ಉಪ್ಪಿನಂಗಡಿ: ಹೊಟೇಲ್‌ನಲ್ಲಿ ವ್ಯಕ್ತಿಯಿಂದ ದಾಂಧಲೆ

0

ಉಪ್ಪಿನಂಗಡಿ: ಹೊಟೇಲೊಂದರಲ್ಲಿ ಊಟ ಮಾಡುತ್ತಿದ್ದ ಮಹಿಳಾ ಗ್ರಾಹಕಿಯ ಮೈ ಮೇಲೆ ಕೈ ಹಾಕಿ ಚುಡಾಯಿಸಿದ್ದಲ್ಲದೆ, ಪ್ರಶ್ನಿಸಿದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ದಾಂಧಲೆ ನಡೆಸಿದ ವಿಲಕ್ಷಣ ಘಟನೆ ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದಿದೆ.

ಇಲ್ಲಿನ ಬಸ್ ನಿಲ್ದಾಣದ ಪರಿಸರದಲ್ಲಿನ ಹೊಟೇಲೊಂದರಲ್ಲಿ ಈ ಘಟನೆ ಸಂಭವಿಸಿದ್ದು, ದಾಂಧಲೆ ನಡೆಸಿದವ ವೇಣೂರು ಪರಿಸರದ ನಿವಾಸಿಯಾಗಿರುವ ಪ್ರಶಾಂತ್ ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿದುಬಂದಿದೆ. ಈತ ಮಧ್ಯಾಹ್ನದ ವೇಳೆ ಹೊಟೇಲಿಗೆ ಬಂದವನೇ ಊಟಕ್ಕೆ ಆರ್ಡರ್ ಕೊಟ್ಟು ಸಮೀಪದ ಕುರ್ಚಿಯಲ್ಲಿ ಕುಳಿತ್ತಿದ್ದ ಮಹಿಳಾ ಗ್ರಾಹಕಿಗೆ ಚುಡಾಯಿಸಿದನೆನ್ನಲಾಗಿದೆ. ಘಟನೆಯಿಂದ ಕಂಗೆಟ್ಟ ಮಹಿಳಾ ಗ್ರಾಹಕಿ ಈ ಬಗ್ಗೆ ಹೋಟೇಲ್ ಮಾಲಕರಲ್ಲಿ ದೂರಿತ್ತಾಗ, ಮಧ್ಯ ಪ್ರವೇಶಿಸಿದ ಹೋಟೇಲ್ ಮಾಲಕರು ಆತನನ್ನು ಹೊಟೇಲಿನಿಂದ ಹೊರ ಕಳುಹಿಸಿದರು.

ಇದರಿಂದ ಆಕ್ರೋಶಕ್ಕೀಡಾದ ಆತ ಮತ್ತೆ ಹೊಟೇಲಿಗೆ ನುಗ್ಗಿ ಕಂಡ ಕಂಡವರಿಗೆ ಸೋಡಾ ಬಾಟ್ಲಿಯನ್ನು ಎಸೆಯುತ್ತಾ, ದಾಂಧಲೆ ನಡೆಸಿದನ್ನಲ್ಲದೆ, ರಕ್ಷಣೆಗೆ ಧಾವಿಸಿ ಬಂದ ಪೊಲೀಸರ ಮೇಲೂ ಆಕ್ರಮಣಕಾರಿಯಾಗಿ ವರ್ತಿಸಿ ಹೊಟೇಲಿನಲ್ಲಿ ಊಟ ಮಾಡುತ್ತಿದ್ದ ಗ್ರಾಹಕರೆಲ್ಲಾ ಜೀವ ಭಯದಿಂದ ಓಡಿ ಹೋಗುವಂತೆ ಮಾಡಿದ್ದ. ಈ ಸಮಯದಲ್ಲಿ ಹೊಟೇಲಿನ ಕುರ್ಚಿಯೊಂದನ್ನು ಎತ್ತಿ ಎಸೆಯಲು ಯತ್ನಿಸಿದ ವೇಳೆ ನೆಲಕ್ಕೆ ಬಿದ್ದ ಆತ ಮುಖಕ್ಕೆ ಗಾಯಗೊಂಡನು. ಆ ವೇಳೆ ಆತನನ್ನು ಎಲ್ಲರೂ ಹಿಡಿದು ಸ್ಥಳೀಯ ಆಸ್ಪತ್ರ್ರೆಗೆ ಕರೆದೊಯ್ದಿದ್ದಾರೆ. ಘಟನೆಗೆ ಸಂಬಂಧಿಸಿ ಹೊಟೇಲ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಅಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here