ಮೇ 5 ರಿಂದ 8 ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದಿಂದ ಹಲವು ಕಾರ್ಯಕ್ರಮ – ಸಂಸ್ಥಾಪನಾ ದಿನಾಚರಣೆ, ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ, ಪುಸ್ತಕ ಹಬ್ಬ, ಕವಿಗೋಷ್ಠಿ, ಸಾಧಕರಿಗೆ ಸನ್ಮಾನ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಜ್ಞಾನಗಂಗಾ ಪುಸ್ತಕ ಮಳಿಗೆಯ ಸಹಯೋಗದೊಂದಿಗೆ ಮೇ ೫ ರಿಂದ ೮ರ ತನಕ ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿ ಹಲವು ಕಾರ್ಯಕ್ರಮ ನಡೆಯಲಿದೆ. ಕನ್ನಡ ಸಾಹಿತ್ಯ ಪರಿಷತ್‌ನ ಸಂಸ್ಥಾಪನಾ ದಿನಾಚರಣೆ, ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ, ಪುಸ್ತಕ ಹಬ್ಬ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅವರು ಪುತ್ತೂರು ಸುದ್ದಿ ಮಿಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. 4 ದಿನಗಳ ಕಾರ್ಯಕ್ರಮದಲ್ಲಿ ಎಲ್ಲವನ್ನು ಸಾಹಿತ್ಯಕ್ಕೆ ಮೀಸಲಾಗಿಡಲಾಗಿದೆ. ಮೇ 5ಕ್ಕೆ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮಾಡಲಾಗುವುದು. ಮೇ 6ಕ್ಕೆ ಮೂವರು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಮಕ್ಕಳ ಮನೆ ಕವನ ಸಂಕಲನ, ಬಿಡುಗಡೆಗೊಳ್ಳಲಿದೆ ಮತ್ತು ಕಲಬುರ್ಗಿಯ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರತಿಷ್ಠಾನದಿಂದ ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮೂಲಕ ಸಂಸ್ಥಾಪನಾ ದಿನಾಚರಣೆ:
ಕನ್ನಡ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಕೋಶಾಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ಅವರು ಮಾತನಾಡಿ ಪರಿಷತ್ತು ಹೆಮ್ಮರವಾಗಿ ಬೆಳೆದಿದ್ದು, ವಿಶ್ವದಾದ್ಯಂತ ಸಾಹಿತ್ಯ ಪರಿಷತ್ ಘಟಕಗಳಿವೆ. ಶತಮಾನದ ವರ್ಷದಲ್ಲಿ ಸ್ಥಾಪನಾ ದಿನಾಚರಣೆ ಎಂಬ ಕುರಿತು ಚಿಂತನೆ ಮಾಡಲಾಗಿತ್ತು ಈ ವರ್ಷ ನೂತನ ಅಧ್ಯಕ್ಷರ ಮಹೇಶ್ ಜ್ಯೋಶಿ ಅವರ ಸುತ್ತೋಲೆ ಪ್ರಕಾರ ಸಂಸ್ಥಾಪನಾ ದಿನಾಚರಣೆ ಪುನರಾಂಭಗೊಂಡಿದೆ. ಈ ನಿಟ್ಟಿನಲ್ಲಿ ಪುತ್ತೂರು ತಾಲೂಕಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಾಗ ಶಾಲೆಗಳ ಪುಸ್ತಕ ಗ್ರಂಥಾಲಯಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲು ಮಾಡಿದ ನಿರ್ಣಯದಂತೆ ಮೇ 5ಕ್ಕೆ ಸಂಸ್ಥಾಪನಾ ದಿನಾಚರಣೆಯೊಂದಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ದಾನಿಯಾಗಿರುವ ಉಡುಪಿಯ ನಿವೃತ್ತ ಬ್ಯಾಂಕ್ ಉದ್ಯೋಗಿ ಬಿ.ಆರ್ ನರಸಿಂಹ ರಾವ್ ಅವರ ಮೂಲಕ ನಡೆಯಲಿದೆ ಎಂದ ಅವರು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಶ್ರೀನಾಥ್ ಎಂ.ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುಸ್ತಕ ದಾನಿಯಾಗಿರುವ ಉಡುಪಿಯ ಬ.ಆರ್ ನರಸಿಂಹ ರಾವ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್ ಹೆಚ್.ಜಿ ಅವರು ಉಪನ್ಯಾಸ ಮಾಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಮತ್ತು ಉಡುಪಿ ಸುರಭಿ ಬುಕ್ ಸೆಂಟರ್‌ನ ರಮೇಶ್ ಪ್ರಭು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.

