ಮುಂಡೂರು: ಪಟ್ಟೆಯಲ್ಲಿ ಸ್ಮಶಾನ ಜಾಗ ಒತ್ತುವರಿ ಆರೋಪ ಹಿನ್ನೆಲೆ-ಸರ್ವೇ ನಡೆಸಲು ತಹಕಾರ್ಯಶೀಲ್ದಾರ್ ಭೇಟಿ: ರೈತ ಸಂಘದ ಮುಖಂಡರಿಂದ ವಿರೋಧ, ಆಕ್ಷೇಪ ; ರೈತ ಸಂಘದ ಮುಖಂಡರಿಂದ ವಿರೋಧ, ಆಕ್ಷೇಪ

0

  • ಅಕ್ರಮ ಸಕ್ರಮ ಕಡತ ರದ್ದತಿಗೆ ಸಹಾಯಕ ಆಯುಕ್ತರಿಗೆ ವರದಿ-ತಹಶೀಲ್ದಾರ್

ಪುತ್ತೂರು: ಮುಂಡೂರು ಗ್ರಾಮದ ಪಟ್ಟೆ ಎಂಬಲ್ಲಿ ಸ್ಮಶಾನ ಜಾಗ ಒತ್ತುವರಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಜಾಗ ಸರ್ವೇ ಮಾಡಲು ಮುಂದಾದ ಹಾಗೂ ಸ್ಮಶಾನ ಜಾಗ ಅತಿಕ್ರಮಣವಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಆಕ್ಷೇಪ ವ್ಯಕ್ತಪಡಿಸಿ ಖಾಸಗೀ ವ್ಯಕ್ತಿಯ ಸ್ವಾಧೀದಲ್ಲಿರುವ ಕೃಷಿ ಭೂಮಿಯನ್ನು ಅಳತೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ರೈತ ಸಂಘದವರು ಪಟ್ಟು ಹಿಡಿದ ಘಟನೆ ಎ.30ರಂದು ನಡೆದಿದೆ. ಅಕ್ರಮ ಸಕ್ರಮ ಕಡತ ರದ್ದತಿಗೆ ಸಹಾಯಕ ಆಯುಕ್ತರಿಗೆ ವರದಿ ನೀಡುವುದಾಗಿ ಇದೇ ವೇಳೆ ತಹಶೀಲ್ದಾರ್ ಹೇಳಿದರು.

ಕೆಡಿಪಿ ಸಭೆ ಬಳಿಕ ಮುನ್ನೆಲೆಗೆ ಬಂದ ವಿವಾದ:

ಮುಂಡೂರು ಪಟ್ಟೆ ಎಂಬಲ್ಲಿರುವ ಸ್ಮಶಾನ ಭೂಮಿಗೆ ಸೇರಿದ 1.2 ಎಕ್ರೆ ಜಾಗವನ್ನು ಸ್ಥಳೀಯ ನಿವಾಸಿಯೋರ್ವರು ಒತ್ತುವರಿ ಮಾಡಿಕೊಂಡಿದ್ದರೂ ಸಂಬಂಧಪಟ್ಟವರು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಕೆಡಿಪಿ ಸದಸ್ಯರಾದ ಅಬ್ದುಲ್ ಕುಂಞಿ ಪಟ್ಟೆ ಹಾಗೂ ಶಂಭು ಭಟ್ ಅವರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ತಹಶೀಲ್ದಾರ್ ಅವರನ್ನು ತರಾಟೆಗೆತ್ತಿಕೊಂಡಿದ್ದರು. ಶಾಸಕರೂ ಕಂದಾಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಮಶಾನ ಜಾಗ ಒತ್ತುವರಿ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಅದರಂತೆ ಎ.30ರಂದು ಜಾಗ ಅಳತೆ ಮಾಡಲು ಅಧಿಕಾರಿಗಳು ಆಗಮಿಸಿದ್ದರು.

ರೈತ ಸಂಘ ಎಂಟ್ರಿ-ಅಧಿಕಾರಿಗಳ ಕಾರ್ಯಾಚರಣೆಗೆ ಆಕ್ಷೇಪ:

