ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಮೃತ ಮಹೋತ್ಸವ ವರ್ಷಾಚರಣೆ ಉದ್ಘಾಟನೆ

0

  • ಸಹಕಾರಿ ಸಂಘಗಳ ಮೂಲಕ ರೈತನಿಗೆ ಮಾರುಕಟ್ಟೆ ರೂಪಿಸಲು ಸಾಧ್ಯ-ಸಚಿವ ಅಂಗಾರ
  • ಸಮಾಜದ ಕಟ್ಟ ಕಡೆಯ ರೈತ, ಕೂಲಿ ಕಾರ್ಮಿಕನನ್ನು ತಲುಪುವ ವ್ಯವಸ್ಥೆಯಿರುವುದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ-ರಾಜೇಂದ್ರ ಕುಮಾರ್
  • ರಾಜಕಾರಣಗಿಂತ ಸಹಕಾರ ಕ್ಷೇತ್ರ ಭಿನ್ನ-ಮಠಂದೂರು

ಉಪ್ಪಿನಂಗಡಿ: ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದರ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ವರ್ಷಪೂರ್ತಿ ನಡೆಯಲಿರುವ “ಅಮೃತ ಸಂಗಮ” ಕಾರ್ಯಕ್ರಮದ ಉದ್ಘಾಟನೆ ಹಾಗೂ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರಿಗೆ ಸನ್ಮಾನ ಕಾರ್ಯಕ್ರಮ ಮೇ. ೧ರಂದು ಇಲ್ಲಿನ ಸಂಗಮ ಕೃಪಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ಭಾರತದ ಪೂರ್ವದಲ್ಲೇ ಸಹಕಾರಿ ಭಾವನೆ ನಮ್ಮ ದೇಶದಲ್ಲಿತ್ತು. ಅದರಿಂದಲೇ ಸಹಕಾರ ಸಂಘಗಳು ಸ್ಥಾಪನೆಯಾಯಿತು. ರೈತ ದೇಶದ ಬೆನ್ನೆಲುಬು. ಆದರೆ ತಾನು ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ರೂಪಿಸಿಕೊಳ್ಳಲು ಸಾಧ್ಯವಾಗದಿರುವುದರಿಂದ ಆತನಿಂದು ಕೃಷಿಯಲ್ಲಿ ಆರ್ಥಿಕವಾಗಿ ಹಿನ್ನಡೆ ಅನುಭವಿಸುವಂತಾಗಿದೆ. ರೈತನಿಗೆ ಮಾರುಕಟ್ಟೆ ವ್ಯವಸ್ಥೆ ರೂಪಿಸಲು ಸಾಧ್ಯವಾಗದಿರುವುದರಿಂದ ರೈತ ಕಷ್ಟಪಟ್ಟು ಬೆಳೆದ ಬೆಳೆಯಿಂದ ದಲ್ಲಾಳಿಗಳು ಆರ್ಥಿಕವಾಗಿ ಲಾಭ ಮಾಡಿಕೊಳ್ಳುವಂತಾಗಿದೆ. ಆದ್ದರಿಂದ ರೈತರು ಬೆಳೆ ಬೆಳೆಯಲು ಮಾತ್ರ ಸೀಮಿತವಾಗದೇ ಸಣ್ಣ ಸಣ್ಣ ತಂಡಗಳನ್ನು ರಚಿಸಿಕೊಂಡು ಸಹಕಾರಿ ಸಂಘಗಳ ಮೂಲಕ ತಾವು ಬೆಳೆದ ಬೆಳೆಯನ್ನು ತಾವೇ ಉತ್ತಮ ಬೆಳೆಗೆ ಮಾರಾಟ ಮಾಡಬೇಕು, ಆ ಮೂಲಕ ಮಾರುಕಟ್ಟೆ ರೂಪಿಸಲು ಸಾಧ್ಯ ಎಂದರು.

