ರಾಷ್ಟ್ರಮಟ್ಟದ ಹೆಗ್ಗಳಿಕೆಗೆ ಪಾತ್ರವಾದ ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಇನ್ಫೋಸಿಸ್ ನಿಂದ ಪ್ರಶಸ್ತಿ

0

ಪುತ್ತೂರು: ಇನ್ಫೋಸಿಸ್ ತನ್ನ ಆನ್ಲೈನ್ ಕಲಿಕಾ ವೇದಿಕೆಯಾದ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಮೂಲಕ ನೀಡುವ ಕೋರ್ಸುಗಳಲ್ಲಿ ರಾಷ್ಟ್ರಮಟ್ಟದಲ್ಲಿ ಅತ್ಯಧಿಕ ಕೋರ್ಸುಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಟ್ಟಂಪಾಡಿ ಸರಕಾರಿ ಪ್ರಥಮ‌ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರಾದ ಕುಮಾರಿ ಶೃತಿ ಸಿ ಮತ್ತು ಕುಮಾರಿ ತೇಜಸ್ವಿನಿ ಪಿಎಂ ಇವರನ್ನು ಸಂಸ್ಥೆಯು ಪ್ರಶಸ್ತಿ ಪತ್ರಗಳನ್ನು ನೀಡಿ ಪುರಸ್ಕರಿಸಿದೆ. ಮೇ 2ರಂದು ಬೆಂಗಳೂರಿನ ಇನ್ಫೋಸಿಸ್ ಕ್ಯಾಂಪಸ್ ನಲ್ಲಿ ನಡೆದ ಸೆಲೆಬ್ರೇಟಿಂಗ್ ಟಾಪ್ ಲರ್ನರ್ಸ್ ಆನ್ ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಇನ್ಫೋಸಿಸ್ ನ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ತನ್ನ ವಿದ್ಯಾರ್ಥಿಗಳಿಗೆ ಪರಿಚಯಿಸಿ, ತರಬೇತಿ ನೀಡಿ ಬೆಟ್ಟಂಪಾಡಿ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಲು ಮಾರ್ಗದರ್ಶನ ಮಾಡಿದ ಮಾತ್ರವಲ್ಲದೆ ಇದರ ನೋಂದಾವಣಿ ಮಾಡುವುದು ಹೇಗೆ ಎಂಬ ವಿಡಿಯೋವನ್ನು ತನ್ನ ಯುಟ್ಯೂಬ್ ಚಾನಲ್ ಮೂಲಕ ನೀಡಿ ರಾಜ್ಯಾದ್ಯಂತ ಇರುವ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೀಡಿರುವ ಕೊಡುಗೆಯನ್ನು ಗುರುತಿಸಿ ಕಾಲೇಜಿನ ಉದ್ಯೋಗ ಕೋಶದ ಸಂಚಾಲಕರು ಹಾಗೂ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕ ದೀಕ್ಷಿತ್ ಕುಮಾರ್ ಅವರನ್ನು ಕೂಡ ಇದೇ ವೇಳೆ ಗೌರವಿಸಲಾಯಿತು.

ಇನ್ಫೋಸಿಸ್ ಸ್ಪ್ರಿಂಗ್ಬೋರ್ಡ್ ನ ಮುಖ್ಯಸ್ಥ ಕಿರಣ್ ಎನ್. ಜಿ., ಕಾಲೇಜು ಶಿಕ್ಷಣ ಇಲಾಖೆಯ ಉದ್ಯೋಗ ಕೋಶದ ಅಧಿಕಾರಿ ನಾರಾಯಣ ಪ್ರಸಾದ್ ಹಾಗೂ ಇನ್ಫೋಸಿಸ್ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

LEAVE A REPLY

Please enter your comment!
Please enter your name here