ಎಲ್ಲಾ ಪಕ್ಷಗಳಲ್ಲಿ ಭ್ರಷ್ಟಾಚಾರಿಗಳಿದ್ದಾರೆ, ಭ್ರಷ್ಟಾಚಾರ ಯಾವುದೇ ಪಕ್ಷಕ್ಕೆ ಸೀಮಿತವಲ್ಲ

0

  • ಕಾಂಗ್ರೆಸ್ ಸೋಲಲು ಭ್ರಷ್ಟಾಚಾರವೇ ಕಾರಣ ಹೌದು. ಆದರೆ ಬಿಜೆಪಿಯನ್ನು ಭ್ರಷ್ಟಾಚಾರ ಮಾಡಲಿಕ್ಕಾಗಿ ಆರಿಸಿದ್ದಲ್ಲ
  • ಲಂಚ ಭ್ರಷ್ಟಾಚಾರ ಜಾಸ್ತಿಯಾಗಲು ಆಯಾ ಪಕ್ಷದವರು ಅದನ್ನು ರಕ್ಷಿಸಿ ಬೆಂಬಲಿಸುವುದೇ ಕಾರಣ

ಲಂಚ, ಭ್ರಷ್ಟಾಚಾರ ನಿಲ್ಲದಿರುವುದಕ್ಕೆ ಮತ್ತು ಬೆಳೆಯಲು ಕಾರಣ ಪ್ರತಿಯೊಂದು ಪಕ್ಷದವರು ತಮ್ಮ ತಮ್ಮ ಪಕ್ಷದ ನಾಯಕರ ಭ್ರಷ್ಟಾಚಾರವನ್ನು ರಕ್ಷಿಸುವುದು ಮಾತ್ರವಲ್ಲ, ಕುರುಡರಾಗಿ ಬೆಂಬಲಿಸುವುದೇ ಆಗಿದೆ. ಕಾರ್ಯಕರ್ತರು ಇದಕ್ಕಾಗಿ ಸುಳ್ಳುಗಳ ಸರಮಾಲೆ ರಚಿಸುತ್ತಾರೆ. ವಿರೋಧಿಗಳ ಮೇಲೆ ಅದನ್ನು ಹೇರಿ ಜನರನ್ನು ಗೊಂದಲಕ್ಕೆ ಉಂಟುಮಾಡಿ ತಮ್ಮ ತಮ್ಮ ನಾಯಕರಿಗೆ ರಕ್ಷಣೆಯನ್ನು ಕೊಡುವುದೇ ತಮ್ಮ ಕರ್ತವ್ಯ ಎಂದು ಪರಿಗಣಿಸುತ್ತಾರೆ. ಇದಕ್ಕೆ ಯಾವ ಪಕ್ಷವೂ ಹೊರತಲ್ಲ. ಪ್ರಧಾನಿ ಮೋದಿಯವರು ನಾ ಖಾವೂಂಗಾ, ನಾ ಖಾನೆದೂಂಗ, (ಲಂಚ ನಾನು ತಿನ್ನುವುದಿಲ್ಲ, ಇತರರನ್ನು ತಿನ್ನಲು ಬಿಡುವುದಿಲ್ಲ) ಎಂದಾಗ ಜನರಿಗೆ ಭ್ರಷ್ಟಾಚಾರ ರಹಿತ ಆಡಳಿತದ ಶಕೆಯ ಭರವಸೆ ಬಂದಿತ್ತು. ಕರ್ನಾಟಕ ಸಿದ್ಧರಾಮಯ್ಯ ಸರಕಾರ ಶೇ. 10ಪರ್ಸೆಂಟ್ ಸರಕಾರ ಆಡಳಿತಕ್ಕೆ ಬಂದರೆ ಅದನ್ನು ನಾವು ನಿಲ್ಲಿಸುತ್ತೇವೆ ಎಂದಾಗ ಜನ ತಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಅದರಿಂದ ಓಟು ಬದಲಾಗಿ ಕಾಂಗ್ರೆಸ್ ಸೋಲಲು ಕಾರಣವಾಗಿರಬಹುದು.

ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಬಿಜೆಪಿ ಸರಕಾರವನ್ನು ಜನತೆ ಆರಿಸಿರಬೇಕು. ಆದರೆ ಇಲ್ಲಿ ಗೆದ್ದವರು ಜನತೆ ತಮ್ಮನ್ನು ಗೆಲ್ಲಿಸಿದ್ದು ಭ್ರಷ್ಟಾಚಾರ ರಹಿತ ಆಡಳಿತ ಮಾಡಲಿಕ್ಕೆ ಎಂದು ಮರೆತು ಅಧಿಕಾರ ಹಿಡಿದದ್ದು ಭ್ರಷ್ಟಾಚಾರದಿಂದ ಹಣ ಮಾಡಿ ಮುಂದಿನ ಪೀಳಿಗೆಗೆ ಬಂಡವಾಳ ಮಾಡಲಿಕ್ಕೆ, ಮುಂದಿನ ಹಲವು ಚುನಾವಣೆಗಳನ್ನು ಗೆಲ್ಲಲಿಕ್ಕಾಗಿ, ಹಣ ಸಂಗ್ರಹಕ್ಕಾಗಿ ಎಂಬ ನಂಬಿಕೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಕಾಣುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರಕಾರ ಶೇ.10 ಪರ್ಸೆಂಟ್ ಸರಕಾರವಾಗಿದ್ದರೆ ಈಗಿನ ಸರಕಾರ ಶೇ. ೪೦ ಪರ್ಸೆಂಟ್ ಸರಕಾರ ಎಂದು ಚರ್ಚೆಯಾಗುತ್ತಿದೆ.

ಏನೇ ಹಗರಣ ಆದರೂ ಹಗರಣ ಮಾಡಿದವರು, ಅಧಿಕಾರದಲ್ಲಿದ್ದವರು ನೀವು ಕೇಳಲಿಕ್ಕೆ ಯಾರು ಎಂದು ವಿರೋಧ ಪಕ್ಷದವರನ್ನು ಕೇಳುತ್ತಾರೆ. ನಿಮ್ಮನ್ನು ಭ್ರಷ್ಟಾಚಾರಿಗಳೆಂದು ಮನೆಗೆ ಕಳುಹಿಸಿದ್ದಾರೆ. ನಮ್ಮನ್ನು ಆರಿಸಿದ್ದಾರೆ ಎಂದು ಹೇಳುವ ಮೂಲಕ ತಾವು ಮಾಡಿದ ಭ್ರಷ್ಟಾಚಾರಕ್ಕೆ ಜನತೆಯ ಬೆಂಬಲವಿದೆ ಅದಕ್ಕಾಗಿಯೇ ಆರಿಸಿದ್ದು ಎಂದು ವರ್ತಿಸುತ್ತಾರೆ. ಇದು ಮುಗಿಯದ ತಿರುಗುತ್ತಾ ಜಾಸ್ತಿಯಾಗುತ್ತಿರುವ ವೃತ್ತ. ಇಂದು ಬಿಜೆಪಿ ಸೋತು ಕಾಂಗ್ರೆಸ್ ಅಥವಾ ದಳ ಅಧಿಕಾರಕ್ಕೆ ಬಂದರೆ ಅವರು ತಮ್ಮ ಪಕ್ಷದವರು ಮಾಡುವ ಭ್ರಷ್ಟಾಚಾರವನ್ನು ಬೆಂಬಲಿಸುತ್ತಾರೆ. ತಮ್ಮನ್ನು ಆರಿಸಿದ್ದು ಭ್ರಷ್ಟಾಚಾರ ಮಾಡಲಿಕ್ಕೆ ನೀವು ಕೇಳಲಿಕ್ಕೆ ಯಾರು ಎಂಬ ಮಾತನ್ನು ಇಂದು ಬಿಜೆಪಿಯವರು ಕಾಂಗ್ರೆಸ್, ದಳಕ್ಕೆ ಹೇಳಿದಂತೆ ಅವರು ಇವರಿಗೆ ಹೇಳುತ್ತಾರೆ. ಅವರಿಗೆ ಎಲ್ಲಿಯೂ ತಾವು ಜನರಿಗೆ ಮತದಾರರಿಗೆ ಜವಾಬ್ದಾರರು, ಅವರಿಗೆ ಉತ್ತರ ಕೊಡಬೇಕೆಂದು ಅನಿಸುವುದಿಲ್ಲ. ಜನರಿಗೆ ಭ್ರಷ್ಟಾಚಾರದಿಂದ ಆದ ಯಾವುದೇ ತೊಂದರೆಗಳ ಬಗ್ಗೆ ಅವರಿಗೆ ಚಿಂತೆ ಇರುವುದಿಲ್ಲ. ಯಾಕೆಂದರೆ ಎಲ್ಲಾ ರಾಜಕೀಯ ಪಕ್ಷದ ನಾಯಕರ ಲೆಕ್ಕದಲ್ಲಿ ಅವರುಗಳು ಮಾತ್ರ ರಾಜರುಗಳು. ಮತದಾರರು ಅವರನ್ನು ಆರಿಸಲಿಕ್ಕೆ ಇರುವ ಕಾಳಾಲುಗಳು. ಅದು ಪಕ್ಷದ ರಾಜರುಗಳ ನಡುವಿನ ಅಧಿಕಾರಕ್ಕಾಗಿ ನಡೆಯುವ ಯುದ್ಧ, ಹೋರಾಟ ಹೊರತು ಜನರಿಗೆ ಸಂಬಂಧ ಪಟ್ಟದ್ದಲ್ಲ. ಜನರು ಅವರನ್ನು ಪ್ರಶ್ನಿಸುವಂತಿಲ್ಲ ಎಂಬ ಅಭಿಪ್ರಾಯವಿದೆ. ಈಗಿನ ಸರಕಾರದ ಮಂತ್ರಿಯಾಗಿದ್ದ ಈಶ್ವರಪ್ಪ ಭ್ರಷ್ಟಾಚಾರ ಮತ್ತು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಈಗ ನಡೆಯುತ್ತಿರುವ ಗದ್ದಲ, ಪ್ರಚಾರ-ಅಪಪ್ರಚಾರಗಳು, ದೂಷಣೆಗಳು, ಸಮರ್ಥನೆಗಳು ಅದಕ್ಕೆ ಉತ್ತಮ ಸಾಕ್ಷಿ.

