ರೆಂಜಲಾಡಿ ಮಸೀದಿಯಲ್ಲಿ ಸಂಭ್ರಮದ ಈದುಲ್ ಫಿತರ್

0

  • ಹೃದಯಾಂತರಾಳದಿಂದ ಕುಟುಂಬ ಸಂಬಂಧ ಬೆಸೆಯಿರಿ-ಹುಸೈನ್ ದಾರಿಮಿ
  • ರಂಝಾನ್‌ನಲ್ಲಿ ನಡೆಸಿದ ಪರಿಶುದ್ದ ಜೀವನವನ್ನು ಮುಂದುವರಿಸಿ-ರಫೀಕ್ ಫೈಝಿ


ಪುತ್ತೂರು: ಈದ್ ಹಬ್ಬದ ಮೂಲಕ ಕುಟುಂಬ ಸಂಬಂಧ ಹಾಗೂ ಮಾನವೀಯ ಸಂಬಂಧವನ್ನು ಗಟ್ಟಿಗೊಳಿಸಲು ಪ್ರತಿಯೋರ್ವರು ಪಣ ತೊಡಬೇಕಾಗಿದ್ದು ಪರಸ್ಪರ ಹೃದಯಾಂತರಾಳದಿಂದ ಪ್ರೀತಿಸುವ, ಕುಟುಂಬ ಸಂಬಂಧ ಬೆಸೆಯುವ ಕಾರ್ಯ ಆಗಬೇಕಾಗಿದೆ ಎಂದು ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ಹೇಳಿದರು.

ಮೇ.3 ರಂದು ರೆಂಜಲಾಡಿ ಮಸೀದಿಯಲ್ಲಿ ನಡೆದ ಈದುಲ್ ಫಿತರ್ ವಿಶೇಷ ನಮಾಜ್ ಬಳಿಕ ಅವರು ಈದ್ ಸಂದೇಶ ನೀಡಿದರು. ಭೂಮಿಯ ಮೇಲಿರುವ ಸಕಲ ಜೀವಜಾಲಗಳ ಜೊತೆಯೂ ನಾವು ಕರುಣೆ ತೋರಬೇಕು, ಕರುಣೆ ಎಂಬುವುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು, ಪರಸ್ಪರ ಪ್ರೀತಿ, ವಿಶ್ವಾಸ ತೋರಿಸುವುದು ಹಾಗೂ ಎಲ್ಲರನ್ನು ಗೌರವಿಸುವುದು ನಮ್ಮ ಜೀವನದಲ್ಲಿ ನಿತ್ಯ ನೆಲೆಗೊಳಿಸಬೇಕು ಎಂದು ಅವರು ಹೇಳಿದರು.

ತೋರಿಕೆಗಾಗಿ ಒಳ್ಳೆಯವರೆಂದು ನಟಿಸದೆ, ಆತ್ಮಾರ್ಥವಾಗಿ ಹೃದಯಂತರಾಳದಿಂದ ಪ್ರೀತಿ ತೋರಿಸಬೇಕು, ಇನ್ನೊಬ್ಬರ ಕಷ್ಟಗಳಿಗೆ ಸ್ಪಂಧಿಸಬೇಕು, ನಮಾಜ್ ಜೊತೆಗೆ ಇತರ ಕಡ್ಡಾಯ ಬಾಧ್ಯತೆಗಳನ್ನು ಪೂರ್ತಿಗೊಳಿಸಿದರೆ ಮಾತ್ರ ನಮ್ಮ ಬದುಕು ಸಾರ್ಥಕವಾಗಲಿದೆ,ತಂದೆ ತಾಯಿಯನ್ನು ಪ್ರೀತಿಸಬೇಕು, ಅವರ ಕಷ್ಟಗಳ ಬಗ್ಗೆ ತಿಳಿಯಬೇಕು, ಹೆತ್ತವರ ಸಂತೋಷದಲ್ಲಿ ನಾವೂ ಸಂತೋಷ ಕಾಣಬೇಕು ಎಂದ ಹುಸೈನ್ ದಾರಿಮಿಯವರು ತಂದೆ ತಾಯಿಯನ್ನು ನಿರ್ಲಕ್ಷಿಸಿ, ಕುಟುಂಬ ಸಂಬಂಧವನ್ನು ಮುರಿದು ಎಷ್ಟೇ ಪ್ರಾರ್ಥನೆಗೈದರೂ, ತ್ಯಾಗ ಮಾಡಿದರೂ ಅದನ್ನು ಅಲ್ಲಾಹು ಸ್ವೀಕರಿಸಲಾರ ಎಂದು ಹೇಳಿದರು.

ಸಹೋದರತೆ ಬೆಸೆಯಲಿ -ರಫೀಕ್ ಫೈಝಿ ಮಾಡನ್ನೂರು

ಈದ್ ವಿಶೇಷ ನಮಾಜ್ ಮತ್ತು ಖುತುಬಾಗೆ ನೇತೃತ್ವ ನೀಡಿದ ರೆಂಜಲಾಡಿ ಮಸೀದಿಯ ಖತೀಬ್ ರಫೀಕ್ ಫೈಝಿ ಮಾಡನ್ನೂರು ಮಾತನಾಡಿ ಈದ್ ಹಬ್ಬ ಆಚರಣೆ ಅರ್ಥಪೂರ್ಣವಾಗಿರಬೇಕು, ಅನಿಸ್ಲಾಮಿಕ ಕಾರ್ಯಗಳಿಂದ ದೂರವಿರಬೇಕು. ರಂಝಾನ್ ತಿಂಗಳಲ್ಲಿ ನಡೆಸಿದ ಪರಿಶುದ್ಧ ಜೀವನವನ್ನು ಮುಂದಿನ ದಿನಗಳಲ್ಲೂ ಮುಂದುವರಿಸಬೇಕು. ಮಾನವೀಯತೆ ಸಧೃಢಗೊಳಿಸಲು ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಕರೆ ನೀಡಿದ ಅವರು ಪರಸ್ಪರ ಸಹೋದರತೆ, ಭಾತೃತ್ವ, ಸ್ನೇಹ ಈ ಈದ್ ಆಚರಣೆ ಮೂಲಕ ಇಮ್ಮಡಿಯಾಗಲಿ ಎಂದು ಅವರು ಹಾರೈಸಿದರು. ಸದರ್ ಅಬೂಬಕ್ಕರ್ ಮುಸ್ಲಿಯಾರ್, ರೆಂಜಲಾಡಿ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಕಡ್ಯ, ಪ್ರ.ಕಾರ್ಯದರ್ಶಿ ಹಾಜಿ ಝೈನುದ್ದೀನ್ ಜೆ,ಎಸ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಇಮ್ರಾನ್ ಮಲ್ನಾಡ್ ಹಾಗೂ ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here