ಪುತ್ತೂರು ಜಾತ್ರೋತ್ಸವದಲ್ಲಿ ವಿಶೇಷ ವ್ಯಾಪಾರ ಮೇಳ-ಎ.14ರಂದು ಉದ್ಘಾಟನೆ

0

  • ಹೊಸ ಉತ್ಪನ್ನಗಳ ಬಿಡುಗಡೆ ಜತೆಗೆ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿಶೇಷ ವ್ಯವಹಾರ ಮೇಳ -ಕೇಶವ ಪ್ರಸಾದ್ ಮುಳಿಯ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವಕ್ಕೆ ಮೆರುಗು ನೀಡುವ ನಿಟ್ಟಿನಲ್ಲಿ ವಿಶೇಷ ವ್ಯಾಪಾರ ಮೇಳವು ದೇವಸ್ಥಾನದ ಸಭಾ ಭವನದಲ್ಲಿ ನಡೆಯಲಿದೆ. ಈ ಮೇಳದಲ್ಲಿ ಹೊಸ ಉತ್ಪನ್ನಗಳ ಬಿಡುಗಡೆ ಜತೆಗೆ ಮಾರುಕಟ್ಟೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿಶೇಷ ವ್ಯವಹಾರ ಮೇಳ ನಡೆಯಲಿದೆ. ಮೇಳವು ಏ.14  ಸಂಜೆ 5.30 ಕ್ಕೆ ದೇವಸ್ಥಾನದ ಸಭಾಭವನದ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ತಿಳಿಸಿದ್ದಾರೆ.

 

ಎ.13ರಂದು ವ್ಯವಹಾರ ಮೇಳ ನಡೆಯುವ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೂತನ ಉತ್ಪನ್ನಗಳ ಮಾರುಕಟ್ಟೆಗೆ ಪರಿಚಯಿಸುವ ಜತೆಗೆ ಕೆಲವೊಂದು ಉತ್ಪನ್ನಗಳ ತಯಾರಿಸುವ ವಿಧಾನವನ್ನು ತಿಳಿದುಕೊಳ್ಳುವ ಅವಕಾಶವನ್ನು ಈ ವಿಶೇಷ ಮಳಿಗೆಯಲ್ಲಿ ಮಾಡಲಾಗಿದೆ. ಇದಕ್ಕಾಗಿ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಹಾಗೂ ಎಂಬಿಎ ವಿದ್ಯಾರ್ಥಿಗಳು ಇದರ ಜತೆ ಕೈಜೋಡಿಸಲಿದ್ದಾರೆ ಎಂದ ಅವರು, ಕೆಲವೇ ಮಳಿಗೆಗಳು ಖಾಲಿಯಿದ್ದು, ವ್ಯವಹಾರ ಮಾಡುವವರು ದೇವಸ್ಥಾನದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ವ್ಯವಸ್ಥಾಪನನಾ ಸಮಿತಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು ಮಾತನಾಡಿ, ಹೊಸ ಚಿಂತನೆಯೊಂದಿಗೆ ಈ ವಿಶೇಷ ವ್ಯವಹಾರ ಮಳಿಗೆಯನ್ನು ಈ ಬಾರಿ ಜಾತ್ರೋತ್ಸವದಲ್ಲಿ ತೆರೆಲಾಗುವುದು. ಈ ಮಳಿಗೆಯಲ್ಲಿ ಡಿಸಿಸಿ ಬ್ಯಾಂಕ್, ಕೆನರಾ ಬ್ಯಾಂಕ್, ಖಾದಿ ಶರ್ಟ್, ನಂದಿನಿ ಮಿಲ್ಕ್, ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ, ಪದ್ಮಶ್ರೀ ಸೋಲಾರ್, ಎಸ್‌ಜಿ ಪ್ಯೂರ್ ಮಸಾಲ, ಕ್ಯಾಂಪ್ಕೋ, ಸ್ವಸ್ತಿಕ್ ಸ್ಕೂಟರ್, ರಾಮರಾಜ್ ಕಾಟನ್, ಮಾರುತಿ ಹರ್ಬಲ್, ಮುಳಿಯ ಜ್ಯುವೆಲ್ಸ್, ಮುಳಿಯ ಜಿಮ್ ಸೇರಿದಂತೆ ಒಟ್ಟು 37 ಮಳಿಗೆಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದರು.

ವ್ಯವಹಾರ ಮಳಿಗೆ ರೂವಾರಿ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಮಳಿಗೆಯು ಸಂಜೆ 5.30 ಕ್ಕೆ ಉದ್ಘಾಟನೆಗೊಳ್ಳಿದೆ. ಉದ್ಘಾಟನೆಯ ಪ್ರಾರಂಭದಲ್ಲಿ ಪ್ರತೀ ಮಳಿಗೆಯ ಮಾಲಕರನ್ನೊಳಗೊಂಡು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ, ಸದಸ್ಯರು ದೇವಸ್ಥಾನದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ತೆಂಗಿನಕಾಯಿ ಒಡೆದು ಬಳಿಕ ಭಜನಾ ತಂಡ, ಚೆಂಡೆ, ವಾದ್ಯ, ಪೂರ್ಣಕುಂಭ ಸ್ವಾಗತದೊಂದಿಗೆ ವ್ಯವಹಾರ ಮಳಿಗೆಗೆ ಆಗಮಿಸಿ ಅಲ್ಲಿ ಮಳಿಗೆಯ ಉದ್ಘಾಟನೆ ನಡೆಯಲಿದೆ. ಪ್ರತಿ ಮಳಿಗೆಗಳ ಮಾಲಕರಿಂದ ಮಳಿಗೆಗಳನ್ನು ಉದ್ಘಾಟನೆಗೊಳಿಸಲು ಅವಕಾಶ ನೀಡಲಾಗಿದೆ. ಮೂದಬಿದರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಮುಕ್ತಾನಂದ ಸ್ವಾಮೀಜಿ ಮಳಿಗೆಗೆ ಚಾಲನೆ ನೀಡುವರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ ಮಠಂದೂರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಸದಸ್ಯರು, ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಖರ್ ನಾರಾವಿ, ಉಪಸಮಿತಿಯ ಸಂಘಟಕ ಜಗದೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here