 


ಪ್ರಧಾನಿ ನರೇಂದ್ರ ಮೋದಿಯವರು ಕೂಡಾ ಇದಕ್ಕೆ ಉತ್ತೇಜನ ನೀಡುತ್ತಿದ್ದು, ಆತ್ಮ ನಿರ್ಭರ ಭಾರತದ ಕಲ್ಪನೆಯಡಿ ಸಣ್ಣ ಸಣ್ಣ ಗುಂಪುಗಳಿಗೂ ಆರ್ಥಿಕ ಸ್ವಾವಲಂಭಿಗಳಾಗಲು ಪ್ರೋತ್ಸಾಹ ನೀಡುತ್ತಿದ್ದಾರೆ. ಆದ್ದರಿಂದ ರೈತರು ಇದರ ಪ್ರಯೋಜನ ಪಡೆದುಕೊಂಡು ಕೃಷಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಮುನ್ನಡೆಯನ್ನು ಸಾಧಿಸಬೇಕು, ಆ ಮೂಲಕ ಸಹಕಾರಿ ಸಂಘಗಳೂ ಅಭಿವೃದ್ಧಿ ಹೊಂದಲು ಸಹಕಾರಿ ಆಗಲಿದೆ ಎಂದು ಹೇಳಿದರು.


ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿ ಸಹಕಾರಿ ಕ್ಷೇತ್ರಕ್ಕೆ ಉತ್ತಮ ಭವಿಷ್ಯವಿದ್ದು, ಸಮಾಜದ ಕಟ್ಟ ಕಡೆಯ ರೈತ, ಕೂಲಿ ಕಾರ್ಮಿಕನನ್ನು ತಲುಪುವ ವ್ಯವಸ್ಥೆಯಿರುವುದು ಅದು ಸಹಕಾರಿ ಕ್ಷೇತ್ರದಲ್ಲಿ ಮಾತ್ರ. ಸ್ಥಳೀಯ ಜನರ ಮನೋಸ್ಥಿತಿಯನ್ನು ಅರಿತುಕೊಂಡು ಕೆಲಸ ಮಾಡುವ ಸ್ಥಳೀಯರೇ ಆದ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಇರುವುದೇ ಇದಕ್ಕೆ ಕಾರಣ. ದ.ಕ. ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಶಕ್ತಿಯುತವಾಗಿದ್ದು, ರೈತರ ಏಳಿಗೆಗೆ ಸಹಕಾರಿಯಾಗಿದೆ. ಆದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ರೈತ ಆತ್ಮಹತ್ಯೆಗೆ ಶರಣಾಗದೇ ಇರುವ ಜಿಲ್ಲೆಯೆಂದರೆ ಅದು ದೇಶದಲ್ಲಿಯೇ ದ.ಕ. ಜಿಲ್ಲೆ ಮಾತ್ರ. ಉಪ್ಪಿನಂಗಡಿಯ ಸಹಕಾರಿ ಸಂಘವು ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅತ್ಯುತ್ತಮ ಸಂಘವಾಗಿ ಮೂಡಿ ಬಂದಿದ್ದು, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಾಥಮಿಕ ಪತ್ತಿನ ಸಂಸ್ಥೆಯೊಂದು ಫ್ಯಾಕ್ಟ್ಸ್ ಗೊಬ್ಬರ ಸಂಸ್ಥೆಯ ನೇರ ಡೀಲರ್ ಶಿಪ್ ಪಡೆದಿದೆಯೆಂದರೆ ಅದು ಉಪ್ಪಿನಂಗಡಿಯ ಸಹಕಾರಿ ಸಂಘ ಮಾತ್ರ ಎಂದರು.

ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಮಾತನಾಡಿ ರಾಜಕಾರಣಗಿಂತ ಸಹಕಾರ ಕ್ಷೇತ್ರ ಭಿನ್ನ. ನಾನು ಎಲ್ಲರಿಗಾಗಿ ಎಲ್ಲರೂ ನನಗಾಗಿ ಎಂಬ ತತ್ತ್ವದಡಿ ರೂಪುಗೊಂಡಿರುವ ಸಹಕಾರಿ ಸಂಘಗಳಿಂದ ಇಂದು ಗ್ರಾಮಗಳ ಅಭಿವೃದ್ಧಿಯಾಗಿದೆ. ಈ ಮೂಲಕ ಸರಕಾರ ಮಾಡದ್ದನ್ನು ಸಹಕಾರ ಮಾಡಿದೆ. ಕೇಂದ್ರದಿಂದ ಸಹಕಾರಿ ಕ್ಷೇತ್ರಕ್ಕೆ ಒತ್ತು ನೀಡುವ ಕೆಲಸ ಆಗಿದೆ. ಸ್ವಾತಂತ್ರ್ಯದ ೭೫ನೇ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕೇಂದ್ರದಲ್ಲಿ ಸಹಕಾರಿ ಇಲಾಖೆ, ಸಹಕಾರ ಸಚಿವರನ್ನು ಪ್ರಧಾನಿ ಮೋದಿಯವರು ನೀಡಿದ್ದಲ್ಲದೆ, ಹೈನುಗಾರರಿಗೆ ರಾಸುಗಳನ್ನು ಖರೀದಿಸಲು ಸಾಲ ಸೌಲಭ್ಯಗಳನ್ನು ನೀಡಿದ್ದಾರೆ. ಸಹಕಾರಿ ಸಂಘಗಳಲ್ಲಿ ನಿಂತು ಹೋಗಿದ್ದ ಯಶಸ್ವಿನಿ ವಿಮೆಯನ್ನು ಪುನರ್ ಪ್ರಾರಂಭಿಸಲಾಗಿದೆ. ಆದ್ದರಿಂದ ರೈತರು ಇವುಗಳ ಪ್ರಯೋಜನ ಪಡೆದುಕೊಂಡು ಹಡೀಲು ಬಿದ್ದ ಗದ್ದೆಯನ್ನು ಉಳುಮೆ ಮಾಡಿ ಆಹಾರ ಧಾನ್ಯದಲ್ಲಿ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬೇಕು ಎಂದರು.

ಮಂಗಳೂರು ಸಹಕಾರ ಸಂಘಗಳ ಉಪನಿಬಂಂಧಕ ಪ್ರವೀಣ್ ಬಿ. ನಾಯಕ್ ಮಾತನಾಡಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ವರ್ಷದಿಂದ ಆರಂಭಗೊಂಡ ಈ ಸಂಸ್ಥೆ ಇಂದು ಅಮೃತ ಮಹೋತ್ಸವ ಆಚರಣೆಯೊಂದಿಗೆ ವರ್ಷಪೂರ್ತಿ ಕಾರ್‍ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ. ಅರ್ಥಪೂರ್ಣ ಆಚರಣೆಯ ಕಾರ್‍ಯಕ್ರಮಕ್ಕೆ ಇಲಾಖೆ ಮತ್ತು ಸಿಬ್ಬಂದಿಗಳ ಸಂಪೂರ್ಣ ಸಹಕಾರ ಇರುವುದಾಗಿ ತಿಳಿಸಿದರು.

ಮಹಾಲಿಂಗ ನಾಯ್ಕ್‌ರವರಿಗೆ ಸನ್ಮಾನ:
ಇದೇ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿಕ ಅಮೈ ಮಹಾಲಿಂಗ ನಾಯ್ಕ್‌ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಪ್ರಶಸ್ತಿಗಾಗಿ ದುಡಿದವನು ಅಲ್ಲ, ನಿಮ್ಮೆಲ್ಲರ ಆಶೀರ್ವಾದದಿಂದ ಅದು ಬಂದಿದೆ ಎಂದ ಅವರು ತಾನು ಮಾಡಿರುವ ಸಾಧನೆಯ ಅನುಭವವನ್ನು ಹಂಚಿಕೊಂಡು, ನಾವುಗಳು ನೀರು ಇಂಗಿಸುವಲ್ಲಿ ಶ್ರಮ ವಹಿಸಬೇಕು, ಅದರಿಂದ ಮಂದೆ ನೀರಿನ ಸಮಸ್ಯೆ ಎದುರಾಗಲಾರದು ಎಂದು ಹೇಳಿದರು.