ಕನ್ನಡ ಕಲಿತು ಕನ್ನಡದಲ್ಲಿ ಹಾಡುವ ದಿವ್ಯಾಂಗರು:
ಮಹಾರಾಷ್ಟ್ರದಿಂದ ಪುತ್ತೂರಗೆ ಬಂದು ಕನ್ನಡ ಕಲಿತಿರುವ ದಿವ್ಯಾಂಗ ಕಲಾವಿದ ಅರುಣ್ ಪೂನಾ ಅವರಿಂದ ಸಭಾ ಕಾರ್ಯಕ್ರಮದ ಬಳಿಕ ಕನ್ನಡ ಹಾಡುಗಳನ್ನು ಹಾಡಲಿದ್ದಾರೆ. ಇದೇ ಸಂದರ್ಭದಲ್ಲಿ ನೇತ್ರದಾನದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದ್ದು, ಬಿ.ಎ.ಎಸ್.ಎಫ್ ಇಂಡಿಯಾದ ಡಿಜಿಎಂ ರಾಜಶೇಖರ್ ಭಟ್ ಕಾಕುಂಜೆ ಅವರು ನೇತ್ರದಾನದ ಮಾಹಿತಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ನೇತ್ರದಾನಿಗಳು ನೇತ್ರದಾನದ ಕುರಿತು ಒಡಂಬಡಿಗೆ ಮಾಡಲು ಅವಕಾಶವಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ತಿಳಿಸಿದರು.

ಸಾಹಿತ್ಯ ಸಂಭ್ರಮ, ಪುಸ್ತಕ ಹಬ್ಬ, ಸನ್ಮಾನ:
ಮೇ ೬ಕ್ಕೆ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದಿಂದ ಜ್ಞಾನಗಂಗಾ ಪುಸ್ತಕ ಮಳಿಗೆಯಿಂದ ಸಾಹಿತ್ಯ ಸಂಭ್ರಮ, ಪುಸ್ತಕ ಹಬ್ಬಗಳು ಮೂರು ದಿನ ನಡೆಯಲಿದೆ. ಶಾಸಕ ಸಂಜೀವ ಮಠಂದೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ| ಎಂ.ಪಿ.ಶ್ರೀನಾಥ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್.ಡಿ.ಪಿ ಆಯುರ್ವೇದ ಸಂಶೋಧನಾ ಕೇಂದ್ರ ಪರ್ಲಡ್ಕ ಇದರ ಡಾ. ಹರಿಕೃಷ್ಣ ಪಾಣಾಜೆ ಅವರು ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಸಹಾಯಕ ಕಮೀಷನರ್ ಗಿರೀಶ್ ನಂದನ್ ಅವರು ಎಸ್.ಗೋಪಾಲಕೃಷ್ಣ ಶಗ್ರಿತ್ತಾಯ ಅವರ ‘ಮಕ್ಕಳ ಮನೆ’ಕೃತಿ ಬಿಡುಗಡೆ ಮಾಡಲಿದ್ದಾರೆ. ಸಾಹಿತ್ಯ ಪೋಷಕ, ಸಾಧಕರಾಗಿರುವ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಕೆ.ಸೀತಾರಾಮ ರೈ, ಚಿತ್ತರಂಜನ್ ಬೋಳಾರ್, ದಕ್ಷಿಣ ಕನ್ನಡ ಹಾಲು ಉತ್ಪಾಕರ ಸಹಕಾರಿ ಸಂಘದ ಉಪಾಧ್ಯಕ್ಷರಾಗಿರುವ ಎಸ್.ಬಿ.ಜಯರಾಮ ರೈ ಅವರನ್ನು ಸನ್ಮಾನಿಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಕು| ಅನುಷಾ ಚೇಕೋಡು ಅವರಿಂದ ಹಾಡುಗಾರಿಕೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್ ತಿಳಿಸಿದರು.

