆ ನೀಡಿದ್ದ ೧೦೦ ದಿನಗಳ ಅವಧಿಯಲ್ಲಿ ಇನ್ನು ೪೪ ದಿನಗಳು ಬಾಕಿ ಇವೆ ಎಂದು ಪ್ರಥಮವಾಗಿ ನೆನಪಿಸಲು ಬಯಸುತ್ತೇನೆ. ಈಗಾಗಲೇ ಈ ತಾಲೂಕುಗಳಲ್ಲಿ ಸಾಕಷ್ಟು ಉತ್ತಮ ಪರಿಣಾಮಗಳು ಕಂಡು ಬರುತ್ತಿವೆ ಎಂದು ಜನರು ಹೇಳುತ್ತಿದ್ದಾರೆ. ಅದಕ್ಕೆ ಕಾರಣಗಳಿವೆ.

ಸುಳ್ಯ, ಬೆಳ್ತಂಗಡಿ, ಪುತ್ತೂರು ತಾಲೂಕುಗಳಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಫಲಕ, ಬ್ಯಾನರ್, ಕಟೌಟ್ ಅಳವಡಿಕೆಯಾಗಿದೆ. ಸಭೆ ಸಮಾರಂಭದಲ್ಲಿ ಘೋಷಣೆ, ಪ್ರತಿಜ್ಞೆಯಾಗುತ್ತಿದೆ. ವಿದ್ಯಾರ್ಥಿಗಳೂ ಪ್ರತಿಜ್ಞೆ ಸ್ವೀಕರಿಸಿದ್ದಾರೆ. ಜನರು ಮುಂದೆ ಬಂದು ಲಂಚ, ಭ್ರಷ್ಟಾಚಾರ ನಿಲ್ಲಲಿ ಎಂದು ಬಹಿರಂಗವಾಗಿ ಅಭಿಪ್ರಾಯ ನೀಡುತ್ತಿದ್ದಾರೆ. ಲಂಚ ಅಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ. ಅದನ್ನು ಮಾಡಬಾರದು. ಅಧಿಕಾರಿಗಳಿಗೆ ಸಂಬಳ ಇರುವಾಗ ಅದನ್ನು ಮಾಡಿದರೆ ಜನರಿಂದ ಲಂಚವಾಗಿ ಪಡೆದ ಹಣವನ್ನು ಹಿಂತಿರುಗಿಸುವಂತಾಗಬೇಕು. ಅಧಿಕಾರಿಗಳು ಉತ್ತಮ ಸೇವೆ ನೀಡಿ ಗೌರವ ಪಡೆಯುವಂತಾಗಬೇಕು. ಸಂಘ ಸಂಸ್ಥೆಗಳು, ಜನರು ತಮ್ಮ ಊರನ್ನು, ತಾಲೂಕನ್ನು ಲಂಚ, ಭ್ರಷ್ಟಾಚಾರ ಮುಕ್ತವನ್ನಾಗಿ ಮಾಡುವುದೇ ದೊಡ್ಡ ಜನಸೇವೆ ಮತ್ತು ದೇಶ ಸೇವೆ ಎಂದು ಪರಿಗಣಿಸಬೇಕು. ಎಲ್ಲಾ ಸಮಾರಂಭಗಳಲ್ಲಿ, ಧಾರ್ಮಿಕ ಸ್ಥಳಗಳಲ್ಲಿ ಲಂಚ, ಭ್ರಷ್ಟಾಚಾರ ನಿಲ್ಲಲಿ ಎಂದು ಎಂದು ಪ್ರಾರ್ಥನೆ ಮತ್ತು ಹಾರೈಕೆಯ ವಿಷಯವಾಗಬೇಕು ಎಂಬ ಕರೆಗೆ ವ್ಯಾಪಕ ಬೆಂಬಲ ದೊರೆತಿದೆ. ಆದರೂ ಅದು ಇನ್ನೂ ಎಲ್ಲರ ಧ್ವನಿಯಾಗಿ ಹೊರಬಂದಿಲ್ಲ.

