ಕಕ್ಕೂರು: ರಸ್ತೆಗೆ‌ ಜಲ್ಲಿ ಸುರಿದು ತಿಂಗಳುಗಟ್ಟಲೆ‌ ಸಂಚಾರಕ್ಕೆ ತೊಂದರೆ -ಪ್ರತಿಭಟನೆ

0

  • 15 ದಿನಗಳಲ್ಲಿ ಕಾಮಗಾರಿ ಆರಂಭಿಸದಿದ್ದರೆ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರು – ಅಡ್ಯೆತ್ತಿಮಾರ್ – ಕೋಡಿ ರಸ್ತೆಯಲ್ಲಿ ಕಾಂಕ್ರಿಟೀಕರಣಕ್ಕಾಗಿ ಜಲ್ಲಿ ಸುರಿದು ಸಂಚಾರಕ್ಕೆ ತೊಂದರೆಯಾಗಿರುವ‌ ಹಿನ್ನೆಲೆಯಲ್ಲಿ ಊರವರಿಂದ ಏ. 26 ರಂದು ಸಾಂಕೇತಿಕ ಪ್ರತಿಭಟನೆ ನಡೆಯಿತು.

ಕೆಆರ್‌ಇಡಿಎಲ್ ಬೆಂಗಳೂರು ಇವರಿಂದ ಈ ರಸ್ತೆಗೆ ಸುಮಾರು 20 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಕ್ಕೆ‌ ಅನುದಾನ ಬಂದಿತ್ತು. ರಸ್ತೆಗೆ ಜಲ್ಲಿ ಸುರಿದು 3 ತಿಂಗಳಾದರೂ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ.‌ ರಸ್ತೆಯ ಬದಿಯಲ್ಲಿ ಸುರಿದಿರುವ ಜಲ್ಲಿ ರಸ್ತೆಯಿಡೀ ಹರಡಿದ್ದು ಇದರಿಂದ ನಿತ್ಯ ಸಂಚಾರಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆದಿದೆ.

ಪ್ರತಿಭಟನೆಯಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.‌ ವಿಶ್ವನಾಥ ರೈಯವರು ಮಾತನಾಡಿ ‘ಸರಕಾರ ಅಭಿವೃದ್ಧಿ ಬಿಟ್ಟು ಮುಸ್ಲಿಂ ಹಿಂದೂ ಅಜೆಂಡಾದಲ್ಲಿದೆ. 40 ಪರ್ಸೆಂಟ್ ಹೋಗಿ 60 ಪರ್ಸಂಟ್ ಆಗಿದೆ. ಕೆಆರ್‌ಇಡಿಎಲ್ ಇಂಜಿನಿಯರ್ ಹೇಳುವ ಪ್ರಕಾರ 25% ಮಂಜೂರಾಗಿದ್ದು ಅದರಲ್ಲಿ ಜಲ್ಲಿ ತಂದು ಹಾಕಲಾಗಿದೆ. ಈ ಕಾಮಗಾರಿಗೆ ಶಾಸಕರ ಪತ್ರ ಮಾತ್ರ. ಗುತ್ತಿಗೆದಾರ ಅಜಿತ್ ರವರೇ ನೇರ ಬೆಂಗಳೂರಿ‌‌ನಲ್ಲಿ ಮಂಜೂರಾತಿ ಮಾಡಿಸಿಕೊಳ್ಳುವುದರಿಂದ ಅವರು 60% ಕೂಡಾ ಅಲ್ಲಿಯೇ ಕೊಡಬೇಕಾಗುತ್ತದೆ. ಮತ್ತೆ‌‌ ರಸ್ತೆ ಅಭಿವೃದ್ಧಿ ಆಗುವುದು ಹೇಗೆ ? ಇದು ಸದ್ಯ ಸರಕಾರದ‌‌ ಪರಿಸ್ಥಿತಿಯಾಗಿದೆ’ ಎಂದು ಆರೋಪಿಸಿದರು. ‘ಹಾಕಿರುವ ಜಲ್ಲಿಯನ್ನು ತಕ್ಷಣ ತೆರವುಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಶಾಸಕರಲ್ಲಿ ಊರವರು ವಿನಂತಿಸಿದಾಗ ‘ನಮ್ಮಲ್ಲಿ‌ ಈಗ ಹಣವಿಲ್ಲ ಏನು ಮಾಡೋದು’ ಎಂದು ಶಾಸಕರೇ ಹೇಳಿದ್ದಾರೆ’ ಎಂದರು. ಇನ್ನು ಗುತ್ತಿಗೆದಾರ ಅಜಿತ್ ರವರು 15 ದಿನದ ಒಳಗಾಗಿ ಮಾಡಿಕೊಡುತ್ತೇವೆ ಎಂದಿದ್ದಾರೆ.‌ ಮಾಡದಿದ್ದರೆ ನಾವೆಲ್ಲಾ ಮತ್ತೆ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದರು. ‘ಕಾಮಗಾರಿಯ ಇಂಜಿನಿಯರ್ ರವರನ್ನು ಸಂಪರ್ಕಿಸಿದಾಗ 15 ದಿನಗಳೊಳಗಾಗಿ‌‌ ಕಾಮಗಾರಿ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. 15 ದಿನದಲ್ಲಿ ಆರಂಭಿಸದಿದ್ದರೆ ಊರವರನ್ನು ಒಟ್ಟುಗೂಡಿಸಿ ಮತ್ತೆ‌ ಪ್ರತಿಭಟನೆ ಮಾಡಲಿದ್ದೇವೆ’ ಎಂದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಭಟ್, ಬೆಟ್ಟಂಪಾಡಿ ಗ್ರಾ.ಪಂ. ಸದಸ್ಯರಾದ ಮೊಯಿದು ಕುಂಞಿ, ಮಹಾಲಿಂಗ ನಾಯ್ಕ, ಸುಮಲತಾ, ಲಲಿತಾ ಚಿದಾನಂದ, ನಿಡ್ಪಳ್ಳಿ ಗ್ರಾ.ಪಂ. ಸದಸ್ಯ ಅವಿನಾಶ್ ರೈ, ಕಾಂಗ್ರೆಸ್ ಜಿಲ್ಲಾ‌ ಅಲ್ಪಸಂಖ್ಯಾತ ಘಟಕದ‌ ಉಪಾಧ್ಯಕ್ಷ ಅಬೂಬಕ್ಕರ್ ಕೊರಿಂಗಿಲ, ಸತೀಶ್ ಕುಮಾರ್ ನೆಲ್ಲಿಕಟ್ಟೆ, ಹರೀಶ್ ಕೋಟ್ಯಾನ್ ಹೊಸಮನೆ, ತಾರನಾಥ ನುಳಿಯಾಲು, ಲಕ್ಷ್ಮಣ ನಾಯ್ಕ ಕೋಡಿ, ಸೇರಿದಂತೆ ಊರಿನ ಪ್ರಮುಖರು, ತೊಂದರೆಗೊಳಗಾದ ಸಾರ್ವಜನಿಕರು ಪ್ರತಿಭಟ‌ನೆಯಲ್ಲಿ ಪಾಲ್ಗೊಂಡರು. ಭಾಸ್ಕರ ಕರ್ಕೇರ ನುಳಿಯಾಲು ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here