ಯೂಸುಫ್ ಪಟ್ಟೆ ಅವರ ಪರವಾಗಿ ರೈತ ಸಂಘದ ಮುಖಂಡರು ಆಗಮಿಸಿದ್ದರು. ಸ್ಥಳಕ್ಕೆ ಆಗಮಿಸಿದ ಸರ್ವೇಯರ್ ಮಂಜುನಾಥ್ ಹಾಗೂ ಅಸಿಸ್ಟಂಟ್ ಮೋಹನ್ ಅವರು ಸ್ಥಳೀಯ ಅಧಿಕಾರಿಗಳನ್ನು ಕರೆದುಕೊಂಡು ಯೂಸುಫ್ ಪಟ್ಟೆ ಅವರ ತೋಟದ ಒಳಗೆ ಪರಶೀಲನೆಗೆ ಹೋದಾಗ ಆಕ್ಷೇಪ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದರ ಮುಖಂಡರು ಯೂಸುಫ್ ಪಟ್ಟೆ ಅವರಿಗೆ ಯಾವುದೇ ನೊಟೀಸು ನೀಡದೆ ಅವರ ಜಾಗಕ್ಕೆ ನೀವು ಹೋಗಿರುವುದು ತಪ್ಪು, ಯಾವುದೇ ಕಾರಣಕ್ಕೂ ಯೂಸುಫ್ ಪಟ್ಟೆ ಅವರಿಗೆ ಸೇರಿದ ಜಾಗವನ್ನು ಅಳತೆ ಮಾಡಬಾರದು, ಒತ್ತಡಕ್ಕೆ ಮಣಿದು ಅಳತೆ ಮಾಡುವುದಕ್ಕೆ ನಾವು ಅವಕಾಶ ಕೊಡುವುದಿಲ್ಲ, ನಾವು ರೈತರಿಗೆ ಅನ್ಯಾಯ ಆದರೆ ಸುಮ್ಮನಿರುವುದಿಲ್ಲ ಎಂದು ಹೇಳಿದರು.

ತಹಶೀಲ್ದಾರ್ ಭೇಟಿ-ಬುಲ್ಡೋಜರ್ ಆಗಮನ

ನಂತರ ಸ್ಥಳಕ್ಕೆ ತಹಶೀಲ್ದಾರ್ ಭೇಟಿ ನೀಡಿದರು. ಬುಲ್ಡೋಜರ್ ಕೂಡಾ ಸ್ಥಳಕ್ಕೆ ಆಗಮಿಸಿತು. ಸ್ಥಳದಲ್ಲಿದ್ದ ರೈತ ಮುಖಂಡರು ತಹಶೀಲ್ದಾರ್ ಜೊತೆ ಮಾತುಕತೆ ನಡೆಸಿದರು. ಈ ವೇಳೆ ತಹಶೀಲ್ದಾರ್ ರಮೇಶ್ ಬಾಬು ಮಾತನಾಡಿ ನಾವು ಒತ್ತುವರಿ ಮಾಡಿರುವ ಜಾಗದ ಅಳತೆ ಮಾಡಲು ಬಂದಿದ್ದೇವೆಯೇ ವಿನಃ ಇಲ್ಲಿಂದ ಜಾಗವನ್ನು ತೆಗೆದುಕೊಂಡು ಹೋಗುವುದಿಲ್ಲ, ಕಾನೂನು ಪ್ರಕಾರ ಯಾವ ರೀತಿ ಮಾಡಬೇಕೋ ಆ ರೀತಿ ಮಾಡುತ್ತೇವೆ ಎಂದು ಹೇಳಿದರು. ಅಜ್ಜಿಕಟ್ಟೆ ಮಸೀದಿ ಅಧ್ಯಕ್ಷ ಉಮ್ಮರ್ ಪಟ್ಟೆ ಮಾತನಾಡಿ 3 ಎಕ್ರೆ 40 ಸೆಂಟ್ಸ್ ವರ್ಗ ಜಾಗ ಬಿಟ್ಟು ಹೆಚ್ಚುವರಿಗೆ ಇದ್ದರೆ ನೀವು ಪಡೆದುಕೊಳ್ಳಿ, ಎಂದು ಹೇಳಿದರು.

