ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯ ಮೇ16ರಿಂದ ವಾರಕ್ಕೊಮ್ಮೆ ಧರ್ಮ ಶಿಕ್ಷಣ ತರಗತಿ

0

ಉಪ್ಪಿನಂಗಡಿ: ರಾಜ್ಯ ಮುಜರಾಯಿ ಇಲಾಖೆಯ ಅಧೀನದ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ – ಮಹಾಕಾಳಿ ದೇವಸ್ಥಾನದಲ್ಲಿ ಮುಂಬರುವ ಮೇ. 16 ರಿಂದ ವಾರಕ್ಕೊಮ್ಮೆ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುವ ತರಗತಿಯನ್ನು ಪ್ರಾರಂಭಿಸಲು ನಿರ್ಣಯಿಸಲಾಯಿತು.

ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಿ. ಐತ್ತಪ್ಪ ನಾಯ್ಕ್ ಧರ್ಮ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ, ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳ ಪೂರೈಕೆಯನ್ನು ಪುತ್ತೂರಿನ ಶ್ರೀಮಹಾಲಿಂಗೇಶ್ವರ ದೇವಳದ ವತಿಯಿಂದ ವ್ಯವಸ್ಥೆ ಮಾಡಲಾಗುವುದು. ಈ ಶಿಕ್ಷಣವನ್ನು ಎಲ್ಲೆಲ್ಲಾ ಈಗಾಗಲೇ ಪ್ರಾರಂಭಿಸಲಾಗಿದೆಯೋ ಅಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಮುಖ್ಯವಾಗಿ ಮನೆಯ ಎಲ್ಲಾ ವಯೋಮಾನದವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಂದಾಗುತ್ತಿದ್ದಾರೆಂದು ತಿಳಿಸಿದರು.

ಪ್ರತಿ ಸೋಮವಾರ ರಾತ್ರಿ ವಿಶೇಷ ಪೂಜೆ: ರಾಷ್ಟ್ರದ ಮತ್ತು ಸಮಾಜದ ಕ್ಷೇಮಕ್ಕಾಗಿ ಮುಂಬರುವ ಮೇ ೧೬ ರಿಂದ ಪ್ರತಿ ಸೋಮವಾರ ರಾತ್ರಿ ವಿಶೇಷ ಪೂಜೆಯನ್ನು ಶ್ರೀ ದೇವಳದಲ್ಲಿ ಆಯೋಜಿಸಲಾಗುವುದೆಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ ಪ್ರಕಟಿಸಿದರು. ಪ್ರತಿ ಸೋಮವಾರ ಸಾಯಂಕಾಲ ೫ ಗಂಟೆಯಿಂದ ೬ ಗಂಟೆವರೆಗೆ ಐದು ವರ್ಷದಿಂದ ಹದಿನೈದು ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಧರ್ಮ ಶಿಕ್ಷಣವು ವಿವಿಧ ಆಯಾಮಗಳಲ್ಲಿ ನಡೆಯಲಿದೆ. ಬಳಿಕ ಕೆಲ ಹೊತ್ತು ಚಿಂತನಾ ಸಭೆ ಜರುಗಿ ವಿಶೇಷ ಪೂಜಾ ಕಾರ್ಯಕ್ರಮ ಜರಗುವುದು. ಪ್ರತಿ ವಿಶೇಷ ಪೂಜೆಯ ಬಳಿಕ ಪ್ರಸಾದ ರೂಪವಾಗಿ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಧರ್ಮ ಶಿಕ್ಷಣದ ಸಂಚಾಲಕರಾಗಿ ಪ್ರೇಮಲತಾ ಕಾಂಚನಾರವರನ್ನು ಆಯ್ಕೆ ಮಾಡಲಾಯಿತು.  ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಮುಳಿಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಮ ನಾಯ್ಕ್, ಜಯಂತ ಪೊರೋಳಿ, ಸುನಿಲ್ ಆನಾವು, ಮಹೇಶ್ ಬಜತ್ತೂರು, ಹರಿಣಿ ಕೆ. , ಪ್ರೇಮಲತಾ ಕಾಂಚನಾ, ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸುದರ್ಶನ್, ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ , ಪ್ರಮುಖರಾದ ಗಣೇಶ್ ಕುಲಾಲ್, ರವೀಂದ್ರ ಇಳಂತಿಲ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here