ಇಲ್ಲಿ ಮತದಾರರ ಪಕ್ಷದ ಕಾರ್ಯಕರ್ತರ ತಪ್ಪು ಕೂಡ ಇದೆ. ತಾವು ಆರಿಸುವುದು ನಮ್ಮ ಸೇವೆಗಾಗಿ. ನಾವು ರಾಜರುಗಳು ಅವರು ಜನಪ್ರತಿನಿಧಿಗಳು ಅವರು ಮಾಡುವ ಅನ್ಯಾಯದಿಂದ ನಮಗೆ ತೊಂದರೆಯಾಗುತ್ತದೆ ಎಂಬ ಭಾವನೆ ನಮ್ಮಲ್ಲಿ ಇಲ್ಲ. ತಾವು ಆರಿಸಿದ ಪಕ್ಷದ ನಾಯಕರು ತಪ್ಪು ಮಾಡಿದರೆ ಭ್ರಷ್ಟಾಚಾರ ಮಾಡಿದರೆ, ಕೊಲೆ, ರೇಪ್ ಮಾಡಿದರೂ ಆಯಾ ಪಕ್ಷದ ಮತದಾರರು, ಕಾರ್ಯಕರ್ತರು ತಮ್ಮ ತಮ್ಮ ನಾಯಕರ ಮತ್ತು ಪಕ್ಷದ ಗುಲಾಮರಂತೆ ವರ್ತಿಸುತ್ತಾ, ತಮ್ಮ ತಮ್ಮ ನಾಯಕರುಗಳನ್ನು ರಕ್ಷಿಸಲು ತಾ ಮುಂದು ನಾ ಮುಂದು ಎಂದು ಬರುತ್ತಾರೆ. ಅದೇ ರೀತಿ ವಿರೋಧ ಪಕ್ಷದ ನಾಯಕರನ್ನು ಇವರ ಪರವಾಗಿ ಖಂಡಿಸಲು, ವಿರೋಧಿಸಲು ತಮ್ಮ ಪಕ್ಷದ ನಾಯಕರ ಆಜ್ಞೆಯನ್ನು ಪಾಲಿಸುತ್ತಾರೆ. ಇದರಿಂದ ಪ್ರತಿಯೊಂದು ಪಕ್ಷದ ನಾಯಕರುಗಳಿಗೆ ತಪ್ಪು, ಅನ್ಯಾಯ ಮಾಡಲು ಯಾವುದೇ ಹೆದರಿಕೆ ಇರುವುದಿಲ್ಲ. ಏನೇ ಮಾಡಿದರೂ ರಕ್ಷಣೆ ಸಿಗುತ್ತದೆ ಎಂಬ ನಂಬಿಕೆ ಅವರನ್ನು ಭ್ರಷ್ಟಾಚಾರಿಗಳನ್ನಾಗಿ, ಕ್ರೂರಿಗಳನ್ನಾಗಿ ಜನದ್ರೋಹಿಗಳನ್ನಾಗಿ ಮಾಡಿ ಬಿಡುತ್ತದೆ. ಅದಕ್ಕೆ ಪರಿಹಾರವಿದೆ. ಪ್ರತೀ ಪಕ್ಷದ ಮತದಾರರು ತಾವು ಆರಿಸಿದ ಪಕ್ಷ ಮತ್ತು ಜನಪ್ರತಿನಿಧಿ ತಪ್ಪು ಮಾಡಿದಾಗ ಅದಕ್ಕೆ ತಾವೇ ಹೊಣೆಗಾರರು ತಾವು ಆರಿಸಿದ್ದು ನ್ಯಾಯಯುತ ಉತ್ತಮ ಸೇವೆ ನೀಡಲಿಕ್ಕೆ ಎಂದು ತಿಳಿದುಕೊಂಡು ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕು.

ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜರುಗಳಾದ ನಮಗೆ (ಜನರಿಗೆ) ಲಂಚ, ಭ್ರಷ್ಟಾಚಾರದಂತಹ ವಿಷಯದಲ್ಲಿ ಅಥವಾ ಯಾವುದೇ ಅನ್ಯಾಯವಾದಾಗ ಪಕ್ಷ ರಹಿತವಾಗಿ ಜನರ ಪರವಾಗಿ ಚಿಂತಿಸುವ ಶಕ್ತಿ ಬರಬೇಕು. ಖಂಡಿಸುವ ಧೈರ್ಯ ಮಾಡಬೇಕು. ಅವರನ್ನು ರಕ್ಷಿಸಲೇಬಾರದು. ಯಾಕೆಂದರೆ ಅವರಿಗೆ ರಕ್ಷಣೆ ಮತ್ತು ಬೆಂಬಲ ನೀಡಿದರೆ ನಾವು ನಮಗೆ ಮಾತ್ರವಲ್ಲ ಇಡೀ ಜನ ಸಮುದಾಯಕ್ಕೆ ಮಾಡಿದ ಅನ್ಯಾಯವೆಂದೇ ಪರಿಗಣಿಸಬೇಕು. ಲಂಚ ಭ್ರಷ್ಟಾಚಾರ ಯಾರೇ ಮಾಡಿದರೂ ಬಹಿಷ್ಕಾರ ಎಂದು ಎಲ್ಲರೂ ಘೋಷಿಸಿಬೇಕು. ಆ ಪ್ರಯತ್ನ ಮಾಡಿದರೆ ನಾವು ನೀಡಿದ ಗಡುವಿನ ೧೦೦ ದಿನಗಳಲ್ಲಿ ಇನ್ನು ಉಳಿದಿರುವ ೩೭ ದಿನಗಳಲ್ಲಿ ಲಂಚ ಭ್ರಷ್ಟಾಚಾರ ಮುಕ್ತ ಊರು ನಮ್ಮದಾಗುವುದು ಖಂಡಿತ.

ಕಾಂಗ್ರೆಸ್, ಬಿಜೆಪಿ, ದಳದವರು ತಮ್ಮ ತಮ್ಮ ಪಕ್ಷದ ನಾಯಕರ ಭ್ರಷ್ಟಾಚಾರವನ್ನು ಖಂಡಿಸಬೇಕು, ರಕ್ಷಿಸಬಾರದು. ಆಗ ಭ್ರಷ್ಟಾಚಾರ ನಿರ್ಮೂಲನೆಯಾಗುತ್ತದೆ.

 

LEAVE A REPLY

Please enter your comment!
Please enter your name here