ಪೌರ ಕಾರ್ಮಿಕರಿಗೆ ಸನ್ಮಾನ:
ಉಪ್ಪಿನಂಗಡಿ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರಾದ ಆನಂದ, ಮಹಮ್ಮದ್, ಅಬ್ಬಾಸ್, ಉಮೇಶ್, ಸುಂದರ, ತನಿಯ, ಗುಲಾಬಿ, ದೇಸಿಲು, ಎಂಎಂ. ಅಜಯ್, ಲಿಂಗಪ್ಪ ಗೌಡ, ಹರಿಣಿ, ಸುಂದರಿ, ೩೪-ನೆಕ್ಕಿಲಾಡಿ ಗ್ರಾಮ ಪಂಚಾಯತಿಯ ಸುಮಿತ್ರಾ ಇವರುಗಳಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ರಾಜೇಂದ್ರಕುಮಾರ್‌ಗೆ ಸನ್ಮಾನ:
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸಿದ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಕೇಂದ್ರ ಸಹಕಾರಿ ಬೇಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಹೆದ್ದಾರಿಯಿಂದ ಸಭಾಂಗಣ ತನಕ ಮೆರವಣಿಗೆ:
ಸಮಾರಂಭಕ್ಕೆ ಆಗಮಿಸಿದ ಮುಖ್ಯ ಅತಿಥಿಗಳು ಮತ್ತು ಗಣ್ಯರನ್ನು ರಾಷ್ಟ್ರೀಯ ಹೆದ್ದಾರಿ ಬಳಿ ಸ್ವಾಗತಿಸಲಾಗಿ ಅಲ್ಲಿಂದ ಸಂಘದ ಸಭಾಂಗಣ ತನಕ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ಮೆರವಣಿಗೆ ಜಾಥಾವನ್ನು ಸಂಘದ ಮಾಜಿ ಅಧ್ಯಕ್ಷ ಪ್ರಕಾಶ್ ರೈ ಬೆಳ್ಳಿಪ್ಪಾಡಿ ಉದ್ಘಾಟಿಸಿದರು. ಮೆರವಣಿಗೆಯಲ್ಲಿ ಚೆಂಡೆ, ವಾದ್ಯ ಮೊಳಗಿದವು. ಇದಕ್ಕೂ ಮುನ್ನ ಸಂಘದ ಮಾಜಿ ಅಧ್ಯಕ್ಷ ಪೆಲಪ್ಪಾರು ವೆಂಕಟರಮಣ ಭಟ್ ಧ್ವಜಾರೋಹಣ ನೆರವೇರಿಸಿದರು.

ಟ್ಯಾಕ್ಟರ್ ಹಸ್ತಾಂತರ: ಸಭಾ ಕಾರ್‍ಯಕ್ರಮಕ್ಕೆ ಮುನ್ನ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೊಡ ಮಾಡಲಾದ ೨ ಟ್ಯಾಕ್ಟರ್‌ನ್ನು ಮತ್ತು ಸಂಘದ ವತಿಯಿಂದ ಖರೀದಿಸಲಾದ ಹೊಸ ವಾಹನದ ಕೀಯನ್ನು ಶಾಸಕರು ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್‌ರವರಿಗೆ ಹಸ್ತಾಂತರಿಸಿದರು.

