ಮೊಟ್ಟೆತ್ತಡ್ಕ ಮಣ್ಣಾಪು ಕೊರಗಜ್ಜನ ಕ್ಷೇತ್ರದಲ್ಲಿ ತುಳು ಭಕ್ತಿಗೀತೆ `ಮಾಯೋದ ಪರೆಲ್-ಮಣ್ಣಾಪುದ ನಿರೆಲ್’ ಬಿಡುಗಡೆ

0

 

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಮತ್ತು ಶ್ರೀ ಆದಿನಾಗ ಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಮಣ್ಣಾಪು ಕ್ಷೇತ್ರದ ಕಾರಣಿಕ ಶಕ್ತಿ ಸ್ವಾಮಿ ಕೊರಗಜ್ಜ ದೈವದ ತುಳು ಭಕ್ತಿಗೀತೆ `ಮಾಯೋದ ಪರೆಲ್-ಮಣ್ಣಪುದ ನಿರೆಲ್’ ಬಿಡುಗಡೆ ಹಾಗೂ ತುಳುನಾಡ ಭಕ್ತಿ ಗಾಯನ ಲೋಕದ ಧ್ರುವತಾರೆಗಳಿಗೆ ಗೌರವ ಸಮರ್ಪಣಾ ಕಾರ್ಯಕ್ರಮ ಎ.22 ರಂದು ಸಂಜೆ ಮಣ್ಣಾಪು ಶ್ರೀ ಕ್ಷೇತ್ರದಲ್ಲಿ ನಡೆಯಿತು.

 


ಏಳ್ಮುಡಿ ವಿಶ್ವಾಸ್ ಎಂಟರ್‌ಪ್ರೈಸಸ್‌ನ ಶ್ರೀಕಾಂತ್ ಶೆಣೈಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ರೇಖನಾಥ ರೈ ಸಂಪ್ಯದಮೂಲೆರವರು ಮಾತನಾಡಿ, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಭಾಗವಹಿಸುವುದೇ ದೊಡ್ಡ ಹೆಮ್ಮೆ. ಮಣ್ಣಾಪುವಿನ ಈ ಕಾರಣಿಕ ಕ್ಷೇತ್ರದಲ್ಲಿ ಊರ-ಪರ ಊರಿನಿಂದ ಅಸಂಖ್ಯ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ನೋಡಿದಾಗ ಕ್ಷೇತ್ರದ ಪವಾಡ ನಮಗೆ ಅರಿವಾಗಬಹುದು. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಗಣ್ಯಾತಿ ಗಣ್ಯರು ವೇದಿಕೆ ಹಂಚಿಕೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲಿನ ಮಣ್ಣಾಪು ಕ್ಷೇತ್ರದಲ್ಲಿ ಸ್ವಾಮಿ ಅಜ್ಜನ ಸೇವೆ ಮಾಡುವ ಭಕ್ತರನ್ನು ವೇದಿಕೆಯಲ್ಲಿ ಕೂರಿಸಿರುವುದು ಎಲ್ಲರಿಗೂ ಮಾದರಿಯಾಗಿದೆ. ಅಜ್ಜನ ಮಹಿಮೆ ಎಲ್ಲರಿಗೂ ತಿಳಿಸುವ ಕಾಯಕ ಮುಂದುವರೆಯಲಿ ಎಂದರು.

