ಲಂಚ, ಭ್ರಷ್ಟಾಚಾರದ ವಿರುದ್ಧ ಜನರ ಎಚ್ಚರಿಕೆಯ ಗಂಟೆ ಮೊಳಗಿದೆ

0

  • ಉತ್ತಮ ಸೇವೆ ನೀಡುವವರಿಗೆ ಪುರಸ್ಕಾರದ ವಾದ್ಯದ ಸ್ವಾಗತವಿದೆ
  • ಮೆರವಣಿಗೆ ಕತ್ತೆಯ ಮೇಲೆಯೆ? ಅಂಬಾರಿಯಲ್ಲಿಯೇ? ಆಯ್ಕೆ ನಿಮ್ಮದು

ಸುಳ್ಯ ನಗರದಲ್ಲಿ ಎ. 22ರಂದು ನಡೆದ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಬೃಹತ್ ವಾಹನ ಜಾಥಾದ ನೇತೃತ್ವವನ್ನು ವಿವಿಧ ಸಂಘ ಸಂಸ್ಥೆಗಳು ವಹಿಸಿದ್ದರು. ಅದರ ಉದ್ಘಾಟನೆಯನ್ನು ಮಾಡಿದ ಸುಳ್ಯದ ಶಾಸಕರು, ಬಂದರು ಮತ್ತು ಮೀನುಗಾರಿಕೆ, ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರರವರು ಲಂಚ, ಭ್ರಷ್ಟಾಚಾರದ ಪಿಡುಗಿನ ವಿರುದ್ಧ ಹೋರಾಟ ಅತೀ ಅಗತ್ಯ. ಅದು ದೇಶದೆಲ್ಲೆಡೆ ಹರಡಿ ನಮ್ಮ ಊರು, ತಾಲೂಕು, ದೇಶ ಲಂಚ, ಭ್ರಷ್ಟಾಚಾರ ಮುಕ್ತವಾಗಿ ಜನರ ಸಂಕಷ್ಟ ಪರಿಹಾರವಾಗಬೇಕೆಂದು ಕರೆ ನೀಡಿದರು. ವಾಹನ ಜಾಥಾ ಸುಳ್ಯ ನಗರದಲ್ಲಿ ಸಾಗಿದಾಗ ಪೇಟೆಯ ಎರಡೂ ಕಡೆ ರಸ್ತೆಯಲ್ಲಿದ್ದ ಮತ್ತು ಕಟ್ಟಡಗಳಲ್ಲಿರುವ ಜನರು ಅದನ್ನು ಸ್ವಾಗತಿಸಿ, ಬೆಂಬಲ ಸೂಚಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಎ.ಸಿ. ಗಿರೀಶ್ ನಂದನ್‌ರವರು ಲಂಚ, ಭ್ರಷ್ಟಾಚಾರ ನಿರ್ಮೂಲನೆಯೇ ನಮ್ಮ ಆದ್ಯತೆ. ಜನರಿಗೆ ಯಾವುದೇ ಸಮಸ್ಯೆಗಳಿದ್ದಲ್ಲಿ ನಮ್ಮನ್ನು ನೇರವಾಗಿ ಸಂಪರ್ಕಿಸಿ, ಅದನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ತಹಶೀಲ್ದಾರ್ ಕು.ಅನಿತಾಲಕ್ಷ್ಮಿ ಯವರು ಕಚೇರಿಯಲ್ಲಿ ಲಂಚ, ಭ್ರಷ್ಟಾಚಾರವಿಲ್ಲದ ಆಡಳಿತ ನೀಡುವುದಾಗಿ ಪ್ರಶ್ನೋತ್ತರದ ನಂತರ ತಿಳಿಸಿದರು. ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರು, ಹಿರಿಯ ಸಿವಿಲ್ ನ್ಯಾಯಾಧೀಶರು ಆಗಿರುವ ಸೋಮಶೇಖರ್‌ರವರು ಇಲಾಖೆಗಳಲ್ಲಿ ಕೆಲಸ ನಡೆಯದೇ ಇದ್ದರೆ ಜನರು ಅದಕ್ಕೆ ಪರಿಹಾರ ಕಂಡುಕೊಳ್ಳುವ ವಿಧಾನವನ್ನು ವಿವರವಾಗಿ ನೀಡಿ, ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಬೇಕಾದ ಮಾಹಿತಿಯನ್ನು ನೀಡಿದರು. ಸುಳ್ಯ ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಯಶ್ವಂತ್‌ಕುಮಾರ್ ಜನರಿಗೆ ಕಾನೂನಿನ ರಕ್ಷಣೆ, ಕೋರ್ಟ್‌ಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿ, ಲಂಚ, ಭ್ರಷ್ಟಾಚಾರದ ಹೋರಾಟಕ್ಕೆ ಜನರನ್ನು ಹುರಿದುಂಬಿಸಿ ಮಾತನಾಡಿದರು. ಸಭೆಯಲ್ಲಿ ಜನರ ಸಮಸ್ಯೆಗಳ ಪ್ರಶ್ನೋತ್ತರ ಕಾರ್ಯಕ್ರಮ ಎ.ಸಿ. ಗಿರೀಶ್ ನಂದನ್‌ರವರಿಂದ ಪರಿಣಾಕಾರಿಯಾಗಿ ನಡೆಯಿತು. ಕೊನೆಯಲ್ಲಿ ನ್ಯಾಯಾಧೀಶರಾದ ಸೋಮಶೇಖರ್ ಮತ್ತು ಯಶ್ವಂತರು ಜನರಿಗೆ ಲಂಚ, ಭ್ರಷ್ಟಾಚಾರದ ವಿರುದ್ಧದ ಘೋಷಣೆ ಮತ್ತು ಜನರ ಕರ್ತವ್ಯದ ಪ್ರಮಾಣವಚನ ಬೋಧನೆ ಮಾಡಿದರು. ಸಭೆಯಲ್ಲಿ ಸೇರಿದ ಎಲ್ಲರೂ ಲಂಚ, ಭ್ರಷ್ಟಾಚಾರದ ವಿರುದ್ಧ ಪ್ರತಿeಯನ್ನು ಸ್ವೀಕರಿಸಿದರು.