ಅಧಿಕಾರಿಗಳು, ಜನಪ್ರತಿನಿಧಿಗಳು, ಪಕ್ಷಗಳವರು ಜನರ ಸೇವೆಗಾಗಿ ಇರುವವರು. ನಾವು ರಾಜರುಗಳು ಎಂಬುವುದನ್ನು ಎಲ್ಲರೂ ನಂಬಬೇಕಾಗಿದೆ. ಅದನ್ನು ಆಚರಣೆಗೆ ತಾರದೆ ಈಗಿರುವ ಲಂಚ, ಭ್ರಷ್ಟಾಚಾರವನ್ನು ಸಹಿಸಿ ಅಧಿಕಾರಿಗಳಿಗೆ ಹೆದರಿ ಹೇಡಿಗಳಾದರೆ ಗುಲಾಮರ ಬದುಕು ನಮ್ಮದಾಗುತ್ತದೆ. ಊರೂ ನಾಶವಾಗುತ್ತದೆ. ಮುಂದಿನ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂಬುವುದನ್ನು ಅರಿತುಕೊಂಡು ಎದ್ದು ನಿಲ್ಲಿ. ಸಾಧ್ಯವಾದಷ್ಟು ಜನರು ಸುದ್ದಿ ಜನಾಂದೋಲನಕ್ಕೆ ಕೈ ಜೋಡಿಸಿರಿ. ತಮ್ಮ ತಮ್ಮ ಸ್ಟೇಟಸ್‌ನಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧದ ಫಲಕವನ್ನು ಹಾಕಿ ತಮ್ಮ ಅಭಿಪ್ರಾಯಗಳೊಂದಿಗೆ ಪ್ರಚಾರ ಮಾಡಿ. ಅಲ್ಲಲ್ಲಿ ಫಲಕ, ಬ್ಯಾನರ್ ಬೀಳುವಂತೆ ಮಾಡಿರಿ. ಎಲ್ಲಾ ಕಡೆ ಲಂಚ, ಭ್ರಷ್ಟಾಚಾರದ ವಿರುದ್ಧ ನಿರಂತರ ಘೋಷಣೆ ಇರುವಂತೆ ನೋಡಿಕೊಳ್ಳಿ. ಲಂಚದಿಂದ ತೊಂದರೆಗೊಳಗಾದವರ ಕಡೆ ನಿಂತು ಅವರಿಗೆ ಹಣ ವಾಪಸ್ ಕೊಡಿಸಲು ಬೆಂಬಲ ನೀಡಿ. ಈ ಎಲ್ಲಾ ವಿಚಾರಗಳು ಅಧಿಕಾರಿಗಳ, ಜನಪ್ರತಿನಿಧಿಗಳ ಕಿವಿಗೆ ಬೀಳುವಂತೆ, ಕಣ್ಣಿಗೆ ಕಾಣುವಂತೆ ಮಾಡಿ ಲಂಚ, ಭ್ರಷ್ಟಾಚಾರ ಬಿಟ್ಟು ಉತ್ತಮ ಸೇವೆ ನೀಡುವಂತಹ ಮನಪರಿವರ್ತನೆಗೆ ಪ್ರಯತ್ನಿಸಿರಿ. ಈ ಮೇಲಿನ ಎಲ್ಲಾ ವಿಚಾರಗಳು ಎಲ್ಲಾ ಜನರನ್ನು ತಲುಪುವಂತೆ ಮಾಡಿದರೆ ಅದು ಎಲ್ಲರನ್ನು ಮುಟ್ಟಿದರೆ ಈಗ ನೀಡಿರುವ 44 ದಿನಗಳ ಗಡುವಿನ ಮೊದಲೇ ನಮ್ಮ ಊರು, ತಾಲೂಕು ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ. ಅದರಲ್ಲಿ ಏನಾದರೂ ಸಂಶಯ, ಸಲಹೆಗಳಿದ್ದರೆ ತಿಳಿಸಿ.

LEAVE A REPLY

Please enter your comment!
Please enter your name here