ಸಮಾರಂಭದ ವೇದಿಕೆಯಲ್ಲಿ ರಾಜ್ಯ ಭೂ ಅಭಿವೃದ್ಧಿ ಮಂಡಳಿ ಸದಸ್ಯ ರಾಜಶೇಖರ ಜೈನ್, ಸಹಕಾರಿ ಯೂನಿಯನ್ ದ.ಕ. ಜಿಲ್ಲಾ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬೇಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಮುಖ್ಯ ಕಾರ್‍ಯನಿರ್ವಹಣಧಿಕಾರಿ ಕ್ಲೇರಿ ವೇಗಸ್
ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ತಾಳ್ತಜೆ ವಸಂತ ಕುಮಾರ್, ಕಡಬ ಸಿ.ಎ. ಬೇಂಕ್ ಅಧ್ಯಕ್ಷ ರಮೇಶ್ ಕಲ್ಪುರೆ, ಆಲಂಕಾರು ಸಿ.ಎ. ಬೇಂಕ್ ಅಧ್ಯಕ್ಷ ಧರ್ಮಪಾಲ ರಾವ್, ಬಿಳಿನೆಲೆಯ ದಾಮೋದರ ಗೌಡ, ಉಪ್ಪಿನಂಗಡಿ ಮೂರ್ತೆದಾರರ ಸಂಘದ ಅಧ್ಯಕ್ಷ ಡಾ. ರಾಜಾರಾಮ್, ಚಾರ್ವಕ ಸಹಕಾರಿ ಸಂಘದ ಕಾರ್‍ಯನಿರ್ವಹಣಾಧಿಕಾರಿ ಆಶೋಕ್, ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಪೆಲಪ್ಪಾರು ವೆಂಕಟರಮಣ ಭಟ್, ತಾಳ್ತಜೆ ಚಂದ್ರಶೇಖರ, ಮಾಜಿ ಉಪಾಧ್ಯಕ್ಷ ದೇವಿದಾಸ ರೈ, ನಿರ್ದೇಶಕರಾದ ಅಜೀಜ್ ಬಸ್ತಿಕ್ಕಾರ್, ರಾಮಚಂದ್ರ ಮಣಿಯಾಣಿ, ಸುಭದ್ರಾ ಭಟ್, ನಿವೃತ್ತ ಮುಖ್ಯ ಕಾರ್‍ಯನಿರ್ವಹಣಧಿಕಾರಿಗಳಾದ ಗೋಪಾಲ ಹೆಗ್ಡೆ,
ದಿವಾಕರ ರೈ, ಶೇಷಪತಿ ರೈ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಸದಸ್ಯ ಸುರೇಶ್ ಅತ್ರಮಜಲು, ೩೪-ನೆಕ್ಕಿಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಸದಸ್ಯ ವಿಜಯಕುಮಾರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಎನ್. ಉಮೇಶ್ ಶೆಣೈ, ಮುಕುಂದ ಗೌಡ, ಸುಜಾತ ಕೃಷ್ಣ ಆಚಾರ್ಯ, ಸ್ಥಳೀಯ ಪ್ರಮುಖರಾದ ಚಂದಪ್ಪ ಮೂಲ್ಯ, ಹರಿರಾಮಚಂದ್ರ, ವಿಶ್ವನಾಥ ರೈ ಕಂಗ್ವೆ, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.

ಉಪ್ಪಿನಂಗಡಿ ವ್ಯವಸಾಯಿಕ ಸಹಕಾರಿ ಸಂಘದ ಅಧ್ಯಕ್ಷ ಕೆ.ವಿ. ಪ್ರಸಾದ್ ಸ್ವಾಗತಿಸಿ, ಉಪಾಧ್ಯಕ್ಷ ಸುನಿಲ್ ಕುಮಾರ್ ದಡ್ಡು ವಂದಿಸಿದರು. ಸಂಘದ ನಿರ್ದೇಶಕರಾದ ಜಗದೀಶ ರಾವ್ ಎಂ., ರಾಮ ನಾಯ್ಕ್, ಸುಜಾತ ಆರ್. ರೈ, ಸಚಿನ್, ಯತೀಶ್ ಶೆಟ್ಟಿ, ದಯಾನಂದ ಎಸ್., ಕುಂಞ, ರಾಜೇಶ್, ಸ್ವಾಗತ ಸಮಿತಿಯ ಜಯಂತ ಪೊರೋಳಿ, ವಿಜಯಕುಮಾರ್ ಕಲ್ಲಳಿಕೆ, ಸಂಘದ ಸಿಬ್ಬಂದಿಗಳಾದ ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಆಳ್ವ, ಶೋಭಾ, ಚೇತನಾ, ಗಾಯತ್ರಿ, ಶಶಿಧರ್ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ರವೀಂದ್ರ ರೈ ದರ್ಬೆ, ಗಣರಾಜ ಕುಂಬ್ಲೆ ಕಾರ್‍ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here