ಅದೇ ದಿವಸ ಪುತ್ತೂರಿನಲ್ಲಿ ವಕೀಲರ ಸಂಘದ ಪದಗ್ರಹಣ ಕಾರ್ಯ ನಡೆಯಿತು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರು, ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಹಾಗೂ ಸುದ್ದಿಯ ವಕೀಲರು ಆಗಿರುವ ಪಿ.ಪಿ.ಹೆಗ್ಡೆಯವರು ಲಂಚ, ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೆಂದು ಅಲ್ಲಿ ಸೇರಿದ್ದ ವಕೀಲರುಗಳಿಗೆ ಕರೆ ನೀಡಿದರು. ಸಮಾರಂಭದ ಉದ್ಘಾಟನೆ ನೆರವೇರಿಸಿದ ಹಿರಿಯ ನ್ಯಾಯವಾದಿ ಸುಬ್ರಹ್ಮಣ್ಯ ಕೊಳತ್ತಾಯರು ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ ಅದನ್ನು ವಕೀಲರು ಮನಸ್ಸು ಮಾಡಿದರೆ ನಿಲ್ಲಿಸಬಹುದು, ವಕೀಲರುಗಳು ಸಾಮೂಹಿಕವಾಗಿ ನಿಂತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕು ಎಂದು ಕಿವಿಮಾತು ಹೇಳಿದರು. ಈ ಮೇಲಿನ ಎಲ್ಲಾ ವಿಚಾರಗಳನ್ನು ಉಲ್ಲೇಖಿಸಲು ಕಾರಣಗಳಿವೆ. ನಮ್ಮ ದೇಶದ ಯಾವುದೇ ಹೋರಾಟದಲ್ಲಿ ಸ್ವಾತಂತ್ರ್ಯಪೂರ್ವದ ಹೋರಾಟದಲ್ಲಿಯೂ ವಿಧಾನಸಭೆ ಪಾರ್ಲಿಮೆಂಟ್‌ನಲ್ಲಿಯೂ ವಕೀಲರುಗಳ ಪಾತ್ರ ಬಹಳ ಪ್ರಮುಖವಾದುದು. ವಕೀಲರ ಸಂಘದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡಲು ನೀಡಿದ ಕರೆ ಸುದ್ದಿ ಜನಾಂದೋಲನದ ಹೋರಾಟಕ್ಕೆ ಶಕ್ತಿ ಮತ್ತು ಹೊಸ ಹುಮ್ಮಸ್ಸು ನೀಡಿದೆ. ಈ ಮೇಲಿನ ಎಲ್ಲಾ ಬೆಳವಣಿಗೆಗಳಿಂದ ಜನರು ಜಾಗೃತರಾಗುತ್ತಿದ್ದಾರೆ. ಜನರ ಆಕ್ರೋಶವೂ ಹೊರಬೀಳುತ್ತಿದೆ.