ಮೇ 7ಕ್ಕೆ ಜಿಲ್ಲಾ ಮಟ್ಟದ ಕವಿಗೋಷ್ಠಿ:
ಮೇ 7ಕ್ಕೆ ಬೆಳಿಗ್ಗೆ ಜಿಲ್ಲಾ ಮಟ್ಟದ ಕವಿಗೋಷ್ಠಿ ನಡೆಯಲಿದೆ. 5 ವಿಭಾಗಗಳಲ್ಲಿ ಕವಿಗೋಷ್ಠಿ ನಡೆಯಲಿದ್ದು, 16 ವರ್ಷದೊಳಗಿನ ವಯೋಮಾನದವರು, ಕಾಲೇಜು ವಿಭಾಗ, ಸಾರ್ವಜನಿಕ ವಿಭಾಗ ಮತ್ತು ವಿಶೇಷವಾಗಿ ಶಿಕ್ಷಕರ ವಿಭಾಗದಲ್ಲಿ ಕವಿಗೋಷ್ಠಿ ನಡೆಯಲಿದೆ. ಈಗಾಗಲೇ ಸುಮಾರು 75 ಮಂದಿ ಉದಯೋನ್ಮಖ ಕವಿಗಳು ಕವಿಗೋಷ್ಠಿಗೆ ನೋಂದಾಯಿಸಿದ್ದಾರೆ. 2021ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಎಸ್.ಜಿ.ಕೃಷ್ಣ ಅವರು ಕವಿಗೋಷ್ಠಿ ಉದ್ಘಾಟಿಸಲಿದ್ದಾರೆ. ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷೆ ಶಾಂತ ಕುಂಟಿನಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸ್ವಣೋದ್ಯಮಿ ಕೃಷ್ಣನಾರಾಯಣ ಮುಳಿಯ ಗೌರವ ಉಪಸ್ಥಿತಿಯಲ್ಲಿರುತ್ತಾರೆ. ಮಧ್ಯಾಹ್ನ ಹಾಸ್ಯ ರಸದೌತಣ ಕಾರ್ಯಕ್ರಮ ನಡೆಯಲಿದೆ. ಸಂಜೆ ಧೀಶಕ್ತಿ ಬಾಲಿಕಾ ಯಕ್ಷಬಳಗದಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಉಮೇಶ್ ನಾಯಕ್ ತಿಳಿಸಿದರು.

ಮೇ 8ಕ್ಕೆ ವಿಚಾರಗೋಷ್ಠಿ, ಪ್ರೊ ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ:
ಮೇ 8ಕ್ಕೆ ಬೆಳಗ್ಗಿನ ಅವಧಿಯಲ್ಲಿ ಪ್ರೊ. ವಿ.ಬಿ. ಅರ್ತಿಕಜೆಯವರ ಹಾಸ್ಯ ಸಾಹಿತ್ಯ ಮತ್ತು ಚಿಂತನ ಸಾಹಿತ್ಯ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಗಾನವೈಭವ ನಡೆಯಲಿದೆ. ಸಂಜೆ ಕಲಬುರಗಿ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ್ ಹೆಚ್.ಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಗುಲ್ಬರ್ಗ ವಿಶ್ವವಿದ್ಯಾಲಯ ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ಎಚ್.ಟಿ.ಪೋತೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ| ತಾಳ್ತಜೆ ವಸಂತ ಕುಮಾರ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಅನೇಕರು ಗಣ್ಯರಾಗಿ ಭಾಗವಹಿಸಲಿದ್ದಾರೆ. ಸಂಜೆ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಗಾನ ವೈಭವ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಕಾರ್ಯದರ್ಶಿ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಸದಸ್ಯ ಸುಂದರ ನಾಯ್ಕ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here