ಮೇ.2-3 ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಸಂಭ್ರಮ

0

ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸವಿರುವ ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವಗಳು ಮೆ.2 ಹಾಗೂ 3 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಮೇ.2 ರಂದು ಬೆಳಿಗ್ಗೆ ಗಣಪತಿ ಹೋಮ, ವಿಶೇಷ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಮಹಾಪೂಜೆ, ಶ್ರೀಭೂತ ಬಲಿ ಉತ್ಸವ, ವಸಂತ ಪೂಜೆ, ಅಶ್ವತ್ಥ ಪೂಜೆ, ಕುಂಜೂರು ಬೆಡಿ ಪ್ರದರ್ಶನ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಮೇ.3ರಂದು ಬೆಳಿಗ್ಗೆ ಗಣಪತಿ ಹೋಮ, ಶ್ರೀ ದೇವರ ಬಲಿ ಹೊರಟು ದರ್ಶನ ಬಲಿ, ಮಧ್ಯಾಹ್ನ ಬಟ್ಟಲು ಕಾಣಿಕೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ದೈವಗಳಿಗೆ ತಂಬಿಲ, ದೈವಗಳ ಭಂಡಾರ ತೆಗೆದು, ಅನ್ನಸಂತರ್ಪಣೆ ನಡೆದ ಬಳಿಕ ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ.

ದೇಶದಲ್ಲಿಯೇ ಎರಡನೇ ಅಪರೂಪ ವಿಗ್ರಹ:

ಇತಿಹಾಸಕಾರರ ಪ್ರಕಾರ ಕುಂಜೂರು ದುರ್ಗಾಪರಮೇಶ್ವರೀ ದೇವಿಯ ವಿಗ್ರಹವು ಬೇರೆಲ್ಲಿಯೂ ಕಾಣಸಿಗಲಾರದು. ಇಂತಹ ವಿಚಿತ್ರ ಸ್ವರೂಪದ ಬಿಂಬಗಳ ಪೈಕಿ ಆಂಧ್ರಪ್ರದೇಶದ ನಾಗಾರ್ಜುನಕೊಂಡದಲ್ಲಿ ದೊರೆತಿರುವ ಬಿಂಬವು ಮೊದಲನೆಯದೆಂದು ಕುಂಜೂರು ದೇವಿಯ ಬಿಂಬವು ಎರಡನೆಯದೆಂದು ಹೇಳಲಾಗುತ್ತಿದೆ. ಈಗಿನಂತೆ ಪರಿಷ್ಕರಣ, ಸೌಮ್ಯತೆ ಮತ್ತು ಅಲಂಕರಣದ ಪದ್ದತಿಗಳು ಈ ಮೂರ್ತಿಯ ತಯಾರಿಕೆಯ ಸಮಯದಲ್ಲಿ ರೂಢಿಯಲ್ಲಿ ಬಂದಿರಲಿಲ್ಲ. ಇದು ಸಿಂಧು ಕೊಳ್ಳದ ಪುರೋಹಿತ ಹಾಗೂ ನೃತ್ಯಭಂಗಿಯಲ್ಲಿರುವ ಮಾತೃದೇವತೆಯ ಮೂರ್ತಿಯನ್ನು ಹೋಲುತ್ತದೆ. ಈ ಬಿಂಬವನ್ನು ಬಹುದೂರದಿಂದ ತಂದು ಪ್ರತಿಷ್ಠಾಪಿಸಲಾಗಿತ್ತೆಂದು ಹೇಳಲಾಗುತ್ತಿದೆ. ಇತಿಹಾಸಕಾರರ ಪ್ರಕಾರ ವಿಜಯ ನಗರದಅರಸರ ಕಾಲದಲ್ಲಿ ಈ ದೇವಾಲಯವು ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಪೊದರುಗಳು ಮಧ್ಯೆಯಿದ್ದ ಗುಡಿಯಲ್ಲಿ ದೇವಿಯ ಆರಾಧನೆ ನಡೆಯುತ್ತಿತ್ತು. `ಕುಂಜ’ ಅಂದರೆ ಪೊದರುಗಳು. ಕುಂಜಗಳಿಂದ ಕೂಡಿದ ಊರು ಆಡು ಭಾಷೆಯಲ್ಲಿ ಮುಂದೆ `ಕುಂಜೂರು’ ಎಂಬುದಾಗಿದೆ ಎಂಬ ಪ್ರತೀತಿಯಿದೆ. ಅಲ್ಲದೆ ಪುರಾತನ ಕಾಲದಲ್ಲಿ ಋಷಿ ಮುನಿಯೊಬ್ಬರು ಈ ಭಾಗದಲ್ಲಿ ಗುಹೆಯಲ್ಲಿ ವಾಸ್ತವಯವಿದ್ದು, ಕುಂಜಗಳ ಮಧ್ಯೆಯಿದ್ದ ದೇವಿಯ ಸನ್ನಿಧಿಯಲ್ಲಿ ಪೂಜೆ, ಧ್ಯಾನಗಳನ್ನು ನೆರವೇರಿಸುತ್ತಿದ್ದರು ಎಂದು ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ.