ಯುವ ಸಾಹಿತ್ಯಗಾರ ಯಶವಂತ ಕಲಾಯಿ ಹಾಗೂ ಗಾಯಕಿ ಪೂಜಾ ಸನಿಲ್‌ರವರು, ನಮ್ಮಲ್ಲಿ ಸಾಹಿತ್ಯ ಬರೆಸಿರುವುದು ಹಾಗೂ ಹಾಡನ್ನು ಹಾಡಿಸಿರುವುದು ಎಲ್ಲವೂ ಅಜ್ಜನೇ ಆಗಿದ್ದಾರೆ. ಇಲ್ಲಿನ ಪವಿತ್ರ ಕ್ಷೇತ್ರಕ್ಕೆ ನಮ್ಮನ್ನು ಅಜ್ಜನೇ ಕರೆಯಿಸಿರುವುದು ಆಗಿದೆ ಎಂದರು. ತುಳು ಭಕ್ತಿಗೀತೆಯ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಸವಿತಾ ಪಂಜರವರು ಮಾತನಾಡಿ, ನನಗೆ ಅಜ್ಜನ ಮೇಲಿರುವ ಭಕ್ತಿಯಿಂದಲೇ ಈ ಕ್ಷೇತ್ರದಲ್ಲಿ ಮೊತ್ತ ಮೊದಲ ಭಕ್ತಿಗೀತೆ ಬಿಡುಗಡೆಯಾಗಿರುವುದು ಭಾಗ್ಯವೇ ಸರಿ ಮಾತ್ರವಲ್ಲದೆ ಹಲವಾರು ಮಂದಿ ನನ್ನೊಂದಿಗೆ ಕೈಜೋಡಿಸಿದ್ದಾರೆ. ಈ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಹೊಸ ಹೊಸ ಪ್ರತಿಭೆಗಳು ಉದಯಿಸಲಿ ಎಂದರು.

ಶ್ರೀ ಕ್ಷೇತ್ರ ಮಣ್ಣಾಪು ಇದರ ಅಧ್ಯಕ್ಷ ವಿಶ್ವನಾಥ ಆರ್.ಕೆಮ್ಮಿಂಜೆ, ದೈವದ ಪ್ರಧಾನ ಅರ್ಚಕರಾದ ಕುಂಡ ಮುಗೇರ ಹಾಗೂ ಅಣ್ಣು, ಮಧ್ಯಸ್ಥ ಗಣೇಶ್ ಪೂಜಾರಿ ಕೆಮ್ಮಿಂಜೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕೆಮ್ಮಿಂಜೆ, ಪಾಲಿಂಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಮಣ್ಣ ನಾಯ್ಕ, ಯುನೈಟೆಡ್ ಈಗಸ್‌ಪದವು ಇದರ ಆನಂದ ನಿಡ್ಮಾರು, ಉಮಾನಾಥ ಕೋಟ್ಯಾನ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು|ಮಂಜುಳಾ ಪ್ರಾರ್ಥಿಸಿದರು. ಸವಿತಾ ಪಂಜ ಸ್ವಾಗತಿಸಿ ವಂದಿಸಿದರು. ಪುರುಷೋತ್ತಮ್ ಕುಂಡಡ್ಕ ಕಾರ್ಯಕ್ರಮ ನಿರೂಪಿಸಿದರು. ಮಣ್ಣಾಪು ಶ್ರೀ ಸ್ವಾಮಿ ಕೊರಗಜ್ಜ ಭಜನಾ ಮಂಡಳಿ ಹಾಗೂ ಪಾಲಿಂಜೆ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನೆರವೇರಿತು.

ಧ್ರುವತಾರೆಗಳಿಗೆ ಗೌರವ ಸಮರ್ಪಣೆ…
ಈ ಸಂದರ್ಭದಲ್ಲಿ `ಮಾಯೋದ ಪರೆಲ್-ಮಣ್ಣಾಪುದ ನಿರೆಲ್’ ಭಕ್ತಿಗೀತೆಯನ್ನು ಹಾಡಿದ ತುಳುನಾಡ ಅದ್ಭುತ ಗಾಯಕ, ಗಾಯನ ಲೋಕದ ಧ್ರುವತಾರೆ ಗುಣಪ್ರಸಾದ್ ಕುಕ್ಕಟೆ ಹಾಗೂ ಗಾಯಕಿ ಪೂಜಾ ಸನಿಲ್‌ರವರನ್ನು ಸನ್ಮಾನಿಸುವ ಮೂಲಕ ಗೌರವ ಕಾರ್ಯಕ್ರಮ ನಡೆಯಿತು. ಮಾತ್ರವಲ್ಲದೆ ಶ್ರೀ ಕ್ಷೇತ್ರದ ಕೊರಗಜ್ಜನ ಸಾನಿಧ್ಯದಲ್ಲಿ ಗಾಯನ ಲೋಕದ ಧ್ರುವತಾರೆ ಗುಣಪ್ರಸಾದ್ ಕುಕ್ಕಟೆರವರಿಗೆ `ತುಳುನಾಡ ಸ್ವರ ಮಾಣಿಕ್ಯ’ ಎಂಬ ಬಿರುದನ್ನು ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here