ಸರ್ವೇ ಮಾಡಲು ಅವಕಾಶ ನೀಡಲ್ಲ-ರೈತ ಸಂಘ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಪಾದೆಕಲ್ಲು ಮಾತನಾಡಿ ಸರಕಾರಿ ಜಮೀನು ಆದರೆ ನೀವು ನಿಮ್ಮ ಕ್ರಮ ತೆಗೆದುಕೊಳ್ಳಿ ನಮ್ಮ ಆಕ್ಷೇಪ ಇಲ್ಲ ಆದರೆ ಓರ್ವ ರೈತರಾಗಿರುವ ಯೂಸುಫ್ ಪಟ್ಟೆ ಅವರು 20-25 ವರ್ಷಗಳಿಂದ ಕೃಷಿ ಮಾಡುತ್ತಾ ಬಂದಿದ್ದು ಅವರ ಜಾಗವನ್ನು ಸ್ಮಶಾನ ಭೂಮಿ ಎಂದು ಹೇಳಿ ಅಳತೆ ಮಾಡುತ್ತೇವೆ ಎನ್ನುವುದಕ್ಕೆ ಅರ್ಥ ಇಲ್ಲ ಎಂದು ಹೇಳಿದರು. ಸರಕಾರಿ ಭೂಮಿಯನ್ನು ರೈತರು ಒತ್ತುವರಿ ಮಾಡಿಕೊಂಡಿರುವುದು ಇದು ಪ್ರಥಮವೇನಲ್ಲ, ರಾಜ್ಯದಲ್ಲೂ, ದೇಶದಲ್ಲೂ ಒತ್ತುವರಿ ಆಗಿದೆ ಎಂದು ಅವರು ಹೇಳಿದರು. ಜಾಗ ಸರ್ವೆ ಮಾಡಿದ ಬಳಿಕ ಮಾತನಾಡುವ ಎಂದು ತಹಶೀಲ್ದಾರ್ ಹೇಳಿದಾಗ ವಿರೋಧ ವ್ಯಕ್ತಪಡಿಸದ ರೈತ ಮುಖಂಡರು ತೋಟದ ಒಳಗಡೆ ಸರ್ವೆ ಮಾಡಲೇಬಾರದು ಎಂದು ಹೇಳಿದರು. ಅಲ್ಲದೇ ಇದೇ ವಿಚಾರದ ಬಗ್ಗೆ ಎ.ಸಿ ಜೊತೆ, ಡಿಸಿ ಜೊತೆ ಅಥವಾ ಸರಕಾರಿ ಮಟ್ಟದಲ್ಲಿ ನಾವು ಕೂತು ಮಾತನಾಡೋಣ, ರೈತರಿಗೆ ಅನ್ಯಾಯ ಆಗುವುದಾದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದು ವಿನೋದ್ ಪಾದೆಕಲ್ಲು ಹೇಳಿದರು.

ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಉದಯರವಿ ಮಾತನಾಡಿ ಸರಕಾರಿ ಜಮೀನು ಸರ್ವೆ ಮಾಡಲು ತಹಶೀಲ್ದಾರ್ ಬಂದಿದ್ದು ಅವರು ಅದೇ ಪ್ರಕಾರ ಮಾಡುತ್ತಾರೆ, ಅದಕ್ಕೆ ಯಾರೂ ಅಡ್ಡಿಪಡಿಸಬಾರದು ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದರ ಸಂಚಾಲಕ ರೂಪೇಶ್ ರೈ ಅಲಿಮಾರು ಮಾತನಾಡಿ ಯೂಸುಫ್ ಪಟ್ಟೆ ಅವರಿಗೆ ಸೇರಿದ ವರ್ಗ ಜಾಗ ಸರ್ವೇ ಮಾಡಲು ನಾವು ಅವಕಾಶ ಕೊಡುವುದಿಲ್ಲ, ರೈತರಿಗಾಗುವ ಅನ್ಯಾಯವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಇದರ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಪುಚ್ಚತ್ತಡ್ಕ ಮಾತನಾಡಿ ರೈತ ಯೂಸುಫ್ ಪಟ್ಟೆ ಅವರು ಕಷ್ಟಪಟ್ಟು ಮಾಡಿದ ಕೃಷಿ ಭೂಮಿಯನ್ನು ದಫನ ಭೂಮಿ ಎಂದು ಹೇಳಿ ಸರ್ವೇ ಮಾಡುವುದು ಅನ್ಯಾಯದ ಪರಮಾವಧಿಯಾಗಿದ್ದು ಇವರ ತೋಟದ ಜಾಗವನ್ನು ಅಳತೆ ಮಾಡುವುದಕ್ಕೆ ಅರ್ಥವಿಲ್ಲ ಮತ್ತು ಅದಕ್ಕೆ ನಾವು ಅವಕಾಶವನ್ನೂ ಕೊಡುವುದಿಲ್ಲ ಎಂದು ಹೇಳಿದರು. ರವಲನಾಥ ಪ್ರಭು ಎಂಬವರು ಮಾತನಾಡಿ ದಾಖಲೆ ಪ್ರಕಾರ ಯೂಸುಫ್ ಪಟ್ಟೆ ಅವರಿಗೆ ಸೇರಿದ ಜಾಗವನ್ನು ಸ್ಮಶಾನದ ಹೆಸರಿನಲ್ಲಿ ಸರ್ವೇ ಮಾಡುವುದು ಸರಿಯಲ್ಲ, ಯಾರಿಗೂ ಅನ್ಯಾಯ ಆಗಬಾರದು ಎಂದು ಹೇಳಿದರು.