ಸ್ವಯಂವರ ಪಾರ್ವತಿ ಪೂಜೆ ವಿಶೇಷತೆ:

ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕರುಣಿಸುವ ಪಾರ್ವತಿ ಸ್ವಯಂವರ ಪೂಜೆ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನಡೆಯುವ ವಿಶೇಷ ಸೇವೆಯಾಗಿದೆ. ಕ್ಷೇತ್ರದಲ್ಲಿ ಸ್ವಯಂವರ ಪೂಜೆ ಮಾಡಿಸಿದ ಭಕ್ತಾದಿಗಳಿಗೆ ಮಾಂಗಲ್ಯ ಭಾಗ್ಯ ಲಭಿಸಿದ ಹಲವು ಸಾಕ್ಷಿಗಳಿವೆ. ಅಲ್ಲದೆ ಇಲ್ಲಿ ನಡೆಯುವ ರಂಗ ಪೂಜೆಯು ಬಹಳಷ್ಟು ವಿಶೇಷತೆಯಿಂದ ಕೂಡಿದೆ. ದೇವಿಗೆ ವಿಶೇವಾಗಿ ಹೂವಿನ ಪೂಜೆ, ದುರ್ಗಾಪೂಜೆ, ಸಪ್ತಸತಿ ಪಾರಾಯಣ, ಧನುಪೂಜೆ, ಸರಸ್ವತಿ ಪೂಜೆ ಮೊದಲಾದ ಸೇವೆಗಳು ಇಲ್ಲಿನ ವಿಶೇಷ ಸೇವೆಗಳಾಗಿದೆ. ಹರಕೆ ರೂಪದಲ್ಲಿ ದೇವಿ ಸೀರೆಯನ್ನು ಅರ್ಪಿಸುವುದು ಇಲ್ಲಿನ ಮತ್ತೋಂದು ವಿಶೇಷತೆಯಾಗಿದೆ.

ಕ್ಷೇತ್ರದಲ್ಲಿ ನವರಾತ್ರಿಯ ಒಂಬತ್ತು ದಿನಗಳ ಕಾಲ ಕ್ಷೇತ್ರದಲ್ಲಿ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತಿದೆ. ಪ್ರತಿದಿನ ಬೆಳಿಗ್ಗೆ ಗಣಪತಿ ಹೋಮ, ಪೂಜೆ, ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸೇವೆ, ಮಧ್ಯಾಹ್ನ ನವರಾತ್ರಿ ವಿಶೇಷ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ರಂಗಪೂಜೆ ನಡೆಯುತ್ತಿದೆ. ವಿಶೇಷವಾಗಿ ಒಂದು ದಿನ ಸಾಮೂಹಿಕ ಚಂಡಿಕಾ ಯಾಗವು ನಡೆಯುತ್ತಿದೆ. ಧನುರ್ಮಾಸದಲ್ಲಿ ಬೆಳಿಗ್ಗೆ ಧನುಪೂಜೆ, ವಿಷು ಸಂಕ್ರಮಣ, ಮಕರ ಸಂಕ್ರಮಣಗಲ್ಲಿ ವಿಶೇಷ ಸೇವೆಗಳು ನಡೆಯುತ್ತಿದೆ. ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ, ಅನ್ನದಾನ ಸೇವೆಗಳು ವಿಶೇಷವಾಗಿ ನಡೆಯುತ್ತಿದೆ.

ಕಾಮದುಘಾ ಯಾಗ ಶಾಲೆ:

ಯಾಗಗಳನ್ನು ನೆರವೇರಿಸಿ ದೇವಿಯನ್ನು ಸಿದ್ದಿಸಿಕೊಳ್ಳಲು ದೇವಿಗೆ ಸಮರ್ಪಣೆಯಾಗುವ ವಿವಿಧ ರೀತಿಯ ಯಾಗಗಳನ್ನು ನಡೆಸಲು ಭಕ್ತಾದಿಗಳಿಗೆ ಅನುಕೂಲವಾಗುವಂತೆ ದೇವಸ್ಥಾನದಲ್ಲಿ ಆವಶ್ಯಕವಾದ ಯಾಗ ಕುಂಡ, ಇತರ ಸಾಹಿತ್ಯ, ಪರಿಕರಗಳು ಸೇರಿದಂತೆ ಸಕಲ ಸೌಲಭ್ಯಗಳನ್ನು ಒಳಗೊಂಡ `ಕಾಮ ದುಘಾ’ ಯಾಗಶಾಲೆಯು ಲೋಕಾರ್ಪಣೆಗೊಂಡಿದೆ. ಚಂಡಿಕಾ ಯಾಗ, ನವಗ್ರಹ ಶಾಂತಿಹೋಮ, ಶಕ್ರಾರ್ಹ ಸಂಧಿ ಶಾಂತಿ ಹೋಮ, ರಾಹು ಬ್ರಹಸ್ಪತಿ ಸಂಧಿ ಶಾಂತಿ ಹೋಮ, ಕುಜರಾಹು ಸಂಧಿ ಶಾಂತಿ ಹೋಮ ಮೊದಲಾದ ಯಾಗಗಳನ್ನು ನೆರವೇರಿಸಲು ಅವಕಾಶವಿದೆ ಎಂದು ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರದೀಪಕೃಷ್ಣ ಬಂಗಾರಡ್ಕ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here