ಈ ನಡುವೆ ಎಷ್ಟೋ ಜನರು ಲಂಚ, ಭ್ರಷ್ಟಾಚಾರ ಮಾಡುವವರನ್ನು ಎಳೆದು ಹೊರಗೆ ಹಾಕಬೇಕು, ಅವರಿಗೆ ಪೆಟ್ಟೇ ಮದ್ದು ಎಂದು ಹೇಳಿದ್ದಾರೆ. ಅದು ಸರಿಯಾದ ದಾರಿಯಲ್ಲ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ನಾವು ರಾಜರುಗಳು. ಅಽಕಾರಿಗಳು, ಜನಪ್ರತಿನಿಧಿಗಳು ಜನ ಸೇವೆಗೆ ಇರುವವರು. ಅವರನ್ನು ಕೆಲಸ ಮಾಡಿಸುವ, ತಪ್ಪು ಮಾಡಿದರೆ ಶಿಕ್ಷಿಸುವ ಮತ್ತು ಉತ್ತಮ ಕೆಲಸ ಮಾಡಿದರೆ ಪುರಸ್ಕರಿಸುವ ಶಕ್ತಿ ನಮಗಿದೆ. ಅದು ನಮ್ಮ ಕರ್ತವ್ಯವೂ ಹೌದು ಎಂದು ಜನರಿಗೆ ಅರ್ಥವಾಗುತ್ತಿದೆ. ಲಂಚ ಕೊಟ್ಟ ಹಣವನ್ನು ವಾಪಾಸು ತೆಗೆಸಿಕೊಡಬೇಕು, ಅದರ ನೇತೃತ್ವವನ್ನು ನಾವು ಆರಿಸಿದ ಜನಪ್ರತಿನಿಧಿಗಳು ವಹಿಸಿಕೊಳ್ಳಬೇಕು ಎಂಬ ಆಗ್ರಹ ಜಾಸ್ತಿಯಾಗುತ್ತಿದೆ. ಈ ಎಲ್ಲಾ ವಿಚಾರಗಳಿಂದಾಗಿ ಜನರು ಎಚ್ಚೆತ್ತುಕೊಳ್ಳುತ್ತಿದ್ದಾರೆ ಎಂಬುದನ್ನು ಲಂಚ, ಭ್ರಷ್ಟಾಚಾರ ಮಾಡುವವರು ಅದಕ್ಕೆ ಬೆಂಬಲ ಕೊಡುವವರು ಅರ್ಥ ಮಾಡಿಕೊಳ್ಳಬೇಕು. ಜನರ ರೋಷ ಸೋಟಗೊಳ್ಳಬಹುದು ಎಂಬುದನ್ನು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬೇಕು. ಹಾಗೆಯೇ ಉತ್ತಮ ಸೇವೆ ಮಾಡುವವರು ಯಾವುದೇ ಆಮಿಷಕ್ಕೆ, ಒತ್ತಡಕ್ಕೆ ಒಳಗಾಗದೆ ಜನಸೇವೆಯನ್ನೇ ತಮ್ಮ ಕರ್ತವ್ಯವೆಂದು ತಿಳಿದು ಕೆಲಸ ಮಾಡಿ ಜನ ಮೆಚ್ಚುಗೆ ಗಳಿಸಬೇಕು.

ಹಿಂದಿನ ರಾಜರುಗಳ ಕಾಲದಲ್ಲಿ ಸಮಾಜದ್ರೋಹಿಯನ್ನು ಕಪ್ಪು ಬಟ್ಟೆ ಧರಿಸಿ ಮುಖ, ದೇಹಕ್ಕೆ ಕಪ್ಪು ಬಣ್ಣ ಬಳಿದು ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುತ್ತಿದ್ದರು. ಉತ್ತಮ ಸೇವೆ ನೀಡುವವರನ್ನು ಅಂಬಾರಿಯ ಮೇಲೆ ಮೆರವಣಿಗೆ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಅದೇ ರೀತಿಯ ಆಚರಣೆ ಅಂದರೆ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬುದು ಆಚರಣೆಯಲ್ಲಿ ಬಂದರೆ ಸಮಾಜ ಬದಲಾಗಿ ನಮ್ಮ ಊರು, ಜಿಲ್ಲೆ ಲಂಚ, ಭ್ರಷ್ಟಾಚಾರ ಮುಕ್ತವಾಗುವುದು ಖಂಡಿತ. ಈ ಹೋರಾಟ ಯಶಸ್ವಿಯಾಗಬೇಕಾದರೆ ಪ್ರತಿಯೊಂದು ಗ್ರಾಮದಲ್ಲಿಯೂ ಅಧಿಕಾರಿಗಳೊಡನೆ ನೇರಾನೇರ ಸಂಪರ್ಕ ಏರ್ಪಡಬೇಕು. ಜನರು ಪ್ರಶ್ನಿಸಲು ಮುಂದಾಗುವ ಮೂಲಕ ಈ ಜನಜಾಗೃತಿಯ ಆಂದೋಲನ ನಡೆಯಬೇಕು. ಅದು ಕಾರ್ಯರೂಪಕ್ಕೆ ಬರುವ ಭರವಸೆ ಇರುವುದರಿಂದ ನೂರು ದಿನಗಳ ಅವಧಿಯ ಗಡುವಿನಲ್ಲಿ ಇನ್ನು ಉಳಿದಿರುವ ೩೦ ದಿನಗಳಲ್ಲಿ ನಮ್ಮ ಊರು, ತಾಲೂಕು ಭ್ರಷ್ಟಾಚಾರ ಮುಕ್ತವಾಗುವುದು ಮಾತ್ರವಲ್ಲ, ಉತ್ತಮ ಸೇವೆ ನೀಡುವ ಊರಾಗಲಿದೆ ಎಂದು ತಿಳಿಸಲು ಸಂತೋಷಪಡುತ್ತೇನೆ.   

                                                                                                                                                                     -ಡಾ| ಯು.ಪಿ.ಶಿವಾನಂದ

LEAVE A REPLY

Please enter your comment!
Please enter your name here