ಬಸ್ರೂರು ಬಳಕೆದಾರರ ವೇದಿಕೆ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ದ.ಕ. ಜಿಲ್ಲಾಧ್ಯಕ್ಷರಾಗಿ ಸಂಜೀವ ಕಬಕ

0

ಪುತ್ತೂರು: ಬಸ್ರೂರು ಬಳಕೆದಾರರ ವೇದಿಕೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಉಡುಪಿ ಇದರ ದ.ಕ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ, ಕಬಕ ನಿವಾಸಿ ಸಂಜೀವ ಕಬಕ ನೇಮಕಗೊಂಡಿದ್ದಾರೆ.
ಮಂಗಳೂರಿನ ಅಶೋಕನಗರದಲ್ಲಿರುವ ಶ್ರೀ ಶಾಸ್ತ ಕಟ್ಟಡದಲ್ಲಿ ನಡೆದ ಜಿಲ್ಲಾ ಘಟಕದ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷರ ಆಯ್ಕೆ ಮಾಡಿ, ಘೋಷಣೆ ಮಾಡಲಾಯಿತು.
ಕಚೇರಿ ಉದ್ಘಾಟಿಸಿ ಮಾತನಾಡಿದ ಬಸ್ರೂರು ಬಳಕೆದಾರರ ವೇದಿಕೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಉಡುಪಿ ಇದರ ಅಧ್ಯಕ್ಷ ಡಾ. ರವೀಂದ್ರನಾಥ್ ಶ್ಯಾನುಭಾಗ್, ಸಮಾಜದಲ್ಲಿ ತೊಂದರೆಗೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡುವ ಕಾರ್ಯ ನಿರಂತರವಾಗಿ ನಡೆಯಬೇಕು ಎನ್ನುವ ದೃಷ್ಟಿಯಿಂದ ಮಂಗಳೂರಿನಲ್ಲಿ ಕಚೇರಿ ಉದ್ಘಾಟನೆ ಮಾಡಲಾಗಿದೆ. ಪ್ರತಿ ಭಾನುವಾರ ಬೆಳಿಗ್ಗೆ ೧೧ರಿಂದ ಮಧ್ಯಾಹ್ನ ೧ರವರೆಗೆ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯ ನಡೆಯಲಿದೆ. ಪ್ರತಿ ತಾಲೂಕಿನಲ್ಲಿಯೂ ವೇದಿಕೆಯ ಪ್ರತಿನಿಧಿಗಳಿದ್ದಾರೆ. ಅವರನ್ನು ಸಂಪರ್ಕಿಸಿಯೂ ನೆರವು ಪಡೆದುಕೊಳ್ಳಲು ಅವಕಾಶವಿದೆ. ಹಲವು ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ವೇದಿಕೆ ನೆರವಿನ ಹಸ್ತ ಚಾಚಿದೆ. ಈ ಕಾರ್ಯ ಇನ್ನು ಮಂಗಳೂರಿನ ಕಚೇರಿಯಿಂದಲೂ ನಡೆಯಲಿದೆ ಎಂದರು.
ವಕೀಲರಾದ ವಿದ್ಯಾಭಟ್, ಜಿನೇಂದ್ರ ಕುಮಾರ್, ಜಯಶ್ರೀ, ಸಾಮಾಜಿಕ ಕಾರ್ಯಕರ್ತರಾದ ಸಂಜೀವ ಕಬಕ, ದಿನೇಶ್ ಭಟ್, ಅಶೋಕ್ ಭಟ್, ದಿನೇಶ್ ಹೊಳ್ಳ, ಶಶಿಧರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಮಿಕ ದಿನದಂದೇ ಆಯ್ಕೆ:
ಸಾಮಾಜಿಕ ಕಾರ್ಯಕರ್ತ ಸಂಜೀವ ಕಬಕ ಅವರು ವೃತ್ತಿಯಲ್ಲಿ ದಿನಗೂಲಿ ಕಾರ್ಮಿಕ. ಕಾಂಕೂಡ್ ಉತ್ಪನ್ನಗಳ ತಯಾರಿಕಾ ಸಂಸ್ಥೆಯಲ್ಲಿ ೧೯೯೦ರಿಂದ ದಿನಗೂಲಿ ನೌಕರನಾಗಿ ದುಡಿಯುತ್ತಿರುವ ಸಂಜೀವ ಕಬಕ ಅವರು ಇದೀಗ ಬಸ್ರೂರು ಬಳಕೆದಾರರ ವೇದಿಕೆ ಮತ್ತು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಉಡುಪಿ ಇದರ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ. ಕಾರ್ಮಿಕ ದಿನವಾದ ಮೇ ೧ರಂದೇ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆಗಿರುವುದು ವಿಶೇಷ.
ಎಂಡೋ ಸಲ್ಫಾನ್ ಸಂತ್ರಸ್ತರ ಪರವಾಗಿ ಹೋರಾಟ ನಡೆಸುತ್ತಿರುವ ಸಂಜೀವ ಕಬಕ ಅವರು ಆರ್‌ಟಿಐ ಕಾರ್ಯಕರ್ತನಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಎಂಡೋ ಸಲ್ಫಾನ್‌ಗೆ ಸಂಬಂಧಪಟ್ಟಂತೆ ಆರ್‌ಟಿಐ ಅಡಿ ಪಡೆದ ದಾಖಲೆಗಳಲ್ಲಿ ಸುಮಾರು ೫ ಸಾವಿರಕ್ಕೂ ಅಧಿಕ ಪುಟಗಳ ಸಮಗ್ರ ಮಾಹಿತಿಯನ್ನು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದೆ. ಕಾರ್ಮಿಕರಿಂದ ಹಿಡಿದು ವೈದ್ಯರು, ಎಂಜಿನಿಯರ್ ಸೇರಿದಂತೆ ಹಲವು ವರ್ಗದ ಜನರಿಗೆ ನೆರವಿನ ಹಸ್ತ ಚಾಚಿರುವ ಇವರು, ಇಂದು ಕೂಡ ದಿನಗೂಲಿ ನೌಕರ.
ಡಾ. ರವೀಂದ್ರನಾಥ್ ಶ್ಯಾನುಭಾಗ್ ಅವರ ಹೋರಾಟಗಳಿಂದ ಪ್ರಭಾವಿತರಾಗಿರುವ ಇವರು, ಕಳೆದ ೩೦ ವರ್ಷಗಳಿಂದ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ೧೪ ವರ್ಷಗಳಿಂದ ಆರ್‌ಟಿಐ ಅಡಿ ದಾಖಲೆಗಳನ್ನು ಕೆದಕಿ ತೆಗೆಯುವ ಕೆಲಸದಲ್ಲಿಯೂ ತಲ್ಲೀನರಾಗಿದ್ದಾರೆ. ೭ ಇಲಾಖೆಗಳಿಗೆ ೨೦೦ಕ್ಕೂ ಅಧಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿ, ಮಾಹಿತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here