ಅಂಬಿಕಾ ಪ.ಪೂ. ವಿದ್ಯಾಲಯದಲ್ಲಿ ಮೇ.2ರಿಂದ ಸೇತುಬಂಧ ತರಗತಿ ಆರಂಭ – ಕೊರೋನಾದಿಂದ ಪ್ರೌಢಶಾಲೆಯಲ್ಲಿ ಕಳೆದುಕೊಂಡ ಪಾಠಗಳೂ ಸೇರಿದಂತೆ ಪಿಯು ತರಬೇತಿ

0

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮೇ.೨ರಿಂದ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸೇತುಬಂಧ ತರಗತಿಗಳು ಆರಂಭಗೊಳ್ಳಲಿವೆ. ಸೇತು ಬಂಧ ತರಗತಿಗಳು ಹತ್ತನೆಯ ತರಗತಿಯಿಂದ ಪ್ರಥಮ ಪಿಯು ತರಗತಿಗೆ ಸೇರಿಕೊಂಡಿರುವ ಅಥವ ಸೇರಿಕೊಳ್ಳಬಯಸುವ ಯಾವುದೇ ವಿದ್ಯಾರ್ಥಿಗೆ ಉಚಿತವಾಗಿ ದೊರಕಲಿವೆ.

ಪಿಯುಸಿ ತರುವಾಯ ಜೆಇಇ, ನೀಟ್, ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಬಯಸುವ ವಿದ್ಯಾರ್ಥಿಗಳು ಪ್ರೌಢಶಾಲಾ ಮಟ್ಟದಿಂದಲೇ ಪಠ್ಯ ವಿಷಯಗಳನ್ನು ಸಮರ್ಪಕವಾಗಿ ಅಧ್ಯಯನ ಮಾಡಿಕೊಂಡೇ ಪಿಯು ಶಿಕ್ಷಣ ಪಡೆಯಬೇಕಾದ ಅಗತ್ಯವಿದೆ. ಆದರೆ ಕಳೆದ ಎರಡು – ಮೂರು ವರ್ಷಗಳಿಂದ ಕೊರೋನಾ ಕಾರಣಕ್ಕಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನೇಕ ಪಾಠ ಪ್ರವಚನಗಳು ಕೈತಪ್ಪಿವೆ. ಜತೆಗೆ ಪಠ್ಯ ವಿಷಯಗಳೂ ಕಡಿತಗೊಂಡಿವೆ. ಇದು ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ಸಮಸ್ಯೆಯಾಗಿ ಪರಿಣಮಿಸಲಿದೆ. ಹಾಗಾಗಿಯೇ ಈ ಸೇತುಬಂಧ ತರಗತಿಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.

ಸೇತುಬಂಧ ತರಗತಿಗಳಲ್ಲಿ ನುರಿತ ಹಾಗೂ ವಿಷಯ ತಜ್ಞ, ಅನುಭವಿ ಉಪನ್ಯಾಸಕರು ತರಗತಿ ನಡೆಸಿಕೊಡಲಿದ್ದಾರೆ. ಪ್ರಥಮ ಪಿಯುಸಿ ಪಠ್ಯದ ಬಗೆಗಿನ ಉಪನ್ಯಾಸ, ಮಾಹಿತಿ, ತರಬೇತಿಗಳಲ್ಲದೆ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಕೊರೋನಾ ಕಾರಣಕ್ಕಾಗಿ ಕಳೆದುಕೊಂಡ ಗಣಿತ, ವಿಜ್ಞಾನ ಪಠ್ಯಗಳನ್ನೂ ಬೋಧಿಸಿ, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ತಯಾರು ಮಾಡಲಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ವೈಯಕ್ತಿಕವಾಗಿ ಗಮನಿಸಿ, ವಿಷಯಗಳನ್ನು ಮನದಟ್ಟು ಮಾಡಿಕೊಡುವುದಲ್ಲದೆ, ಆತನನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಕವಾಗಿ ತಯಾರು ಮಾಡುವ ಗುರಿಯನ್ನು ಈ ಸೇತುಬಂಧ ತರಗತಿಗಳು ಒಳಗೊಂಡಿವೆ.

ಈಗಾಗಲೇ ಅನೇಕ ಮಂದಿ ವಿದ್ಯಾರ್ಥಿಗಳು ಈ ತರಗತಿಗಳಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇನ್ನು ಕೂಡ ಆಸಕ್ತರಿಗೆ ಅವಕಾಶವನ್ನು ಮುಕ್ತವಾಗಿಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ : ೯೪೪೮೮೩೫೪೮೮

LEAVE A REPLY

Please enter your comment!
Please enter your name here