ಎ. 21ಕ್ಕೆ ಜನತಾ ಜಲಧಾರೆ ರಥ ಕಡಬಕ್ಕೆ ಸೈಯದ್ ಮೀರಾ ಸಾಹೇಬ್

0

ಕಡಬ: ಜಾತ್ಯಾತೀತ ಜನತಾ ದಳ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮದ ರಥ ಎಪ್ರಿಲ್ 21 ನೇ ಗುರುವಾರ ಕಡಬ ತಾಲೂಕಿಗೆ ಆಗಮಿಸಲಿದ್ದು ರಥವನ್ನು ಕಡಬ ತಾಲೂಕಿನ ಇಚ್ಲಂಪಾಡಿಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಜೆಡಿಎಸ್ ಕಡಬ ತಾಲೂಕು ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಹೇಳಿದರು.

ಅವರು ಸೋಮವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕಡಬ ತಾಲೂಕಿನ ಜನತೆಗೆ ಕುಡಿಯಲು ಹಾಗೂ ಕೃಷಿ ಬಳಕೆಗೆ ಬರಪೂರ ನೀರುಣಿಸುವ ಮಹತ್ವಾಕಾಂಕ್ಷೇಯ ಯೋಜನಾ ಉದ್ದೇಶವನ್ನು ಹೊಂದಿರುವ ಈ ಜನತಾಜಲಧಾರೆ ಕಾರ್ಯಕ್ರಮಕ್ಕೆ ಕಡಬದ ಜನತೆ ಸಹಕರಿಸಬೇಕು ಎಂದರು. ಕುಮಾರಧಾರ, ಗುಂಡ್ಯ ಹೊಳೆ, ನೇತ್ರಾವತಿ ನದಿ ಕಡಬ ತಾಲೂಕಿನಾಧ್ಯಂತ ಇರುವ ಕೆರೆಗಳು ತುಂಬಿಸುವ ಯೋಜನೆ ಇದಾಗಿದೆ. ಮುಂಗಾರು ಮಳೆಯಲ್ಲಿ ಜೂನ್ ನಿಂದ ಸೆಪ್ಟೆಂಬರ್ ತನಕ ನದಿ ಹೊಳೆಗಳಲ್ಲಿ ಉಕ್ಕಿ ಹರಿಯುವ ನೀರು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಈ ನದಿಗಳಿಗೆ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿ ಪಂಪು ಹಾಗೂ ಕಾಲುವೆ ಮೂಲಕ ಕರಾವಳಿ ಪ್ರದೇಶದಲ್ಲಿರುವ ಕಡಬ ತಾಲೂಕಿನ ವಿವಿಧ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವುದಲ್ಲದೆ, ರೈತರ ಸಾವಿರಾರು ಎಕರೆ ಕೃಷಿಭೂಮಿಗೆ ನೀರುಣಿಸುವ ಯೋಜನೆ ಈ ಜಲಯಾತ್ರೆ. ಇದರ ರಥವನ್ನು ಇಚ್ಲಂಪಾಡಿಯಲ್ಲಿ ಸ್ವಾತಿಸಿದ ಬಳಿಕ ಇಚ್ಲಂಪಾಡಿ ಗಂಗಾಧರೇಶ್ವರ ದೆವಸ್ಥಾನದಲ್ಲಿ ಪೂಜೆ, ಬಳಿಕ ಇಚ್ಲಂಪಾಡಿ ಸೈಂಟ್ ಮೇರೀಸ್ ಚರ್ಚ್‌ನಲ್ಲಿ ಪೂಜೆ, ಬಳಿಕ ಕಳಾರ ಮುಖಾಂತರ ಕಡಬಕ್ಕೆ ಆಗಮಿಸಿ ಕಡಬ ಗೈಬಾನ್ ಷಾ ದರ್ಗಾದಲ್ಲಿ ಪ್ರಾರ್ಥನೆ, ಬಳಿಕ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನ, ಶ್ರೀಕಂಠ ಸ್ವಾಮಿ ಮಹಾಗಣಪತಿ ದೇವಸ್ಥಾನಗಳಲ್ಲಿ ರಥಕ್ಕೆ ಪೂಜೆ ನೆರವೇರಿಸಿ ಮಧ್ಯಾಹ್ನ ೧೨ ಗಂಟೆಗೆ ಕಡಬ ಮೇಲಿನ ಪೇಟೆಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಬಳಿಕ ನೆಕ್ಕಿತಡ್ಕ ದರ್ಗಾ, ಮರ್ಧಾಳ ಜೈನ ಬಸದಿ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನಗಳಲ್ಲಿ ಪೂಜೆ ನೆರವೆರಿಸಿ ಅಪರಾಹ್ನ ಮೂರು ಗಂಟೆಯ ಹೊತ್ತಿಗೆ ಸುಬ್ರಹ್ಮಣ್ಯ ಹೊಳೆ ಬಳಿ ಜನತಾ ಜಲಧಾರೆ ಕಾರ್ಯಕ್ರಮ ನಡೆಯಲಿದೆ. ಬಳಿಕ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜೆ ನೆರವೇರಲಿದೆ ಎಂದು ವಿವರಿಸಿದ ಮಿರಾ ಸಾಹೇಬ್ ಕಾರ್ಯಕ್ರಮದಲ್ಲಿ ಜೆಡಿಎಸ್ ನ ವಿವಿಧ ಮುಖಂಡರು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಚಂದ್ರಶೇಖರ ಗೌಡ ಕೋಡಿಬೈಲ್, ದಿನೇಶ್ ಎಂ.ಪಿ. ಸುಬ್ರಹ್ಮಣ್ಯ, ಫಿಲೋಮಿನ ಸ್ಕರಿಯ ಕಡಬ, ದುಗ್ಗಪ್ಪ ಕುಲ್ಕುಂದ ಸುಬ್ರಹ್ಮಣ್ಯ, ನಾರಾಯಣ ಅಗ್ರಹಾರ ಸುಬ್ರಹ್ಮಣ್ಯ, ಕೇಶವ ಸುಬ್ರಹ್ಮಣ್ಯ, ತಿಲಕ್ ಎ.ಎ ಸುಬ್ರಹ್ಮಣ್ಯ, ರಾಜನ್ ಕೆ ಮ್ಯಾಥ್ಯೂ ಇಚ್ಲಂಪಾಡಿ, ಎ.ಜೆ.ಚಾಕೋ ಇಚ್ಲಂಪಾಡಿ, ಎಲ್ದೋಸ್ ಕೆ.ನೆಲ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here