ಬುಲ್ಡೋಜರ್ ತಂದದ್ದಕ್ಕೆ ಆಕ್ಷೇಪ:

ತಹಶೀಲ್ದಾರ್ ಅವರು ಜೆಸಿಬಿ ಬುಲ್ಡೋಜರ್‌ನ್ನು ಸ್ಥಳಕ್ಕೆ ಕರೆಸಿಕೊಂಡದ್ದಕ್ಕೆ ರೈತ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಸರ್ವೇ ಮಾಡುವಾಗ ಇನ್ನೊಂದು ಗೊಂದಲ:

ದಫನ ಭೂಮಿಯ ಜಾಗದಲ್ಲಿ ಸರ್ವೇಯರ್ ನೇತೃತ್ವದಲ್ಲಿ ಅಳತೆ ಮಾಡಲು ಪ್ರಾರಂಭಿಸಿದಾಗ ಇನ್ನೊಂದು ಸಮಸ್ಯೆ ಎದುರಾಯಿತು. ಅಳತೆ ಮಾಡುವ ವೇಳೆ ತಮಗೆ ಸೇರಿದ ಜಾಗಕ್ಕೆ ಅಳತೆ ಮಾಡುವ ಸಂಕೋಲೆಯನ್ನು ಹಿಡಿಯಲಾಗಿದೆ ಎಂದು ಆಕ್ಷೇಪಿಸಿದ ಸ್ಥಳೀಯ ನಿವಾಸಿ ಅಶ್ರಫ್ ಪಟ್ಟೆ ಎಂಬವರು ಯಾವುದೇ ಕಾರಣಕ್ಕೂ ನಮ್ಮ ಜಾಗ ಅಳತೆ ಮಾಡಲು ನಾವು ಬಿಡುವುದಿಲ್ಲ. ಮೊದಲೇ ಸೂಚನೆ ನೀಡದೆ ಏಕಾಏಕಿ ಅಳತೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಅಕ್ರಮ ಸಕ್ರಮ ಕಡತ ರದ್ದುಗೊಳಿಸುತ್ತೇನೆ-ತಹಶೀಲ್ದಾರ್

ಸ್ಮಶಾನ ಭೂಮಿ ಒತ್ತುವರಿಯಾಗಿದೆ ಎಂದು ಹೇಳಿ ತಹಶೀಲ್ದಾರ್ ಅವರು ಸರ್ವೇ ಮಾಡಲು ಮುಂದಾಗಿದ್ದು ರೈತ ಸಂಘದವರ ಹಾಗೂ ಯೂಸುಫ್ ಪಟ್ಟೆ ಕುಟುಂಬಸ್ಥರ ವಿರೋಧದಿಂದಾಗಿ ಸರ್ವೇ ಕಾರ್ಯ ಮಾಡಲು ಸಾಧ್ಯವಾಗಿಲ್ಲ. ಕೊನೆಗೆ ಸದ್ರಿ ಆಗಿರುವ ಅಕ್ರಮ ಸಕ್ರಮ ಕಡತವನ್ನು ರದ್ದುಗೊಳಿಸಲು ಸಹಾಯಕ ಆಯುಕ್ತರಿಗೆ ವರದಿ ನೀಡುತ್ತೇನೆ, ಮುಂದಿನ ತೀರ್ಮಾನ ಎ.ಸಿ ಕೋರ್ಟ್ ಮೂಲಕ ಆಗಲಿ ಎಂದು ಹೇಳಿ ತಹಶೀಲ್ದಾರ್ ಸ್ಥಳದಿಂದ ತೆರಳಿದರು.

ಮುಂಡೂರು ಗ್ರಾಮ ಕರಣಿಕರಾದ ತುಳಸಿ, ಸಿಬ್ಬಂದಿಗಳಾದ ಪುಟ್ಟಣ್ಣ ಗೌಡ ಹಾಗೂ ಹರ್ಷಿತ್ ನೇರೊಳ್ತಡ್ಕ ವಿವಿಧ ಕಾರ್ಯಗಳನ್ನು ನಿರ್ವಹಿಸಿದರು. ಮುಂಡೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಇಬ್ರಾಹಿಂ ಮುಲಾರ್ ಹಾಗೂ ಸ್ಥಳೀಯರು, ಮಹಿಳೆಯರು ಉಪಸ್ಥಿತರಿದ್ದರು. ಸಂಪ್ಯ ಪೊಲೀಸ್ ಠಾಣಾ ಎಸ್ಸೈ ಉದಯರವಿ ನೇತೃತ್ವದಲ್ಲಿ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here